ಎಸ್-400 ಅಥವಾ ಪ್ಯಾಟ್ರಿಯಟ್: ಆಗಸವನ್ನು ಆಳುವವರಾರು?

ಎರಡೂ ವ್ಯವಸ್ಥೆಗಳನ್ನು ಶತ್ರುಗಳ ಏರ್‌ಕ್ರಾಫ್ಟ್, ಕ್ರೂಸ್ ಕ್ಷಿಪಣಿಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಯಾವುದೇ ಅಪಾಯ ಉಂಟುಮಾಡುವ ಮುನ್ನವೇ ಪತ್ತೆಹಚ್ಚಿ, ನಾಶಪಡಿಸುವ ಸಲುವಾಗಿ ನಿರ್ಮಿತವಾಗಿವೆ. ಆದರೆ, ಇಲ್ಲೊಂದು ಆಸಕ್ತಿಕರ ಅಂಶವಿದೆ: ಎರಡೂ ವ್ಯವಸ್ಥೆಗಳು ಒಂದಕ್ಕಿಂತ ಒಂದು ಸಂಪೂರ್ಣ ಭಿನ್ನವಾಗಿ ನಿರ್ಮಿತವಾಗಿದ್ದು, ವಿಭಿನ್ನ ಚಿಂತನೆಗಳನ್ನು ಅನುಸರಿಸುತ್ತವೆ. ಆದ್ದರಿಂದ, ಈಗಿನ ನೈಜ ಪ್ರಶ್ನೆ ಯಾವುದು ಹೆಚ್ಚು ಶಕ್ತಿಶಾಲಿ ಎನ್ನುವುದಲ್ಲ. ಬದಲಿಗೆ, ಯಾವುದು ಕೆಲಸಕ್ಕೆ ಹೆಚ್ಚು ಸೂಕ್ತವಾದ ವ್ಯವಸ್ಥೆ ಎನ್ನುವುದಾಗಿದೆ.
ಎಂಐಎಂ-104 ಪ್ಯಾಟ್ರಿಯಟ್ ಮತ್ತು ಎಸ್-400 ಟ್ರಯಂಫ್ ವ್ಯವಸ್ಥೆಗಳನ್ನು ಜಗತ್ತಿನ ಅತ್ಯಂತ ಆಧುನಿಕ ದೀರ್ಘ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆಗಳು ಎಂದು ಪರಿಗಣಿಸಲಾಗಿದೆ. ಇವೆರಡೂ ವ್ಯವಸ್ಥೆಗಳನ್ನು ಶತ್ರುಗಳ ಏರ್‌ಕ್ರಾಫ್ಟ್, ಕ್ರೂಸ್ ಕ್ಷಿಪಣಿಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಯಾವುದೇ ಅಪಾಯ ಉಂಟುಮಾಡುವ ಮುನ್ನವೇ ಪತ್ತೆಹಚ್ಚಿ, ನಾಶಪಡಿಸುವ ಸಲುವಾಗಿ ನಿರ್ಮಿತವಾಗಿವೆ. ಆದರೆ, ಇಲ್ಲೊಂದು ಆಸಕ್ತಿಕರ ಅಂಶವಿದೆ: ಎರಡೂ ವ್ಯವಸ್ಥೆಗಳು ಒಂದಕ್ಕಿಂತ ಒಂದು ಸಂಪೂರ್ಣ ಭಿನ್ನವಾಗಿ ನಿರ್ಮಿತವಾಗಿದ್ದು, ವಿಭಿನ್ನ ಚಿಂತನೆಗಳನ್ನು ಅನುಸರಿಸುತ್ತವೆ. ಆದ್ದರಿಂದ, ಈಗಿನ ನೈಜ ಪ್ರಶ್ನೆ ಯಾವುದು ಹೆಚ್ಚು ಶಕ್ತಿಶಾಲಿ ಎನ್ನುವುದಲ್ಲ. ಬದಲಿಗೆ, ಯಾವುದು ಕೆಲಸಕ್ಕೆ ಹೆಚ್ಚು ಸೂಕ್ತವಾದ ವ್ಯವಸ್ಥೆ ಎನ್ನುವುದಾಗಿದೆ.
ಅಮೆರಿಕದ ಪ್ಯಾಟ್ರಿಯಟ್ ವ್ಯವಸ್ಥೆಯನ್ನು ಒಂದು ಸಂಯೋಜಿತ ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಮುಖ್ಯ ಕಾರ್ಯವೆಂದರೆ ಆಧುನಿಕ ಕ್ಷಿಪಣಿ ದಾಳಿಗಳಿಂದ ಪ್ರಮುಖ ಮಿಲಿಟರಿ ನೆಲೆಗಳು ಮತ್ತು ಮುಖ್ಯ ಸ್ಥಳಗಳನ್ನು ರಕ್ಷಿಸುವುದು. ಇನ್ನೊಂದೆಡೆ, ರಶ್ಯದ ಎಸ್-400 ವ್ಯವಸ್ಥೆಯನ್ನು ಒಂದು ದೊಡ್ಡ ರಕ್ಷಣಾ ಕೊಡೆಯನ್ನು ಒದಗಿಸುವ ರೀತಿಯಲ್ಲಿ ನಿರ್ಮಿಸಲಾಗಿದ್ದು, ಇದು ಎಲ್ಲಾ ರೀತಿಯ ಅಪಾಯಗಳನ್ನು ಬಲುದೂರದಿಂದಲೇ ಹಿಡಿಯಬಲ್ಲದು. ಆದ್ದರಿಂದ, ಯಾರಾದರೂ ಯಾವ ವ್ಯವಸ್ಥೆ ಉತ್ತಮ ಎಂದು ಕೇಳಿದರೆ, ಇದಕ್ಕೆ ಪ್ರಾಮಾಣಿಕವಾದ ಉತ್ತರ ಬಹಳ ಸರಳವಾಗಿದೆ. ಅದು ಯಾವ ಕಾರ್ಯಾಚರಣೆ ಮತ್ತು ಉದ್ದೇಶಕ್ಕಾಗಿ ಅಳವಡಿಸಲಾಗುತ್ತದೆ ಎನ್ನುವುದನ್ನು ಅವಲಂಬಿಸಿದೆ.
ಎರಡು ವಿಭಿನ್ನ ಆಲೋಚನಾ ವಿಧಾನಗಳು
1980ರಲ್ಲಿ ಅಮೆರಿಕನ್ ಸೇನೆಗೆ ಸೇರ್ಪಡೆಯಾದ ಪ್ಯಾಟ್ರಿಯಟ್ ಕೇವಲ ಶತ್ರು ಏರ್‌ಕ್ರಾಫ್ಟ್‌ಗಳನ್ನು ತಡೆಗಟ್ಟುವ ಗುರಿಯನ್ನು ಮಾತ್ರವೇ ಹೊಂದಿತ್ತು. ನಿಧಾನವಾಗಿ, ಪ್ಯಾಟ್ರಿಯಟ್ ಅನ್ನು ಅಭಿವೃದ್ಧಿಪಡಿಸಿ, ಕೊನೆಯ ಹಂತದ ಹಾರಾಟದಲ್ಲಿರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಲು ಅತ್ಯುತ್ತಮ ವ್ಯವಸ್ಥೆಯಾಗಿಸಲಾಯಿತು. ಇಂದಿನ ಪ್ಯಾಟ್ರಿಯಟ್ ಬ್ಯಾಟರಿಗಳು ಫೇಸ್ಡ್ ಅರೇ ರೇಡಾರ್ ಎನ್ನುವ ಸ್ಮಾರ್ಟ್ ಬ್ಯಾಟರಿಗಳನ್ನು ಬಳಸುತ್ತಿದ್ದು, ಅವು ಏಕಕಾಲದಲ್ಲಿ ಬಹಳಷ್ಟು ಗುರಿಗಳನ್ನು ಗುರುತಿಸಿ, ಹಿಂಬಾಲಿಸಬಲ್ಲವು. ಇದರೊಡನೆ, ಪ್ಯಾಟ್ರಿಯಟ್ ಯುದ್ಧ ನಿರ್ವಹಣಾ ವ್ಯವಸ್ಥೆ ಮತ್ತು ವಿವಿಧ ಇಂಟರ್‌ಸೆಪ್ಟರ್ ಕ್ಷಿಪಣಿಗಳನ್ನು ಹೊಂದಿದೆ. ಇವೆಲ್ಲವೂ ಜೊತೆಯಾಗಿ, ಪ್ಯಾಟ್ರಿಯಟ್ ವ್ಯವಸ್ಥೆ ಸೇನಾ ನೆಲೆಗಳನ್ನು, ಪ್ರಮುಖ ವ್ಯವಸ್ಥೆಗಳನ್ನು ಯುದ್ಧ ವಿಮಾನಗಳು, ಕ್ರೂಸ್ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ರಕ್ಷಿಸುತ್ತದೆ.
ಎಸ್-400 ರಶ್ಯನ್ ಸೇನೆಗೆ 2007ರಲ್ಲಿ ಹಿಂದಿನ ಎಸ್-300 ವ್ಯವಸ್ಥೆಯ ಬದಲಿಯಾಗಿ ಸೇರ್ಪಡೆಗೊಂಡಿತು. ಕೇವಲ ಒಂದು ಕ್ಷಿಪಣಿಯ ಮೇಲೆ ಅವಲಂಬಿತವಾಗುವ ಬದಲು, ಇದು ವಿವಿಧ ವ್ಯಾಪ್ತಿಗಳ ಹಲವಾರು ಕ್ಷಿಪಣಿಗಳನ್ನು ಹೊಂದಿದೆ. ಇದರಿಂದಾಗಿ ಎಸ್-400ಗೆ ವಿಶಾಲ ವ್ಯಾಪ್ತಿಯ ಪ್ರದೇಶಗಳನ್ನು ರಕ್ಷಿಸಲು ಮತ್ತು ಏರ್‌ಕ್ರಾಫ್ಟ್‌ಗಳು, ಕ್ರೂಸ್ ಕ್ಷಿಪಣಿಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಲು ಸಾಧ್ಯವಾಗುತ್ತದೆ. ಇದರ ವಿನ್ಯಾಸ ವಿಶಾಲ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಿ, ಶತ್ರುಗಳು ವಾಯು ಪ್ರದೇಶ ಪ್ರವೇಶಿಸದಂತೆ ತಡೆಯುವಂತಹ ದೊಡ್ಡದಾದ ಬಲೆಯ ರೀತಿಯಲ್ಲಿದೆ.
ವ್ಯಾಪ್ತಿಯೇ ಎಲ್ಲವೂ ಅಲ್ಲ!
ಇವೆರಡೂ ವ್ಯವಸ್ಥೆಗಳಲ್ಲಿನ ಒಂದು ದೊಡ್ಡ ವ್ಯತ್ಯಾಸವೆಂದರೆ ದಾಳಿಯ ವ್ಯಾಪ್ತಿ. ಎಸ್-400 ಹೊಂದಿರುವ ಅತ್ಯಧಿಕ ವ್ಯಾಪ್ತಿಯ ಕ್ಷಿಪಣಿಯಾದ 40ಎನ್6 ಗಾಳಿಯಲ್ಲಿ ಚಲಿಸುವ, ಗರಿಷ್ಠ 400 ಕಿಲೋಮೀಟರ್ (249 ಮೈಲಿ) ದೂರದಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸಬಲ್ಲದು. ಆದರೆ, ಪ್ಯಾಟ್ರಿಯಟ್ ವ್ಯಾಪ್ತಿ ಯಾವ ಕ್ಷಿಪಣಿಯನ್ನು ಅಳವಡಿಸಲಾಗಿದೆ ಎನ್ನುವುದರ ಮೇಲೆ ಅವಲಂಬಿಸಿದೆ. ಇದರ ಪ್ಯಾಕ್-2 ಮತ್ತು ಪ್ಯಾಕ್-3 ಕ್ಷಿಪಣಿಗಳು ಸಂಭಾವ್ಯ ದೀರ್ಘ ವ್ಯಾಪ್ತಿಯನ್ನು ಬೆನ್ನತ್ತುವ ಬದಲು, ನಿರ್ದಿಷ್ಟ ಕಾರ್ಯಗಳು ಮತ್ತು ಯೋಜನೆಗಳ ಮೇಲೆ ಗಮನ ಹರಿಸುವ ರೀತಿಯಲ್ಲಿ ನಿರ್ಮಿತವಾಗಿವೆ.
ಆದರೆ, ನೆನಪಿಟ್ಟುಕೊಳ್ಳಬೇಕಾದ ವಿಚಾರವೆಂದರೆ, ಕಾಗದದ ಮೇಲೆ ಅತ್ಯಂತ ದೊಡ್ಡದಾಗಿ ಕಾಣುವ ಸಂಖ್ಯೆ ಯಾವಾಗಲೂ ನೈಜ ಯುದ್ಧದಲ್ಲಿ ಗೆಲುವು ಸಾಧಿಸುತ್ತದೆ ಎನ್ನಲು ಸಾಧ್ಯವಿಲ್ಲ. ಗುರಿಯ ಎತ್ತರ, ರೇಡಾರ್ ಇತಿಮಿತಿಗಳು, ಇಲೆಕ್ಟ್ರಾನಿಕ್ ವಾರ್‌ಫೇರ್, ಭೂ ವ್ಯವಸ್ಥೆ, ಮತ್ತು ಅಪಾಯದ ರೀತಿ ಎಲ್ಲವೂ ನೈಜ ಪ್ರದರ್ಶನವನ್ನು ನಿರ್ಧರಿಸುತ್ತವೆ. ಉದಾಹರಣೆಗೆ, ಕೆಳಮಟ್ಟದಲ್ಲಿ ಹಾರಾಡುತ್ತಾ ಬರುವ ಕ್ರೂಸ್ ಕ್ಷಿಪಣಿಗಳು ರೇಡಾರ್‌ನ ನೋಟದಿಂದ ಕೆಳಭಾಗದಲ್ಲಿ ಹಾರಿಬರುವುದರಿಂದ, ಅವುಗಳನ್ನು ಬಹಳಷ್ಟು ಹತ್ತಿರ ಬಂದಾಗಲೇ ಗುರುತಿಸಲು ಸಾಧ್ಯ. ಆದ್ದರಿಂದ, ಇಂತಹ ವ್ಯವಸ್ಥೆಗಳ ಒಂದು ಕ್ಷಿಪಣಿ ಎಷ್ಟೇ ದೂರಕ್ಕೆ ಹಾರಿದರೂ, ರೇಡಾರ್‌ಗಳು ಮೊದಲು ಗುರಿಯನ್ನು ಗುರುತಿಸಲು ಸಾಧ್ಯವಾಗಬೇಕು.
ವಿಭಿನ್ನ ಕಾರ್ಯಗಳಿಗಾಗಿ ವಿಭಿನ್ನ ಕ್ಷಿಪಣಿಗಳು
ಇವೆರಡೂ ವ್ಯವಸ್ಥೆಗಳು ಭಿನ್ನವಾದ ರೀತಿಯಲ್ಲಿ ದಾಳಿ ನಡೆಸುತ್ತವೆ. ಪ್ಯಾಟ್ರಿಯಟ್ ಕ್ಷಿಪಣಿ ಪ್ಯಾಕ್-2 ಜೆಮ್-ಟಿ ಮತ್ತು ಪ್ಯಾಕ್-3 ಎಂಎಸ್‌ಇ ರೀತಿಯ ಕ್ಷಿಪಣಿಗಳನ್ನು ಬಳಸುತ್ತಿದ್ದು, ಅವೆರಡೂ ನಿರ್ದಿಷ್ಟ ರೀತಿಯ ಅಪಾಯಗಳನ್ನು ಎದುರಿಸಲು ನಿರ್ಮಿತವಾಗಿವೆ. ಎಸ್-400 ವ್ಯವಸ್ಥೆ 48ಎನ್6, 9ಎಂ96 ಮತ್ತು 40ಎನ್6ನಂತಹ ಕ್ಷಿಪಣಿ ಕುಟುಂಬಗಳನ್ನು ಬಳಸುತ್ತಿದ್ದು, ಪ್ರತಿಯೊಂದೂ ವಿಭಿನ್ನ ವೈಮಾನಿಕ ಅಪಾಯಗಳಿಗಾಗಿ ವಿನ್ಯಾಸಗೊಂಡಿದೆ. ಇವುಗಳಲ್ಲಿ ಬಹುತೇಕ ಕ್ಷಿಪಣಿಗಳು ಬ್ಲಾಸ್ಟ್ - ಫ್ರಾಗ್ಮಂಟೇಶನ್ ಸಿಡಿತಲೆಗಳನ್ನು ಹೊಂದಿದ್ದು, ಅವು ಸ್ಫೋಟಗೊಂಡು, ಎಲ್ಲೆಡೆಗೂ ಚೂಪಾದ ಲೋಹದ ತುಣುಕುಗಳನ್ನು ಸಿಡಿಸುವ ಮೂಲಕ ಗುರಿಯನ್ನು ನಾಶಪಡಿಸುತ್ತವೆ. ಈ ವಿಧಾನ ನಿರ್ವಾಹಕರಿಗೆ ವಿವಿಧ ರೀತಿಯ ದಾಳಿಗಳನ್ನು ಸ್ಮಾರ್ಟ್ ಆಗಿ ನಿರ್ವಹಿಸಲು ಹೆಚ್ಚಿನ ಸ್ವಾತಂತ್ರ್ಯ ಕಲ್ಪಿಸುತ್ತದೆ.
ನೈಜ ಯುದ್ಧದ ಅನುಭವ
ಇಲ್ಲಿನ ಬಹುದೊಡ್ಡ ವ್ಯತ್ಯಾಸ ಉಂಟುಮಾಡುವುದು ನೈಜ ಯುದ್ಧದ ಅನುಭವ. ಪ್ಯಾಟ್ರಿಯಟ್ ವ್ಯವಸ್ಥೆ ನೈಜ ಯುದ್ಧಗಳಲ್ಲಿ ಹಲವಾರು ದಶಕಗಳಿಂದ ಬಳಕೆಯಾಗಿದ್ದು, ಕೊಲ್ಲಿ ಯುದ್ಧದಿಂದ ಮೊದಲ್ಗೊಂಡು, ಇರಾಕ್ ಯುದ್ಧ, ಸೌದಿ ಅರೇಬಿಯ ಮತ್ತು ಈಗಿನ ಉಕ್ರೇನ್ ಯುದ್ಧದಲ್ಲೂ ಬಳಕೆಯಾಗಿದೆ. ಮೊದಲ ಕೊಲ್ಲಿ ಯುದ್ಧದಲ್ಲಿ ಇದರ ಸಾಧನೆಯ ಕುರಿತು ಹಲವು ಚರ್ಚೆಗಳು ನಡೆದಿವೆಯಾದರೂ, ಅಂದಿನಿಂದ ವ್ಯವಸ್ಥೆ ಮತ್ತೆ ಮತ್ತೆ ಮೇಲ್ದರ್ಜೆಗೆ ಒಯ್ಯಲ್ಪಟ್ಟಿದೆ. ಇತ್ತೀಚಿನ ಕದನಗಳಲ್ಲಿ ಪ್ಯಾಟ್ರಿಯಟ್ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಏರ್‌ಕ್ರಾಫ್ಟ್‌ಗಳನ್ನು ತಡೆಯುವ ಸಾಮರ್ಥ್ಯ ಪ್ರದರ್ಶಿಸಿವೆ. ಉಕ್ರೇನ್ ಯುದ್ಧದಲ್ಲಿನ ಇದರ ಬಳಕೆ ಆಧುನಿಕ ದಾಳಿಗಳ ಎದುರು ಇದಕ್ಕೆ ಅತ್ಯಂತ ಕಠಿಣ ಪರೀಕ್ಷೆ ತಂದೊಡ್ಡಿತು.
ಎಸ್-400 ವ್ಯವಸ್ಥೆಯನ್ನು ರಶ್ಯ ಬಳಸಿದ್ದು, ಇದನ್ನು ಚೀನಾ, ಭಾರತ ಮತ್ತು ತುರ್ಕಿಯಗಳಿಗೂ ಮಾರಾಟ ಮಾಡಿದೆ. ಭಾರತದ ಎಸ್-400 ಸುದರ್ಶನ ಚಕ್ರ 2025ರ ಮೇ 7ರಿಂದ 10ರ ತನಕ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಮೊದಲಿಗೆ ಯುದ್ಧದಲ್ಲಿ ಬಳಕೆಯಾಗಿದ್ದು, ಅಸಾಧಾರಣ ಸಾಮರ್ಥ್ಯ ಪ್ರದರ್ಶಿಸಿದೆ. ಇದು 300ಕ್ಕೂ ಹೆಚ್ಚು ಕಿಲೋಮೀಟರ್ ದೂರದಲ್ಲಿದ್ದ ಪಾಕಿಸ್ತಾನದ ಮುನ್ನೆಚ್ಚರಿಕಾ ವಿಮಾನವನ್ನು ಹೊಡೆದು ಹಾಕಿದ್ದು, ಇದು ಇಲ್ಲಿಯ ತನಕ ದಾಖಲಾದ ಅತಿದೀರ್ಘ ವ್ಯಾಪ್ತಿಯ ಭೂಮಿಯಿಂದ ಆಗಸಕ್ಕೆ ನಡೆದ ಯಶಸ್ವಿ ದಾಳಿ ಎನಿಸಿಕೊಂಡಿದೆ. ಇದು ಪಾಕಿಸ್ತಾನಿ ವಾಯುಸೇನೆಯ ಐದರಿಂದ ಆರು ಯುದ್ಧ ವಿಮಾನಗಳನ್ನೂ ಧ್ವಂಸಗೊಳಿಸಿದೆ. ಆಕಾಶ್‌ತೀರ್ ವ್ಯವಸ್ಥೆಯ ಜೊತೆಗೂಡಿ ಕಾರ್ಯಾಚರಿಸಿದ ಎಸ್-400, ಡ್ರೋನ್ ಸಮೂಹ ದಾಳಿಗಳು, ಫತಾ-1 ರಾಕೆಟ್‌ಗಳು ಮತ್ತು ಯುದ್ಧ ವಿಮಾನ ದಾಳಿಗಳನ್ನು ತಡೆಗಟ್ಟಿದೆ. ಇಷ್ಟಾದರೂ, ತಜ್ಞರು ಇಂತಹ ವ್ಯವಸ್ಥೆಗಳ ಘೋಷಿತ ಸಾಮರ್ಥ್ಯ ಮತ್ತು ಸಾಬೀತಾದ ಫಲಿತಾಂಶಗಳನ್ನು ಪ್ರತ್ಯೇಕವಾಗಿ ಪರಿಗಣಿಸುತ್ತಾರೆ. ಸ್ವತಂತ್ರವಾಗಿ ಇವುಗಳನ್ನು ಪರಿಶೀಲಿಸುವ ಅವಕಾಶಗಳು ಬಹಳಷ್ಟು ಕಡಿಮೆ ಇರುವುದು ಇದಕ್ಕೆ ಕಾರಣವಾಗಿದೆ.
ಇವೆರಡರಲ್ಲಿ ಯಾವ ವ್ಯವಸ್ಥೆ ಉತ್ತಮ?
ಒಂದು ವೇಳೆ ಬಳಕೆಯ ಉದ್ದೇಶ ಯಾವುದಾದರೂ ನಗರ ಅಥವಾ ನೆಲೆಗಳನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ರಕ್ಷಿಸುವ ಮತ್ತು ಒಂದು ಉತ್ತಮ ಸಂಪರ್ಕಿತ ಜಾಲದಲ್ಲಿ ಬಳಸುವುದಾದರೆ, ಪ್ಯಾಟ್ರಿಯಟ್ ಮೇಲುಗೈ ಹೊಂದಿದೆ. ಇದಕ್ಕೆ ಅದರ ನಿರಂತರ ಅಭಿವೃದ್ಧಿ ಮತ್ತು ನೇಟೋ ಸಹಯೋಗಿಗಳ ವ್ಯಾಪಕ ಬಳಕೆ ಕಾರಣವಾಗಿದೆ. ಇನ್ನೊಂದೆಡೆ, ಎಸ್-400 ವ್ಯವಸ್ಥೆ ಪದರಗಳ ಕ್ಷಿಪಣಿಗಳು ಮತ್ತು ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು, ದೊಡ್ಡ ಪ್ರದೇಶದ ರಕ್ಷಣೆಗೆ ಸೂಕ್ತವಾಗಿದೆ. ಒಂದು ಯುದ್ಧದಲ್ಲಿ ಸಾಮರ್ಥ್ಯ ಸಾಬೀತುಪಡಿಸಿರುವ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾದರೆ, ಇನ್ನೊಂದು ದೀರ್ಘ ವ್ಯಾಪ್ತಿಯ ಪ್ರದೇಶ ರಕ್ಷಕನಾಗಿದೆ. ಅವುಗಳನ್ನು ದೀರ್ಘ ವ್ಯಾಪ್ತಿಯ ಕ್ಷಿಪಣಿಗಳಿಂದ ಮಾತ್ರವೇ ಹೋಲಿಸುವುದು ಸಂಪೂರ್ಣ ಚಿತ್ರಣ ಒದಗಿಸಲು ಸಾಧ್ಯವಿಲ್ಲ. ಏಕೆಂದರೆ, ಎರಡೂ ತಮ್ಮನ್ನು ನಿರ್ಮಿಸಿರುವ ಉದ್ದೇಶವನ್ನು ಅತ್ಯಂತ ಸಮರ್ಥವಾಗಿ ಪೂರೈಸಬಲ್ಲ ವ್ಯವಸ್ಥೆಗಳಾಗಿವೆ.






