ಸಮಸ್ಯೆಗಳ ಆಗರ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ

ಸುರಪುರ: ನಗರದ ಹೊರವಲಯದಲ್ಲಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಸಮಸ್ಯೆಗಳ ಆಗರವಾಗಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದಂತಾಗಿದೆ. ವೃಕ್ಷೋದ್ಯಾನಕ್ಕೆ ಹೋಗಲು ಸರಿಯಾದ ರಸ್ತೆಯಿಲ್ಲ. ಕೆಲ ವರ್ಷಗಳ ಹಿಂದೆ ದುರಸ್ತಿಗಾಗಿ ಹಾಕಿರುವ ಜಲ್ಲಿ ಕಲ್ಲುಗಳು ಕೂಡ ಹಾಗೆ ಬಿದ್ದಿದ್ದು ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ವೃಕ್ಷೋದ್ಯಾನದ ಪ್ರವೇಶ ದ್ವಾರದಲ್ಲಿ ಮಕ್ಕಳಿಗೆ 5 ರೂ. ದೊಡ್ಡವರಿಗೆ 10 ರೂ. ದರ ತೆಗೆದುಕೊಳ್ಳಲಾಗುತ್ತದೆ. ಆದರೆ ಒಳಗೆ ಹೋದರೆ ಒಣಗಿದ ಮರ-ಗಿಡಗಳು, ಮುರಿದ ಆಟಿಕೆಗಳಿವೆ. ಕುಡಿಯಲು ನೀರೂ ಸಹ ಇಲ್ಲದ ಈ ಉದ್ಯಾನವನದಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಜನರು ಹಿಡಿಶಾಪ ಹಾಕುವಂತಾಗಿದೆ.
ವೃಕ್ಷೋದ್ಯಾನಕ್ಕೆ ಬರುವ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ನಿರಂತರ ಕುಡಿಯುವ ನೀರು ಸರಬರಾಜಿನ ನಳ ಒಂದು ಮುಖ್ಯ ದ್ವಾರದ ಬಳಿ ಅಳವಡಿಸಿದ್ದು, ಅದರಿಂದ ಬರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ನೀರು ಸೇವಿಸಿದಲ್ಲಿ ಮಕ್ಕಳ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರಲಿದೆ ಎಂದು ಮಕ್ಕಳೊಂದಿಗೆ ಆಗಮಿಸಿರುವ ಪೋಷಕರು ಆರೋಪಿಸುತ್ತಿದ್ದಾರೆ. ಅಲ್ಲದೆ ನೀರು ಶುದ್ಧೀಕರಿಸುವ ಯಂತ್ರವಿದ್ದರೂ ಅದನ್ನು ಉದ್ಯಾನವನದಲ್ಲಿ ಅಳವಡಿಸದೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಹೇಳಲಾಗಿದೆ.
ವೃಕ್ಷೋದ್ಯಾನದ ಒಳಗಡೆ ಹೊರಟರೆ ಹಾಳಾದ ರಸ್ತೆಯಿಂದ ಮಕ್ಕಳು ನಡೆದುಕೊಂಡು ಹೋಗದಂತಹ ಸ್ಥಿತಿ ತಲುಪಿದೆ. ಬೇಸಿಗೆ ರಜೆ ಇರುವುದರಿಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವೃಕ್ಷೋದ್ಯೋನಕ್ಕೆ ಪೋಷಕರೊಂದಿಗೆ ಆಗಮಿಸಿದರೆ ಅನೇಕ ಆಟದ ವಸ್ತುಗಳು ಕೂಡ ಮುರಿದು ಬಿದ್ದಿರುವುದು ಕಂಡುಬರುತ್ತದೆ. ಅಲ್ಲದೆ ಇತ್ತೀಚಿಗೆ ಕೆಲವು ಹೊಸ ಆಟದ ವಸ್ತುಗಳನ್ನ ಅಳವಡಿಸಲಾಗಿದ್ದರೂ ಅವುಗಳು ಚಿಕ್ಕ ಮಕ್ಕಳಿಗೆ ಉಪಯೋಗವಿಲ್ಲದಂತಿವೆ. ಜಾರು ಬಂಡಿಯ ಆಟದ ವಸ್ತುಗಳು ಮುರಿದು ಅನೇಕ ವರ್ಷಗಳಾದರೂ ಅವುಗಳನ್ನು ಬದಲಾಯಿಸುವ ಗೋಜಿಗೂ ಅರಣ್ಯ ಇಲಾಖೆ ಹೋಗಿಲ್ಲ. ಅರಣ್ಯ ಇಲಾಖೆ ಇದರ ನಿರ್ವಹಣೆಯನ್ನು ಮಾಡುತ್ತಿದ್ದು ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದ ವೃಕ್ಷೋದ್ಯಾನ ಇದ್ದೂ ಇಲ್ಲದಂತಾಗಿದೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.
ವೃಕ್ಷೋದ್ಯಾನದಲ್ಲಿನ ಅವ್ಯವಸ್ಥೆಯ ಕುರಿತು ಮಾಹಿತಿ ಪಡೆದುಕೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿ ಭಾಗಣ್ಣ ಅವರಿಗೆ ಪತ್ರಿಕೆಯಿಂದ ಸಂಪರ್ಕಿಸಿದರೆ ಕರೆಯನ್ನು ಸ್ವೀಕರಿಸುತ್ತಿಲ್ಲ.ಅಧಿಕಾರಿಗಳು ಇನ್ನಾದರೂ ಉದ್ಯಾನವನದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲಿ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಮಕ್ಕಳ ಆಟಕ್ಕಾಗಿ ನಿರ್ಮಿಸಿರುವ ವೃಕ್ಷೋದ್ಯಾನ ಪ್ರೇಮಿಗಳ ತಾಣವಾಗಿ ಮಾರ್ಪಡುತ್ತಿದೆ. ಬೇರೆ ಬೇರೆ ತಾಲೂಕುಗಳಿಂದಲೂ ಪ್ರೇಮಿಗಳು ಆಗಮಿಸಿ, ಖಾಸಗಿ ಕ್ಷಣಗಳನ್ನು ಸಾರ್ವಜನಿಕವಾಗಿ ಕಳೆಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸಿ ಯಾವುದೇ ಅನಗತ್ಯ ಚಟುವಟಿಕೆಗಳಿಗೆ ಅವಕಾಶ ನೀಡದೆ ಜಾಗೃತಿ ಮೂಡಿಸಬೇಕಿದೆ.
ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಹೆಸರಿನಲ್ಲಿ ವೃಕ್ಷೋದ್ಯಾನ ನಿರ್ಮಿಸಲಾಗಿದ್ದು, ಈಗ ಯಾವುದೇ ಸೌಲಭ್ಯಗಳಿಲ್ಲದೆ ಉದ್ಯಾನವನ ಅವ್ಯವಸ್ಥೆಯ ತಾಣವಾಗಿದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಕುಡಿಯುವ ನೀರು, ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು.
-ವೆಂಕಟೇಶ ನಾಯಕ ಬೈರಿಮಡ್ಡಿ
ಕರವೇ ತಾಲೂಕು ಅಧ್ಯಕ್ಷ, ಸುರಪುರ
ಉದ್ಯಾನವನಕ್ಕೆ ಬರುವವರಿಂದ ಹಣ ಪಡೆದು ಸೌಕರ್ಯ ನೀಡದಿರುವುದು ಸರಿಯಲ್ಲ. ಅಧಿಕಾರಿಗಳು ಇಲ್ಲಿಯ ಅವ್ಯವಸ್ಥೆ ಸರಿಪಡಿಸದಿದ್ದಲ್ಲಿ ನಮ್ಮ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು.
-ಮಾಳಪ್ಪ ಕಿರದಳ್ಳಿ,
ಜಿಲ್ಲಾ ಸಂಚಾಲಕರು, ಡಿಎಸ್‌ಎಸ್ (ಅಂಬೇಡ್ಕರ್ ವಾದ) ಯಾದಗಿರಿ






