ಘೋಷಣೆಗೆ ಮೀಸಲಾಗುವ ‘ಸಬ್ ಕಾ ವಿಕಾಸ’

ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ಪ್ರಕಾರ ಈ ವರ್ಷದ ಬಜೆಟು ಭಾರತದ ಸುಧಾರಣಾ ‘ಎಕ್ಸ್‌ಪ್ರೆಸ್’ಗೆ ಹೊಸ ಇಂಧನವನ್ನು ಪೂರೈಸಲಿದೆ. ಅದು 2047ರಲ್ಲಿ ವಿಕಸಿತ ಭಾರತದ ಗುರಿಗೆ ಬುನಾದಿಯಾಗಲಿದೆ. ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯೂ ಗಮನಾರ್ಹ ಮೋದಿಯವರ ನಾಯಕತ್ವದ ನಮ್ಮ ಸರಕಾರವು ನಿರ್ಣಾಯಕವಾಗಿ ಮತ್ತು ಕ್ರಮಬದ್ಧವಾಗಿ ಅನಿಶ್ಚಿತತೆಯ ಬದಲು ನಿರ್ದಿಷ್ಟ ಕ್ರಮ, ವಾಗಾಡಂಬರದ ಬದಲು ಸುಧಾರಣೆ ಮತ್ತು ಜನಪ್ರಿಯತೆಯ ಬದಲು ಜನಪರ ಧೋರಣೆಗಳನ್ನು ಅನುಸರಿಸುತ್ತಾ ಬಂದಿದೆ. ಹೀಗಾಗಿ ಹೋದ ಹನ್ನೆರಡು ವರ್ಷಗಳಲ್ಲಿ ಸ್ಥಿರತೆ, ಹಣಕಾಸಿನ ಶಿಸ್ತು, ನಿರಂತರ ಪ್ರಗತಿ ಹಾಗೂ ಸೀಮಿತ ಬೆಲೆ ಏರಿಕೆಯ ಚೌಕಟ್ಟಿನ ಒಳಗೆ ದೇಶದ ಆರ್ಥಿಕತೆಯು ಅಭಿವೃದ್ಧಿ ಸಾಧಿಸುವಲ್ಲಿ ಯಶಸ್ವಿಯಾಗಿದೆ? ಎಂದಿದ್ದಾರೆ ಸಚಿವೆ.
ಪ್ರಧಾನಿ ಮತ್ತು ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗಳನ್ನು ಗಮನದಲ್ಲಿಟ್ಟು ಈ ಬಾರಿಯ ಬಜೆಟ್‌ನ ಪ್ರಮುಖ ಅಂಶಗಳತ್ತ ದೃಷ್ಟಿ ಹಾಯಿಸಬೇಕಾಗುತ್ತದೆ. ಮಾತ್ರವಲ್ಲ ದೇಶದ ಮುಂದಿದ್ದ ಸವಾಲುಗಳನ್ನು ಎದುರಿಸುವಲ್ಲಿ ನಿರ್ದಿಷ್ಟವಾದ ದೂರಗಾಮಿ ನಿರ್ಧಾರಗಳು ಏನಿವೆ ಎಂಬುದೂ ಅತ್ಯಂತ ಸಕಾಲಿಕವಾಗುತ್ತದೆ.
ಬಂಡವಾಳ ಹೂಡುವಿಕೆಗೆ ಉತ್ತೇಜನ, ಉದ್ಯೋಗ ಸೃಷ್ಟಿ, ಹೊಸ ಉದ್ದಿಮೆಗಳ ಸ್ಥಾಪನೆಗೆ ಪ್ರೋತ್ಸಾಹ, ರಫ್ತಿಗೆ ಉತ್ತೇಜನ, ಕೃಷಿಗೆ ಬೆಂಬಲ ಹಾಗೂ ಆಂತರಿಕ ಉಳಿತಾಯಕ್ಕೆ ಪ್ರೋತ್ಸಾಹವನ್ನು ನೀಡುವುದು-ಈ ನಿಟ್ಟಿನಲ್ಲಿ ಈ ವರ್ಷದ ಬಜೆಟ್ ಕಾರ್ಯೋನ್ಮುಖವಾಗಬಹುದೆಂದು ಬಹಳಷ್ಟು ಆಶಾವಾದವಿತ್ತು.
ಸರಕಾರದ ಕರ್ತವ್ಯಗಳು
ನಿರ್ಮಲಾ ಸೀತಾರಾಮನ್‌ಅವರು ತಮ್ಮ ಭಾಷಣದಲ್ಲಿ ಬಡವರು, ಅವಕಾಶ ವಂಚಿತರು ಮತ್ತು ಪ್ರತಿಕೂಲಪರಿಸ್ಥಿತಿಗೆ ಬಲಿಯಾದವರ ಏಳಿಗೆ ತಮ್ಮ ಸರಕಾರದ ಸಂಕಲ್ಪ, ಬಜೆಟನ್ನು ಈ ಬಾರಿ ‘ಕರ್ತವ್ಯ ಭವನ’ದಲ್ಲಿ ತಯಾರಿಸಿದ್ದೇವೆ, ಇದು ತಮಗೆ ಮೂರು ಕರ್ತವ್ಯಗಳನ್ನು ನಿಭಾಯಿಸಲು ಉತ್ತೇಜಿಸಿವೆ ಎನ್ನುತ್ತಾರೆ. ಅವುಗಳು ಹೀಗಿವೆ:
ಒಂದು: ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆಯನ್ನು ವೃದ್ಧಿಸಿ, ಜಾಗತಿಕ ಸ್ಥಿತ್ಯಂತರಗಳನ್ನು ಎದುರಿಸುವ ಸಾಮರ್ಥ್ಯವನ್ನು ಬಲಪಡಿಸಿ ಆರ್ಥಿಕ ಪ್ರಗತಿಯನ್ನು ತೀವ್ರಗೊಳಿಸುವುದು,
ಎರಡು: ಜನತೆಯ ಆಶೋತ್ತರಗಳನ್ನು ಈಡೇರಿಸುವುದು, ಅವರ ಸಾಮರ್ಥ್ಯವನ್ನು ಬೆಳೆಸುವುದು, ಆ ಮೂಲಕ ಅವರನ್ನು ದೇಶದ ಅಭಿವೃದ್ಧಿಪಥದ ಪಾಲುದಾರರನ್ನಾಗಿ ಮಾಡುವುದು.
ಮೂರು: ‘ಎಲ್ಲರೊಂದಿಗೆ, ಎಲ್ಲರ ವಿಕಾಸ’ (ಸಬ್‌ಕಾ ವಿಕಾಸ್ ಸಾಥ್, ಸಬ್ಕಾ ವಿಕಾಸ್) ಅಂದರೆ ಪ್ರತಿಯೊಂದು ಕುಟುಂಬ, ಸಮುದಾಯ, ಪ್ರದೇಶ ಮತ್ತು ರಂಗಗಳಿಗೆ ಸಂಪನ್ಮೂಲ, ಸೌಕರ್ಯ ಮತ್ತು ಅವಕಾಶಗಳು ಅರ್ಥಪೂರ್ಣವಾಗಿ ದೊರಕುವಂತೆ ಮಾಡುವುದು.
ಈ ಕರ್ತವ್ಯಗಳ ಉದ್ದೇಶಗಳು ಮತ್ತು ಔಚಿತ್ಯದ ಬಗ್ಗೆ ಭಿನ್ನಾಭಿಪ್ರಾಯಕ್ಕೆ ಆಸ್ಪದವಿಲ್ಲ. ಆದರೆ ಬಜೆಟಿನಲ್ಲಿ ಘೋಷಿಸಿರುವ ನಿರ್ಧಾರಗಳು ಗುರಿಯನ್ನು ತಲುಪಲು ಎಷ್ಟು ಪೂರಕವಾಗಬಲ್ಲವು?
ಕೆಲವು ಕ್ರಮಗಳು:
ಬಜೆಟ್‌ನಲ್ಲಿ ಏಳು ಅಗತ್ಯದ ಉತ್ಪಾದನಾ ರಂಗಗಳಲ್ಲಿ ಉತ್ಪಾದನಾ ಚಟುವಟಿಕೆಗಳ ವೃದ್ಧಿ, ‘ಚಾಂಪಿಯನ್’ ಎಂಎಸ್ ಎಂಇಗಳ ಸ್ಥಾಪನೆ, ಮೂಲಸೌಕರ್ಯಗಳ ಅಭಿವೃದ್ಧಿಗೆ ಬಲವಾದ ಒತ್ತು, ಇಂಧನ ಪೂರೈಕೆಯಲ್ಲಿ ಸ್ವಾಯತ್ತೆ ಮತ್ತು ಭದ್ರತೆ, ನಗರ ಕೇಂದ್ರಿತ ಕೈಗಾರಿಕಾ ವಲಯಗಳ ಬೆಳವಣಿಗೆ ಮುಂತಾದ ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಇವುಗಳ ಉದ್ದೇಶಗಳು ಉತ್ತಮವೇ.ಆದರೆ ಇವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸರಕಾರವೇ ಪ್ರಮುಖ ಪಾತ್ರವನ್ನು ವಹಿಸಬೇಕಾಗುತ್ತದೆ. ಇತ್ತೀಚೆಗಿನ ವರ್ಷಗಳ ಅನುಭವದಂತೆ ಖಾಸಗಿ ಉದ್ದಿಮೆದಾರರು ಬಂಡವಾಳ ಹೂಡಿಕೆಗೆ ಹಿಂದೇಟು ಹಾಕುತ್ತಿರುವಾಗ ಈ ಹೊಸ ಕ್ರಮಗಳ ಅನುಷ್ಠಾನ ಯಾರು ಮಾಡಬೇಕು?
ಎರಡನೆಯ ಕರ್ತವ್ಯದ ಬಗ್ಗೆ ವಿಸ್ತರಿಸುತ್ತಾ ಮಾನ್ಯ ಸಚಿವೆಯವರು ತಮ್ಮ ಸರಕಾರದ ನೀತಿಗಳಿಂದಾಗಿ 25 ಕೋಟಿ ನಾಗರಿಕರು ಬಹು ಆಯಾಮದ ಬಡತನದಿಂದ ಹೊರಬಂದಿದ್ದಾರೆಂದು ಹೇಳುತ್ತಾರೆ. ಈ ಸಂಖ್ಯೆಯ ಬಗ್ಗೆ ಒಮ್ಮತವಿಲ್ಲ; ನಿಖರ ಮಾಹಿತಿಯೂ ಲಭ್ಯವಿಲ್ಲ. ಅದೂ ಅಲ್ಲದೆ, ದೇಶದ 145 ಕೋಟಿ ಜನರಲ್ಲಿ 80 ಕೋಟಿ ಕಡುಬಡವರಿಗೆ ಉಚಿತ ಆಹಾರಧಾನ್ಯ ಒದಗಿಸುವ ಪರಿಸ್ಥಿತಿ ಇನ್ನೂ ಮುಂದುವರಿಯುತ್ತಿದೆ. ಈ ಪ್ರಮಾಣದ ಬಡವರನ್ನು ಬಡತನದ ರೇಖೆಯಿಂದ ಮೇಲೆತ್ತುವ ಕ್ರಮಗಳ ಬಗ್ಗೆ ಬಜೆಟ್ ಮೌನವಾಗಿದೆ.
ಮೂರನೆಯ ಕರ್ತವ್ಯ ಸರ್ವರ ಪ್ರಗತಿಯನ್ನು ಸಾಧಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು. ಆದರೆ ಈ ಬಜೆಟ್‌ನಲ್ಲಿ ವ್ಯಾಪಕವಾದ ಯಾವುದೇ ನೀತಿ ಅಥವಾ ಕ್ರಮಗಳನ್ನು ಘೋಷಿಸಲಾಗಿಲ್ಲ.
ವಿಕಸಿತ ಭಾರತದ ಗುರಿಯನ್ನು ತಲಪುವಲ್ಲಿ ಹಣಕಾಸು ರಂಗದಲ್ಲಿ ಆಗಬೇಕಾದ ಸುಧಾರಣೆಯ ಬಗ್ಗೆ ಉಚ್ಚಸ್ತರೀಯ ಅಧ್ಯಯನ ಸಮಿತಿಯನ್ನು ರಚಿಸುವ ಘೋಷಣೆಯನ್ನು ಬಜೆಟು ಮಾಡಿದೆ. ಇಲ್ಲಿಯೂ ಸರಕಾರದ ದ್ವಂದ್ವ ನೀತಿಯನ್ನು ಗಮನಿಸಬಹುದು. ಮೂಲಭೂತ ಸುಧಾರಣೆಯ ಉದ್ದೇಶವಿದ್ದರೆ, ಸರಕಾರಿ ಬ್ಯಾಂಕುಗಳ ವಿಲಿನೀಕರಣ, ಖಾಸಗಿ ಬ್ಯಾಂಕುಗಳನ್ನು ವಿದೇಶೀ ಹೂಡಿಕೆದಾರರಿಗೆ ಒಪ್ಪಿಸಿಕೊಡುವುದು, ಕಾರ್ಪೊರೇಟ್ ಸಾಲಗಳನ್ನು ರೈಟ್ ಆಫ್ (ಮನ್ನಾ) ಮಾಡುತ್ತಾ ಇರುವುದು, ವಿಮಾ ರಂಗದಲ್ಲಿ ವಿದೇಶೀ ಸಂಸ್ಥೆಗಳಿಗೆ ಮುಕ್ತ ಪ್ರವೇಶ ನೀಡುವುದು ಮುಂತಾದ ಪ್ರಕ್ರಿಯೆಗಳ ಉದ್ದೇಶವೇನು?
ಸರಕಾರಿ ಸ್ವಾಮ್ಯದ ಉದ್ದಿಮೆಗಳ ಭೂಮಿಗಳನ್ನು ನಗದೀಕರಿಸುವ ಬೃಹತ್ ಗುರಿಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಆ ಮೂಲಕ ಸರಕಾರವು ತನಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಜೋಡಿಸುವ ಉದ್ದೇಶವನ್ನು ಹೊಂದಿದೆ. ಇಲ್ಲಿ ಎರಡು ಪ್ರಶ್ನೆಗಳು ಏಳುತ್ತವೆ: ಜೋಡಿಸಿದ ಸಂಪನ್ಮೂಲಗಳ ಸಮರ್ಪಕ ಹೂಡಿಕೆಯಾಗುತ್ತದೆಯೇ? ಮತ್ತು ರಾಷ್ಟ್ರೀಯ ಸಂಪತ್ತುಗಳನ್ನು ಹಣಕ್ಕೋಸ್ಕರ ಖಾಸಗಿಯವರಿಗೆ ಮಾರುವುದು ದೇಶದ ಹಿತದೃಷ್ಟಿಯಿಂದ ಎಷ್ಟು ಸಮಂಜಸ?
ಎಂಎಸ್ ಎಂಇಗಳ ಬಗ್ಗೆ ಬಜೆಟ್‌ನಲ್ಲಿ ಘೋಷಿಸಿದ ಎರಡು ಕ್ರಮಗಳು ಸ್ವಾಗತಾರ್ಹ. ಅವುಗಳ ಅಭಿವೃದ್ಧಿಗೆ 10,000 ಕೋಟಿ ರೂ.ನಿಧಿಯನ್ನು ಆರಂಭಿಸಲಾಗುತ್ತದೆ. ಅಲ್ಲದೆ 2,000ಕೋಟಿ ರುಪಾಯಿಯ ಇನ್ನೊಂದು ನಿಧಿಯ ಮೂಲಕ ಅತಿ ಸಣ್ಣ ಉದ್ದಿಮೆಗಳಿಗೆ ಬಂಡವಾಳವನ್ನು ಒದಗಿಸಲು ಸಹಾಯವನ್ನು ನೀಡಲಾಗುವುದು.
ಆಗಬೇಕಿದ್ದ ನಿರ್ಧಾರಗಳು
ಈ ವರ್ಷದ ಬಜೆಟ್‌ನಲ್ಲಿ ಮೂರು ರಂಗಗಳ ಬಗ್ಗೆ ಆದ್ಯತೆಯನ್ನು ನೀಡಬೇಕಿತ್ತು. ದೇಶೀಯ ಉಳಿತಾಯವು ಬಂಡವಾಳ ಜೋಡಣೆಗೆ ಅತೀ ಅಗತ್ಯ. ಇತ್ತೀಚೆಗಿನ ವರ್ಷಗಳಲ್ಲಿ ಉಳಿತಾಯದ ಕಡಿತವಾಗುತ್ತಾ ಇದೆ. ವೈಯಕ್ತಿಕ ಆದಾಯದಲ್ಲಿ ಹೆಚ್ಚಳವಾಗುವುದರ ಬದಲು ನಿರಂತರ ಕಡಿತವಾಗುವಾಗ, ಹೊಸ ಉದ್ಯೋಗಗಳ ಸೃಷ್ಟಿಯೂ ಇಲ್ಲದಾದಾಗ ಉಳಿತಾಯದ ಬದಲು ಬರುವ ಸಂಪಾದನೆಯು ದೈನಂದಿನ ವೆಚ್ಚಕ್ಕೆ ಅಗತ್ಯವಾಗಿ ಉಳಿತಾಯದಲ್ಲಿ ಖೋತವಾಗುತ್ತದೆ. ಇದಕ್ಕೆ ಪರಿಹಾರವನ್ನು ಬಜೆಟ್ ನೀಡಬಹುದೆಂಬ ಆಶಯವಿತ್ತು. ಅದು ಕನಸಾಗಿಯೇ ಉಳಿದಿದೆ.
ಖಾಸಗಿ ರಂಗದ ಉದ್ಯೋಗಪತಿಗಳು ಹೊಸ ಬಂಡವಾಳವನ್ನು ಹೂಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆಂದು ಸರಕಾರಕ್ಕೂ ತಿಳಿದ ವಿಷಯ. ಇದಕ್ಕೆ ಪರಿಹಾರ ಸರಕಾರವೇ ತನ್ನ ಹೂಡಿಕೆಯನ್ನು ಹೆಚ್ಚಿ ಸುವುದು. ಬಜೆಟ್‌ನಲ್ಲಿ ದುಬಾರಿವೆಚ್ಚದ (ಬುಲೆಟ್ ರೈಲು ಯೋಜನೆ ರೀತಿಯ) ಹೊಸ ಏಳು ರೈಲು ಯೋಜನೆಗಳ ಬಗ್ಗೆ ಘೋಷಿಸಲಾಗಿದೆ. ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು 2022ರಲ್ಲಿ ಓಡಲು ಆರಂಭವಾಗಬೇಕಿತ್ತು. ಅದರ ಕೆಲಸ ಇನ್ನೂ ಬಹಳಷ್ಟು ಬಾಕಿ ಇದೆ. ಇರುವ ರೈಲುಗಳ ದಕ್ಷತೆಯನ್ನು ಹೆಚ್ಚಿಸುವ ಕೆಲಸ ಆಗಬೇಕಿದೆ; ಅದಕ್ಕೆ ಹೆಚ್ಚು ಬಂಡವಾಳ ಅಗತ್ಯ. ಸರಕಾರ ಈ ಬಗ್ಗೆ ಗಮನ ಕೊಟ್ಟಿಲ್ಲ.
ದೇಶದ ಬೆನ್ನೆಲುಬಾಗಿರುವ ಕೃಷಿ ರಂಗದ ಸಂಕೀರ್ಣ ಸಮಸ್ಯೆಗಳ ಪರಿಹಾರದ ಬಗ್ಗೆಯೂ ಬಜೆಟ್‌ನಲ್ಲಿ ವಿಶೇಷ ಪ್ರಸ್ತಾವಗಳಿಲ್ಲ. ಇದರಿಂದಾಗಿ ರೈತ ವರ್ಗದ ಅಸಮಾಧಾನ ಮತ್ತೆ ಬಿಗಡಾಯಿಸಬಹುದು. ಬಜೆಟಿನ ಒಂದು ಪ್ರಮುಖ ಕೊರತೆ ಅಂದರೆ ಆಳವಾಗುತ್ತಿರುವ ಆರ್ಥಿಕ ಅಸಮಾನತೆಯ ಬಗ್ಗೆ ಯಾವುದೇ ನೀತಿಯನ್ನು ಘೋಷಿಸಲಾಗಿಲ್ಲ. ಆರ್ಥಿಕ ಪ್ರಗತಿಯ ವೇಗ ಹೆಚ್ಚುವುದು, ಅರ್ಥವ್ಯವಸ್ಥೆಯ ಗಾತ್ರ ವೃದ್ಧಿಸುವುದು, ವಿಶ್ವದಲ್ಲಿ ಭಾರತವು ಆರ್ಥಿಕವಾಗಿ ಬಲವಾಗುವುದು ಎಷ್ಟು ಅಗತ್ಯವೋ ಅದಕ್ಕಿಂತಲೂ ಆದ್ಯತೆ ಬೇಕಾಗಿರುವುದು ಅಸಮಾನತೆಗಳನ್ನು ಕಡಿತಗೊಳಿಸುವುದು. ‘ಸಬ್ಕಾ ವಿಕಾಸ್’ ಆ ಮೂಲಕವೇ ಆಗಬೇಕು. ಈ ದೃಷ್ಟಿಯಿಂದಲೂ ಈ ವರ್ಷದ ಬಜೆಟ್ ನಿರಾಶಾದಾಯಕವಾಗಿದೆ. ದೇಶದ ಅರ್ಥವ್ಯವಸ್ಥೆಗೆ ಕಾಯಕಲ್ಪ ನೀಡುವಲ್ಲಿ ಒದಗಿದ ಮತ್ತೊಂದು ಅವಕಾಶವನ್ನು ಮೋದಿ ಸರಕಾರವು ಕಳಕೊಂಡಿದೆ.







