ತುಂಗಭದ್ರೆಯ ಒಡಲು ಬಸಿದು ಮರಳು ದಂಧೆ

ಕಂಪ್ಲಿ: ತಾಲೂಕಿನಲ್ಲಿ ಸರಕಾರದ ಅಧಿಕೃತ ಮರಳು ಕೇಂದ್ರವೇ ಇಲ್ಲದಿದ್ದರೂ ಪ್ರತಿದಿನ ಅಕ್ರಮ ಮರಳು ದಂಧೆ ನಿರಾತಂಕವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಕ್ರಮ ಮರಳು ಗಣಿಗಾರಿಕೆಯಿಂದ ತುಂಗಭದ್ರಾ ನದಿಯ ಒಡಲು ಬರಿದಾಗುತ್ತಿದ್ದು, ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕಂಪ್ಲಿ-ಕೋಟೆ ಮತ್ತು ತಾಲೂಕಿನ ಸರಹದ್ದಿನಲ್ಲಿ ತುಂಗಭದ್ರಾ ನದಿ ಹರಿದು ಹೋಗಿದ್ದು, ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್ ಗೇಟ್ ಅಳವಡಿಕೆ ಹಿನ್ನೆಲೆಯಲ್ಲಿ ಸಂಗ್ರಹಿತ ನೀರನ್ನು ನಿರಂತರವಾಗಿ ನದಿಗೆ ಹರಿಬಿಟ್ಟ ಪರಿಣಾಮ ನದಿಯಲ್ಲಿ ಹೆಚ್ಚಿನ ಪ್ರಮಾಣದ ಮರಳು ಸಂಗ್ರಹವಾಗಿದೆ.
ಇದನ್ನು ಅವಕಾಶವನ್ನಾಗಿ ಮಾಡಿಕೊಂಡಿರುವ ಮರಳು ದಂಧೆಕೋರರು ಕಂಪ್ಲಿ ಹಾಗೂ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಭಾಗಗಳಲ್ಲಿ ಪ್ರತಿದಿನ ಬೆಳಗಿನ ಜಾವ ಹರಗೋಲುಗಳ ಮೂಲಕ ಮರಳು ತೆಗೆಯುತ್ತಿದ್ದಾರೆ ಎನ್ನಲಾಗಿದೆ.
ನದಿಯಿಂದ ತರಲಾದ ಮರಳನ್ನು ತೀರದಲ್ಲಿ ಸಂಗ್ರಹಿಸಿ, ಬಳಿಕ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಬೇರೆಡೆ ಸಾಗಿಸಿ, ಅಲ್ಲಿಂದ ಟಿಪ್ಪರ್ ಮತ್ತು ಲಾರಿಗಳ ಮೂಲಕ ವಿವಿಧ ಸ್ಥಳ ಳಿಗೆ ರವಾನಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಅಧಿಕೃತ ಮರಳು ಕೇಂದ್ರವಿಲ್ಲದಿದ್ದರೂ ಪ್ರತಿದಿನ ಬೃಹತ್ ವಾಹನಗಳಲ್ಲಿ ಮರಳು ಸಾಗಾಟ ನಡೆಯುತ್ತಿದ್ದು, ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯ ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ. ದಂಧೆಕೋರರು ಬೆಳಿಗ್ಗೆ ಮರಳನ್ನು ದಾಸ್ತಾನು ಮಾಡಿ, ಸಂಜೆ, ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.
ರಾತ್ರಿ ಹಾಗೂ ಬೆಳಗಿನ ಜಾವ ಮರಳು ತುಂಬಿದ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಬಡಾವಣೆಗಳ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಕ್ಕಳು ಮತ್ತು ವೃದ್ಧರ ಸುರಕ್ಷತೆಗೆ ಅಪಾಯ ಉಂಟಾಗುತ್ತಿದೆ ಎಂದು ಅವರು ದೂರಿದ್ದಾರೆ.
ಇತ್ತೀಚೆಗೆ ಕಂಪ್ಲಿಗೆ ಭೇಟಿ ನೀಡಿದ್ದ ಬಳ್ಳಾರಿ ಸಹಾಯಕ ಆಯುಕ್ತ ಎಚ್.ಡಿ. ರಾಜೇಶ್ ಅವರು ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರದ ಮರಳು ಕೇಂದ್ರ ಗುರುತಿಸಲಾಗಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದ್ದರು. ಜೊತೆಗೆ ಅಕ್ರಮ ಮರಳು ಸಾಗಾಟ ತಡೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಇಲಾಖೆಗೆ ಸೂಚಿಸಿದ್ದರು. ಆದಾಗ್ಯೂ, ಅಕ್ರಮ ದಂಧೆ ಮಾತ್ರ ಮುಂದುವರಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಂಪ್ಲಿ-ಕೋಟೆ ಭಾಗದಲ್ಲಿ ಬೆಳಗಿನ ಜಾವದ ವೇಳೆಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಹರಗೋಲು ಮಾಲೀಕರಿಗೆ ಈ ಕುರಿತು ಎಚ್ಚರಿಕೆ ನೀಡಲಾಗಿದೆ. ಆದರೂ ಅಕ್ರಮ ಚಟುವಟಿಕೆ ಮುಂದುವರಿದಿರುವ ಮಾಹಿತಿ ದೊರೆತಿದ್ದು, ಶೀಘ್ರದಲ್ಲೇ ದಾಳಿ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಜೂಗಲ್ ಮಂಜುನಾಯಕ, ತಹಶೀಲ್ದಾರ್, ಕಂಪ್ಲಿ






