ಕಾಡ್ಗಿಚ್ಚು ನಿಯಂತ್ರಣಕ್ಕೆ ಉಪಗ್ರಹ ಆಧಾರಿತ ತಂತ್ರಜ್ಞಾನ

ಶಿವಮೊಗ್ಗ: ರಾಜ್ಯ ಅರಣ್ಯ ಇಲಾಖೆ ಆಧುನಿಕ ತಂತ್ರಜ್ಞಾನದ ಬಲದಿಂದ ಕಾಡ್ಗಿಚ್ಚನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧವಾಗಿದೆ. ಸ್ವಾಭಾವಿಕ ಕಾಡ್ಗಿಚ್ಚಿಗಿಂತ ಮಾನವ ನಿರ್ಮಿತ ಕಾಡ್ಗಿಚ್ಚು ಪ್ರಕರಣಗಳು ಹಲವು ವರ್ಷಗಳಿಂದ ಸಂಭವಿಸುತ್ತಿದೆ. ಆದ್ದರಿಂದ ಅರಣ್ಯ ಇಲಾಖೆ ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ.
ಭೂಮಿಯನ್ನು ನಿರಂತರವಾಗಿ ಸುತ್ತುವ ಮಾನವ ನಿರ್ಮಿತ ಉಪಗ್ರಹಗಳು ಕಾಡ್ಗಿಚ್ಚಿನ ಮೇಲೆಯೂ ನಿಗಾ ವಹಿಸುತ್ತಿವೆ. ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದಿರುವುದು ಪತ್ತೆಯಾದ ತಕ್ಷಣ, ಸ್ಥಳದ ನಿಖರ ಮಾಹಿತಿ, ಜಿಪಿಎಸ್ ಲೊಕೇಶನ್ ಅನ್ನು ಉಪಗ್ರಹಗಳು ಹೈದರಾಬಾದ್‌ನಲ್ಲಿನ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್‌ಗೂ ಕಳುಹಿಸುತ್ತವೆ. ಅಲ್ಲಿಂದ ಆ ಮಾಹಿತಿ ಫಾರೆಸ್ಟ್ ಸರ್ವೇ ಆಫ್ ಇಂಡಿಯಾ(ಎಫ್‌ಎಸ್‌ಐ) ಹಾಗೂ ರಾಜ್ಯದ ದೂರ ಸಂವೇದಿ ಅನ್ವಯಿಕ ಕೇಂದ್ರಕ್ಕೆ (ಕಾರ್ಸಾಕ್) ತಕ್ಷಣ ತಲುಪುತ್ತದೆ.
ಹೀಗೆ ಬೆಂಕಿ ಬಿದ್ದ ಸ್ಥಳದ ಮಾಹಿತಿಯನ್ನು ಅಲ್ಲಿನ ಅರಣ್ಯ ಇಲಾಖೆ ಕಚೇರಿಗೆ ನೀಡಲಾಗುತ್ತದೆ. ಇದರಿಂದ ಸಿಬ್ಬಂದಿ ಬೆಂಕಿ ಬಿದ್ದಿರುವ ಸ್ಥಳಕ್ಕೆ ನಿಖರವಾಗಿ, ಸ್ವಲ್ಪ ಸಮಯದಲ್ಲೆ ತಲುಪಬಹುದು. ಕಾಡ್ಗಿಚ್ಚನ್ನು ನಿಯಂತ್ರಿಸುವ ಜತೆಗೆ, ಇತರೆಡೆಗೆ ಹಬ್ಬುವುದನ್ನು ತಡೆಯಬಹುದು.
ಕಾಡ್ಗಿಚ್ಚು ಹಬ್ಬಿರುವ ಸ್ಥಳಕ್ಕೆ ವಾಹನಗಳು ಹೋಗಲು ಸಾಧ್ಯವಿದ್ದರೆ ಅಲ್ಲಿ ಫೈರ್ ಇಂಜಿನ್, ಬ್ಲೋವರ್ಸ್ ಗಳನ್ನು ಬಳಸಿ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಬಹುದು. ಬೆಟ್ಟ, ಗುಡ್ಡಗಳ ಮೇಲೆ ಬೆಂಕಿ ಬಿದ್ದಿದ್ದರೆ ಅಲ್ಲಿಗೆ ವಾಹನ ತಲುಪುವುದು ಕಷ್ಟ. ಇಂತಹ ಸಮಯದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಂಕಿ ಹತೋಟಿಗೆ ತರಲಾಗುತ್ತದೆ.
15 ವರ್ಷಗಳ ಡಾಟಾ ಸಂಗ್ರಹ:
ಜಿಲ್ಲೆಯಲ್ಲಿ 15 ವರ್ಷಗಳ ಕಾಡ್ಗಿಚ್ಚಿನ ದತ್ತಾಂಶವನ್ನು ಆಧರಿಸಿ, ಕಾಡ್ಗಿಚ್ಚು ಹರಡಬಹುದಾದ ಪ್ರದೇಶ, ಕಾಡ್ಗಿಚ್ಚು ಪೀಡಿತ ಪ್ರದೇಶ ಹಾಗೂ ಕಾಡ್ಗಿಚ್ಚು ಅಪಾಯದ ಪ್ರದೇಶ ಎಂದು ಅರಣ್ಯವನ್ನು ಇಲಾಖೆ ವಿಂಗಡಿಸಿದೆ.
ಜಿಲ್ಲೆಯಲ್ಲಿ ಶಂಕರ, ಆಯನೂರು ಹಾಗೂ ಕುಂಸಿ ವಲಯದಲ್ಲಿ ಕಾಡ್ಗಿಚ್ಚಿನ ಸಂಭವನೀಯತೆ ಹೆಚ್ಚು. ಇದಕ್ಕಾಗಿ ಅಲ್ಲಿ ತಾತ್ಕಾಲಿಕ ಡೇರೆಗಳನ್ನು ಹಾಕಿ, ಸಿಬ್ಬಂದಿ ನಿಯೋಜಿಸಿದೆ. ಉಪಗ್ರಹದಿಂದ ಬೆಂಕಿ ಬಿದ್ದಿರುವ ಮಾಹಿತಿ ದೊರೆತ ತಕ್ಷಣ ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿ ಬೆಂಕಿ ನಂದಿಸಲು ಮುಂದಾಗುತ್ತಾರೆ.
ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಪ್ರತಿದಿನ ಮಧ್ಯಾಹ್ನ 2:30-3ಕ್ಕೆ, ಬೆಳಗ್ಗೆ 6ಕ್ಕೆ ಕಾಡ್ಗಿಚ್ಚಿನ ಅಲರ್ಟ್ ಚೆಕ್ ಮಾಡುತ್ತಾರೆ. ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ತಂದ ಬಳಿಕ ಅಥವಾ ನಂದಿಸಿದ ನಂತರ ಆ ಮಾಹಿತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ.
ಅರಣ್ಯಕ್ಕೆ ಬೆಂಕಿ ಬಿದ್ದ ಮಾಹಿತಿ ಜನರು ಅಥವಾ ಸಿಬ್ಬಂದಿಯಿಂದ ಸಾಮಾನ್ಯವಾಗಿ ಸಿಗುತ್ತದೆ. ಜನ ಪ್ರವೇಶ ಸಾಧ್ಯವಿಲ್ಲದ ಭಾಗಗಳಲ್ಲಿ ಬೆಂಕಿ ಬಿದ್ದಿರುವ ಬಗ್ಗೆ ಉಪಗ್ರಹಗಳಿಂದ ಮಾಹಿತಿ ದೊರೆಯುತ್ತದೆ. ಕಾಡ್ಗಿಚ್ಚಿನ ಪ್ರತಿ ಕ್ಷಣದ ವಿವರವನ್ನು ತಂತ್ರಜ್ಞಾನದ ಸಹಾಯದಿಂದ ಕುಳಿತಲ್ಲೆ ಮೇಲ್ವಿಚಾರಣೆ ನಡೆಸಬಹುದು. ಕಾಡ್ಗಿಚ್ಚು ತಡೆಗೆ ಫೈರ್ ಇಂಜಿನ್, ಡಿಫೆನ್ಸ್ ಪೋರ್ಸನ್ನು ಸನ್ನದ್ಧವಾಗಿ ಇಡಲಾಗಿದೆ. ಫಾರೆಸ್ಟ್ ಫೈರ್ ಲೈನ್‌ನ ತ್ಯಾಜ್ಯವನ್ನು ತೆರವು ಮಾಡಲಾಗಿದೆ.
ಶಿವಶಂಕರ್, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ ವಲಯ.
ಕಾಡ್ಗಿಚ್ಚು ಒಂದು ದಿನದಿಂದ ಉರಿಯುತ್ತಿದ್ದರೆ ಕಾರ್ಸಾಕ್ ವೆಬ್‌ಸೈಟ್‌ನಲ್ಲಿ ಹಸಿರು ಬಣ್ಣವನ್ನು ಹಾಗೂ ಒಂದು ದಿನಕ್ಕಿಂತ ಹೆಚ್ಚು ಸಮಯದಿಂದ ಕಾಡ್ಗಿಚ್ಚು ಇದ್ದರೆ ಬೂದುಬಣ್ಣವನ್ನು ತೋರಿಸುತ್ತದೆ. ಇದು ಬೆಂಕಿ ಹೆಚ್ಚಿನ ಪ್ರದೇಶವನ್ನು ಆವರಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ. ಕಾಡಂಚಿನ ಕೃಷಿಭೂಮಿಯಲ್ಲಿ ರೈತರು ತ್ಯಾಜ್ಯಕ್ಕೆ ಹಾಕಿದ ಬೆಂಕಿಯೂ ಅರಣ್ಯಕ್ಕೆ ಮುಳುವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಆದ್ದರಿಂದ ಅರಣ್ಯ ಪ್ರದೇಶದಿಂದ 500 ಮೀ. ವ್ಯಾಪ್ತಿಯಲ್ಲಿ ಬೆಂಕಿ ಬಿದ್ದರೂ, ಆ ಮಾಹಿತಿಯೂ ಅರಣ್ಯ ಇಲಾಖೆಗೆ ತಲುಪುತ್ತದೆ. ಇದರಿಂದ ಸಂಭವನೀಯ ಕಾಡ್ಗಿಚ್ಚನ್ನು ಮೊದಲೇ ತಡೆಯಬಹುದಾಗಿದೆ.







