ಮಕ್ಕಳಿಂದ ಶಾಲಾ ಸ್ವಚ್ಛತಾ ಕಾರ್ಯ: ಪೋಷಕರ ಆಕ್ರೋಶ

ಯಾದಗಿರಿ : ಮಕ್ಕಳಿಗೆ ಪಾಠ ಬೋಧನೆ ಮಾಡಿ ಉಜ್ವಲ ಭವಿಷ್ಯಕ್ಕೆ ಮಾದರಿಯಾಗಬೇಕಾದ ಶಿಕ್ಷಕರು ಶಾಲೆಯ ಕೊಠಡಿ ಸ್ವಚ್ಛಗೊಳಿಸುವ ಕೆಲಸ ಮಾಡಿಸುತ್ತಿದ್ದಾರೆ ಎಂದು ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
ಜಿಲ್ಲಾ ಕೇಂದ್ರದ ಅಂಬೇಡ್ಕರ್ ನಗರದಲ್ಲಿರುವ ಅಂಬೇಡ್ಕರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳನ್ನು ಶಾಲೆ ಸ್ವಚ್ಛತೆ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ಪೋಷಕರ ಆಕ್ರೋಶಕ್ಕೆ, ಶಿಕ್ಷಣ ಇಲಾಖೆ ಕೆಂಗಣ್ಣಿಗೆ ಗುರಿಯಾಗಿದೆ.
ನಾವು ವಿದ್ಯಾವಂತರಲ್ಲದಿದ್ದರೂ ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂಬ ಮಹದಾಸೆಯಿಂದ ಶಾಲೆಗೆ ಕಳುಹಿಸಿದರೆ ಪಾಠ ಹೇಳಿಕೊಡುವ ಬದಲಿಗೆ ಶಿಕ್ಷಕರು ಶಾಲಾ
ಕೊಠಡಿ ಸೇರಿದಂತೆ ಹಲವು ಕೆಲಸ ಕಾರ್ಯಗಳನ್ನು ಮಕ್ಕಳಿಂದ ಮಾಡಿಸುತ್ತಿದ್ದಾರೆ ಎಂದು ಪಾಲಕರು ಆರೋಪಿಸಿದರು.
ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಇದೇ ರೀತಿ ಮಕ್ಕಳಿಂದ ಕೆಲಸ ಮಾಡಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯ ಸ್ವಚ್ಛತೆಗೆ ಮಕ್ಕಳನ್ನು ಬಳಸುತ್ತಿರುವ ಮುಖ್ಯ ಗುರುಗಳು ಮತ್ತು ಸಂಬಂಧ ಪಟ್ಟ ಶಿಕ್ಷಕರಿಗೆ ಅಮಾನತು ಮಾಡಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.
ಶಾಲಾ ಮಕ್ಕಳಿಂದ ಶಾಲೆಯ ಕೊಠಡಿಗಳ ಸ್ವಚ್ಛತೆ ಸೇರಿದಂತೆ ಹಲವು ಚಟುವಟಿಕೆಗಳನ್ನು ಮಾಡುವುದು ತಪ್ಪು. ಈ ಘಟನೆಯ ಸತ್ಯಾಸತ್ಯತೆ ತಿಳಿದು ಕ್ರಮ ಕೈಗೊಳ್ಳುತ್ತೇನೆ
-ಚನ್ನಬಸಪ್ಪಮುದೋಳ, ಡಿಡಿಪಿಐ ಯಾದಗಿರಿ
ಮಕ್ಕಳಿಂದ ಇತರ ಕೆಲಸಗಳನ್ನು ಮಾಡಿಸುವುದೇ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಫಲಿತಾಂಶ ಕಡಿಮೆ ಬರಲು ಕಾರಣ. ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು.
-ಉಮೇಶ್ ಕೆ ಮುದ್ನಾಳ, ಸಾಮಾಜಿಕ ಹೋರಾಟಗಾರ
ಮಕ್ಕಳಿಂದ ಕೆಲಸ ಮಾಡಿಸಿದರೆ ಅವರು ಕಲಿಯುವುದು ಯಾವಾಗ? ಇಂತಹ ಘಟನೆಗಳು ಮುಂದುವರಿಯಬಾರದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು
-ಕಾಶಿನಾಥ ನಾಟೇಕಾರ್, ಅಂಬೇಡ್ಕರ್ ಸ್ವಾಭಿಮಾನಿ ಸೇನೆ ರಾಜ್ಯ ಕಾರ್ಯದರ್ಶಿ
ಇಂತಹ ಘಟನೆ ಇದೇ ಮೊದಲಲ್ಲ. ಇದಕ್ಕೆ ಕಡಿವಾಣ ಹಾಕಬೇಕಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕಿದೆ.
-ಶಶಿಧರ್ ಕೋಸಂಬೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ