ಮಳೆಗಾಲದಲ್ಲಿ ಶಾಲೆ ಬಂದ್ : ಅರ್ಧಕ್ಕರ್ಧ ಕಾಲನಿಯೇ ಖಾಲಿ!

ಸುರಪುರ: ಮಳೆಗಾಲ ಆರಂಭವಾದರೆ ನಮ್ಮ ಗೋಳು ಯಾರ ಮುಂದೆ ಹೇಳಿಕೊಳ್ಳಲಾಗದಷ್ಟು ಇದೆ. ಪ್ರತಿವರ್ಷ ಮಳೆ ನೀರಿನಿಂದ ತೊಂದರೆ ಅನುಭವಿಸುತ್ತಿದ್ದು, ಶಾಶ್ವತ ಪರಿಹಾರ ಕಲ್ಪಿಸಿಕೊಡಿ ಎಂದು ಪಟ್ಟಣದ ನಗರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 31ರ ವಣಕಿಹಾಳದ ಸುಡುಗಾಡು ಸಿದ್ದರ ಕಾಲೋನಿಯ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಹಿಂದೆ ಕೆರೆ ಇದ್ದ ಜಾಗದಲ್ಲಿ ನಿರ್ಮಾಣಗೊಂಡಿರುವ ಈ ಕಾಲೋನಿಯಲ್ಲಿ ಐವತ್ತಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಮಳೆಗಾಲ ಆರಂಭವಾದರೆ ಮಳೆ ನೀರು ಮನೆಗಳೊಳಗೆ ನುಗ್ಗುವುದರಿಂದ ಪ್ರತಿವರ್ಷ ಮನೆಗಳನ್ನು ಖಾಲಿ ಮಾಡಿ ಬೇರೆಡೆ ಆಶ್ರಯ ಪಡೆಯುವ ಪರಿಸ್ಥಿತಿ ಎದುರಾಗಿದೆ.
ಈ ವರ್ಷ ಮುಂಗಾರು ಪೂರ್ವದಲ್ಲಿಯೇ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಈಗಾಗಲೇ ಮನೆಗಳಿಗೆ ನೀರು ನುಗ್ಗಿ ಕಾಲೋನಿಯಲ್ಲಿನ ಅರ್ಧದಷ್ಟು ಮನೆಗಳ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿಕೊಂಡು ಬೇರೆಡೆಗೆ ಹೋಗಿದ್ದಾರೆ.
ಶಾಲೆಗೂ ಮಳೆ ನೀರಿನ ಕಾಟ
ಕಾಲೋನಿಯ ಮಕ್ಕಳಿಗಾಗಿ ಇರುವ ಕಿರಿಯ ಪ್ರಾಥಮಿಕ ಶಾಲೆಯೊಳಗೂ ಮಳೆ ನೀರು ನುಗ್ಗಿದ್ದು, ಶಾಲೆಗೆ ರಜೆ ಘೋಷಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಶಾಲೆಗೆ ಬೀಗ ಹಾಕಿ ಬಯಲು ಪ್ರದೇಶದಲ್ಲಿ ಮಕ್ಕಳಿಗೆ ಪಾಠ ಮಾಡುವುದು ಅಥವಾ ರಜೆ ನೀಡುವುದು ಅನಿವಾರ್ಯವಾಗುತ್ತಿದೆ.
ಮೂರು ದಿನಗಳ ಹಿಂದೆ ಸುರಿದ ಮಳೆಯಿಂದ ಶಾಲೆಯೊಳಗೆ ನೀರು ತುಂಬಿಕೊಂಡ ಪರಿಣಾಮ ಮಕ್ಕಳಿಗೆ ರಜೆ ನೀಡಲಾಗಿತ್ತು. ಈ ವೇಳೆ ಮಕ್ಕಳು ಮತ್ತು ಪೋಷಕರು ಶಾಲಾ ಆವರಣದಲ್ಲೇ ನೀರಿನಲ್ಲಿ ನಿಂತು ತಮ್ಮ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಈಗಾಗಲೇ ಮನೆಗಳಲ್ಲಿ ನೀರು ನುಗ್ಗಿದ್ದು ಶಾಲೆಯ ಒಳಗೂ ನೀರು ನುಗಿದ್ದರಿಂದ ಶಾಲೆಗೆ ರಜೆ ನೀಡಲಾಗಿತ್ತು. ಈ ಮಾಹಿತಿ ತಿಳಿಯುತ್ತಿದ್ದಂತೆ ನಗರ ಸಭೆಯ ಪೌರಾಯುಕ್ತ ಬಸವರಾಜ ಟಣಕೆದಾರ ಕಾಲೋನಿಗೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸಿ ಪರಿಹಾರ ಕಲ್ಪಿಸಿಕೊಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಕಾಲೋನಿಯಲ್ಲಿನ ಅನೇಕ ಮಹಿಳೆಯರು ತಮ್ಮ ಗೋಳು ತೋಡಿಕೊಂಡು, ಪ್ರತಿ ವರ್ಷ ಮಳೆ ಬಂದರೆ ಮನೆಯಲ್ಲಿ ನೀರು ನಿಲ್ಲುವುದರಿಂದ ಮಕ್ಕಳಿಗೆ ಅಡುಗೆಯನ್ನು ಮಾಡಿಕೊಡಲಾಗದೆ ಮಕ್ಕಳು ಹಸಿವಿನಿಂದ ಬಳಲುವಂತಾಗುತ್ತಿದೆ. ನಮ್ಮ ಎಂಎಲ್‌ಎ ಸಾಹೇಬರಿಗೂ ಭೇಟಿ ಮಾಡಿ ನಮಗೆ ಶಾಶ್ವತ ಪರಿಹಾರ ಮಾಡಿಕೊಡುವಂತೆ ಕೈಮುಗಿದು ವಿನಂತಿ ಮಾಡುವುದಾಗಿ ಬೇಡಿಕೊಂಡಿದ್ದಾರೆ.
ಮಳೆಗಾಲ ಆರಂಭದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಬಿದ್ದು ಅನೇಕ ಮನೆಗಳ ಜನರು ಮನೆ ಖಾಲಿ ಮಾಡಿದ್ದಾರೆ. ಮಳೆಗಾಲ ಮುಗಿಯುವವರೆಗೂ ನಮಗೆ ಗೋಳು ತಪ್ಪಿದ್ದಲ್ಲ.
-ಬಸ್ಸಪ್ಪ, ಕಾಲೋನಿ ಮುಖಂಡ
ವಣಕಿಹಾಳದ ಸುಡುಗಾಡು ಸಿದ್ದರ ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ತಾತ್ಕಾಲಿಕವಾಗಿ ನೀರು ಹೊರಹಾಕುವ ಕಾರ್ಯ ನಡೆಯುತ್ತಿದೆ. ನೀರು ಸರಾಗವಾಗಿ ಹರಿದು ಹೋಗಲು ಅಗತ್ಯ ಕಾಮಗಾರಿ ಕೈಗೊಂಡು ಶಾಶ್ವತ ಪರಿಹಾರ ಕಲ್ಪಿಸಲಾಗುವುದು.
-ಬಸವರಾಜ ಟಣಕೆದಾರ, ಪೌರಾಯುಕ್ತರು, ನಗರಸಭೆ ಸುರಪುರ
ಮಕ್ಕಳು, ಕುಟುಂಬ ಸಮೇತ ಮನೆ ಖಾಲಿ ಮಾಡಿಕೊಂಡು ಹೋಗುವುದು ತುಂಬಾ ಕಷ್ಟಕರ. ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಅರ್ಥಮಾಡಿಕೊಂಡು ಶಾಶ್ವತ ಪರಿಹಾರ ಕಲ್ಪಿಸಬೇಕು.
-ದೊಡ್ಡ ಮರೆಪ್ಪ ಕಾಲೋನಿಯ ಹಿರಿಯ ವ್ಯಕ್ತಿ






