SCSP/TSP ಯೋಜನೆ; ಎಲ್ಲರೂ ಜಿಗಣೆಗಳೇ

ಕರ್ನಾಟಕ ಸರಕಾರದ ಗ್ಯಾರಂಟಿ ಕಾರ್ಯಕ್ರಮಗಳು ಸಾಮಾನ್ಯ ಜನರ ಪರವಾದ ಕಾರ್ಯಕ್ರಮಗಳಾಗಿವೆ. ಆದರೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆ ಗ್ಯಾರಂಟಿ ಕಾರ್ಯಕ್ರಮದಂತಲ್ಲ. ಸಮಾಜದ ಕಟ್ಟಕಡೆಯ ಸಮುದಾಯಗಳು ಇತರ ಸಮುದಾಯಗಳಿಗಿಂತ ಎಲ್ಲಾ ರೀತಿಯಲ್ಲಿಯೂ ಹಿಂದುಳಿದಿರುವುದರಿಂದ ಈ ಯೋಜನೆಯನ್ನು ರೂಪಿಸಿದ್ದು, ಇದರ ಮುಖ್ಯ ಗುರಿ ದಲಿತರು ಮತ್ತು ದಲಿತೇತರರ ನಡುವಿನ ಅಸಮಾನ ಅಂತರವನ್ನು ಕಡಿಮೆ ಮಾಡುವುದಾಗಿದೆ. ಆ ಮೂಲಕ ಸಾಮಾಜಿಕ-ಆರ್ಥಿಕವಾಗಿ ದಲಿತರನ್ನು ಸಬಲರನ್ನಾಗಿ ಮಾಡುವುದಾಗಿದೆ. ಆದರೆ ಈ ಯೋಜನೆಯನ್ನು ಅತಿ ಹೆಚ್ಚು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಅದರ ಮುಖ್ಯ ಆಶಯವನ್ನೇ ಬುಡಮೇಲು ಮಾಡಲಾಗುತ್ತಿದೆ.
2024-25ನೇ ಸಾಲಿಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಗೆ ರೂ. 39,121 ಕೋಟಿಗಳನ್ನು ಮೀಸಲಿಡಲಾಗಿತ್ತು. ಎಸ್‌ಸಿಎಸ್‌ಪಿ/ಟಿಎಸ್‌ಪಿ ವೆಬ್‌ಸೈಟ್ ಪ್ರಕಾರ ಜನವರಿ 2025ರ ಹೊತ್ತಿಗೆ (ಲೇಖಕ ಫೆಬ್ರವರಿ 18 ರಂದು ಪರಿಶೀಲಿಸಿದಾಗ) ಇದರಲ್ಲಿ ಖರ್ಚು ಮಾಡಿರುವ ಹಣ ಕೇವಲ ರೂ. 21,746 ಕೋಟಿ. ಅಂದರೆ ರೂ. 17,375 ಕೋಟಿಯಷ್ಟು ಹಣವನ್ನು ಇನ್ನು ಬಿಡುಗಡೆಗೊಡಿಸಿಲ್ಲ ಅಥವಾ ವೆಚ್ಚ ಮಾಡಿಲ್ಲ. ರಾಜ್ಯದ ಎಲ್ಲಾ ವಿಧದ ಹಿಂದುಳಿದಿರುವಿಕೆಯಲ್ಲಿಯೂ ಅತಿ ಹೆಚ್ಚು ಹಿಂದುಳಿದಿರುವ ಮೊದಲ ಸಮುದಾಯ ದಲಿತರು. ಅತಿ ಹೆಚ್ಚು ಅನಕ್ಷರಸ್ಥರು, ನಿರಾಶ್ರಿತರು, ಅನಾಥರು, ಕೂಲಿ ಕಾರ್ಮಿಕರು, ಪೌರಕಾರ್ಮಿಕರು, ಬಡವರು, ಅತಿ ಹೆಚ್ಚು ದೌರ್ಜನ್ಯಕ್ಕೆ ಒಳಗಾಗುವವರು ದಲಿತರೇ ಆಗಿದ್ದಾರೆ. ಹೀಗಿರುವಾಗ ಅಂತಹವರಿಗೆ ಅನುಕೂಲ ಮಾಡಿಕೊಡಲು, ಬದುಕು ಕಟ್ಟಿಕೊಡಲು ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯ ಹಣವನ್ನು ವಿಪುಲವಾಗಿ ಬಳಸಿಕೊಳ್ಳಬಹುದಾಗಿತ್ತು. ಆದರೆ ಇಲ್ಲಿಯವರೆಗೂ ಯಾವುದೇ ಸರಕಾರ ಇದರ ಬಗ್ಗೆ ಗಂಭೀರವಾದ ಆಲೋಚನೆ ಮಾಡಲಿಲ್ಲ. ಇಂದಿನ ಸಿದ್ದರಾಮಯ್ಯನವರ ನೇತೃತ್ವದ ಸರಕಾರವಂತೂ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿ ಉತ್ತಮ ಕೆಲಸವನ್ನೇ ಮಾಡಿದೆಯಾದರೂ ಆ 5 ಗ್ಯಾರಂಟಿಗಳಿಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯ ಹಣವನ್ನು ಬಳಸಿಕೊಂಡು ದಲಿತರು ಮತ್ತು ದಲಿತೇತರರ ನಡುವಿನ ಸಮಾಜೋ-ಆರ್ಥಿಕ ಅಸಮಾನ ಅಂತರವನ್ನು ಕಡಿಮೆ ಮಾಡುಬಹುದಾಗಿದ್ದ ಅವಕಾಶವನ್ನು ಬೇಕಂತಲೇ ಕೈಚೆಲ್ಲಿದೆ. ಸ್ವತಃ ಸಿದ್ದರಾಮಯ್ಯನವರ ಸರಕಾರವೇ ಜಾರಿಗೆ ತಂದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯನ್ನು ಅವರೇ ನೆಲಸಮ ಮಾಡಿದಂತಾಗಿದೆ.
ಈಗಾಗಲೇ ತಿಳಿಸಿದಂತೆ 2024-25ನೇ ಸಾಲಿನಲ್ಲಿ ಮೀಸಲಿಟ್ಟಿದ್ದ ಹಣದ ಕೇವಲ ಶೇ.56ರಷ್ಟನ್ನು ಜನವರಿ ಅಂತ್ಯಕ್ಕೆ ಖರ್ಚು ಮಾಡಲಾಗಿದೆ. ಇನ್ನೆರಡು ತಿಂಗಳಲ್ಲಿ ಉಳಿದ ಹಣವನ್ನು ಆತುರಾತುರವಾಗಿ ವೆಚ್ಚ ಮಾಡಲಾಗುತ್ತದೆ ಅಥವಾ ಕಾಯ್ದೆ ತಿಳಿಸುವಂತೆ ಉಳಿದ ಹಣವನ್ನು ಮುಂದಿನ ವರ್ಷಕ್ಕೆ ವರ್ಗಾಯಿಸಿ ಕೈ ತೊಳೆದುಕೊಳ್ಳಲಾಗುತ್ತದೆ. ಅಲ್ಲಿಗೆ ಈ ಯೋಜನೆಯ ಆಶಯ ಮಣ್ಣು ಪಾಲಾದಂತೆ.
ಇಲ್ಲಿಯವರೆಗೆ ಖರ್ಚು ಮಾಡಿರುವ ರೂ. 21,746 ಕೋಟಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೆಚ್ಚು ವಿನಿಯೋಗಿಸಲಾಗಿದೆ. ಅದೂ ಸಹ ದಲಿತರಿಗೆ ಅವಶ್ಯವಿರುವ ಕಾರ್ಯಕ್ರಮಗಳಿಗಲ್ಲದೆ ಗೃಹಲಕ್ಷ್ಮಿ ಯೋಜನೆಗೆ ಬರೋಬ್ಬರಿ ರೂ. 3,825 ಕೋಟಿಗಳನ್ನು ವ್ಯಯಿಸಲಾಗಿದೆ. ಅಷ್ಟೇ ಅಲ್ಲದೆ ಇನ್ನೂ ರೂ. 4,057 ಕೋಟಿಗಳನ್ನು ಈ ಯೋಜನೆಗಾಗಿಯೇ ಮೀಸಲಿಡಲಾಗಿದೆ. ಅಂದರೆ ಒಟ್ಟು ಗೃಹಲಕ್ಷ್ಮಿ ಯೋಜನೆಗೆ 7,882 ಕೋಟಿ ಹಣವನ್ನು ಮೀಸಲಿಡಲಾಗಿದೆ!
ಗೃಹಜ್ಯೋತಿ ಕಾರ್ಯಕ್ರಮಕ್ಕೆ ರೂ. 2586 ಕೋಟಿ ಮೀಸಲಿಟ್ಟಿದ್ದು, ರೂ. 2016 ಕೋಟಿ ಖರ್ಚು ಮಾಡಲಾಗಿದೆ. ಇದೇ ಇಂಧನ ಇಲಾಖೆಯಡಿ ಸೋಲಾರ್ ಪಂಪ್ ಸೆಟ್‌ಗಳಿಗೆ ಮೀಸಲಿಟ್ಟಿರುವ ರೂ. 12.06 ಕೋಟಿಯಲ್ಲಿ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ!
ಉಚಿತ ಬಸ್ ಗ್ಯಾರಂಟಿ ‘ಶಕ್ತಿ’ಗೆ ರೂ. 1,451 ಕೋಟಿ ಮೀಸಲಿರಿಸಿದ್ದು, ರೂ. 1,210 ಕೋಟಿ ವೆಚ್ಚ ಮಾಡಲಾಗಿದೆ. ಇದಲ್ಲದೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 77 ಕೋಟಿ ರೂ., ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಕೆಎಸ್‌ಆರ್‌ಟಿಸಿಗೆ ರೂ. 124 ಕೋಟಿ, ಬಿಎಂಟಿಸಿಗೆ ರೂ. 51 ಕೋಟಿ ಮೀಸಲಿಟ್ಟಿರುವುದು ಯಾವ ಉದ್ದೇಶಕ್ಕೆಂಬುದು ಅರ್ಥವಾಗುತ್ತಿಲ್ಲ.
ಅನ್ನಭಾಗ್ಯ ಯೋಜನೆಗೆ ಹಣ ಪಾವತಿ ಮಾಡುತ್ತಿರುವ ಕಾರಣ ಆಹಾರ ಇಲಾಖೆಗೆ ರೂ. 2,637.44 ಕೋಟಿ ಮೀಸಲಿಡಲಾಗಿದ್ದು, ಅದರಲ್ಲಿ ಅನ್ನಬಾಗ್ಯ ಹಣವನ್ನು ಖಾತೆಗೆ ಹಾಕಲು ರೂ. 2,186 ಕೋಟಿಗಳನ್ನು ಮೀಸಲಿಡಲಾಗಿದೆ. ಯುವನಿಧಿ ಯೋಜನೆಗೆ ರೂ.175 ಕೋಟಿಗಳನ್ನು ಮೀಸಲಿಡಲಾಗಿದೆ.
ಹೀಗೆ ಒಟ್ಟಾರೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಗೆ ಮೀಸಲಿಟ್ಟಿರುವ ಒಟ್ಟು ಹಣದಲ್ಲಿ ರೂ.14,280 ಕೋಟಿಗಳನ್ನು ಗ್ಯಾರಂಟಿ ಯೋಜನೆಗೆ ಮೀಸಲಿರಿಸಲಾಗಿದೆ. ಈ ಮೂಲಕ ಯೋಜನೆಯ ಶೇ. 36ರಷ್ಟು ಹಣವನ್ನು ದಲಿತರ ಅತ್ಯಗತ್ಯ ಕಾರ್ಯಕ್ರಮಗಳಿಗೆ ಮೀಸಲಿರಿಸದೆ ಕಾಂಗ್ರೆಸ್ ಸರಕಾರ ತನ್ನ ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿರುವುದು ಅತ್ಯಂತ ಖಂಡನೀಯ ವಿಚಾರವಾಗಿದೆ.
ಈ ಮೇಲಿನ ಅಚಾತುರ್ಯದಿಂದ ದಲಿತರಿಗೆ ಅತಿ ಹೆಚ್ಚು ಹಣ ಮೀಸಲಿಡಬೇಕಿದ್ದ ಸಮಾಜ ಕಲ್ಯಾಣ ಇಲಾಖೆಗೆ ಕೇವಲ ರೂ. 4,174 ಕೋಟಿ ಮೀಸಲಿಟ್ಟಿದ್ದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಅದರಲ್ಲಿಯೂ ಇನ್ನೂ ರೂ. 2,284 ಕೋಟಿಯನ್ನು ಖರ್ಚು ಮಾಡಿಯೇ ಇಲ್ಲ. ಕಾಲೇಜು ವಿದ್ಯಾರ್ಥಿಗಳ ಪ್ರೋತ್ಸಾಹ ಧನಕ್ಕೆ ಮೀಸಲಿಟ್ಟಿರುವುದು ಕೇವಲ ರೂ. 100 ಕೋಟಿಯಾಗಿದ್ದು ಅದರಲ್ಲಿಯೂ ರೂ. 20 ಕೋಟಿಯನ್ನು ಉಳಿಸಿಕೊಳ್ಳಲಾಗಿದೆ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೋದ್ಯಮ ಸಹಕಾರ ಸಂಘವು ನಷ್ಟದಲ್ಲಿದೆ ಎಂದು ಹೇಳುತ್ತಿರುವ ಸರಕಾರ ಅದರ ಅಭಿವೃದ್ಧಿಗೆ ರೂ. 35 ಕೋಟಿ ಮೀಸಲಿಟ್ಟಿತ್ತಾದರೂ ಖರ್ಚು ಮಾಡಿರುವುದು ಕೇವಲ ರೂ. 9 ಕೋಟಿಯಷ್ಟೆ. ಪೋಸ್ಟ್ ಮೆಟ್ರಿಕ್ ಸ್ಕಾಲರ್ ಶಿಪ್‌ಗೆ ಮೀಸಲಿಟ್ಟಿರುವ ರಾಜ್ಯ ಹಂಚಿಕೆಯ 230 ಕೋಟಿ ರೂ.ಗಳನ್ನು ಇನ್ನೂ ಮುಟ್ಟಿಯೇ ಇಲ್ಲ.
ಗ್ಯಾರಂಟಿ ಯೋಜನೆಗೂ ಮೊದಲು ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಗೆ ಮೀಸಲಿರಿಸಿದ್ದ ಹಣದಲ್ಲಿ ಸಿಂಹಪಾಲನ್ನು ಪಡೆಯುತ್ತಿದ್ದ ಸಮಾಜ ಕಲ್ಯಾಣ ಇಲಾಖೆಯು ಯಾವಾಗಲೂ ಅಗ್ರ ಸ್ಥಾನದಲ್ಲಿತ್ತು. ನಂತರ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಿದ್ದವು. ಆದರೆ ಈಗ ಗ್ಯಾರಂಟಿ ಯೋಜನೆಗಳಿಗೆ ದಲಿತರ ಹಣವನ್ನು ಬಳಸಿಕೊಳ್ಳುತ್ತಿರುವುದರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಗ್ರಸ್ಥಾನದಲ್ಲಿದೆ. ಇಂಧನ ಇಲಾಖೆ ಎರಡನೇ ಸ್ಥಾನದಲ್ಲಿದೆ. ದಲಿತರ ಬದುಕನ್ನು ಸಹ್ಯಗೊಳಿಸಲು ಹೆಚ್ಚು ಧನ ವಿನಿಯೋಗಿಸಬೇಕಿದ್ದ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು 4 ಮತ್ತು 5ನೇ ಸ್ಥಾನಕ್ಕೆ ತಳ್ಳಲ್ಪಟ್ಟಿವೆ.
2024-25ನೇ ಸಾಲಿನ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯ ಮರೆಮೋಸವನ್ನು ಅರ್ಥ ಮಾಡಿಕೊಳ್ಳಲು 2022-23ನೇ ಸಾಲಿನಲ್ಲಿ ಮೀಸಲಿರಿಸಿದ್ದ ಇಲಾಖಾವಾರು ಅನುದಾನದೊಂದಿಗೆ ಹೋಲಿಕೆ ಮಾಡಬೇಕಿದೆ. ಅಂದಿನ ಬಿಜೆಪಿ ಸರಕಾರ 7ಡಿ ಸೆಕ್ಷನ್ ಬಳಸಿಕೊಂಡು ಕಾಮಗಾರಿಗಳಿಗೆ ಹಾಗೂ ಇತರ ನೇರವಾಗಿ ದಲಿತರು ಫಲಾನುಭವಿಗಳಾಗಿರದ ಕಾರ್ಯಕ್ರಮಗಳಿಗೆ ಅನುದಾನ ನೀಡಿತ್ತು. ಇದರ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಕಳೆದ ಚುನಾವಣೆಯಲ್ಲಿ ಬಹಿರಂಗವಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದವು. ಆದರೆ ಇಲ್ಲಿ ಕೊಟ್ಟಿರುವ ಕೋಷ್ಟಕವನ್ನು ಗಮನಿಸಿದರೆ ದಲಿತರ ಪಾಲಿಗೆ ಎಲ್ಲರೂ ಜಿಗಣೆಗಳೇ ಎಂಬುದು ಸಾಬೀತಾಗುತ್ತದೆ.
ಕಾಂಗ್ರೆಸ್ ಸರಕಾರ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯ 7ಡಿ ಸೆಕ್ಷನ್ ರದ್ದುಗೊಳಿಸಿದ್ದೇನೋ ನಿಜ. ಆದರೆ 7ಸಿ ಸೆಕ್ಷನ್ ಬಳಸಿಕೊಂಡು ಏನೆಲ್ಲ ಮಾಡಿದೆ ಎಂಬುದನ್ನು ಈ ಕೋಷ್ಟಕ ತಿಳಿಸುತ್ತಿದೆ. 2022-23 ಹಾಗೂ 2024-25ನೇ ಸಾಲಿನ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯ ಅನುದಾನವನ್ನು ಪ್ರಮುಖ 19 ಇಲಾಖೆಗಳಿಗೆ ಹಂಚಿಕೆ ಮಾಡಿರುವುದನ್ನು ಈ ಮೇಲೆ ಹೋಲಿಕೆ ಮಾಡಿ ನೀಡಿದೆ. ಇದನ್ನು ಗಮನಿಸಿದರೆ ದಲಿತರಿಗೆ ಆಗಿರುವ ಮೋಸ ತಿಳಿಯುತ್ತದೆ. 2024-25ನೇ ಸಾಲಿನಲ್ಲಿ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನ ಮಾಡಿರುವ ಇಲಾಖೆಗಳಿಗೆ ದಲಿತರ ಹಣವನ್ನು ಹೊಳೆಯಂತೆ ಹರಿಸಲಾಗಿದೆ. ಇನ್ನುಳಿದಂತೆ ದಲಿತರ ಬದುಕನ್ನು ಉತ್ತಮಗೊಳಿಸುತ್ತಿದ್ದ ಆದ್ಯತೆ ಮೇರೆಗಿನ ಇಲಾಖೆಗಳಿಗೆ ಹಣವನ್ನು ಕಡಿತಗೊಳಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ಶೇ.4.63ರಷ್ಟು ಹಣ ಕಡಿತಗೊಳಿಸಿದರೆ, ಕಂದಾಯ ಇಲಾಖೆಗೆ ಶೇ.3.76, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಶೇ. 2.68, ನೀರಾವರಿ ಇಲಾಖೆಗೆ ಶೇ.7.55, ಆರೋಗ್ಯ ಇಲಾಖೆಗೆ ಶೇ.3.71, ನಗರಾಭಿವೃದ್ಧಿಗೆ ಶೇ. 2.9, ಉನ್ನತ ಶಿಕ್ಷಣಕ್ಕೆ ಶೇ. 0.5 ಹೀಗೆ ಗ್ಯಾರಂಟಿಗೆ ಹೊರತಾದ ಇತರ ಎಲ್ಲಾ ಕಾರ್ಯಕ್ರಮಗಳಿಗೂ ಅನುದಾನವನ್ನು ಕಡಿತಗೊಳಿಸಲಾಗಿದೆ. ಈ ಮೂಲಕ ದಲಿತರ ಬದುಕನ್ನು ದಲಿತೇತರರ ಸಮಾನಕ್ಕೆ ಕೊಂಡೊಯ್ಯುವಲ್ಲಿ ಶಿಕ್ಷಣ, ಆರೋಗ್ಯ, ವಸತಿ, ಕೌಶಲ, ಕೃಷಿ, ಸ್ವಯಂ ಉದ್ಯೋಗ, ಭದ್ರತೆ ಮುಂತಾದ ವಲಯಗಳಲ್ಲಿ ಬಳಸಬೇಕಾಗಿದ್ದ ಅನುದಾನ ಗ್ಯಾರಂಟಿಗಳ ಪಾಲಾಗಿದೆ. ಗ್ಯಾರಂಟಿಗಳೂ ದಲಿತರಿಗೆ ಒಳಿತನ್ನೇ ಮಾಡುತ್ತವೆ ನಿಜ. ಆದರೆ ಅವು ದಲಿತರು ಮತ್ತು ದಲಿತೇತರರ ನಡುವಿನ ಸಾಮಾಜಿಕ-ಆರ್ಥಿಕ ಅಂತರವನ್ನು ಕಡಿಮೆ ಮಾಡಲಾರವು. ಬದಲಾಗಿ ಹೆಚ್ಚಾಗಿಸುತ್ತವೆ. ಪ್ರಗತಿಯ ಓಟದಲ್ಲಿ ದಲಿತರು ಸದಾ ಹಿಂದೆಯೇ ಉಳಿಯುತ್ತಾರೆ. ಆ ಕಾರಣಕ್ಕಾಗಿ ದೌರ್ಜನ್ಯಗಳು ಹೆಚ್ಚಾಗುತ್ತವೆ.
ಗ್ಯಾರಂಟಿ ಯೋಜನೆಗೆ ಬೇಕಾದ ಹಣವನ್ನು ಉಳ್ಳವರ ಜೇಬಿನಿಂದ ಪಡೆದುಕೊಳ್ಳಬೇಕೇ ಹೊರತು ದಲಿತರ ಹೊಟ್ಟೆ, ಬಟ್ಟೆ, ಬದುಕಿನ ಮೇಲೆ ಹೊಡೆದು ಕಿತ್ತುಕೊಳ್ಳಬಾರದು. ಇದು ಸಾಮಾಜಿಕ ನ್ಯಾಯವೂ ಅಲ್ಲ, ಸಿದ್ದರಾಮಯ್ಯ ಸರಕಾರಕ್ಕೆ ಶೋಭೆ ತರುವುದೂ ಇಲ್ಲ. ದಲಿತರ ಹಣವನ್ನು ದಲಿತರ ಉನ್ನತೀಕರಣಕ್ಕೆ ಬಳಸುವುದು ಬಿಟ್ಟು ಹೀಗೆ ಬೇಕಾಬಿಟ್ಟಿ ಬಳಸಿದರೆ ಎಲ್ಲರೂ ಜಿಗಣೆಗಳೇ ದಲಿತರ ನೆತ್ತರಿಗೆ ಎಂಬಂತಾಗುತ್ತದೆ.







