Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಎರಡನೇ ಸಾಮಾಜಿಕ ಮತ್ತು ಶೈಕ್ಷಣಿಕ...

ಎರಡನೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮತ್ತದರ ಕಾರ್ಯವಿಧಾನದ ಪರಿ

ಕೆ.ಎನ್. ಲಿಂಗಪ್ಪಕೆ.ಎನ್. ಲಿಂಗಪ್ಪ29 July 2025 11:20 AM IST
share
ಎರಡನೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮತ್ತದರ ಕಾರ್ಯವಿಧಾನದ ಪರಿ
ಏನೇ ಆಗಲಿ ಸರಕಾರ ಅಥವಾ ಆಯೋಗ ಕೈಗೊಂಡಿರುವ ಸಮೀಕ್ಷೆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಲೇಬೇಕು. ಯಾವುದೇ ಒಂದು ಜಾತಿಯ ಆಕ್ಷೇಪಕ್ಕೆ ಕಾರಣವಿರಬಾರದು. ಒಂದು ವೇಳೆ ಮುಂದೆ ಹೊರ ಬೀಳುವ ಎರಡನೇ ಸಮೀಕ್ಷೆಗೂ ಭಿನ್ನಮತಗಳು ವ್ಯಕ್ತವಾಗುವುದಿಲ್ಲ ಎಂಬ ನಂಬಿಕೆ ಸರಕಾರಕ್ಕಿದೆಯೇ? ಆಗಲೂ ಸಮೀಕ್ಷೆಯಲ್ಲಿ ಲೋಪಗಳಿವೆ, ವೈಜ್ಞಾನಿಕವಾಗಿಲ್ಲ ಎಂಬ ಕೊಂಕು ನುಡಿಗಳನ್ನು ಆಡುವುದಕ್ಕೆ ಅವಕಾಶ ಕೊಡದಂತೆ ಸಮೀಕ್ಷಾ ಕಾರ್ಯ ಸಂಪೂರ್ಣ ಹಾಗೂ ಸಮರ್ಪಕವಾಗಿರಬೇಕು. ಇಲ್ಲವಾದರೆ ಒಲ್ಲದ ಗಂಡ ಮೊಸರಲ್ಲಿ ಕಲ್ಲು ಹುಡುಕುವ ಸಂಭವ ಬಾರದಿರದು.

ಮಂಡಲ್ ಪ್ರಕರಣವೆಂದೇ ಜನಜನಿತವಾಗಿರುವ ಇಂದ್ರ ಸಹಾನಿ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ಆಜ್ಞಾಪನೆಯಂತೆ ಕೇಂದ್ರ ಮತ್ತು ಪ್ರತಿಯೊಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಗಳನ್ನು ರಚಿಸಬೇಕಾಯಿತು. ಆಯೋಗಗಳ ರಚನೆಯ ಹಿನ್ನೆಲೆಯಲ್ಲಿ ಕಾಯ್ದೆಗಳನ್ನು ರೂಪಿಸಲಾಯಿತು. ಅದೇ ರೀತಿ ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ-1995 ಜಾರಿಗೆ ಬಂದಿತು. ಅನುಷ್ಠಾನದಲ್ಲಿರುವ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯನ್ನು 10 ವರ್ಷಗಳಿಗೊಮ್ಮೆ ಪರಿಷ್ಕರಣೆಗೆ ಒಳಪಡಿಸಲು (ಉಪಬಂಧ 11) ಪ್ರತೀ 10 ವರ್ಷಗಳಿಗೊಮ್ಮೆ ರಾಜ್ಯದ ಎಲ್ಲಾ ನಾಗರಿಕರನ್ನೂ ಒಳಗೊಂಡಂತೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಉಪಬಂಧ 9.2) ನಡೆಸಬೇಕು. ಇವಿಷ್ಟು ಕಾಯ್ದೆಯಲ್ಲಿ ಅಡಕವಾಗಿರುವ ಪ್ರಮುಖ ಅಂಶಗಳು.

ಕಾಯ್ದೆಯ ಅನುಸಾರ 2015ರಲ್ಲಿ, ಸರಕಾರದ ಆಶಯದಂತೆ ಆಯೋಗ ಮೊದಲನೇ ಸಮೀಕ್ಷೆ ನಡೆಸಿತು(ವಾಸ್ತವವಾಗಿ ಸಮೀಕ್ಷೆಯಲ್ಲಿ ಜನಸಂಖ್ಯೆ ಅಷ್ಟೇ ಅಲ್ಲದೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಮತ್ತು ರಾಜಕೀಯ ವಿಷಯಗಳಿಗೆ ಅನ್ವಯಿಸುವ ಹಾಗೆ ಅಂಕಿ ಅಂಶಗಳನ್ನು ರಾಜ್ಯಾದ್ಯಂತ ಸಂಗ್ರಹಿಸಲಾಯಿತು). ಹೀಗೆ ಸಂಗ್ರಹಿಸಲಾದ ದತ್ತಾಂಶವು ರಾಜಕೀಯ ಸುಳಿಯಲ್ಲಿ ಸಿಲುಕಿ ನನೆಗುದಿಗೆ ಬಿದ್ದಿತು. ಅದು ಹೇಗೋ ಸರಕಾರ ಮನಸ್ಸು ಮಾಡಿ 2024 ಫೆಬ್ರವರಿ ತಿಂಗಳಿನಲ್ಲಿ, ಸಮೀಕ್ಷೆಯ ದತ್ತಾಂಶ ಮತ್ತು ಅದನ್ನಾಧರಿಸಿ ಸಿದ್ಧಪಡಿಸಿದೆ ಎಂದು ಹೇಳಲಾದ ಅಧ್ಯಯನ ವರದಿಯನ್ನು ಸ್ವೀಕರಿಸಿತು. ಸ್ವೀಕರಿಸಿ ವರ್ಷ ಕಳೆದರೂ, ದತ್ತಾಂಶಗಳನ್ನು ಬಹಿರಂಗಗೊಳಿಸಲಿಲ್ಲ ಮತ್ತು ದತ್ತಾಂಶಗಳನ್ನಾಧರಿಸಿ, ಪ್ರಗತಿಯಲ್ಲಿ ಹಿಂದೆ ಬಿದ್ದಿರುವ ಜಾತಿಗಳ ಉನ್ನತೀಕರಣಕ್ಕಾಗಲಿ ಅಥವಾ ಮೀಸಲಾತಿಯ ಪಟ್ಟಿಯ ಪರಿಷ್ಕರಣೆಗಾಗಲಿ ಸರಕಾರ ಮುಂದಾಗಲಿಲ್ಲ.

ಅಂತೂ ಇಂತೂ, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮಧ್ಯ ಪ್ರವೇಶ ಮಾಡಲಾಗಿ, ವರದಿಯೋ ಅಥವಾ ದತ್ತಾಂಶವೂ ಯಾವುದೋ ಒಂದನ್ನು ಸಚಿವ ಸಂಪುಟದ ಮುಂದೆ ಇಡಲಾಯಿತು. ಮೂರು ನಾಲ್ಕು ಸಭೆಗಳು ನಡೆದರೂ ಸಕಾರಾತ್ಮಕ ತೀರ್ಮಾನಕ್ಕೆ ಬರಲಾಗದೆ, ‘ಮರು ಸಮೀಕ್ಷೆ’ ಮಾಡಲಾಗುವುದು ಎಂದು ಹೇಳಿ ಸರಕಾರ ಕೈ ತೊಳೆದುಕೊಂಡಿತು. ಅಲ್ಲಿಗೆ ನಾಟಕದ ಮೊದಲನೇ ಅಂಕಕ್ಕೆ ತೆರೆ ಬಿದ್ದಿತು. ಮೊದಲನೇ ಸಮೀಕ್ಷೆಯ ದತ್ತಾಂಶಗಳ ಬಿಡುಗಡೆ ಬಗ್ಗೆಯೂ ಏನನ್ನೂ ಹೇಳದೆ ಸರಕಾರ ನುಣುಚಿಕೊಂಡಿದೆ. ಮೊದಲನೇ ಸಮೀಕ್ಷೆಯಲ್ಲಿ ತಪ್ಪುಗಳು ನಡೆದಿದ್ದರೆ ಏನೇನು ತಪ್ಪುಗಳು ನಡೆದಿವೆ ಎಂಬವುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಆಳದಲ್ಲೆಲ್ಲೋ ಬಲಾಢ್ಯ ಕೋಮುಗಳೆರಡು ಸಮೀಕ್ಷೆಯ ಬಗ್ಗೆ ವಿರೋಧವಿಟ್ಟುಕೊಂಡಿದ್ದವು, ಅವುಗಳ ವಿರೋಧವನ್ನೇ ಸರಕಾರ ಪ್ರಸಾದವೆಂಬಂತೆ ಸ್ವೀಕರಿಸಿದ್ದು ಮಾತ್ರ ದಮನಿತ ಹಿಂದುಳಿದ ಸಮುದಾಯಗಳಿಗೆ ಮತ್ತು ಅವುಗಳ ಅಭಿವೃದ್ಧಿಗೆ ಹಮ್ಮಿಕೊಳ್ಳಬೇಕಾದ ಕಾರ್ಯಕ್ಕೆ ಎಸಗಿದ ದ್ರೋಹವಲ್ಲವೇ? ಅವುಗಳ ಧಮ್ಕಿಗೆ ಮಣಿದು ಮೊದಲನೇ ಸಮೀಕ್ಷೆಯನ್ನು ಕಸದ ಬುಟ್ಟಿಗೆ ಎಸೆಯುವಂತಹ ಕಾರ್ಯವೆಸಗಿದ್ದಂತೂ, ರಾಜಕೀಯ ಕಾರಣದಿಂದಾಗಿ ಅವುಗಳಿಗೆ ಎಷ್ಟರ ಮಟ್ಟಿಗೆ ಸರಕಾರ ನಡು ಬಗ್ಗಿಸಿದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಅಕಾರಣವಾಗಿ ಎರಡನೇ ಸಮೀಕ್ಷೆ ಮಾಡಲು ಅಂತೂ ಸರಕಾರ ತೀರ್ಮಾನ ಕೈಗೊಂಡಿದೆ. ಈ ನಿಟ್ಟಿನಲ್ಲಿ ಮೊದಲ ಕಾರ್ಯವಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡಿ ಐದು ತಿಂಗಳೇ ಕಳೆದಿದ್ದರೂ ಸದಸ್ಯರುಗಳನ್ನು ನೇಮಕ ಮಾಡಿರಲಿಲ್ಲ, ಕೊನೆಗೂ, ಸದಸ್ಯರನ್ನು ನೇಮಕ ಮಾಡಲಾಯಿತು, ಲಿಂಗಾಯತ ಮತ್ತು ಒಕ್ಕಲಿಗರನ್ನೂ ನೇಮಕ ಮಾಡಿ ಹೊಸ ಅನಿಷ್ಟ ಪರಂಪರೆಗೂ ಸರಕಾರ ನಾಂದಿ ಹಾಡಿದೆ. ಸಮೀಕ್ಷೆ ನಡೆಸಲು ಆಯೋಗಕ್ಕೆ ಮೂರು ತಿಂಗಳ ಅವಕಾಶವನ್ನು, ಸಾಧ್ಯಾಸಾಧ್ಯತೆಗಳ ಬಗ್ಗೆ ಯಾವ ತಿಳುವಳಿಕೆಯ ಮುನ್ನೋಟವಿಲ್ಲದೆ ಸರಕಾರ ತಾಕೀತು ಮಾಡಿರುವುದು ಸುದ್ದಿ ಮಾಧ್ಯಮಗಳಲ್ಲಿ ಬಹಿರಂಗವಾಯಿತು. ಸಮೀಕ್ಷಾ ಕಾರ್ಯಕ್ಕೆ ಅವಸರವೇನಿಲ್ಲ.ಆದರೆ, ಸರಕಾರ ಮಾತ್ರ ರಾಜಕೀಯ ಕಾರಣಕ್ಕೆ ಯಾರನ್ನೋ ಓಲೈಸಲೋ ಅಥವಾ ಯಾರ ಮರ್ಜಿಗೋ ತೆಗೆದುಕೊಂಡ ತಂತ್ರಗಾರಿಕೆಯ ತೀರ್ಮಾನ. ಈ ದಿಸೆಯಲ್ಲಿ ಆಯೋಗ ಕಾರ್ಯೋನ್ಮುಖವಾಗಿರಬಹುದು. ಪ್ರಸ್ತುತ ಮಾಡಲು ಹೊರಟಿರುವ ಸಮೀಕ್ಷೆ ಎರಡನೆಯದು (ಈ ಕುರಿತು ಹೆಚ್ಚಿನ ಮಾಹಿತಿಗೆ 18.6.25ರಂದು ‘ವಾರ್ತಾ ಭಾರತಿ’ಯಲ್ಲಿ ಪ್ರಕಟವಾಗಿರುವ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸರಕಾರದ ಅವಾಂತರದ ತೀರ್ಮಾನಗಳು’ ಲೇಖನ ನೋಡಬಹುದು).

ಕರ್ನಾಟಕದಲ್ಲಿ ಈಗ ಅಜಮಾಸು ಜನಸಂಖ್ಯೆ 7 ಕೋಟಿ ಮೀರಿದೆ. ಹಾಗೆಯೇ, 1 ಕೋಟಿ 75 ಲಕ್ಷ ಕುಟುಂಬಗಳೂ ಇರಬಹುದು. 2015ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕೈಗೊಂಡ ಕ್ರಮಗಳ ಆಧರಿಸಿ ಹೇಳುವುದಾದರೆ, ಗಣತಿದಾರರೇ ಇಲ್ಲಿ ಅತಿ ಮುಖ್ಯ. ಕನಿಷ್ಠ ಒಂದೂವರೆ ಲಕ್ಷದಷ್ಟು ಗಣತಿದಾರರ ಅಗತ್ಯವಿದೆ. ಅವರ ಮೇಲುಸ್ತುವಾರಿಗೆ ಮೂವತ್ತು ಸಾವಿರ ಮೇಲ್ವಿಚಾರಕರು ಬೇಕಾಗಬಹುದು. ಇಷ್ಟು ದೊಡ್ಡ ಮಟ್ಟದ ನೌಕರರು ಇರುವುದು ಶಿಕ್ಷಣ ಇಲಾಖೆಯಲ್ಲಿ ಮಾತ್ರ. ಶಿಸ್ತುಬದ್ಧ ತರಬೇತಿ ನೀಡಿಯೇ ಅವರನ್ನು ಸಮೀಕ್ಷಾ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಶಿಕ್ಷಕರ ಅನುಪಸ್ಥಿತಿಯಲ್ಲಿ ಮಹಿಳಾ ಇಲಾಖೆಯ ಅಂಗನವಾಡಿ ಟೀಚರ್‌ಗಳನ್ನು ಬಳಸಿಕೊಳ್ಳಬಹುದೆಂಬ ಮಾತುಗಳೂ ಚಾಲ್ತಿಯಲ್ಲಿವೆ. ಆದರವು ಕಾರ್ಯಪಟುತ್ವದ ದೃಷ್ಟಿಯಿಂದ ಸಾಧುವಲ್ಲ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನಯೊಂದರಲ್ಲಿ, ಶಾಲಾ ಶಿಕ್ಷಕರನ್ನೇ ಬಳಸಿಕೊಂಡು, ದಸರಾ ಸಂದರ್ಭದಲ್ಲಿ ನೀಡುವ 15 ದಿನಗಳ ರಜಾ ದಿನಗಳಲ್ಲಿ ಸಮೀಕ್ಷಾ ಕಾರ್ಯ ಕೈಗೊಳ್ಳುವುದಾಗಿಯೂ, ಆ ಅವಧಿಯಲ್ಲಿ ಸಮೀಕ್ಷೆಯ ಪ್ರಗತಿ ಕಾರ್ಯ ಸಾಧ್ಯವಾಗದಿದ್ದಲ್ಲಿ ಸರಕಾರದ ವತಿಯಿಂದ ಮತ್ತೆ ಹದಿನೈದು ದಿನಗಳ ರಜಾ ಅವಧಿಯನ್ನು ವಿಸ್ತರಿಸುವುದರ ಮೂಲಕ ಸಮೀಕ್ಷಾ ಕಾರ್ಯ ಮುಗಿಸಲಾಗುವುದು ಎಂದು ಹೇಳಿರುವರು. ನನ್ನ ತಿಳುವಳಿಕೆಯಂತೆ ದಸರಾ ಹಬ್ಬದ ಸಂದರ್ಭದಲ್ಲಿ ನೀಡುವ ರಜಾಗಳೇ ಕಾನೂನು ಬದ್ಧವಲ್ಲ. ಅಂದಮೇಲೆ ರಜಾ ದಿನಗಳನ್ನು ವಿಸ್ತರಣೆ ಮಾಡುವುದು ಹೇಗೆ ಸಾಧ್ಯ? ಈ ಸಂದರ್ಭದಲ್ಲಿ ಸಿಗುವ ರಜಾ ದಿನಗಳ ಪ್ರಯೋಜನ ಪಡೆದುಕೊಂಡು, ಮಾಹಿತಿದಾರರು ನೆಂಟರಿಷ್ಟರ ಮನೆ ಅಥವಾ ಪ್ರವಾಸ ಹೋಗುವ ಸಂದರ್ಭಗಳೂ ಇಲ್ಲದಿಲ್ಲ. ಹಾಗಾಗಿ ಪೂರ್ಣ ರಜಾ ದಿನಗಳು ಸಿಗುವ ಬೇಸಿಗೆ ಕಾಲದಲ್ಲಿ ಮಾತ್ರ ಸಮೀಕ್ಷೆ ನಡೆಸಲು ಸಾಧ್ಯ. ಆ ಮುಂಚಿನ ದಿನಗಳಲ್ಲಿ ಪ್ರಾಥಮಿಕ ಹಂತದ ಕೆಲಸಗಳನ್ನು ಯಾವ ನ್ಯೂನತೆಗಳು ಬರದಂತೆ ಮಾಡಿ ಮುಗಿಸಿಕೊಳ್ಳಲು ಅವಕಾಶ ದೊರಕುವುದು.

ಕರ್ನಾಟಕದಲ್ಲಿ ಬಲಾಢ್ಯ ಕೋಮುಗಳೆರಡರ ನೀಳ ಬಾಹುಗಳು ರಾಜಕೀಯ ಕ್ಷೇತ್ರದಲ್ಲಿ ದೀರ್ಘವಾಗಿ ಚಾಚಿಕೊಂಡಿವೆ. ನೂರಕ್ಕೂ ಹೆಚ್ಚು ವಿಧಾನಸಭಾ ಸದಸ್ಯರನ್ನೊಳಗೊಂಡಿರುವ ಈ ಕೋಮುಗಳು ಬಹುಶಃ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿವೆ. ಜನಸಂಖ್ಯಾ ಬಲದ ಕಾರಣದಿಂದ ತಮಗೆ ಬೇಕಾದ್ದನ್ನು ಕೈಗೂಡಿಸಿಕೊಳ್ಳುವ ಅಥವಾ ಬೇಡವೆಂದಿದ್ದನ್ನು ಗಟಾರಕ್ಕೆ ಸೇರಿಸುವ ಅಂಕೆ ಅವರಲ್ಲಿದೆ. ಇತ್ತೀಚಿನ ಉದಾಹರಣೆ ಎಂದರೆ-ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ಅನ್ನು ಬಿಡುಗಡೆ ಮಾಡುವುದನ್ನೂ ತಡೆಹಿಡಿಯಲು ತಂತ್ರ ರೂಪಿಸಿದ್ದು. ಅದರ ವೃತ್ತಾಂತದ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ.

ಎರಡನೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸರಕಾರ ತೀರ್ಮಾನಿಸಿ,ಆ ನಿಟ್ಟಿನಲ್ಲಿ ಕ್ರಮವಹಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಿದೆ.

ಸಮೀಕ್ಷೆಯ ಕಾರ್ಯವಿಧಾನ

1. 2015ರ ಮೊದಲನೇ ಸಮೀಕ್ಷೆ ಶೈತ್ಯಾಗಾರ ಸೇರಲು ಕಾರಣವಾದ ಸಮುದಾಯಗಳೆರಡೂ ಆರೋಪಿಸುವಂತೆ, ಸಮೀಕ್ಷಾ ಕಾರ್ಯ ವೈಜ್ಞಾನಿಕವಾಗಿಲ್ಲ ಮತ್ತು ಆ ಎರಡೂ ಜಾತಿಗಳ ಉಪಜಾತಿಗಳು ಒಂದೆಡೆ ಸೇರದೆ ಚದುರಿ ಹೋದ ಕಾರಣ ಮತ್ತು ಗಣತಿದಾರರು ಸಮಗ್ರ ಕುಟುಂಬಗಳನ್ನು ಸಮೀಕ್ಷೆ ಮಾಡದೆ, ಆ ಸಮುದಾಯಗಳ ಜನಸಂಖ್ಯೆ ನಿರೀಕ್ಷೆಗಿಂತ ಕಡಿಮೆ ತೋರಿಸಲಾಗಿದೆ ಎಂಬುದು. ಆದ್ದರಿಂದ ಆಯೋಗ ಈ ದಿಸೆಯಲ್ಲಿ ಬಹು ಜಾಗರೂಕತೆಯಿಂದ, ರಾಜ್ಯದ ಎಲ್ಲಾ ಸಮುದಾಯಗಳನ್ನು ಒಳಗೊಂಡಂತೆ ಜಾತಿ-ಉಪಜಾತಿಗಳ, ಜಾಹೀರಾತುಗಳನ್ನು ನೀಡುವುದರ ಮೂಲಕ, ಪಕ್ಕಾ ಮಾಹಿತಿಯನ್ನು ಪಡೆದುಕೊಳ್ಳಬೇಕು. ಅದಕ್ಕಾಗಿ ಬಂದಂತಹ ಅರ್ಜಿಗಳನ್ನು ಜತನವಾಗಿಡುವುದಲ್ಲದೆ, ಪಾರದರ್ಶಕತೆಯನ್ನು ಕಾಪಾಡಿಕೊಂಡು ಪಟ್ಟಿ ಮಾಡಬೇಕು. ಇದು ಅತಿ ಮುಖ್ಯ ಕಾರ್ಯ. ಈ ಕಾರ್ಯ ಕೈಗೊಳ್ಳಲು ಕೆಲವಾರು ದಿನಗಳ ಅಗತ್ಯವಿದೆ. ಒಂದು ಸಣ್ಣ ಉದಾಹರಣೆಯೊಂದಿಗೆ ವಿವರಣೆ ನೀಡಲಾಗಿದೆ.

ಸುಣಗಾರ ಇದೊಂದು ಉಪಜಾತಿ. ಇದು ಉಪ್ಪಾರ ಮತ್ತು ಬೆಸ್ತ ಜಾತಿಗಳೆರಡರಲ್ಲೂ ಉಪ ಜಾತಿಯಾಗಿ ಕಾಣಿಸಿಕೊಂಡಿದೆ. ಇಂಥ ಸಮಸ್ಯೆ ಬಂದ ಸಂದರ್ಭದಲ್ಲಿ ಗಣತಿದಾರರು ನಿಖರವಾಗಿ ಕೇಳಿ ತಿಳಿದುಕೊಂಡು ಯಾವ ಜಾತಿಗೆ ಸೇರುತ್ತದೆ ಎಂಬುದನ್ನು ನಮೂದಿಸಬೇಕು. ಹೀಗೆ ಹಲವಾರು ಸಮಸ್ಯೆಗಳು ಗಣತಿ ಸಂದರ್ಭದಲ್ಲಿ ಉದ್ಭವಿಸುತ್ತವೆ. ಇಂಥ ಸಮಸ್ಯೆಗಳನ್ನು ಆಯೋಗ ಮೊದಲೇ ಗುರುತಿಸಿ, ತರಬೇತಿ ಸಂದರ್ಭದಲ್ಲಿ ಗಣತಿದಾರರಿಗೆ ತಿಳಿ ಹೇಳಬೇಕು.

2. ಜುಲೈ, 23ರಂದು ಮುಖ್ಯಮಂತ್ರಿಗಳೇ ಘೋಷಿಸಿದ್ದಾರೆ. 15 ದಿನಗಳ ದಸರಾ ರಜಾ ಅವಧಿಯಲ್ಲಿ ಸಮೀಕ್ಷೆ ಮಾಡಲಾಗುವುದು ಎಂಬುದು ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಬಗ್ಗೆ ಸಾಧ್ಯಾಸಾಧ್ಯತೆಗಳ ಬಗ್ಗೆ ಮೇಲೆ ಹೇಳಲಾಗಿದೆ. ಅದೂ ಅಲ್ಲದೆ ಮೊಬೈಲ್ ಆ್ಯಪ್ ಬಳಸಿ, ಗಣತಿಕಾರ್ಯ ಮಾಡಿಸಲು ಆಯೋಗ ಸಿದ್ಧವಾಗಿದೆ ಎಂದು ತಿಳಿದುಬಂದಿದೆ. ನ್ಯಾ. ನಾಗಮೋಹನದಾಸ್ ಆಯೋಗ, ಪರಿಶಿಷ್ಟ ಜಾತಿಯ ಒಳ ಮೀಸಲಾತಿಗಾಗಿ ಸಮೀಕ್ಷೆಯನ್ನು ಶಾಲಾ ಶಿಕ್ಷಕರಿಂದಲೇ ಮಾಡಿಸಿದೆ. 1 ಕೋಟಿ 16 ಲಕ್ಷ ಪರಿಶಿಷ್ಟ ಜಾತಿಯ ಜನಸಂಖ್ಯೆ ಇರಬಹುದು ಎಂದು ಅಂದಾಜಿಸಲಾಗಿತ್ತು. ಇಷ್ಟು ಜನಸಂಖ್ಯೆಯ ಸಮೀಕ್ಷೆ ಮಾಡಲು ಅಂದಾಜು 58,000 ಗಣತಿದಾರರನ್ನು ಬಳಸಿಕೊಳ್ಳಲಾಗಿದೆ. ಪರಿಶಿಷ್ಟ ಜಾತಿಯ ಸಂಘ- ಸಂಸ್ಥೆಗಳು ಮತ್ತು ಸರಕಾರ ತೀವ್ರ ರೀತಿಯ ಕ್ರಮ ಅನುಸರಿಸಿದರೂ ಗೊತ್ತಾದ ಸಮಯದಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳದ ಕಾರಣ ಮೂರು ಬಾರಿ ಅವಧಿಯನ್ನು ವಿಸ್ತರಿಸಲಾಯಿತು. ಕಳೆದ 6ನೇ ತಾರೀಕಿಗೆ ಸಮೀಕ್ಷೆ ಕಾರ್ಯ ಕೊನೆಗೊಂಡಿದ್ದರೂ, ಏಕೋ ಏನೋ ಅಂತಿಮ ಪಲಿತಾಂಶವನ್ನು ಆಯೋಗ ನೀಡದಿರುವುದೂ ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಈ ಮುನ್ನ ನೀಡಿದ ಫಲಿತಾಂಶದಂತೆ, ಬೆಂಗಳೂರು ನಗರದಲ್ಲಿ ಶೇ. 52ರಷ್ಟು ಮಾತ್ರ ಸಮೀಕ್ಷೆ ಕಾರ್ಯ ಪೂರ್ಣಗೊಂಡಿತ್ತು. ಈವರೆಗೂ ಕೇವಲ ಶೇ. 90ರಷ್ಟು ಸಮೀಕ್ಷೆಯಾಗಿದೆ ಎಂದು ತಿಳಿದುಬಂದಿದೆ. (ಇದಕ್ಕೆ ವ್ಯತಿರಿಕ್ತವಾಗಿ 2015ರಲ್ಲಿ ಕಾಂತರಾಜು ಆಯೋಗ ಮಾಡಿದ ಸಮೀಕ್ಷೆಯಲ್ಲಿ ಬೆಂಗಳೂರು ನಗರದಲ್ಲಿ ಶೇ. 84ರಷ್ಟು ಸಮೀಕ್ಷೆ ಕಾರ್ಯ ನಡೆದು ಒಟ್ಟಾರೆ ಶೇ. 94.5ರಷ್ಟು ಪೂರ್ಣಗೊಂಡಿತ್ತು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು).

ಹಿಂದುಳಿದ ವರ್ಗಗಳ ಆಯೋಗ, ಮೊಬೈಲ್ ಆ್ಯಫ್ ಬಳಸಿ ಸಮೀಕ್ಷೆ ಕಾರ್ಯಕೈಗೊಳ್ಳುವುದಾಗಿ ಈಗಾಗಲೇ ಹೇಳಿದೆ. ಸಮೀಕ್ಷೆಗೆ ಬಳಸುವ ವಿಧಾನ ರಾಷ್ಟ್ರೀಯ ಜನಗಣತಿ ರೀತಿ ಇರದೆ, ಮತದಾರರ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಮಾಡಲು ತೀರ್ಮಾನಿಸಿರುವುದು ಕಂಡು ಬಂದಿದೆ. ಮತದಾರ ಪಟ್ಟಿ ಯಾವತ್ತೂ ಕೂಡ ಸಮಗ್ರ ಅಥವಾ ಪರಿಪೂರ್ಣತೆಯಿಂದ ಕೂಡಿಲ್ಲ ಎಂಬುದು ಎಲ್ಲಾ ಮತದಾರರಿಗೂ ಗೊತ್ತಿರುವ ವಿಷಯವೇ. ಕಳೆದ ಸಂಸತ್ ಚುನಾವಣೆಯೇ ಕಡೆಯ ಚುನಾವಣೆ. ಹಾಗಾಗಿ ಮತದಾರರ ಪಟ್ಟಿ ಪ್ರತೀ ವರ್ಷ ಕಾಲೋಚಿತಗೊಳ್ಳಬೇಕು. ಸಾಮಾನ್ಯವಾಗಿ ನಗರಗಳಲ್ಲಿ, ನಿವಾಸಿಗಳ ಸ್ಥಳ ಬದಲಾವಣೆ ಸಂಭವ ಹೆಚ್ಚು ಇರುತ್ತದೆ. ಹೊಸದಾಗಿ ಬಂದವರು, ಮತದಾರರ ಪಟ್ಟಿಗೆ ನಮೂನೆ 6 ಅನ್ನು ಕೊಟ್ಟು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಕೊಡದಿದ್ದಲ್ಲಿ ಮತದಾರರ ಪಟ್ಟಿಗೆ ಸೇರುವುದಿಲ್ಲ. ಅಂಥವರು ಸಮೀಕ್ಷೆಯಿಂದ ಹೊರಗುಳಿಯುತ್ತಾರೆ.

ಮೊಬೈಲ್ ಆ್ಯಪ್‌ನಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿದ್ದವು ಎಂಬುದನ್ನು ಕೇಳಲಾಗಿದೆ. ಸರ್ವರ್ ಸಮಸ್ಯೆಯಿಂದ ಗಂಟೆಗಟ್ಟಲೆ ಲಾಗಿನ್ ಆಗಲು ಕಾಯುವ ಪರಿಸ್ಥಿತಿ ಇತ್ತು. ಆಧಾರ್ ಕಾರ್ಡ್ ಎಂಟ್ರಿ ಕೊಟ್ಟಾಗ ಒಟಿಪಿ ಸಮಸ್ಯೆ ಕೂಡಾ ಇತ್ತು. ದಿನದ ಕೊನೆಯಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ಕೊಡುವಾಗ ಕೆಲವು ತಾಂತ್ರಿಕ ಸಮಸ್ಯೆಗಳಿದ್ದವು. ಎಷ್ಟೇ ಜಾಗರೂಕತೆಯಿಂದ ಮತ್ತು ಶೀಘ್ರಗತಿಯಲ್ಲಿ ಮಾಡಿದರೂ, ಒಂದು ಗಂಟೆಗಿಂತ ಹೆಚ್ಚು ಕಾಲಾವಧಿ ಒಂದು ಕುಟುಂಬವನ್ನು ಸಮೀಕ್ಷೆ ಮಾಡಲು ಬೇಕಾಗಬಹುದು. ಸರಾಸರಿ ಒಂದು ಮತಗಟ್ಟೆಯಲ್ಲಿ ಸಾವಿರ ಜನ ಮತದಾರರು ಇರುವರು. ಅಂಥ ಮತಗಟ್ಟೆ ವ್ಯಾಪ್ತಿಯಲ್ಲಿ ಕನಿಷ್ಠ 300 ಮನೆಗಳಾದರೂ ಬರುತ್ತವೆ. 300 ಮನೆಗಳನ್ನು ಒಬ್ಬ ಗಣತಿದಾರ 15 ದಿನದಲ್ಲಿ ಸಮೀಕ್ಷೆ ಮಾಡಲು ಸಾಧ್ಯವೇ?

ಆಯೋಗ ಮಾಡಲು ಹೊರಟಿರುವ ವಿಧಾನ, ರಾಷ್ಟ್ರೀಯ ಜನಗಣತಿಯಲ್ಲಿ ಈಗಾಗಲೇ ಹಮ್ಮಿಕೊಂಡಿರುವ ಕಾರ್ಯಕ್ಕಿಂತ ವ್ಯತಿರಿಕ್ತವಾದುದು. ಆ ವಿಧಾನ ಅನುಕೂಲಕರವಾಗಿದೆ ಎಂದರೆ, ರಾಷ್ಟ್ರೀಯ ಜನಗಣತಿ ಮಾಡುವ ಅಧಿಕಾರಿಗಳು ಈ ವಿಧಾನವನ್ನು ಏಕೆ ಅವಲಂಬಿಸಬಾರದು? ಮತ್ತೇಕೆ ಅವರು ಸಾಂಪ್ರದಾಯಿಕ ಪದ್ಧತಿಗೆ ಶರಣಾಗಿದ್ದಾರೆ ಎಂಬುದನ್ನು ಕೂಡ ನಾವು ಆಲೋಚಿಸಬೇಕು. ಮನೆ-ಮನೆ ಮಾಹಿತಿ ಸಂಗ್ರಹ ಕಾರ್ಯದಲ್ಲಿ ಡಿಜಿಟಲ್ ಸಾಧನವನ್ನು ಬಳಸಲು ಅವಕಾಶವಿದೆ ಅದು ಬೇರೆ ವಿಷಯ. ಆದರೆ ಪೂರ್ವ ಸಿದ್ಧತೆ ಮಾಡಿಕೊಂಡು ಬ್ಲಾಕ್‌ಗಳನ್ನು ವಿಂಗಡಿಸಿ ಅದರಲ್ಲಿ ಬಂದಿರತಕ್ಕಂತಹ ಮನೆಗಳನ್ನು ಪಟ್ಟಿ ಮಾಡಿ ಪೂರ್ಣಗೊಳಿಸದಿದ್ದರೆ ಸಮಗ್ರ ಜನಗಣತಿ ಅಥವಾ ಸಮೀಕ್ಷೆ ಶೇ. ನೂರಕ್ಕೆ ಹತ್ತಿರ-ಹತ್ತಿರವಾಗಿ ಪೂರ್ಣಗೊಳ್ಳುತ್ತದೆ ಎಂಬುದೇ ಅಪನಂಬಿಕೆಗೆ ಕಾರಣ.

ಏನೇ ಹೇಳ ಹೊರಟರೂ ಸರಕಾರ ಈಗಾಗಲೇ ತೀರ್ಮಾನ ತೆಗೆದುಕೊಂಡಿರುವುದರಿಂದ ಸರಕಾರಕ್ಕೆ ಸಾರ್ವಜನಿಕರ ಮಾತು ಅಪಥ್ಯ ಎಂಬುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ. ಏನೇ ಆಗಲಿ ಸರಕಾರ ಅಥವಾ ಆಯೋಗ ಕೈಗೊಂಡಿರುವ ಸಮೀಕ್ಷೆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಲೇಬೇಕು. ಯಾವುದೇ ಒಂದು ಜಾತಿಯ ಆಕ್ಷೇಪಕ್ಕೆ ಕಾರಣವಿರಬಾರದು. ಒಂದು ವೇಳೆ ಮುಂದೆ ಹೊರ ಬೀಳುವ ಎರಡನೇ ಸಮೀಕ್ಷೆಗೂ ಭಿನ್ನಮತಗಳು ವ್ಯಕ್ತವಾಗುವುದಿಲ್ಲ ಎಂಬ ನಂಬಿಕೆ ಸರಕಾರಕ್ಕಿದೆಯೇ? ಆಗಲೂ ಸಮೀಕ್ಷೆಯಲ್ಲಿ ಲೋಪಗಳಿವೆ, ವೈಜ್ಞಾನಿಕವಾಗಿಲ್ಲ ಎಂಬ ಕೊಂಕು ನುಡಿಗಳನ್ನು ಆಡುವುದಕ್ಕೆ ಅವಕಾಶ ಕೊಡದಂತೆ ಸಮೀಕ್ಷಾ ಕಾರ್ಯ ಸಂಪೂರ್ಣ ಹಾಗೂ ಸಮರ್ಪಕವಾಗಿರಬೇಕು. ಇಲ್ಲವಾದರೆ ಒಲ್ಲದ ಗಂಡ ಮೊಸರಲ್ಲಿ ಕಲ್ಲು ಹುಡುಕುವ ಸಂಭವ ಬಾರದಿರದು.

share
ಕೆ.ಎನ್. ಲಿಂಗಪ್ಪ
ಕೆ.ಎನ್. ಲಿಂಗಪ್ಪ
Next Story
X