ಸೇಡಂ: ಇನ್ಫೋಸಿಸ್ ಕಾಲನಿಯಲ್ಲಿಲ್ಲ ಬೀದಿದೀಪಗಳು!

ಸೇಡಂ: ನಗರದ ಇನ್ಫೋಸಿಸ್ ಕಾಲನಿಯ ಸುಮಾರು 199 ಕುಟುಂಬಗಳು ಕಳೆದ ಹತ್ತು ವರ್ಷಗಳಿಂದ ಬೀದಿದೀಪಗಳಿಲ್ಲದೆ ಕತ್ತಲಿನಲ್ಲೇ ಜೀವನ ಸಾಗಿಸುತ್ತಿದ್ದು, ಮೂಲಸೌಕರ್ಯಗಳ ಕೊರತೆಯಿಂದ ಸ್ಥಳೀಯರು ತೀವ್ರ ಸಂಕಷ್ಟ ಅನುಭವಿಸುತ್ತಿವೆ. ಹಲವು ಬಾರಿ ನಗರಸಭೆಯ ಗಮನಕ್ಕೆ ತಂದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಬಡಾವಣೆಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದ್ದರೂ, ಹೆಚ್ಚಿನ ಕಡೆ ಬೀದಿದೀಪಗಳನ್ನು ಅಳವಡಿಸಿಲ್ಲ. ಪರಿಣಾಮ ರಾತ್ರಿ ವೇಳೆ ಇಡೀ ಪ್ರದೇಶ ಕತ್ತಲಲ್ಲಿ ಮುಳುಗುತ್ತದೆ. ಇದರಿಂದಾಗಿ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಮಕ್ಕಳು ಮನೆಗಳಿಂದ ಹೊರಬರಲು ಭಯಪಡುತ್ತಿದ್ದಾರೆ.
ಸ್ಥಳೀಯ ನಿವಾಸಿ ದೇವದಾಸ್ ರಾಠೋಡ ಮಾತನಾಡಿ, ರಾತ್ರಿ ವೇಳೆಯಲ್ಲಿ ಹಾವು, ಚೇಳು, ಕಪ್ಪೆ ಸೇರಿ ವಿವಿಧ ವಿಷಕಾರಿ ಪ್ರಾಣಿಗಳು ಮನೆಗಳ ಮುಂದೆ ಕಾಣಿಸಿಕೊಳ್ಳುತ್ತಿವೆ. ಕತ್ತಲಿನ ಕಾರಣದಿಂದ ಅಪಾಯದ ಭೀತಿ ಹೆಚ್ಚಿದ್ದು, ನಿವಾಸಿಗಳು ಆತಂಕದಲ್ಲೇ ದಿನ ಕಳೆಯುವಂತಾಗಿದೆ ಎಂದು ದೂರಿದರು.
ಗಿಡಗಂಟಿಗಳಿಂದ ಹೆಚ್ಚಿದ ಸಮಸ್ಯೆ
ಬಡಾವಣೆಯ ಸುತ್ತಮುತ್ತ ಜಾಲಿಗಿಡ ಹಾಗೂ ಕಂಟೆಗಿಡಗಳು ಬೆಳೆದು ನಿಂತಿರುವುದರಿಂದ ಕತ್ತಲಿನ ವಾತಾವರಣ ಮತ್ತಷ್ಟು ಭೀಕರವಾಗಿರುತ್ತದೆ. ಈ ಕುರಿತು ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಬೀದಿದೀಪ ಅಳವಡಿಸುವ ಜೊತೆಗೆ ಗಿಡಗಂಟಿಗಳನ್ನು ತೆರವುಗೊಳಿಸುವಂತೆ ಮನವಿ ಸಲ್ಲಿಸಿ, ಒತ್ತಾಯಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರಿನ ವ್ಯವಸ್ಥೆಯೂ ಅಸ್ತವ್ಯಸ್ತ
ಬಡಾವಣೆಯ ಬೋರ್‌ವೆಲ್ ಸುತ್ತಲೂ ಗಿಡಗಂಟಿಗಳು ಆವರಿಸಿರುವುದರಿಂದ ಮೋಟಾರ್ ಚಾಲನೆ ಮಾಡಲು ಸಿಬ್ಬಂದಿ ಹಾಗೂ ನಿವಾಸಿಗಳು ಭಯಪಡುತ್ತಿದ್ದಾರೆ. ಸುಮಾರು 199 ಮನೆಗಳಿಗೆ ಕುಡಿಯುವ ನೀರು ಪೂರೈಸುವ ಮೋಟಾರ್ ಹೆಚ್ಚುವರಿ ಒತ್ತಡದಿಂದ ಪದೇ ಪದೇ ದುರಸ್ತಿಗೆ ಬರುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ನಿವಾಸಿ ಮರೆಪ್ಪ ಪ್ಯಾಂಟಿ ಒತ್ತಾಯಿಸಿದರು.
ಇನ್ಫೋಸಿಸ್ ಕಾಲನಿಯಲ್ಲಿನ ಬೀದಿದೀಪಗಳ ಸಮಸ್ಯೆಯನ್ನು ಪರಿಶೀಲಿಸಿ, ದೀಪಗಳಿಲ್ಲದ ಸ್ಥಳಗಳಲ್ಲಿ ಶೀಘ್ರದಲ್ಲೇ ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.
-ಶ್ರೀಕಾಂತ
ನೋಡಲ್ ಎಂಜಿನಿಯರ್, ಸೇಡಂ ನಗರಸಭೆ
ಹಲವು ವರ್ಷಗಳಿಂದ ಬೀದಿದೀಪಗಳಿಲ್ಲದೆ ಹಾವು-ಚೇಳುಗಳ ಭೀತಿಯಲ್ಲೇ ಬದುಕುತ್ತಿದ್ದೇವೆ. ಪ್ರತಿದಿನ ರಾತ್ರಿ ಸುರಕ್ಷಿತವಾಗಿ ಬೆಳಗಾಗಲಿ ಎಂದು ದೇವರನ್ನು ಪ್ರಾರ್ಥಿಸುತ್ತ ಮಲಗುತ್ತೇವೆ. ಅಧಿಕಾರಿಗಳು ಬಡವರ ಸಂಕಷ್ಟ ಅರ್ಥಮಾಡಿಕೊಂಡು ಬೀದಿದೀಪಗಳನ್ನು ಅಳವಡಿಸಿ ಅನುಕೂಲ ಮಾಡಿಕೊಡಬೇಕು.
-ಭೀಮವ್ವ ಚಿಂತಪಳ್ಳಿ
ಇನ್ಫೋಸಿಸ್ ಕಾಲನಿ ನಿವಾಸಿ






