ಬಾಲ್ಯದ ನೆನಪು ಮಾಡುವ ಬಯಲುಸೀಮೆ ‘ಸೀಹುಣಸೆ’

ಹೊಸಕೋಟೆ: ಬಾಲ್ಯದಲ್ಲಿ ಹೆಗಲಿಗೊಂದು ಚೀಲ ನೇತು ಹಾಕಿಕೊಂಡು ಶಾಲೆಗೆ ತೆರಳುವ ದಿನದಲ್ಲಿ ಹಾಗೂ ರಜಾದಿನಗಳಲ್ಲಿ ಸ್ನೇಹಿತರ ಜತೆಗೂಡಿ ಗಿಡಕ್ಕೆ ಗುರಿಯಿಟ್ಟು ಕಲ್ಲು ಹೊಡೆದು ಮರದಲ್ಲಿನ ಹಣ್ಣು, ಕಾಯಿಗಳನ್ನು ಬೀಳಿಸಿಕೊಂಡು ಬಾಯಿಗೆ ಹಣ್ಣು ತುಂಬಿಕೊಳ್ಳುತ್ತಿದ್ದ ಮಜಾದಿನಗಳು ಇಂದು ಕೇವಲ ನೆನಪಾಗಿದ್ದರೂ ಕೆಲವೊಂದು ಹಣ್ಣು ಕಂಡಾಗ ಹಿಂದಿನ ಎಲ್ಲ ಘಟನೆಗಳ ನೆನಪು ಮರುಕಳಿಸುತ್ತವೆ.
ಗ್ರಾಮೀಣ ಭಾಗದಲ್ಲಿ ಇಂದು ಮರೀಚಿಕೆಯಾಗಿರುವ ಈ ಹಣ್ಣನ್ನು ಸೀಹುಣಿಸೆ, ಇಲಾಚಿ ಕಾಯಿ, ಸಿಹಿಹುಣಿಸೆ, ಧೋರಾ ಹುಣಸೆ ಎಂದೆಲ್ಲಾ ಅನೇಕ ಹೆಸರಿನಿಂದ ಕರೆಯುತ್ತಾರೆ. ಆಗೊಮ್ಮೆ ಈಗೊಮ್ಮೆ ನಗರಗಳ ಮಾರುಕಟ್ಟೆಗಳಲ್ಲಿ ಕಾಣುವ ಈ ಸಿಹಿ ಹುಣಿಸೆ ಹಣ್ಣು ನೋಡಿದ ತಕ್ಷಣವೇ ಬಾಲ್ಯದಲ್ಲಿ ಈ ಹಣ್ಣು ತಿಂದ ರೀತಿ, ಈ ಹಣ್ಣಿಗಾಗಿ ಪಟ್ಟ ಕಷ್ಟ, ಹಣ್ಣು ದೊರೆಯದೆ ಸ್ನೇಹಿತರ ಗುಂಪಿನಲ್ಲಿ ಬೇಡಿ ಪಡೆದು ತಿಂದ ಪರಿ ಸೇರಿದಂತೆ ಅನೇಕ ವಿಷಯಗಳು ನೆನಪಿನ ಬುತ್ತಿಯಿಂದ ಬಿಚ್ಚಿಕೊಳ್ಳುತ್ತಾ ನಮ್ಮನ್ನು ಬಾಲ್ಯಕ್ಕೆ ಕರೆದೊಯ್ಯುತ್ತವೆ.
ಆಧುನಿಕತೆಯ ಭರಾಟೆಯಲ್ಲಿ ಬಿಸಿಲುನಾಡಿನ ಅನೇಕ ಹಣ್ಣುಗಳು ನೇಪಥ್ಯಕ್ಕೆ ಸದ್ದಿಲ್ಲದೆ ಸರಿದು ಇಂದಿನ ಮಕ್ಕಳಿಗೆ ನೋಡಲು ಸಹ ಸಿಗದಂತಾಗಿವೆ. ಇದರಲ್ಲಿ ಈ ಸೀಹುಣಿಸೆ ಹಣ್ಣು ಒಂದಾಗಿದೆ. ತಿಳಿ ಹಸಿರುಬಣ್ಣದೊಂದಿರುವ ಈ ಹಣ್ಣು ಗಣ್ಣುಗಳಿಂದ ರೂಪಿತಗೊಂಡು ಸಿಂಬೆ (ಸುರುಳಿ) ಆಕಾರದಲ್ಲಿ ಸೃಷ್ಟಿಯಾಗಿದ್ದು, ಗಣ್ಣಿಗೊಂದು ಹಣ್ಣಿನ ಬೀಜ ಒಳಗೊಂಡಿರುತ್ತದೆ. ಬಿಳಿ ಹಾಲಿನ ಬಣ್ಣ ಅಥವಾ ಕೆಂಪು ಬಣ್ಣ ಮೂಡುವ ಸಮಯದಲ್ಲಿ ಹಣ್ಣು ತಿಂದಲ್ಲಿ ಹೆಚ್ಚು ರುಚಿ ಇರುತ್ತದೆ. ಇದು ಒಗರುಒಗರಾಗಿದ್ದು ಬಿಪಿ, ಶುಗರ್ ಇದ್ದವರಿಗೆ ಔಷಧ ಎನ್ನಲಾಗುತ್ತಿದೆ.
ಸೀಹುಣಿಸೆ ಗಿಡಗಳು ಸಾಮಾನ್ಯವಾಗಿ ಪೊದೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮೈತುಂಬಾ ಮುಳ್ಳನ್ನೇ ಹೊದ್ದುಕೊಂಡಿರುವ ಈ ಗಿಡಗಳು ಚಿಕ್ಕದಿದ್ದಾಗ ಹಣ್ಣು ಕೀಳುವುದು ಕಷ್ಟಸಾಧ್ಯ. ಆದರೂ ಉದ್ದನೆಯ ಉಪಕರಣ ಇದ್ದಲ್ಲಿ ಹಣ್ಣು ಸುಲಭವಾಗಿ ಜೇಬು ತುಂಬಿಸಿ ಕೊಳ್ಳಬಹುದು. ಇಲ್ಲವಾದಲ್ಲಿ ಕಲ್ಲಿನಿಂದ ಗುರಿಯಿಟ್ಟು ಹಣ್ಣು ಬೀಳಿಸಿಕೊಳ್ಳಬೇಕು. ಅವಸರಕ್ಕೆ ಬಿದ್ದಲ್ಲಿ ಕೈ-ಕಾಲುಗಳಿಗೆ ತರಚಿದ ಗಾಯಗಳಾಗುವುದು ಗ್ಯಾರಂಟಿ. ಎತ್ತರಕ್ಕೆ ಬೆಳೆಯುವ ಮರಗಳಿಂದ ಈ ಹಣ್ಣು ಬೇರಡಿಸುವುದು ಕಷ್ಟಸಾಧ್ಯ.
ಬೇಸಿಗೆಯ ಎರಡು ತಿಂಗಳು ಈ ಹಣ್ಣಿಗೆ ಸೀಝನ್. ಇತ್ತೀಚೆಗೆ ತೋಟಗಳಲ್ಲಿಯೂ ಹಣ್ಣುಗಳನ್ನು ಕೆಲವೆಡೆ ಬೆಳೆಯಲು ರೈತರು ಮುಂದಾಗಿದ್ದಾರೆ. ಇದನ್ನು ವಾಣಿಜ್ಯ ಬೆಳೆಯಾಗಿ ಪರಿವರ್ತನೆ ಮಾಡಲಾಗಿದೆ. ಪಕ್ಷಿಗಳು ಈ ಹಣ್ಣುತಿಂದು ಬೀಜ ಉದುರಿಸುವುದಿಂದ ಬಯಲುಸೀಮೆಯಲ್ಲಿ ಮರಗಳು ಪ್ರಕೃತಿದತ್ತವಾಗಿ ಬೆಳೆದಿವೆ. ಒಟ್ಟಿನಲ್ಲಿ ಪ್ರತಿಯೊಬ್ಬರ ಬಾಲ್ಯದ ನೆನಪುಗಳ ಬುತ್ತಿ ಬಿಚ್ಚುತ್ತಾ ಹೋದಲ್ಲಿ ಮನದಲ್ಲಿ ಅಚ್ಚಳಿಯದೆ ಅಚ್ಚಾಗಿರುವ ನೂರಾರು ನೆನಪುಗಳು ಆಗೊಮ್ಮೆ, ಈಗೊಮ್ಮೆ ಸಂಭವಿಸುವ ಘಟನೆಗಳಿಗೆ ತಾಳೆಯಾಗುತ್ತಾ ನೆನಪಾಗಿ ಮನಸ್ಸಿಗೆ ಮುದ ನೀಡುವುದು ಸಹಜ ಸಂಗತಿಯಾದರೂ, ಸ್ನೇಹಿತರ ಜೊತೆಗೂಡಿ ಕಳೆದ ದಿನಗಳು, ಇವರ ಕೊತೆ ಮಾಡಿದ್ದ ಚೇಷ್ಟೆಗಳು ಎಂದಿಗೂ ಮರೆಯಾಗದು.
ನಾನು ಚಿಕ್ಕವನಾಗಿದ್ದಾಗ ಸ್ನೇಹಿತರ ಜೊತೆಯಲ್ಲಿ ಸೀಹುಣಸೆ ಕಾಯಿ ಕೆಡವಲು ಮರಕ್ಕೆ ಕಲ್ಲು ಹೊಡೆದದ್ದು ಈಗಲೂ ನೆನಪಿದೆ. ಆ ಹಣ್ಣಿನ ರುಚಿ ಇಂದಿಗೂ ಅರಿವಿದೆ. ನಮ್ಮ ಅಂಗಡಿಯ ಪಕ್ಕದಲ್ಲಿ ಈ ಮರವಿದ್ದು, ವರ್ಷಕ್ಕೊಮ್ಮೆ ಇದರ ಹಣ್ಣು ಸೇವನೆ ಸಮಯದಲ್ಲಿ ಹಳೇ ನೆನಪು ಬರುತ್ತದೆ.
-ಮಹಮ್ಮದ್ ರಫಿ, ಗಿಡ್ಡಪ್ಪನಹಳ್ಳಿ ನಿವಾಸಿ
ಎಲ್ಲಿಯದ್ದು ಈ ಹಣ್ಣು?
ಮೆಕ್ಸಿಕೋ, ಅಮೆರಿಕಾ, ಮಧ್ಯದ ಏಷಿಯ, ಕ್ಯಾರಿಬಿನ್, ಫ್ಲೋರಿಡಾ ಹಾಗೂ ಫಿಲಿಫೈನ್ ಈ ಹಣ್ಣಿನ ಮೂಲ ರಾಷ್ಟ್ರಗಳಾಗಿವೆ. ಭಾರತದ ತಮಿಳುನಾಡು, ಕೇರಳ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಕಾಣಬಹುದು. ಕನ್ನಡದಲ್ಲಿ ಡೋರಹುಣಸೆ ಅಥವಾ ಸೀಹುಣಸೆ, ತಮಿಳಿನಲ್ಲಿ ಕೊಡುಕ್ತಪುಲಿ, ತೆಲುಗಿನಲ್ಲಿ ಸೀಮಾ ಚಿಂಟಕಾಯಾ ಹಿಂದಿಯಲ್ಲಿ ಸಿಂಗಿ ಎಂದು ಕರೆಯುತ್ತಾರೆ.