ಉದ್ಘಾಟನೆಗೊಂಡು ಎರಡು ತಿಂಗಳಾದರೂ ಆರಂಭವಾಗದ ಸೇವೆ

ದೇವರಹಿಪ್ಪರಗಿ: ಪಟ್ಟಣದಲ್ಲಿ 8.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 30 ಹಾಸಿಗೆಗಳ ನೂತನ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆಯಾಗಿ ಎರಡು ತಿಂಗಳು ಕಳೆದರೂ, ಇನ್ನೂ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಿಲ್ಲ.
ತಾಳಿಕೋಟೆ-ಬಸವನ ಬಾಗೇವಾಡಿ ರಸ್ತೆಯಲ್ಲಿ ನಿರ್ಮಿಸಿರುವ ನೂತನ ಸಮುದಾಯ ಆರೋಗ್ಯ ಕೇಂದ್ರವನ್ನು ಮೇ 2ರಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದ್ದರು. ಆದರೆ ಕಟ್ಟಡದ ಕೆಲವು ಒಳಾಂಗಣ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದ ಕಾರಣ ಗುತ್ತಿಗೆದಾರರು ಆರೋಗ್ಯ ಇಲಾಖೆಗೆ ಕಟ್ಟಡವನ್ನು ಅಧಿಕೃತವಾಗಿ ಹಸ್ತಾಂತರಿಸಿಲ್ಲ ಎಂದು ತಿಳಿದುಬಂದಿದೆ.
ಹೊರಭಾಗದಲ್ಲಿ ಸುಸಜ್ಜಿತವಾಗಿ ಕಾಣುವ ಆಸ್ಪತ್ರೆಯ ಒಳಾಂಗಣ ಕಾಮಗಾರಿಗಳು ಇನ್ನೂ ಮುಂದುವರಿದಿವೆ. ಆಸ್ಪತ್ರೆಯನ್ನು ಸಾರ್ವಜನಿಕರ ಬಳಕೆಗೆ ಸಿದ್ಧಗೊಳಿಸದೆಯೇ ಉದ್ಘಾಟಿಸಿರುವುದು ಕೇವಲ ಪ್ರಚಾರಕ್ಕಾಗಿ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಜ್ಞ ವೈದ್ಯರ ಕೊರತೆ :
ಪ್ರಸ್ತುತ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞ ವೈದ್ಯರು, ಒಬ್ಬರು ಶುಶ್ರೂಷಕಿ ಹಾಗೂ ‘ಡಿ’ ಗ್ರೂಪ್ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ತೀವ್ರ ನಿಗಾ ಘಟಕ ಮತ್ತು ನವಜಾತ ಶಿಶುಗಳ ತೀವ್ರ ನಿಗಾ ಘಟಕದ ನಿರ್ವಹಣೆಗೆ ಅಗತ್ಯವಾದ ಪರಿಣತ ವೈದ್ಯರು ಹಾಗೂ ತಂತ್ರಜ್ಞರನ್ನು ಇನ್ನೂ ನೇಮಕ ಮಾಡಿಲ್ಲ.
ಆಸ್ಪತ್ರೆಗೆ ಅಗತ್ಯವಿರುವ ಆಧುನಿಕ ಶಸ್ತ್ರಚಿಕಿತ್ಸಾ ಉಪಕರಣಗಳು, ರೋಗಿಗಳ ಹಾಸಿಗೆಗಳು ಹಾಗೂ ಇತರ ಪೀಠೋಪಕರಣಗಳನ್ನೂ ಸಮರ್ಪಕವಾಗಿ ಪೂರೈಸಿಲ್ಲ. ಇದರಿಂದ ನೂತನ ಕಟ್ಟಡವಿದ್ದರೂ ರೋಗಿಗಳಿಗೆ ಪೂರ್ಣ ಪ್ರಮಾಣದ ಚಿಕಿತ್ಸಾ ಸೇವೆ ದೊರೆಯದಂತಾಗಿದೆ.
ಡಯಾಲಿಸಿಸ್ ಕೇಂದ್ರದ ಭರವಸೆ ಈಡೇರಿಲ್ಲ :
ಆಸ್ಪತ್ರೆಯ ಉದ್ಘಾಟನೆ ಸಂದರ್ಭದಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸುವುದು ಹಾಗೂ ಡಯಾಲಿಸಿಸ್ ಕೇಂದ್ರ ಆರಂಭಿಸುವ ಕುರಿತು ಸಚಿವರು ಭರವಸೆ ನೀಡಿದ್ದರು. ಆದರೆ ಎರಡು ತಿಂಗಳು ಕಳೆದರೂ ಭರವಸೆಗಳು ಅನುಷ್ಠಾನಗೊಂಡಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿರುವ ಆಸ್ಪತ್ರೆ :
ಯನ್ನು ಕೂಡಲೇ ಆರೋಗ್ಯ ಇಲಾಖೆಗೆ ಹಸ್ತಾಂತರಿಸಿ, ಅಗತ್ಯ ವೈದ್ಯರು, ಸಿಬ್ಬಂದಿ, ಪೀಠೋಪಕರಣ ಮತ್ತು ವೈದ್ಯಕೀಯ ಉಪಕರಣಗಳನ್ನು ಒದಗಿಸಬೇಕು. ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ನೂತನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಕಟ್ಟಡವನ್ನು ಅಧಿಕೃತವಾಗಿ ಇಲಾಖೆಗೆ ಹಸ್ತಾಂತರಿಸಿದ ಬಳಿಕ ಅಗತ್ಯ ಸಿಬ್ಬಂದಿ ಹಾಗೂ ವೈದ್ಯಕೀಯ ಉಪಕರಣಗಳ ಬೇಡಿಕೆಯನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು.
ಡಾ. ಸಂಪತ್ ಗುಣಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ವಿಜಯಪುರ
ತಾಲೂಕು ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ಹೊಸ ಕಟ್ಟಡ ನಿರ್ಮಿಸಿರುವುದು ಸ್ವಾಗತಾರ್ಹ. ಆದರೆ ಉದ್ಘಾಟನೆಯಾಗಿ ಎರಡು ತಿಂಗಳು ಕಳೆದರೂ ಸಾರ್ವಜನಿಕರಿಗೆ ಅದರ ಪೂರ್ಣ ಪ್ರಯೋಜನ ದೊರೆಯುತ್ತಿಲ್ಲ. ಗುತ್ತಿಗೆದಾರರು ತಕ್ಷಣ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಆರೋಗ್ಯ ಇಲಾಖೆಯು ಅಗತ್ಯ ಸಂಖ್ಯೆಯ ವೈದ್ಯರು ಮತ್ತು ಸಿಬ್ಬಂದಿ ನೇಮಿಸುವುದರ ಜತೆಗೆ ಅವರಿಗೆ ವಸತಿಗೃಹ ವ್ಯವಸ್ಥೆ ಕಲ್ಪಿಸಬೇಕು.
-ರೆಹಮಾನ್ ಕಣಕಾಲ, ಕರವೇ ತಾಲೂಕು ಅಧ್ಯಕ್ಷ






