ಕುಡಿಯುವ ನೀರಿನ ಟ್ಯಾಂಕ್ ಪಕ್ಕದಲ್ಲೇ ಚರಂಡಿ ನೀರು

ಬೀದರ್: ಹುಲಸೂರ್ ತಾಲೂಕಿನ ಗೋರ್ಟಾ (ಬಿ) ಗ್ರಾಮದ ವಾರ್ಡ್ ನಂ. 2ರ ದಲಿತರ ಓಣಿಯಲ್ಲಿ ಕುಡಿಯುವ ನೀರು ಬರುವ ಟ್ಯಾಂಕ್ ಹತ್ತಿರವೇ ಚರಂಡಿ ನೀರು ಬಿಟ್ಟಿದ್ದು, ಗಬ್ಬೆದ್ದು ನಾರುತ್ತಿದೆ. ಊರಲ್ಲೆಲ್ಲ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಿದರೂ ಕೂಡ ಈ ದಲಿತರ ಓಣಿಯಲ್ಲಿ ಮಾತ್ರ ಚರಂಡಿ ಹಾಗೂ ರಸ್ತೆಯ ವ್ಯವಸ್ಥೆ ಮಾಡಲಿಲ್ಲ. ಇದರಿಂದಾಗಿ ಆ ಓಣಿಯ ಜನರು ರೋಗದ ಭೀತಿಯಲ್ಲಿಯೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ದಲಿತರ ಓಣಿಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಹತ್ತಿರ ಚರಂಡಿ ನೀರು ನಿಲ್ಲುವಷ್ಟು ಸ್ಥಳ ಬಿಟ್ಟು, ಎರಡು ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಲಾಗಿದೆ. ಆದ್ದರಿಂದ ಎಲ್ಲ ಚರಂಡಿ ನೀರು ಆ ಕುಡಿಯುವ ನೀರಿನ ಟ್ಯಾಂಕ್ ಹತ್ತಿರವೇ ಬಂದು ನಿಲ್ಲುತ್ತಿವೆ. ಹೀಗಾಗಿ ಆ ಚರಂಡಿ ನಿರ್ಮಾಣ ಮಾಡಿದರೂ ಕೂಡ ಯಾವುದೇ ರೀತಿಯಲ್ಲಿ ಉಪಯೋಗಕ್ಕೆ ಬಾರದಾಗಿದೆ. ನಿಂತ ಚರಂಡಿ ನೀರು ಗಬ್ಬೆದ್ದು ನಾರುತ್ತಿರುವ ಆ ಸ್ಥಳದಲ್ಲಿಂದಲೇ ಆ ಓಣಿಯ ಬಡ ಜನರು ಕುಡಿಯುವ ನೀರು ಸೇವಿಸಬೇಕಾಗಿದೆ.
ಚರಂಡಿ ನೀರಿನ ಜೊತೆ ಜೊತೆಗೆ ಊರಲ್ಲಿರುವ ಎಲ್ಲ ಪ್ಲಾಸ್ಟಿಕ್‌ಗಳು ಬಂದು ಅದೇ ಕುಡಿಯುವ ನೀರಿನ ಸ್ಥಳದಲ್ಲಿಯೇ ಜಮಾವಣೆಗೊಂಡು, ಪ್ರದೇಶ ಮತ್ತಷ್ಟು ಗಲೀಜಾಗಿದೆ. ಚಿಕ್ಕ ಮಕ್ಕಳು ಓಡಾಡುತ್ತಿವ ಸ್ಥಳ ಅದಾಗಿದ್ದು, ಆ ಚರಂಡಿ ನೀರಲ್ಲಿ ಬಿದ್ದು ಅಪಾಯವಾಗುವ ಸಂಭವವಿದೆ. ಹಾಗೆಯೇ ನೀರಿನ ಟ್ಯಾಂಕ್ ಹತ್ತಿರವೇ ಕೊಳಚೆ ನೀರು ನಿಂತಿರುವ ತಗ್ಗು ಪ್ರದೇಶವಿದ್ದು, ನೀರು ತರಲು ಹೋಗುವ ಜನರು ಕೂಡ ಬಿದ್ದು ಅಪಾಯವಾಗಬಹುದಾಗಿದೆ.
ಮಳೆಗಾಲ ಹತ್ತಿರ ಬರುತ್ತಿದ್ದಂತೆ ಓಣಿಯ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಚರಂಡಿಯಲ್ಲಿ ಮಳೆ ನೀರಿನಿಂದ ತುಂಬಿ ಮನೆಗಳಿಗೆ ನುಗ್ಗುವ ಆತಂಕವು ಇದೆ. ರೋಗಗಳು ಹರಡುವ ಭೀತಿಯೂ ಈ ಓಣಿ ಜನರಲ್ಲಿ ಮನೆ ಮಾಡಿದೆ. ಈವಾಗಲೇ ಆ ನೀರಿನ ಟ್ಯಾಂಕ್ ಹತ್ತಿರ ಹೋದರೆ ಕೆಟ್ಟ ವಾಸನೆ ಬರುತ್ತಿದೆ. ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದಾಗಿದೆ.
ಆರೋಗ್ಯದ ಮೇಲೆ ಪರಿಣಾಮ: ಕೊಳಚೆ ನೀರು ಓಣಿಯಲ್ಲಿ ನಿಲ್ಲುತ್ತಿರುವ ಪರಿಣಾಮ ಸೊಳ್ಳೆಗಳ ಕಾಟವು ಅತಿಯಾಗಿದೆ. ಇದರಿಂದಾಗಿ ಓಣಿಯ ಜನರಲ್ಲಿ ಮಲೇರಿಯಾ, ಡೆಂಗ್ಯೂ ಹಾಗೂ ಇತರ ರೋಗಗಳು ಬರುವ ಭೀತಿಯಲ್ಲಿಯೇ ಬದುಕುತ್ತಿದ್ದಾರೆ.
ದಲಿತರ ಓಣಿಗೆ ನಿರ್ಲಕ್ಷ್ಯವೇಕೆ?: ಎಲ್ಲಾ ಕಡೆಗೆ ಚರಂಡಿ ವ್ಯವಸ್ಥೆ ನಿರ್ಮಾಣ ಮಾಡಿ, ಚರಂಡಿ ನೀರು ದಲಿತರ ಓಣಿಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಹತ್ತಿರವೇ ಜಮಾವಣೆಯಾಗುವ ಹಾಗೆ ಮಾಡುವುದಕ್ಕೆ ದಲಿತರ ಓಣಿಗೆ ಟಾರ್ಗೆಟ್ ಮಾಡಲಾಗಿದೆಯೇ ಎಂದು ಇಲ್ಲಿನ ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ. ಕಾರಣ, ಮಧ್ಯದಲ್ಲಿರುವ ನೀರಿನ ಟ್ಯಾಂಕ್‌ನ ಎರಡು ಬದಿಗೆ ಚರಂಡಿ ನಿರ್ಮಾಣ ಮಾಡಿ, ಬರೀ 50ರಿಂದ 60 ಅಡಿ ಆ ಕುಡಿಯುವ ನೀರಿನ ಟ್ಯಾಂಕ್ ಹತ್ತಿರವೇ ಖಾಲಿ ಜಾಗ ಬಿಡಲಾಗಿದೆ. ಒಂದು ವೇಳೆ ಎರಡು ಬದಿಯಲ್ಲಿ ನಿರ್ಮಿಸಿದ ಚರಂಡಿಗಳು ಜೋಡಿಸಿದಾಗ ಸರಾಗವಾಗಿ ಚರಂಡಿಯಲ್ಲಿ ನೀರು ಹರಿದು ಹೋಗಬಹುದು. ಆದರೆ, ಚರಂಡಿ ವ್ಯವಸ್ಥೆ ಸರಿಯಾಗಿ ಮಾಡದೆ, ನೀರು ಹರಿಯದ ಹಾಗೆ ಮಾಡಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. ಅದೇ ರೀತಿ ಈ ಓಣಿಯಲ್ಲಿ ರಸ್ತೆ ವ್ಯವಸ್ಥೆ ಕೂಡ ಮಾಡಲಿಲ್ಲ ಎನ್ನುವುದು ಆ ಓಣಿ ಜನರ ಆರೋಪವಾಗಿದೆ.
ಮಳೆಗಾಲ ಬರುವ ಮುಂಚೆ ಆದಷ್ಟು ಬೇಗ ಚರಂಡಿ ವ್ಯವಸ್ಥೆ ಮಾಡಿ, ಅಲ್ಲಿ ನಿಲ್ಲುವ ಕೊಳಚೆ ನೀರು ಸರಾಗವಾಗಿ ಹರಿಯುವ ಹಾಗೆ ಮಾಡಬೇಕು ಎನ್ನುವುದು ಓಣಿಯವರ ಆಗ್ರಹವಾಗಿದೆ.
ಈ ಕಾಮಗಾರಿ ಪ್ರಗತಿಯಲ್ಲಿದ್ದು 15ರಿಂದ 20 ದಿನದಲ್ಲಿ ಪೂರ್ಣಗೊಳಿಸಲಾಗುವುದು. ಆದರೆ, ಇದರ ಬಗ್ಗೆ ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಅವರಿಗೆ ಕೇಳಿದರೆ ಉತ್ತಮವಾಗಿರುತ್ತದೆ.
- ಸಿದ್ರಾಮ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗೋರ್ಟಾ (ಬಿ).
ದಲಿತ ಓಣಿಯ ಕುಡಿಯುವ ನೀರಿನ ಟ್ಯಾಂಕ್ ನ ಎರಡು ಬದಿಯಲ್ಲಿ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಆದರೆ, ಚರಂಡಿ ಕಾಮಗಾರಿ ಪೂರ್ಣಗೊಳಿಸದೇ ಚರಂಡಿ ನೀರೆಲ್ಲ ಕುಡಿಯುವ ನೀರಿನ ಟ್ಯಾಂಕ್ ಹತ್ತಿರವೇ ಬಂದು ನಿಲ್ಲುತ್ತಿದೆ. ಇದರಿಂದ ಓಣಿ ತುಂಬೆಲ್ಲ ಗಲೀಜು ವಾಸನೆ ಬರುತ್ತಿದೆ. ಈ ಓಣಿಯ ಜನರು ಇಲ್ಲಿನ ನೀರನ್ನೇ ಸೇವಿಸುತ್ತಾರೆ. ಆದ್ದರಿಂದ ರೋಗಗಳು ಹರಡುವ ಆತಂಕ ಎದುರಾಗಿದೆ. ಹಾಗಾಗಿ ಆದಷ್ಟು ಬೇಗ ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು.
- ಅನಿಲಕುಮಾರ್, ಗ್ರಾಮಸ್ಥ.
ಈ ಸಮಸ್ಯೆಯ ಕುರಿತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ತಿಳಿಸಿ, ಪರಿಶೀಲನೆ ಮಾಡಲು ಹೇಳುತ್ತೇನೆ.
- ಮಹಾದೇವ್ ಜಮ್ಮು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಹುಲಸೂರ್.






