ಸಾಹಿತ್ಯ ಲೋಕದ ಕಣ್ಮಣಿ ಶಂಕರರಾವ ಉಬಾಳೆ

ಕಲ್ಯಾಣನಾಡಿನ ಮಣ್ಣಿನ ಪ್ರತಿ ಕಣವೂ ಅರಿವು-ಆಚಾರದೊಂದಿಗೆ ಸಂಸ್ಕಾರದ ಪ್ರಭೆ ಹೊಂದಿದೆ. ಕೃಷ್ಣೆಯ ನೆಲದಲ್ಲಿದ್ದುಕೊಂಡು ಸದ್ದಿಲ್ಲದೆ ಸಾಹಿತ್ಯದೇವಿಯ ಆರಾಧಕರಾಗಿ ಅನುದಿನ ಪೂಜೆಗೈಯುತ್ತಿರುವ ದೇವದುರ್ಗದ ಶಂಕರರಾವ ಉಭಾಳೆಯವರು ನಾಡಿನ ಖ್ಯಾತ ಕವಿ-ಕಥೆಗಾರ-ಸಂಶೋಧಕರಾಗಿ ಮನೆ ಮಾತಾದವರು.
ದೇವದುರ್ಗದ ಶಂಕರರಾವ್ ಉಬಾಳೆ, ನಾರಾಯಣರಾವ್ ಉಬಾಳೆ ಮತ್ತು ಅಂಬಿಕಾಬಾಯಿ ದಂಪತಿಯ ಮಗನಾಗಿ ಮಧ್ಯಮ ವರ್ಗದ ನೋವು-ನಲಿವಿನೊಂದಿಗೆ ಬೆಳೆದವರು. ಚಿಕ್ಕಪ್ಪ ಅಂಬುಜಿ ರಾವ್ ನೀಡುವ ಚಂದಮಾಮ, ಬಾಲಮಿತ್ರದಿಂದ ಪುಸ್ತಕ ಪ್ರೀತಿ ರೂಢಿಸಿಕೊಂಡರು. ಇಂದು ರಾಜ್ಯಾದ್ಯಂತ ಖ್ಯಾತ ಕವಿ, ಕಥೆಗಾರನಾಗಿ ಪ್ರತಿಷ್ಠಿತ ಪತ್ರಿಕೆಗಳ ಪ್ರಶಸ್ತಿಗಳನ್ನು ಪಡೆದು ಹೆಸರಾಂತ ಸಾಹಿತಿ ಎನಿಸಿಕೊಂಡಿದ್ದಾರೆ.
ಉಭಾಳೆಯವರು ದೇವದುರ್ಗ ತಾಲೂಕಿನಲ್ಲಿ ಪ್ರಾಥಮಿಕ, ಪ್ರೌಢ, ಕಾಲೇಜು ಶಿಕ್ಷಣ ಪಡೆದು, ಪದವಿ ಶಿಕ್ಷಣ ದೇವದುರ್ಗ ಮತ್ತು ರಾಯಚೂರು ಎಲ್ವಿಡಿ ಕಾಲೇಜಿನಲ್ಲಿ ಅಪೇಕ್ಷಿಸಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತದನಂತರ ಎಂಫಿಲ್ ಸಂಶೋಧನಾ ಪದವಿ ಪಡೆದು ಸಾಹಿತ್ಯ ಸಾಧನೆಯನ್ನು ವಿದ್ಯಾರ್ಥಿ ದೆಸೆಯಿಂದಲೇ ಆರಂಭಿಸಿದ್ದಾರೆ. ಇವರ ಸಾಹಿತ್ಯ, ಬದುಕು, ಬರಹ ಕುರಿತಂತೆ ರಾಯಚೂರು ವಿಶ್ವವಿದ್ಯಾಲಯ, ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ, ಕನ್ನಡ ವಿಶ್ವವಿದ್ಯಾಲಯ, ಹಂಪಿಗಳಲ್ಲಿ ಅನೇಕ ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.
2004ರ ಕರ್ನಾಟಕ-ಕೇರಳ ಐದನೇ ಸಾಹಿತ್ಯ ಸಮ್ಮೇಳನವು ಕಾಸರಗೋಡಿನಲ್ಲಿ ನಡೆದಾಗ ಇವರ ‘ನೀರಿಗೆ ಪಾಚಿ ವೈರಿ’ ಕಥಾಸಂಕಲನ ಶ್ರೇಷ್ಠ ಕೃತಿಯಾಗಿ ಪ್ರಶಸ್ತಿ ಪಡೆದದ್ದು ಇತಿಹಾಸ. ಹಾಗೆಯೇ ಕಳೆ ಕಥಾಸಂಕಲನ 2016ರ ಬೆಳಗಾವಿ ಕನಕ ಪ್ರಶಸ್ತಿ ಪಡೆದಿದೆ. ಹೀಗೆ ಸುಮಾರು 20 ಕಥೆಗಳು, ಕಾವ್ಯಗಳು ರಾಜ್ಯ ಪ್ರಶಸ್ತಿ ಹಾಗೂ ಅಂತರರಾಜ್ಯ ಪ್ರಶಸ್ತಿ ಪಡೆದದ್ದು ಶಂಕರರಾವ ಅವರ ಸಾಹಿತ್ಯದ ಹೆಗ್ಗಳಿಕೆ ಎನ್ನಬಹುದು.
ತಾಲೂಕು ಜಿಲ್ಲಾ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾವ್ಯವಾಚನ ಉಪನ್ಯಾಸಗೋಷ್ಠಿಯಲ್ಲಿ ಪ್ರಬಂಧ ಮಂಡನೆಗೈದು ಅತ್ಯುತ್ತಮ ಉಪನ್ಯಾಸಕರೆಂದು ಹೆಸರಾಗಿದ್ದಾರೆ. ಬದುಕಿನ ನೋವನೆಲ್ಲ ನುಂಗಿ, ಪತ್ನಿ ವಿಯೋಗದ ನಡುವೆ ಮಕ್ಕಳಿಗೆ ಆದರ್ಶ ಅಪ್ಪನಾಗಿದ್ದಾರೆ.
ಉಭಾಳೆಯವರು ಪದವೀಧರರಾದ ಮೇಲೆ ಉದ್ಯೋಗ ಸಿಗದಿದ್ದಾಗ ನಿರುದ್ಯೋಗಿಯಾಗಿ ಕೂತು ಕಾಲ ಕಳೆಯದೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಅಮ್ಮನ ಕನಸುಗಳಿಗೆ ಜೊತೆಯಾಗಿ ನಿಂತು ಸಕಾರಗೊಳಿಸಿದರು.
ಶಂಕರರಾವ ಅವರು 1996ರಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ನ ಅಧ್ಯಕ್ಷರಾಗಿದ್ದರು. 1997ರಲ್ಲಿ ದೇವದರ್ಗ ತಾಲೂಕಿನ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿದ್ದರು. 1992ರಿಂದ ಇಲ್ಲಿಯವರೆಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಪರಿಷ್ಯತ್ ಘಟಕಗಳಲ್ಲಿ ಸಮಿತಿ ಸದಸ್ಯರಾಗಿ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಗೌರವ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 2006ರಲ್ಲಿ ಜನಪದ ಸಾಹಿತ್ಯ ಪರಿಷತ್ ದೇವದರ್ಗ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ (ಕನಕಪುರ ಮತ್ತು ರಾಯಚೂರು ) ಕವಿಗೊಷ್ಠಿಯಲ್ಲಿ ಕವಿತೆ ವಾಚಿಸಿದ್ದಾರೆ. 9ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ.
ಶಂಕರರಾವ್ ಉಭಾಳೆ ಅವರಿಗೆ ಸಂದ ಕಾವ್ಯ ಪ್ರಶಸ್ತಿಗಳು:
2001ರಲ್ಲಿ ‘‘ಯುದ್ಧ’’ ಕವಿತೆಗೆ ಮುಂಬೈನ ಅಕ್ಷಯ ಮಾಸ ಪತ್ರಿಕೆ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2002-03ರಲ್ಲಿ ಬೆಂಗಳೂರಿನ ಕಲಾ ಸಾಹಿತ್ಯ ವೇದಿಕೆ ಆಯೋಜಿಸಿದ್ದ ರಾಜ್ಯಮಟ್ಟದ ಕಾವ್ಯ ಸ್ಪರ್ಧೆಯಲ್ಲಿ ‘‘ರಾಜ್ಯೋತ್ಸವ’’ ಕವನಕ್ಕೆ ಪ್ರಥಮ ಬಹುಮಾನ, 2002ರಲ್ಲಿ ಕಲಾ ವೇದಿಕೆ ಗಂಗಾವತಿ ಆಯೋಜಿಸಿದ್ದ ವಿಭಾಗ ಮಟ್ಟದ ಕಾವ್ಯ ಸ್ಪರ್ಧೆಯಲ್ಲಿ ‘ವಿಶ್ವಸುಂದರಿ ಸ್ಪರ್ಧೆ’ ಎಂಬ ಕವನಕ್ಕೆ ದ್ವಿತೀಯ ಬಹುಮಾನ, 2004ರಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆ ಹೊಸಪೇಟೆ ಇವರಿಂದ ‘ಉತ್ತಮ ಕಾವ್ಯ’ ಪ್ರಶಸ್ತಿ ಲಭಿಸಿದೆ. 1993ರಲ್ಲಿ ಚಂಪಾ ಹನಿಗವನ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ‘‘ಸ್ವತಂತ್ರ್ಯ’’ ಹನಿಗವನಕ್ಕೆ ಪ್ರಶಸ್ತಿ, 1999ರಲ್ಲಿ ಸುದ್ದಿಮೂಲ ಪತ್ರಿಕೆ ಆಯೋಜಿಸಿದ್ದ ವಲಯ ಮಟ್ಟದ ಕಾವ್ಯ ಸ್ಪರ್ಧೆಯಲ್ಲಿ ಕವಿತೆಗೆ ಪ್ರಥಮ ಬಹುಮಾನ, 2006-07ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ತತ್ವಪದ ಸಾಹಿತ್ಯ ಕುರಿತ ಪ್ರಬಂಧಕ್ಕೆ ಉತ್ತಮ ಸಂಶೋಧನಾ ಪ್ರಶಸ್ತಿ, ಮುಂಬೈಯ ಕುಲಾಲ ಸಂಘದ ಅಮೂಲ್ಯ ಪತ್ರಿಕೆಯ ಬೆಳ್ಳಿ ಹಬ್ಬದಲ್ಲಿ ‘‘ಆನೆ ಬಂದ ದಿನ’’ ಕಥೆಗೆ ಪ್ರಥಮ ಬಹುಮಾನ ಲಭಿಸಿದೆ.
2003ರಲ್ಲಿ ರಾಜ್ಯ ಮಟ್ಟದ ಕಥಾ ಸ್ಫರ್ಧೆೆಯಲ್ಲಿ ‘ನೀರಿಗೆ ಪಾಚಿ ವೈರಿ’ ಕಥೆಗೆ ಚಂಪಾ ಪ್ರಶಸ್ತಿ ಮತ್ತು ಮೊದಲ ಬಹುಮಾನ, 2007ರಲ್ಲಿ ಶಕ್ತಿ ದಿನ ಪತ್ರಿಕೆ ಆಯೋಜಿಸಿದ್ದ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ‘‘ತೆರಣಿಯ ಹುಳು’’ ಕಥೆಗೆ ತೃತೀಯ ಬಹುಮಾನ, 2008-09ರಲ್ಲಿ ಮುಂಬೆಳಕು ಕರ್ನಾಟಕ ಸಂಘ ಮುಂಬೈ ಇವರು ನಡೆಸಿದ ಕಥಾ ಸ್ಪರ್ಧೆಯಲ್ಲಿ ‘‘ಅರಿಯಲಾಗದ ಘನ’’ ಕಥೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. 2010ರಲ್ಲಿ ಕರವೇ ನಲ್ನುಡಿ ಪತ್ರಿಕೆಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ‘‘ನಂಜಾದ ನಾಯಿ ಹಾಲು’’ ಕಥೆಗೆ ತೃತೀಯ ಬಹುಮಾನ ಪಡೆದಿದ್ದಾರೆ.







