ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡ ಶೇಖರಪ್ಪ

ದಾವಣಗೆರೆ: ಹರಿಹರ ತಾಲೂಕಿನ ಕೆಂಚನಹಳ್ಳಿ ಗ್ರಾಮದ 73 ವರ್ಷದ ಪ್ರಗತಿಪರ ರೈತ ಕೆ.ಜಿ. ಶೇಖರಪ್ಪ ಸಮಗ್ರ ಕೃಷಿಯ ಮೂಲಕ ಯಶಸ್ಸಿನ ಬದುಕು ಕಟ್ಟಿಕೊಂಡು ಇತರ ರೈತರಿಗೆ ಮಾದರಿಯಾಗಿದ್ದಾರೆ.
ಕೃಷಿ ಎಂದರೆ ನಷ್ಟ, ಸಂಕಷ್ಟ ಎಂಬ ಮನೋಭಾವನೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ, ಶ್ರದ್ಧೆ, ಆಸಕ್ತಿ ಹಾಗೂ ಪ್ರಯೋಗಶೀಲತೆಯನ್ನು ಮೈಗೂಡಿಸಿಕೊಂಡು ಕೃಷಿಯಲ್ಲಿ ಸಾರ್ಥಕತೆ ಕಂಡುಕೊಂಡಿರುವ ಶೇಖರಪ್ಪ ಅವರು, ಐದನೇ ತರಗತಿ ಶಿಕ್ಷಣ ಪಡೆದಿದ್ದರೂ ಕೃಷಿ ಕ್ಷೇತ್ರದಲ್ಲಿ ಅಪಾರ ಜ್ಞಾನ ಮತ್ತು ಅನುಭವ ಸಂಪಾದಿಸಿ ಪ್ರಗತಿಪರ ರೈತರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.
ತಂದೆಯಿಂದ ಬಂದಿದ್ದ 8 ಎಕರೆ ಜಮೀನಿನಲ್ಲಿ ವಿವಿಧ ಕೃಷಿ ಪ್ರಯೋಗಗಳನ್ನು ನಡೆಸಿ ಯಶಸ್ಸು ಕಂಡ ಅವರು, ತಮ್ಮ ಕೃಷಿ ಭೂಮಿಯನ್ನು ಈಗ 13 ಎಕರೆಗೆ ವಿಸ್ತರಿಸಿಕೊಂಡಿದ್ದಾರೆ. ಕೃಷಿಯೊಂದರಿಂದ ಮಾತ್ರ ಯಶಸ್ಸು ಸಾಧ್ಯವಿಲ್ಲ ಎಂಬುದನ್ನು ಅರಿತು ಬೆಳೆ ವೈವಿಧ್ಯತೆ ಮತ್ತು ಪೂರಕ ಚಟುವಟಿಕೆಗಳ ಮೂಲಕ ಆದಾಯದ ಹಲವು ಮೂಲಗಳನ್ನು ಸೃಷ್ಟಿಸಿಕೊಂಡಿದ್ದಾರೆ.
ಪ್ರಸಕ್ತ 3 ಎಕರೆಯಲ್ಲಿ ಕಬ್ಬು, 3 ಎಕರೆಯಲ್ಲಿ ತೆಂಗು, 2 ಎಕರೆ 20 ಗುಂಟೆಯಲ್ಲಿ ರಾಗಿ, 3 ಎಕರೆ 20 ಗುಂಟೆಯಲ್ಲಿ ಭತ್ತ, 2 ಎಕರೆ 20 ಗುಂಟೆಯಲ್ಲಿ ಮೆಕ್ಕೆಜೋಳ ಹಾಗೂ ಒಂದು ಎಕರೆಯಲ್ಲಿ ಸೌತೆಕಾಯಿ ಬೆಳೆದಿದ್ದಾರೆ. ಇದರ ಜತೆಗೆ ಟೊಮೆಟೊ, ಬಾಳೆ, ನಿಂಬೆ, ಪೇರಲ, ಮಾವು, ಸಿರಿಧಾನ್ಯಗಳು, ಚೆಂಡು ಹೂ, ಕುಂಬಳಕಾಯಿ, ತೊಗರಿ, ಅವರೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಅವರ ಕೃಷಿ ಭೂಮಿಗೆ ಕಾಲಿಟ್ಟರೆ ಕೃಷಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಅನುಭವವಾಗುತ್ತದೆ. ಎರಡು ಕೃಷಿ ಹೊಂಡಗಳು, ಮಳೆನೀರು ಸಂಗ್ರಹಣಾ ವ್ಯವಸ್ಥೆ, ಹನಿ ನೀರಾವರಿ ಪದ್ಧತಿ, ಹೈಟೆಕ್ ಹಸಿರುಮನೆ, ಸಾವಯವ ಗೊಬ್ಬರ ತಯಾರಿಕೆ ಘಟಕ ಸೇರಿದಂತೆ ಆಧುನಿಕ ಹಾಗೂ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದಾರೆ.
ಕೃಷಿಯ ಜೊತೆಗೆ ಹೈನುಗಾರಿಕೆ, ಕುರಿ ಸಾಕಣೆ, ಕೋಳಿ ಸಾಕಣೆ, ಮೀನುಗಾರಿಕೆ ಹಾಗೂ ಜೇನು ಸಾಕಣೆ ನಡೆಸುತ್ತಿರುವ ಅವರು, ಸಮಗ್ರ ಕೃಷಿಯ ಮೂಲಕ ನಿರಂತರ ಆದಾಯ ಗಳಿಸುತ್ತಿದ್ದಾರೆ. ಕೃಷಿ ಭೂಮಿಗೆ ಅಗತ್ಯವಿರುವ ಸಾವಯವ ಗೊಬ್ಬರವನ್ನು ತಾವೇ ತಯಾರಿಸುತ್ತಿದ್ದು, ಜೀವಾಮೃತ ಮತ್ತು ಎರೆಹುಳು ಗೊಬ್ಬರ ಬಳಸಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಮನೆ ಬಳಕೆಗೆ ಗೋಬರ್ ಅನಿಲ ಬಳಸುತ್ತಿರುವುದು ಅವರ ಕೃಷಿ ಜೀವನದ ಮತ್ತೊಂದು ವಿಶೇಷ.
ಕೃಷಿಯಲ್ಲಿ ಕಾರ್ಮಿಕರ ಕೊರತೆ ಮತ್ತು ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಡ್ರಮ್ ಸೀಡರ್ ಮೂಲಕ ನಾಟಿ ಪದ್ಧತಿ ಅಳವಡಿಸಿಕೊಂಡಿರುವ ಅವರು, ಟ್ರ್ಯಾಕ್ಟರ್, ರೊಟಾವೇಟರ್ ಸೇರಿದಂತೆ ವಿವಿಧ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ. ಗ್ರಾಮದಿಂದ ಹರಿದುಬರುವ ತ್ಯಾಜ್ಯ ನೀರನ್ನು ಸಂಸ್ಕೃರಿಸಿ ಕೃಷಿ ಹೊಂಡದಲ್ಲಿ ಸಂಗ್ರಹಿಸಿ ನೀರಾವರಿಗೆ ಬಳಸುತ್ತಿರುವುದು ಅವರ ವಿನೂತನ ಪ್ರಯತ್ನವಾಗಿದೆ.
‘ಒಂದು ಬೆಳೆಗೆ ಬೆಲೆ ಇಲ್ಲದಿದ್ದರೆ ಮತ್ತೊಂದು ಬೆಳೆ ಕೈಹಿಡಿಯುತ್ತದೆ. ಬೆಳೆಗಳು ಕೈಕೊಟ್ಟರೆ ಪಶುಸಂಗೋಪನೆ, ಮೀನು ಮತ್ತು ಜೇನು ಸಾಕಣೆ ನೆರವಿಗೆ ಬರುತ್ತವೆ. ಆದ್ದರಿಂದ ಕೃಷಿ ಎಂದಿಗೂ ಬೇಸರ ತರಿಸಿಲ್ಲ’ ಎಂದು ಶೇಖರಪ್ಪ ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಕುಟುಂಬದ ಬೆಂಬಲವೇ ಯಶಸ್ಸಿನ ಗುಟ್ಟು:
ಶೇಖರಪ್ಪ ಅವರ ಕೃಷಿ ಸಾಧನೆಯ ಹಿಂದೆ ಪತ್ನಿ ಕಲಾವತಿ, ಪುತ್ರ ಪಾಲಾಕ್ಷ, ಸೊಸೆ ರೇಖಾ ಹಾಗೂ ಮತ್ತೋರ್ವ ಪುತ್ರ ರಾಜಶೇಖರ್ ಮತ್ತು ಸೊಸೆ ಸುಮಾ ಅವರ ಸಹಕಾರ ಪ್ರಮುಖವಾಗಿದೆ. ವಿಶೇಷವಾಗಿ ಪುತ್ರ ಪಾಲಾಕ್ಷ ತಂದೆಯ ಎಲ್ಲ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಕೃಷಿಯಿಂದ ವಿಮುಖರಾಗುತ್ತಿರುವ ಯುವಜನರನ್ನು ಮತ್ತೆ ಕೃಷಿ ಕ್ಷೇತ್ರದತ್ತ ಸೆಳೆಯುವ ಉದ್ದೇಶದಿಂದ ಇನ್ನಷ್ಟು ಹೊಸ ಪ್ರಯೋಗಗಳನ್ನು ಕೈಗೊಳ್ಳುವ ಕನಸು ಈ ಕುಟುಂಬದ್ದಾಗಿದೆ.
ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ
ಸಮಗ್ರ ಕೃಷಿಯಲ್ಲಿ ಸಾಧನೆಗೈದ ಕೆ.ಜಿ. ಶೇಖರಪ್ಪ ಅವರನ್ನು ಕೃಷಿ ಇಲಾಖೆ 2025-26ನೇ ಸಾಲಿನ ತಾಲೂಕು ಮಟ್ಟದ ‘ಆತ್ಮ ಶ್ರೇಷ್ಠ ಕೃಷಿಕ’ ಪ್ರಶಸ್ತಿ ನೀಡಿ ಗೌರವಿಸಿದೆ. ಇದರ ಜೊತೆಗೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಮಾಧ್ಯಮ ಸಂಸ್ಥೆಗಳೂ ಅವರನ್ನು ಸನ್ಮಾನಿಸಿ ಗೌರವಿಸಿವೆ.
ಸರಿಯಾಗಿ ಬಳಸಿಕೊಂಡರೆ ಮಣ್ಣಿನಲ್ಲಿ ಅನ್ನ ಮತ್ತು ಚಿನ್ನ ಎರಡೂ ಇದೆ. ಕೃಷಿಯಲ್ಲಿ ಮಿತಿಮೀರಿದ ರಾಸಾಯನಿಕ ಬಳಕೆಯನ್ನು ಕೈಬಿಟ್ಟು ಸಾವಯವ ಕೃಷಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಮತ್ತು ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ.
-ಕೆ.ಜಿ. ಶೇಖರಪ್ಪ, ಪ್ರಗತಿಪರ ರೈತ
ರೈತರ ಧ್ವನಿಯಾದ ಹೋರಾಟಗಾರ
ಕೆ.ಜಿ. ಶೇಖರಪ್ಪ ಅವರು ಕೇವಲ ರೈತರಷ್ಟೇ ಅಲ್ಲ, ಕಳೆದ ಎರಡು ದಶಕಗಳಿಂದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರೈತ ಹೋರಾಟಗಾರರೂ ಹೌದು. ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಹಲವಾರು ಹೋರಾಟಗಳಲ್ಲಿ ಭಾಗವಹಿಸಿರುವ ಅವರು, ಅನೇಕ ಬಾರಿ ದಿಲ್ಲಿವರೆಗೂ ತೆರಳಿ ರೈತರ ಪರವಾಗಿ ಧ್ವನಿ ಎತ್ತಿದ್ದಾರೆ. ಪ್ರಸಕ್ತ ರೈತ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.






