ರಷ್ಯಾ ವಿಶ್ವ ಯುವ ಶೃಂಗಸಭೆಯಲ್ಲಿ ವಿಜಯಪುರದ ಶಿಫಾ ಭಾಗಿ

ವಿಜಯಪುರ, ಸೆ.17: ಗುಮ್ಮಟ ನಗರಿಯ ಕುವರಿ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಸೆ.22ರಿಂದ ಸೆ.30ರವರೆಗೆ ಎಂಟು ದಿನಗಳ ಕಾಲ ನಡೆಯಲಿರುವ ವಿಶ್ವ ಯುವ ಶೃಂಗಸಭೆಯಲ್ಲಿ ಭಾರತದ ಯುವ ಪ್ರತಿನಿಧಿ ಮಂಡಳದ ನೇತೃತ್ವ ವಹಿಸಲಿರುವುದು ಜಿಲ್ಲೆಯ ಇತಿಹಾಸದಲ್ಲಿ ಹೊಸ ಮೈಲುಗಲ್ಲು.
ವಿಜಯಪುರ ಯುವತಿ ಶಿಫಾ ಜಮಾದಾರ ಅವರು ಪ್ರಥಮ ಬಾರಿಗೆ ಜಾಗತಿಕ ಮಟ್ಟದ ಶೃಂಗಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ವಿಶ್ವ ಅಣು ದಿನಾಚರಣೆ ಅಂಗವಾಗಿ ರಷ್ಯಾ ಸರಕಾರ
ತನ್ನ ರಾಜಧಾನಿಯಲ್ಲಿ ಸೆ.22ರಂದು ವಿಶ್ವ ಯುವ ಶೃಂಗಸಭೆ ಆಯೋಜಿಸಿದ್ದು, ಭಾರತದಿಂದ ಓರ್ವ ಯುವತಿ, ಓರ್ವ ಯುವಕ ಭಾಗವಹಿಸಲಿದ್ದು, ವಿಜಯಪುರ ಯುವತಿಗೆ ಈ ಅಪೂರ್ವ ಅವಕಾಶ ಪ್ರಾಪ್ತವಾಗಿರುವುದು ಜಿಲ್ಲೆಯಲ್ಲಿ ಹೊಸ ಸಂತಸದ ಅಲೆ ಸೃಷ್ಟಿಸಿದೆ. ಒಟ್ಟು 160 ರಾಷ್ಟ್ರಗಳ ಯುವ ಪ್ರತಿನಿಧಿಗಳು ಈ ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.
‘ವಿಶ್ವ ಶಾಂತಿಯಲ್ಲಿ ಯುವಜನರ ಪಾತ್ರ’ ಎಂಬ ವಿಷಯವಾಗಿ ಕು.ಶಿಫಾ ಜಮಾದಾರ ವಿಚಾರಗಳನ್ನು ಮಂಡಿಸಲಿದ್ದಾರೆ. ಹೊಸದಿಲ್ಲಿಯ ಮೂಲಕ ರಷ್ಯಾ ರಾಜಧಾನಿ ಮಾಸ್ಕೋಗೆ ಶಿಫಾ ಪ್ರಯಾಣ ಬೆಳೆಸಲಿದ್ದು, ವಿಮಾನಯಾನ ಖರ್ಚು ಸೇರಿದಂತೆ ಸಕಲ ವೆಚ್ಚಗಳನ್ನು ರಷ್ಯಾ ಸರಕಾರವೇ ಭರಿಸಲಿದೆ.





