Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಶಿವಕುಮಾರ್ ಸಂಪುಟ ‘ಸಂಕಟ’!

ಶಿವಕುಮಾರ್ ಸಂಪುಟ ‘ಸಂಕಟ’!

ಹೊನಕೆರೆ ನಂಜುಂಡೇಗೌಡಹೊನಕೆರೆ ನಂಜುಂಡೇಗೌಡ11 Jun 2026 12:15 PM IST
share
ಶಿವಕುಮಾರ್ ಸಂಪುಟ ‘ಸಂಕಟ’!

ಡಿ.ಕೆ. ಶಿವಕುಮಾರ್ ಅವರಿಗೆ ಸಂಭ್ರಮಾಚರಣೆಗೂ ಅವಕಾಶ ಸಿಕ್ಕಿಲ್ಲ. ಆರಂಭದಲ್ಲೇ ವಿಘ್ನಗಳು ಎದುರಾಗಿವೆ. ಸಚಿವ ಸಹೊದ್ಯೋಗಿಗಳಿಗೆ ಹಂಚಿದ ಖಾತೆಗಳು ಕಾಲಿಗೆ ಸುತ್ತಿಕೊಳ್ಳುತ್ತಿವೆ. ಸಂಪುಟ ಸದಸ್ಯರ ಮನವೊಲಿಸಿ, ಉಳಿದಿರುವ ಎರಡು ವರ್ಷದ ಅವಧಿಗೆ ಉತ್ತಮ ಆಡಳಿತ ಕೊಡುವುದು ಡಿಕೆಶಿ ಮುಂದಿರುವ ಸವಾಲು. ಸಂಪುಟ ವಿಸ್ತರಣೆ-ಖಾತೆ ಹಂಚಿಕೆ ಕಸರತ್ತನ್ನು ಸಮರ್ಥವಾಗಿ ನಿಭಾಯಿಸಿದರೆ ಯುದ್ಧ ಗೆದ್ದಂತೆ

ಅಂತೂ ಇಂತೂ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದಾಯಿತು. ಅನೇಕ ವರ್ಷಗಳ ಕನಸು ಕೈಗೂಡಿದ್ದಾಯಿತು. ಪಾಪ ಅವರಿಗೆ ಸಂಭ್ರಮಾಚರಣೆಗೂ ಅವಕಾಶ ಸಿಕ್ಕಿಲ್ಲ. ಆರಂಭದಲ್ಲೇ ವಿಘ್ನಗಳು ಎದುರಾಗಿವೆ. ಸಚಿವ ಸಹೊದ್ಯೋಗಿಗಳಿಗೆ ಹಂಚಿದ ಖಾತೆಗಳು ಕಾಲಿಗೆ ಸುತ್ತಿಕೊಳ್ಳುತ್ತಿವೆ. ಸಂಪುಟ ಸದಸ್ಯರ ಮನವೊಲಿಸಿ, ಉಳಿದಿರುವ ಎರಡು ವರ್ಷದ ಅವಧಿಗೆ ಉತ್ತಮ ಆಡಳಿತ ಕೊಡುವುದು ಡಿಕೆಶಿ ಮುಂದಿರುವ ಸವಾಲು. ಸಂಪುಟ ವಿಸ್ತರಣೆ-ಖಾತೆ ಹಂಚಿಕೆ ಕಸರತ್ತನ್ನು ಸಮರ್ಥವಾಗಿ ನಿಭಾಯಿಸಿದರೆ ಯುದ್ಧ ಗೆದ್ದಂತೆ

ಡಿಕೆಶಿ ಜತೆ 13 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರಲ್ಲಿ ಯಾರಿಗೂ ಖುಷಿ ಇದ್ದಂತಿಲ್ಲ. ಒಬ್ಬೊಬ್ಬರಿಗೂ ಒಂದೊಂದು ‘ಸಂಕಟ’. ಡಾ. ಜಿ. ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಕ್ಕರೂ ತೃಪ್ತಿಯಿಲ್ಲ. ಮುಖ್ಯಮಂತ್ರಿ ಕುರ್ಚಿ ತಪ್ಪಿದ ಕೊರಗು. ತುಮಕೂರು ‘ಸಿದ್ಧಾರ್ಥ ಶಿಕ್ಷಣ ಸಂಸ್ಥೆ’ ಉಪನ್ಯಾಸಕ-ವಿದ್ಯಾರ್ಥಿ ಸಮುದಾಯ ಈಚೆಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಂತರಂಗದ ಬೇಗುದಿ ಹೊರ ಹಾಕಿದ್ದಾರೆ. ‘‘ನಾನು 2013ರಲ್ಲಿ ಗೆದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ. ನನ್ನ ಅದೃಷ್ಟವೋ, ಹಣೆಬರಹವೋ ಸೋತಿದ್ದರಿಂದಾಗಿ ಅವರಾದರು. 2018ರ ಚುನಾವಣೆಯಲ್ಲಿ ನಮ್ಮ ಪಕ್ಷ 80 ಸ್ಥಾನ ಗೆದ್ದಿತ್ತು. 30 ಸೀಟು ಪಡೆದಿದ್ದ ಪಕ್ಷದ ಜತೆ ಮೈತ್ರಿ ಏರ್ಪಟ್ಟಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆಗಲೂ ಅವಕಾಶ ತಪ್ಪಿತು. ಈ ಬಾರಿ ಪ್ರಯತ್ನ ಮಾಡಿದರೂ ಆಗಲಿಲ್ಲ’’ ಎಂದು ಹೇಳಿದ್ದಾರೆ. ಅವರೊಬ್ಬರಲ್ಲ, ಅನೇಕ ಹಿರಿಯ ಕಾಂಗ್ರೆಸ್ ನಾಯಕರಿಗೆ ಈ ಕೊರಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಅವಕಾಶ ವಂಚಿತರು. ವಯಸ್ಸು, ಅನುಭವದಲ್ಲಿ ಪರಮೇಶ್ವರ್ ಅವರಿಗಿಂತಲೂ ಹಿರಿಯರು. ‘‘ಹೈಕಮಾಂಡ್ ಹೇಳಿದರೆ ರಾಜ್ಯಕ್ಕೆ ಮರಳಲು ಸಿದ್ಧ’’ ಎಂದು ಆಪ್ತರ ಬಳಿ ಮನದಾಳದ ಆಸೆ ಹೇಳಿಕೊಂಡಿದ್ದರು. ಬಹಿರಂಗವಾಗಿ ಅವರೆಂದೂ ಬೇಡಿಕೆ ಇಟ್ಟವರಲ್ಲ.

ಇನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿಷಯಕ್ಕೆ ಬರುವುದಾದರೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗಲಿಲ್ಲವೆಂಬ ಅಸಮಾಧಾನ. ಜಾರಕಿಹೊಳಿ ಎರಡು ದೋಣಿಗಳಲ್ಲಿ ಕಾಲಿಡಲು ಯತ್ನಿಸಿದರು. ಪಕ್ಷದ ಅಧ್ಯಕ್ಷ ಸ್ಥಾನದ ಮೇಲೂ ಕಣ್ಣಿತ್ತು. ಸಚಿವ ಸ್ಥಾನವೂ ಬೇಕಿತ್ತು. ಸತೀಶ್ ಚಾಣಾಕ್ಷ ರಾಜಕಾರಣಿ. ಸಿದ್ದರಾಮಯ್ಯ ಕುರ್ಚಿಯಿಂದ ಇಳಿಯಬಹುದೆಂದು ಮೊದಲೇ ಗ್ರಹಿಸಿದ್ದರು. ಅಲ್ಲದೆ, ಸಿದ್ದರಾಮಯ್ಯನವರ ನಾಯಕತ್ವದ ವಿರುದ್ಧ ಸಹಿ ಸಂಗ್ರಹ ಮಾಡಿದ್ದರ ಹಿಂದೆ ಇವರ ಪಾತ್ರವೂ ಇತ್ತೆಂಬುದು ಗುಟ್ಟೇನಲ್ಲ. ಆಮೇಲೆ ಅದನ್ನು ಅವರು ನಿರಾಕರಿಸಿದರು. ಸತೀಶ್ ನಡೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ. ಹರಿಪ್ರಸಾದ್ ಅವರನ್ನು ಬೆಂಬಲಿಸಿದರು. ಜಾರಕಿಹೊಳಿಗೆ ಎರಡು ಹುದ್ದೆ ಕೊಡಲು ಬಯಸದ ಮುಖ್ಯಮಂತ್ರಿ ಶಿವಕುಮಾರ್, ‘ಒಬ್ಬರಿಗೆ ಒಂದೇ ಹುದ್ದೆ’ ಎಂದು ಹೇಳಿದರು. ಬೆಳಗಾವಿಯಿಂದ ಸಚಿವ ಸ್ಥಾನಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಲಕ್ಷ್ಮಣ ಸವದಿ ಹೆಸರು ಕೇಳಿಬಂತು. ಬೆಳಗಾವಿ ತಮ್ಮ ಕೈತಪ್ಪಿ ಹೋಗಬಹುದೆಂದು ಭಾವಿಸಿದ ಸತೀಶ್, ಸಚಿವ ಸ್ಥಾನ ಆಯ್ಕೆಮಾಡಿಕೊಂಡರು. ಒಬಿಸಿ ರಾಜಕಾರಣಿಗಳ ಹಾವು-ಏಣಿ ಆಟದಲ್ಲಿ ಸತೀಶ್‌ಗೆ ಹಿನ್ನಡೆಯಾಗಿದ್ದು ಸತ್ಯ.

ಪರಮೇಶ್ವರ್ ಅವರಿಗಿಂತ ಮೊದಲು, ‘ಬೆಂಗಳೂರು ನಗರಾಭಿವೃದ್ಧಿ ಖಾತೆ’ಗೆ ಪಟ್ಟು ಹಿಡಿದು ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಡಿಕೆಶಿ ಮತ್ತು ವರಿಷ್ಠರ ಮನವೊಲಿಕೆ ಬಳಿಕ ವಾಪಸ್ ಪಡೆದಿದ್ದಾರೆ. ಕೆ.ಎಚ್. ಮುನಿಯಪ್ಪ ಆಹಾರ ಮತ್ತು ನಾಗರಿಕ ಸರಬರಾಜು ಬಿಟ್ಟು ಸಮಾಜ ಕಲ್ಯಾಣ ಖಾತೆಗೆ ಹಟ ಮಾಡಿದ್ದರು. ಅಸಮಾಧಾನ ಈಗ ಕೃಷ್ಣ ಬೈರೇಗೌಡರ ಸರದಿ. ಬಿಡಿಎ, ಬಿಎಂಆರ್‌ಡಿಎ ಪ್ರಾಧಿಕಾರಗಳನ್ನು ಬೆಂಗಳೂರು ನಗರಾಭಿವೃದ್ಧಿಯಿಂದ ಬೇರ್ಪಡಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಮುಂದೆ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೆ.ಜೆ. ಜಾರ್ಜ್ ಅವರದ್ದು ಮತ್ತೊಂದು ಸಮಸ್ಯೆ. ತಮ್ಮ ಗಮನಕ್ಕೆ ತರದೆ ಕೆಪಿಸಿಗೆ ಅಧಿಕಾರಿಯೊಬ್ಬರನ್ನು ನೇಮಿಸಿದ ಮುಖ್ಯಮಂತ್ರಿ ಕ್ರಮಕ್ಕೆ ಅಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ, ಡಿಕೆಶಿ ಅವರಿಗೆ ಆರಂಭದಲ್ಲೇ ಅಡ್ಡಿ-ಆತಂಕ ಎದುರಾಗಿವೆ.

ಶಿವಕುಮಾರ್ ಇನ್ನು ತಮ್ಮ ಸಂಪುಟವನ್ನು ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಿಲ್ಲ. ಅವರೂ ಸೇರಿದಂತೆ 14 ಮಂದಿಯ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಖಾತೆಗಳ ಹಂಚಿಕೆ ಆಗುತ್ತಿದ್ದಂತೆ ಅಸಮಾಧಾನ ಸ್ಫೋಟಗೊಂಡಿದೆ. ಇನ್ನು 20 ಸ್ಥಾನಗಳು ಖಾಲಿ ಇವೆ. ಅವನ್ನೂ ಭರ್ತಿ ಮಾಡಿ, ಖಾತೆಗಳನ್ನು ಹಂಚಿದರೆ ಇನ್ನೆಷ್ಟು ರಾದ್ಧಾಂತ ಆಗುವುದೋ. ಹೊಸದಾದ ಸಂಪುಟದಲ್ಲಿ ಡಾ. ಯತೀಂದ್ರ, ಯು.ಟಿ. ಖಾದರ್ ಅವರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದವರು. ಖಾದರ್ ಅವರೂ ಹೊಸಬರಲ್ಲ. 2013ರ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದವರು.

ಖಾತೆ ಹಂಚಿಕೆ ಮುಖ್ಯಮಂತ್ರಿ ಪರಮಾಧಿಕಾರ. ಯಾರೂ ಪ್ರಶ್ನೆ ಮಾಡಲಾಗದು. ಆದರೆ, ಸಿದ್ದರಾಮಯ್ಯ ಸಂಪುಟದಲ್ಲಿ ಡಿಕೆಶಿ ಹೊಂದಿದ್ದ ಖಾತೆಗಳನ್ನು ಒಡೆದು, ಹಂಚುವುದು ಸರಿಯಲ್ಲ. ಮುಖ್ಯಮಂತ್ರಿಯಾಗುವ ಮೊದಲೇ ರಾಮಲಿಂಗಾರೆಡ್ಡಿಗೆ ಬೆಂಗಳೂರು ಅಭಿವೃದ್ಧಿ ಖಾತೆ ಕೊಡುವುದಾಗಿ ಡಿಕೆಶಿ ಭರವಸೆ ನೀಡಿದ್ದರಂತೆ. ಅಂದರೆ, ಮುಖ್ಯಮಂತ್ರಿ ಆಗುವ ಮುನ್ನವೇ ಶಾಸಕರ ಜತೆ ‘ಒಳ ಒಪ್ಪಂದ’ ಆಗಿತ್ತೇ ಎಂಬ ಸಂಶಯ ಬರುತ್ತದೆ. ಹಾಗೇನಾದರೂ ಒಪ್ಪಂದ ಮಾಡಿಕೊಂಡಿದ್ದರೆ ಈಡೇರಿಸಬೇಕಾದ್ದು ಧರ್ಮ. ಹಿಂದೆ, ನಾಯಕತ್ವ ಕಿತ್ತಾಟದ ಸಮಯದಲ್ಲಿ, ‘‘ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ನಡೆಯುತ್ತಾರೆ’’ ಎಂದು ಡಿಕೆಶಿ ಮತ್ತು ಅವರ ಸೋದರ ಸುರೇಶ್ ಹೇಳಿದ್ದರು. ಅವರಿಗೆ ಕೊಟ್ಟ ಮಾತಿನ ಸೂತ್ರ ಅನ್ವಯಿಸುವುದಾದರೆ ಇವರಿಗೂ ಅನ್ವಯಿಸಬೇಕು.

‘ಕಾಂಗ್ರೆಸ್ ಪಕ್ಷಕ್ಕೆ ಇದು ಯುದ್ಧ ಕಾಲ. ಶಾಂತಿ ಕಾಲವಲ್ಲ’. ನಾಯಕತ್ವದ ಕಿತ್ತಾಟದಲ್ಲೇ ಮೂರು ವರ್ಷ ಕಳೆದುಹೋಯಿತು. ಉಳಿದಿರುವ ಸಮಯದಲ್ಲಿ ‘ನಿದ್ದೆ’ಯಲ್ಲಿರುವ ಸರಕಾರವನ್ನು ಬಡಿದೆಬ್ಬಿಸಿ, ಉತ್ತಮ ಆಡಳಿತ ಕೊಡಬೇಕಾದ ಜವಾಬ್ದಾರಿ ಮುಖ್ಯಮಂತ್ರಿ ಡಿಕೆಶಿ ಅವರ ಮುಂದಿದೆ. ‘ರಾಜ್ಯದಲ್ಲಿ ಮೂರು ವರ್ಷ ಸರಕಾರವೇ ಇರಲಿಲ್ಲ’ ಎಂಬ ಅಭಿಪ್ರಾಯ ಜನಮನದಲ್ಲಿದೆ. ಈ ಅಭಿಪ್ರಾಯ ಬದಲಿಸಿ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಮೂಲಕ ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವುದು ಹುಡುಗಾಟದ ವಿಷಯವಲ್ಲ. ಡಿಕೆಶಿ ಮತ್ತು ಅವರ ಮಂತ್ರಿಗಳು ಹಾಗೂ ಶಾಸಕರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸಾಧ್ಯವಾಗಬಹುದು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಹೊಡೆತಕ್ಕೆ ಒಂದೊಂದೇ ಪಕ್ಷಗಳು ನೆಲ ಕಚ್ಚುತ್ತಿವೆ. ಬಿಹಾರದಲ್ಲಿ ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ ಚೇತರಿಸಿಕೊಳ್ಳಲಾಗದಷ್ಟು ನೆಲ ಕಚ್ಚಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನಾಯಕತ್ವದ ತೃಣಮೂಲ ಕಾಂಗ್ರೆಸ್ ಸೋತು ಸೊರಗಿದೆ. ಆ ಪಕ್ಷದ ಸಂಸದರು, ಶಾಸಕರು, ಪಾಲಿಕೆ ಸದಸ್ಯರು ಬಿಜೆಪಿಗೆ ವಲಸೆ ಹೋಗುತ್ತಿದ್ದಾರೆ. ಟಿಎಂಸಿ ಉಳಿಸಿಕೊಳ್ಳುವುದೇ ದೀದಿಗೆ ಕಷ್ಟವಾಗಿದೆ. ಇದೇ ಪರಿಸ್ಥಿತಿ ಮುಂದೆ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಬಂದರೂ ಅಚ್ಚರಿಯೇನಲ್ಲ. ಹಾಗಾಗದಂತೆ ಈಗಲೇ ಪಕ್ಷದ ನಾಯಕರು ಜಾಗೃತರಾಗಬೇಕಿದೆ.

ರಾಷ್ಟ್ರೀಯ ಜನತಾ ದಳ ಮತ್ತು ತೃಣಮೂಲ ಕಾಂಗ್ರೆಸ್‌ಗೆ ಪೆಡಂಭೂತವಾಗಿ ಕಾಡಿದ್ದು ‘ವಿಶೇಷ ಮತದಾರರ ಪರಿಷ್ಕರಣೆ’ (ಎಸ್‌ಐಆರ್). ಈ ಭೂತವೀಗ ರಾಜ್ಯಕ್ಕೂ ಕಾಲಿಟ್ಟಿದೆ. ಅದಕ್ಕೆ ಹೆದರಿದರೆ ಇಲ್ಲೂ ಅಧಿಕಾರ ಕಳೆದುಕೊಳ್ಳಬಹುದು. ಪ್ರತೀ ಮತದಾರನ ಹೆಸರಿನ ಮೇಲೂ ಕಾಂಗ್ರೆಸ್ ನಿಗಾ ಇಡಬೇಕು. ಯಾವುದಾದರೂ ಹೆಸರು ಪಟ್ಟಿಯಿಂದ ಹೊರ ಹೋದರೆ ಕಾರಣ ಹುಡುಕಬೇಕು. ಮರಳಿ ಸೇರ್ಪಡೆ ಮಾಡಲು ಶ್ರಮಿಸಬೇಕು. ಸಿದ್ದರಾಮಯ್ಯನವರ ಸಂಪುಟದಲ್ಲಿ ದಕ್ಷವಾಗಿ ಕೆಲಸ ಮಾಡಿದವರನ್ನು ಡಿಕೆಶಿಯವರ ಸಂಪುಟದಲ್ಲಿ ಉಳಿಸಿಕೊಂಡು, ಮಿಕ್ಕವರಿಗೆ ಪಕ್ಷ ಸಂಘಟನೆ ಹೊಣೆ ವಹಿಸಿದ್ದರೆ ಮುಖ್ಯಮಂತ್ರಿಗೆ ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಯುವ ನಾಯಕತ್ವ ಕುರಿತು ಮಾತಾಡುತ್ತಿದ್ದಾರೆ. ಯುವಕರಿಗೆ ಅವಕಾಶ ಒದಗಿಸಲು ಒಲವು ತೋರಿದ್ದಾರೆ. ಅದು ಮಾತಿನಲ್ಲೇ ಉಳಿದಿದೆ ವಿನಾ ಜಾರಿಯಾಗುತ್ತಿಲ್ಲ. ಡಿಕೆಶಿ ಸಂಪುಟದಲ್ಲಿ ಯುವಕರು ಒಬ್ಬರೂ ಇಲ್ಲ. ಸದ್ಯ, ಪ್ರಿಯಾಂಕ್ ಖರ್ಗೆ ಹಾಗೂ ಯತೀಂದ್ರ ಅವರೇ ಅತ್ಯಂತ ಕಿರಿಯರು. ಅವರನ್ನು ಬಿಟ್ಟರೆ ಕೃಷ್ಣ ಬೈರೇಗೌಡ ಮತ್ತು ಬೈರತಿ ಸುರೇಶ್ ಮಧ್ಯ ವಯಸ್ಸಿನವರು. ಉಳಿದವರು ಹಿರಿಯರು.

ಹಿಂದಿನ ಸರಕಾರದಲ್ಲಿ ಕಂದಾಯ ಸಚಿವರಾಗಿ ಕೃಷ್ಣ ಬೈರೇಗೌಡ ಜನ ಮೆಚ್ಚುವಂತೆ ಕೆಲಸ ಮಾಡಿದ್ದಾರೆ. ಕಂದಾಯ ಇಲಾಖೆ ಸುಧಾರಣೆ ಮಾಡಿದ್ದಾರೆ. ಇಲಾಖೆ ದಾಖಲೆ ಡಿಜಿಟಲೀಕರಣದ ಕಡೆ ಗಮನ ಕೊಟ್ಟಿದ್ದಾರೆ. ತಹಶೀಲ್ದಾರ್, ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ದಿಢೀರ್ ಭೇಟಿ ಕೊಟ್ಟು ಅಧಿಕಾರಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೂ ಅಧಿಕಾರಿಗಳ ಅಕ್ರಮಗಳಿಗೆ ಕಡಿವಾಣ ಬಿದ್ದಿಲ್ಲ. ಭ್ರಷ್ಟಾಚಾರ ನಿಂತಿಲ್ಲ. ಅಕ್ರಮ-ಭ್ರಷ್ಟಾಚಾರ ಬೆಳಗಾಗುವುದರೊಳಗೆ ನಿಲ್ಲುವುದಿಲ್ಲ. ಇವು ಆಳವಾಗಿ ಬೇರೂರಿರುವ ಪಿಡುಗುಗಳು.

ಕಂದಾಯ, ವಿದ್ಯುತ್, ಪೊಲೀಸ್, ಆರೋಗ್ಯ, ಶಿಕ್ಷಣ, ಆಹಾರ ಮತ್ತು ನಾಗರಿಕ ಪೂರೈಕೆ ಒಳಗೊಂಡು ಕೆಲವು ಇಲಾಖೆಗಳಿಗೆ ಸಾಮಾನ್ಯ ಜನ ಪ್ರತಿನಿತ್ಯ ಎಡತಾಕುತ್ತಾರೆ. ಈ ಇಲಾಖೆಗಳು ಸರಿಯಾಗಿ ಕೆಲಸ ಮಾಡಿದರೆ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಇಲ್ಲದಿದ್ದರೆ ಹಿಡಿಶಾಪ ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವರಾಗಿದ್ದವರ ಪ್ರಗತಿ ಪರಿಶೀಲನೆ ನಡೆಯಬೇಕಿತ್ತು. ಸಚಿವರ ದಕ್ಷತೆಯನ್ನು ಒರೆಗೆ ಹಚ್ಚಬೇಕಿತ್ತು. ಈ ಕೆಲಸವನ್ನು ಸಿದ್ದರಾಮಯ್ಯನವರೇ ಮಾಡಬಹುದಿತ್ತು. ಅದೇಕೊ ಅವರು ತಲೆಕೆಡಿಸಿಕೊಳ್ಳಲಿಲ್ಲ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಮೂರ್ನಾಲ್ಕು ದಿನಗಳ ಬಳಿಕ ಡಿಕೆಶಿ ಪ್ರಮಾಣ ವಚನ ತೆಗೆದುಕೊಂಡರು. ಈ ಅವಧಿಯಲ್ಲಿ ಸಚಿವರ ಕಾರ್ಯವೈಖರಿ ಪರಿಶೀಲಿಸಲು ಅವಕಾಶವಿತ್ತು. ಅದಾಗಿದ್ದರೆ ಹೊಸದೊಂದು ಪ್ರಯೋಗ ನಡೆಸಿದಂತಾಗುತ್ತಿತ್ತು. ಸಚಿವರ ಯೋಗ್ಯತೆಗನುಗುಣವಾಗಿ ಖಾತೆ ಕೊಡಬಹುದಿತ್ತು. ಹಿಂದಿನ ಸರಕಾರದಲ್ಲಿದ್ದ ಕೆಲವು ಸಚಿವರು ಹೇಳುವಂಥ ಕೆಲಸ ಮಾಡಿಲ್ಲ. ಈ ಸಚಿವರು ನಿರ್ವಹಿಸಿರುವ ಇಲಾಖೆಗಳಿಗೆ ಅಂಕಗಳನ್ನು ಕೊಟ್ಟರೆ ಸರಾಸರಿಗಿಂತ ಕಡಿಮೆ ಸಿಗುವುದು ಖಚಿತ.

ಕೆ.ಎಚ್. ಮುನಿಯಪ್ಪ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ- 2 ಸರಕಾರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರು. ಮಮತಾ ಬ್ಯಾನರ್ಜಿ ರೈಲ್ವೆ ಮಂತ್ರಿ. ಮುನಿಯಪ್ಪನವರಿಗೆ ಫೈಲ್‌ಗಳೇ ಬರುತ್ತಿರಲಿಲ್ಲ. ಈ ಕುರಿತು ಮುನಿಯಪ್ಪ ಮನಮೋಹನ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದರು. ಮಮತಾ ‘ಅಗ್ನಿಕನ್ಯೆ’. ದೂರು ಕೊಟ್ಟರೂ ಸಮಸ್ಯೆ ಬಗೆಹರಿಯಲಿಲ್ಲ.

ಕರ್ನಾಟಕದಲ್ಲಿ ಮಾತ್ರ ಖಾತೆ ಹಂಚಿಕೆ ಬಿಕ್ಕಟ್ಟಿಲ್ಲ. ಬೇರೆ ರಾಜ್ಯಗಳಲ್ಲೂ ಇತ್ತು. ಮುಂದೆಯೂ ಇರುತ್ತದೆ. ಈಚೆಗೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರೂ ಖಾತೆ ಹಂಚಿಕೆ ಬಿಕ್ಕಟ್ಟಿಗೆ ಸಿಕ್ಕಿಕೊಂಡಿದ್ದರು. ಈ ತಿಂಗಳ ಒಂದರಂದು 13 ಸಂಪುಟ ದರ್ಜೆ ಸೇರಿದಂತೆ 35 ಸಚಿವರು ಪ್ರಮಾಣ ವಚನ ಸ್ವೀಕರಿಸಿದರೂ ಖಾತೆಗಳ ಹಂಚಿಕೆ ಸಮಸ್ಯೆ ಬಗೆಹರಿಸಲು ಬಿಜೆಪಿ ಹೈಕಮಾಂಡ್ ಮೊರೆ ಹೋಗಬೇಕಾಯಿತು. ಈಗ ಶಿವಕುಮಾರ್ ಅದೇ ಹಾದಿ ತುಳಿದಿದ್ದಾರೆ. ಖಾತೆ ಹಂಚಿಕೆ- ಸಂಪುಟ ವಿಸ್ತರಣೆ ಕುರಿತು ಕಾಂಗ್ರೆಸ್ ವರಿಷ್ಠರ ಜತೆ ಚರ್ಚಿಸಲು ದಿಲ್ಲಿಯ ನಂಬರ್ 24 ಅಕ್ಬರ್ ರಸ್ತೆಗೆ ತೆರಳಿದ್ದಾರೆ. ಕೃಷ್ಣ ಬೈರೇಗೌಡ ಈಗಾಗಲೇ ಅಲ್ಲಿದ್ದಾರೆ. ಶಿವಕುಮಾರ್ ಅಗ್ನಿ ಪರೀಕ್ಷೆಯಲ್ಲಿ ಗೆಲ್ಲುವರೇ? ಭಿನ್ನಮತಕ್ಕೆ ಬ್ರೇಕ್ ಹಾಕುವರೇ ಎಂಬುದನ್ನು ಕಾದು ನೋಡಬೇಕು.

Tags

DK Shivakumar
share
ಹೊನಕೆರೆ ನಂಜುಂಡೇಗೌಡ
ಹೊನಕೆರೆ ನಂಜುಂಡೇಗೌಡ
Next Story
X