ಸರಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಖರೀದಿ :ಇನ್ನೂ ಬಿಡುಗಡೆಯಾಗದ ಅನುದಾನ

ಸಾಂದರ್ಭಿಕ ಚಿತ್ರ | Photo credit : magnific
ಬೆಂಗಳೂರು, ಆ.16: ಸರಕಾರಿ ಶಾಲೆ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಖರೀದಿಗೆ 104 ಕೋಟಿ ರೂ. ಅನುಮೋದನೆಯಾಗಿದೆಯಾದರೂ ಇದುವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಅಲ್ಲದೇ ಟೆಂಡರ್ ನಿಯಮಾವಳಿಗಳ ಪ್ರಕಾರ ಜುಲೈ 31ರೊಳಗೆ ಪೂರೈಸಬೇಕಾಗಿತ್ತು. ಆದರೆ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಶೂ ಮತ್ತು ಸಾಕ್ಸ್ ಸರಬರಾಜಾಗಿಲ್ಲ.
ಐದು ಗ್ಯಾರಂಟಿಗಳಿಗೆ ಹಣ ಹೊಂದಿಸುವುದು ಮತ್ತು ಸರಕಾರದ ಸಾಧನೆಗಳನ್ನು ಪ್ರಚಾರ ಮಾಡಲು ಕೋಟಿ ಕೋಟಿ ರೂ. ಖರ್ಚು ಮಾಡುತ್ತಿದೆ. ಇದಕ್ಕೆ ಅನುದಾನವನ್ನೂ ಸಕಾಲದಲ್ಲಿ ಬಿಡುಗಡೆ ಮಾಡುತ್ತಿದೆ. ಆದರೆ 2026ರ-27ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ 2 ತಿಂಗಳಾದರೂ ಅನುದಾನವನ್ನೇ ಬಿಡುಗಡೆ ಮಾಡಿಲ್ಲ.
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಸರಕಾರಕ್ಕೆ ನೀಡಿರುವ ವರದಿ ಪ್ರಕಾರ 2026 ಆಗಸ್ಟ್ 10ರಲ್ಲಿ 36, 61,267 ಕಾರ್ಯಾದೇಶಗಳನ್ನು ಹೊರಡಿಸಿದೆ. ಈ ಪೈಕಿ 21,92,529 ವಿತರಣೆ ಪೂರ್ಣಗೊಂಡಿದೆ. 12,59,298 ಸಂಖ್ಯೆಯ ಶೂ ಮತ್ತು ಸಾಕ್ಸ್ಗಳು ಇನ್ನು ಸಾಗಣೆ ಹಂತದಲ್ಲಿವೆ. ಉತ್ಪಾದನಾ ಹಂತದಲ್ಲಿರುವ 2,09,440 ಸಂಖ್ಯೆಯ ಶೂ ಮತ್ತು ಸಾಕ್ಸ್ಗಳು 2026ರ ಆಗಸ್ಟ್ 21ರ ಹೊತ್ತಿಗೆ ವಿತರಣೆ ಆಗುವ ನಿರೀಕ್ಷೆಯಲ್ಲಿದೆ.
2026-27ನೇ ಸಾಲಿನ ಶೈಕ್ಷಣಿಕ ಸಾಲಿನ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ರಾಜ್ಯದ ಸರಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ 36,56,613 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಒಂದು ಜೋಡಿ ಶೂಗಳು, ಎರಡು ಜೋಡಿ ಸಾಕ್ಸ್ ಮತ್ತು ಪಾದರಕ್ಷೆಗಳನ್ನು ಒದಗಿಸಲು ತೀರ್ಮಾನಿಸಿತ್ತು. ಈ ಸಂಬಂಧ 36.61 ಲಕ್ಷ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೂಗಳು ಮತ್ತು ಎರಡು ಜೋಡಿ ಸಾಕ್ಸ್, ಪಾದರಕ್ಷೆಗಳನ್ನು ಒದಗಿಸಲು ಕಾರ್ಯಾದೇಶ ನೀಡಿದೆ.
ಅನುದಾನಿತ ಶಾಲೆಗಳಿಗೆ ಉಚಿತ ಶೂ ಮತ್ತು ಸಾಕ್ಸ್ಗಳನ್ನು ಸರಕಾರವು ವಿತರಿಸುತ್ತಿಲ್ಲ. ತಾಲೂಕು ಮತ್ತು ಜಿಲ್ಲಾ ಮಟ್ಟದ ಶಾಲಾ ಮಟ್ಟದ ಸಮಿತಿಗಳನ್ನು ರಚಿಸಿದೆ ಎಂದು ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಿದೆ. ಹಿಂದಿನ ವರ್ಷದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರವು ಸರಕಾರಿ ಶಾಲೆಗಳ ಮಕ್ಕಳಿಗೆ ಶೂ ಸಾಕ್ಸ್ ಖರೀದಿಗೆ ಬಿಡುಗಡೆ ಮಾಡುತ್ತಿರುವ ಅನುದಾನದಲ್ಲಿಯೂ ಕ್ರಮೇಣ ಇಳಿಕೆ ಮಾಡಿತ್ತು. ಈ ಅಂಕಿ ಅಂಶಗಳ ಪ್ರಕಾರ ಹಿಂದಿನ ಬಿಜೆಪಿ ಸರಕಾರವು ಒದಗಿಸಿದ್ದ ಅನುದಾನಕ್ಕಿಂತಲೂ ಕಡಿಮೆ ಅನುದಾನವನ್ನು ನೀಡುತ್ತಿದೆ. ಮತ್ತು 2023-24 ಮತ್ತು 2024-25ನೇ ಸಾಲಿಗೆ ಹೋಲಿಸಿದರೆ 2025-26ರಲ್ಲಿ ಅನುದಾನವನ್ನು ಮತ್ತಷ್ಟು ಕಡಿಮೆ ಮಾಡಿತ್ತು. 2022-23ರಲ್ಲಿ 132 ಕೋಟಿ ರೂ., 2023-24ರಲ್ಲಿ 125 ಕೋಟಿ ರೂ., 2024-25ರಲ್ಲಿ 125 ಕೋಟಿ ರೂ., 2025-26ರಲ್ಲಿ 111.88 ಕೋಟಿ ರೂ.ಅನುದಾನ ಮೀಸಲಿರಿಸಿತ್ತು.
2025-26ರಲ್ಲಿ ಮೀಸಲಿರಿಸಿದ್ದ 111.88 ಕೋಟಿ ರೂ. ಅನುದಾನದ ಪೈಕಿ ಇನ್ನೂ 13.20 ಕೋಟಿ ರೂ.ಬಿಡುಗಡೆ ಮಾಡಲು ಕ್ರಮವಹಿಸುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಸದನಕ್ಕೆ ಮಾಹಿತಿ ಒದಗಿಸಿದ್ದರು.
ಅದೇ ರೀತಿ 2022-23ರಲ್ಲಿ ಮೊದಲನೇ ಜತೆ ಸಮವಸ್ತ್ರ ಖರೀದಿಸಲು 89.72 ಕೋಟಿ ರೂ., ಎರಡನೇ ಜೊತೆಗೆ 97.36 ಕೋಟಿ ರೂ., 2023-24ರಲ್ಲಿ ಮೊದಲ ಜತೆ 75.40 ಕೋಟಿ ರೂ., ಎರಡನೇ ಜತೆ ಖರೀದಿಸಲು 73.66 ಕೋಟಿ ರೂ., 2024-25ರಲ್ಲಿ ಮೊದಲ ಜತೆ ಖರೀದಿಸಲು 84.33 ಕೋಟಿ ರೂ., ಎರಡನೇ ಜತೆ ಖರೀದಿಸಲು 82.33 ಕೋಟಿ ರೂ., 2025-26ರಲ್ಲಿ ಮೊದಲ ಜತೆ ಖರೀದಿಸಲು 84.50 ಕೋಟಿ ರೂ., ಎರಡನೇ ಜತೆ ಖರಿದಿಸಲು 81.50 ಕೋಟಿ ರೂ.ಖರ್ಚಾಗಿತ್ತು.
ಟೆಂಡರ್ ನಿಯಮಾವಳಿಗಳ ಪ್ರಕಾರ ಶಾಲೆಗಳಿಗೆ ಶೂ ಮತ್ತು ಸಾಕ್ಸ್ಗಳನ್ನು ಜುಲೈ 31ರೊಳಗೆ ಸರಬರಾಜು ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಆಗಸ್ಟ್ 15ರವರೆಗೆ ಜಿಲ್ಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಅಳತೆಗಳಿಗೆ ಅನುಗುಣವಾಗಿ ಬದಲಾಯಿಸಿ ಒದಗಿಸುವ ವಿತರಿಸುವ ಸರಬರಾಜು ಪ್ರಕ್ರಿಯೆ ಚಾಲ್ತಿಯಲ್ಲಿರಬೇಕು. 2026ರ ಜುಲೈ 31ರವರೆಗೆ ದಾಖಲಾತಿ ಪ್ರಕ್ರಿಯೆ ಮುಂದುವರಿದಿದೆ. ಮಕ್ಕಳ ಸಂಖ್ಯೆಗೆ ಮತ್ತು ಪಾದದ ಅಳತೆಗೆ ಅನುಗುಣವಾಗಿ ಸರಬರಾಜು ಮಾಡಲಾಗುತ್ತಿದೆ. ಒಂದು ವಾರ ವಿಳಂಬವಾಗುತ್ತಿದೆ. ನಿಗದಿತ ಅವಧಿಯಲ್ಲಿ ಸರಬರಾಜು ಮಾಡದೇ ಇದ್ದಲ್ಲಿ ಕೆಟಿಪಿಪಿ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಆಯಕ್ತ ವಿಕಾಸ್ ಕಿಶೋರ್ ಸುರಳ್ಕರ್ ಅವರು ಸರಕಾರಕ್ಕೆ ವರದಿ ಸಲ್ಲಿಸಿರುವುದು ಗೊತ್ತಾಗಿದೆ.






