Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಿದ್ದರಾಮಯ್ಯ ಮತ್ತು ಜಾತಿಗ್ರಸ್ತ...

ಸಿದ್ದರಾಮಯ್ಯ ಮತ್ತು ಜಾತಿಗ್ರಸ್ತ ರಾಜಕಾರಣ!!

ಎನ್. ರವಿಕುಮಾರ್ ಟೆಲೆಕ್ಸ್ಎನ್. ರವಿಕುಮಾರ್ ಟೆಲೆಕ್ಸ್30 July 2024 12:12 PM IST
share
ಸಿದ್ದರಾಮಯ್ಯ ಮತ್ತು ಜಾತಿಗ್ರಸ್ತ ರಾಜಕಾರಣ!!
ಹಿಂದೆ ಮುಖ್ಯಮಂತ್ರಿಗಳ ಸ್ಥಾನದಲ್ಲಿದ್ದವರು ತಮ್ಮ ಮೇಲೆ ಬಂದ ಗುರುತರ ಆರೋಪಗಳಿಂದ ಬಚಾವ್ ಆಗಲು, ಜೈಲುಗಳಿಗೆ ಸೇರಿದಾಗಲೂ ಜಾತಿ ಅಸ್ತ್ರವನ್ನು ಪ್ರಯೋಗಿಸಿರಲಿಲ್ಲವೆ? ಅವರವರ ಮಠ-ಮಾನ್ಯಗಳು, ಜಾತಿ ಸಂಘಟನೆಗಳು ತಮ್ಮ ಸ್ಥಾನ-ಮಾನಗಳ ಘನತೆಯನ್ನು ಮರೆತು ಬೀದಿಗಿಳಿದು ಬೆಂಬಲಿಸಿದ್ದು ಯಾಕಾಗಿ ಅನ್ನುವುದನ್ನು ಸಿದ್ದರಾಮಯ್ಯ ಅವರು ಜಾತಿ ಅಸ್ತ್ರ ಬಳಸಿ ಪಾರಾಗಲು ಯತ್ನಿಸುತ್ತಿದ್ದಾರೆ ಎಂದು ಬೊಬ್ಬಿಡುತ್ತಿರುವ ಜಾತಿಗ್ರಸ್ತರಿಗೆ ಮರೆತು ಹೋಗಿದೆಯೇ?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇನ್ನಿಲ್ಲದಂತೆ ಬಾಧಿಸುತ್ತಿರುವುದಂತೂ ಸ್ಪಷ್ಟವಾಗಿದೆ.

ವಿಪಕ್ಷಗಳು ಆರೋಪಿಸುತ್ತಿರುವಂತೆ ಈ ಅಕ್ರಮಗಳ ಕುರಿತಾಗಿ ಸಿದ್ದರಾಮಯ್ಯ ತನಿಖೆಗೆ ಆದೇಶಿಸಿದ್ದಾರೆ ಮತ್ತು ತನಿಖೆ ನಡೆಯುತ್ತಿದೆ ಕೂಡ. ಈ ಪ್ರಕರಣಗಳಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇದೆಯೋ? ಇಲ್ಲವೋ? ಎಂಬುದು ತನಿಖೆಯಿಂದ ಹೊರಬರಬೇಕು. ಆದರೆ ಅದಕ್ಕೂ ಮುಂಚೆ ಸಿದ್ದರಾಮಯ್ಯ ಅವರನ್ನು ಮಾನಸಿಕವಾಗಿ ನಲುಗಿಸುವ, ನೈತಿಕವಾಗಿ ಅವರ ಜಂಘಾಬಲ ಕುಗ್ಗಿಸುವ, ಕಳಂಕ ರಹಿತ ಅವರ ಅರ್ಧ ಶತಮಾನದ ರಾಜಕೀಯ ಜೀವನವನ್ನು ರಾಡಿಗೊಳಿಸಿ ಬೀಳ್ಕೊಡುವ ಹುನ್ನಾರವೊಂದು ನಡೆಯುತ್ತಿರುವುದಂತೂ ಸ್ಪಷ್ಟವಾಗಿ ಕಾಣುತ್ತದೆ.

ಈ ಹುನ್ನಾರದಲ್ಲಿ ವಿಪಕ್ಷಗಳಷ್ಟೆ ಅಲ್ಲದೆ ಕಾಂಗ್ರೆಸ್‌ನಲ್ಲಿರುವ ಸಿದ್ದರಾಮಯ್ಯ ನವರ ಹಿತಶತ್ರುಗಳ ಒತ್ತಾಸೆಗಳು ಸೇರಿರುವುದನ್ನು ಅಲ್ಲಗೆಳೆಯಲಾಗದು.

ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ತಮ್ಮ ಕುಟುಂಬದ ಮೇಲೆ ಕೇಳಿಬಂದಿರುವ ಆರೋಪಕ್ಕೆ ಎದುರಾಗಿ ಸುದೀರ್ಘ ಸ್ಪಷ್ಟನೆ ಕೊಡುವ ಸಂದಿಗ್ಧ ಸ್ಥಿತಿಯನ್ನು ಎದುರಿಸುವಂತಾಗಿದೆ. ಸದನದಲ್ಲಿ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಸಹಿತ ಉತ್ತರ ಕೊಟ್ಟರೂ, ಪ್ರತ್ಯೇಕವಾಗಿ ಪತ್ರಿಕಾಗೋಷ್ಠಿ ನಡೆಸಿ ಇಡೀ ರಾಜ್ಯದ ಜನತೆಗೆ ವಿವರಿಸುವ ಮೂಲಕ ಉತ್ತದಾಯಿತ್ವದ ಹೊಣೆಗಾರಿಕೆ ಪ್ರದರ್ಶಿಸಿದರೇನೋ ಸರಿ. ಈ ದಿನಗಳು ಮಾತ್ರ ಅವರ ರಾಜಕೀಯ ಜೀವನದ ಪಾಲಿನ ಅತ್ಯಂತ ಕಠಿಣ ಮತ್ತು ನೋವಿನದ್ದಾಗಿದೆ ಎನಿಸುತ್ತದೆ.

ಸಿದ್ದರಾಮಯ್ಯ ಅವರು ಏನೇ ಸ್ಪಷ್ಟೀಕರಣ ಕೊಡಲಿ,

ಮುಡಾದಲ್ಲಿ ಅಕ್ರಮ ನಡೆದಿರುವುದು ನಿಷ್ಪಕ್ಷವಾಗಿ ತನಿಖೆಯಿಂದ ಬಯಲಾಗಬೇಕು. ತಪ್ಪಿತಸ್ಥರು ಯಾರೇ ಇದ್ದರೂ ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ.

ಸಿದ್ದರಾಮಯ್ಯ ಅವರ ಮೇಲೆ ಎಸೆಯುತ್ತಿರುವ ‘ಆರೋಪ’ಗಳನ್ನು ಸರಕಾರಕ್ಕೆ ಎಸಗಿದ ಆರ್ಥಿಕ ನಷ್ಟ ಮತ್ತು ಅಧಿಕಾರ ದುರುಪಯೋಗದ ‘ಅಕ್ರಮ’, ‘ಹಗರಣ’ ಎಂಬ ವ್ಯಾಪ್ತಿಯಲ್ಲಿ ನೋಡುವುದು ಒಂದು ಮಗ್ಗುಲಷ್ಟೆ. ಇದರಾಚೆಗೆ ರಾಜಕೀಯವಾಗಿ, ಸಾಮಾಜಿಕವಾಗಿ ಸಿದ್ದರಾಮಯ್ಯ ಅವರ ವಿರುದ್ಧ ನಡೆಯುತ್ತಿರುವ ಮಸಲತ್ತುಗಳನ್ನು ನೋಡಿದರೆ ಹಿಂದುಳಿದ ವರ್ಗಕ್ಕೆ ಸೇರಿದ ತಾನು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದನ್ನು ಸಹಿಸದೆ ತಮ್ಮ ಮೇಲೆ ಆರೋಪಗಳಲ್ಲಿ ನಿರತವಾಗಿವೆ ಎಂದು ಸ್ವತಃ ಸಿದ್ದರಾಮಯ್ಯನವರೇ ತೋಡಿಕೊಂಡ ನೋವು ಪರಂಪರಾಗತವಾಗಿ ಅನಾಥ ಜಾತಿಗಳ ವಿರುದ್ಧ ನಡೆಯುತ್ತಿರುವ ಜಾತಿವಾದದ ಪಿತೂರಿಗಳ ಕಡೆಗೆ ಬೆರಳು ತೋರಿಸಿದಂತಿದೆ.

ಇಂತಹ ಅಭಿಪ್ರಾಯ ಸಿದ್ದರಾಮಯ್ಯ ಅವರದ್ದಾಗಿದ್ದರೆ ಅದು ಸುಳ್ಳೇನಲ್ಲ. ಸಿದ್ದರಾಮಯ್ಯ ದೇವರಾಜ ಅರಸು ಅವರ ನಂತರ ಬಹಿರಂಗವಾಗಿ ಅಹಿಂದ ರಾಜಕಾರಣವನ್ನು ದಿಟ್ಟವಾಗಿ ಪ್ರತಿಪಾದಿಸಿದವರು. ಜೆಡಿಎಸ್ ತೊರೆದು ಹೊರಬಂದ ಸಿದ್ದರಾಮಯ್ಯ ಬಲಾಢ್ಯ ಜಾತಿಗಳ ಪಾಲಿಗೆ ಖಳನಾಯಕನಂತೆಯೂ ಬಹುಜನ ರಾಜಕಾರಣಕ್ಕೆ ಸಂದರ್ಭವೇ ಒದಗಿಸಿದ ಜನನಾಯಕನಂತೆಯೇ ಕಂಡಿದ್ದರೆ ಅತಿಶಯೋಕ್ತಿ ಏನಿಲ್ಲ.

ಕಾಂಗ್ರೆಸ್ ಸೇರಿ 2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ತಾನು ಅಹಿಂದ ಪರ ಎಂದು ಸ್ಪಷ್ಟ ನಿಲುವು ಪ್ರತಿಪಾದಿಸಿದರು. ಜನಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆಯ ಮೂಲಕ ಅವರವರ ಪಾಲಿನ ಸಾಮಾಜಿಕ ನ್ಯಾಯದ ತುತ್ತು ಹಂಚಲು ಯೋಜಿಸಿದರು. ಇದು ಉಳ್ಳವರ, ಬಲಾಢ್ಯರ ಕಣ್ಣು ಕೆಂಪಾಗಿಸಿತು. ಅದಕ್ಕೆ ಎಲ್ಲಾ ಅಡೆತಡೆಗಳನ್ನು ಒಡ್ಡಿದರು.

ಸಮಾಜದ ಅಂಚಿನ ಸಮುದಾಯಗಳಿಗೆ ‘ನಾನಿದ್ದೇನೆ’, ‘ಸರಕಾರ’ವಿದೆ ಎಂಬ ಭರವಸೆ ಮೂಡಿಸಿದ್ದರು. ಮೇಲ್ಜಾತಿಗಳು, ಬಲಾಢ್ಯ ಜಾತಿಗಳು ಬಹಿರಂಗವಾಗಿ ಜಾತಿ ಹೆಸರಲ್ಲಿ ರಾಜಕಾರಣ ಮಾಡುವಾಗ ಸಿದ್ದರಾಮಯ್ಯ ದಲಿತರು, ದಮನಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಬದುಕನ್ನು ಸದೃಢಗೊಳಿಸುವ ಯೋಜನೆಗಳಿಂದ ಒಗ್ಗೂಡಿಸಿ ರಾಜಕೀಯ ಶಕ್ತಿಯನ್ನಾಗಿ ರೂಪಿಸಿಕೊಳ್ಳುವುದರಲ್ಲಿ ತಪ್ಪೇನಿದೆ? ಎಲ್ಲಾ ಕಾಲಕ್ಕೂ ಈ ಸಮುದಾಯಗಳನ್ನು ವಸಾಹತು ಗುಂಪುಗಳನ್ನಾಗಿ ವಿಭಜಿಸಿಯೇ ಅಧಿಕಾರ ಹಿಡಿಯುತ್ತಿರುವ ಜಾತಿಕೋರರಿಗೆ ಸಿದ್ದರಾಮಯ್ಯ ದುಃಸ್ವಪ್ನದಂತೆಯೂ...ಅಡ್ಡಗೋಡೆಯಂತೆಯೂ ಕಂಡಿದ್ದರೆ ಅದು ಸಹಜ.

ಅದರಲ್ಲೂ ಸಿದ್ದರಾಮಯ್ಯ ಎರಡನೇ ಬಾರಿ ಈ ರಾಜ್ಯದ ಮುಖ್ಯಮಂತ್ರಿ ಯಾಗಿದ್ದಂತೂ ಅವರ ಸೈದ್ಧಾಂತಿಕ ಮತ್ತು ರಾಜಕೀಯ ಎದುರಾಳಿಗಳ ತೀವ್ರ ಅಸಹನೆಗೆ ಕಾರಣವಾಗಿದೆ.

ಸಿದ್ದರಾಮಯ್ಯ ಅವರು ಜಾತಿಯ ಗುರಾಣಿ ಬಳಸಿಕೊಂಡು ತಮ್ಮ ಮೇಲಿನ ಆರೋಪಗಳಿಂದ ಬಚಾವ್ ಆಗುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಲೇವಡಿಗಳಿಗೇನು ಕಡಿಮೆ ಇಲ್ಲ. ಹಾಗಂತ ಸಿದ್ದರಾಮಯ್ಯ ಮಾತ್ರವೇ ಜಾತಿ ಬಳಸಿಕೊಂಡು ಮುಖ ಉಳಿಸಿಕೊಳ್ಳಲು ಹೊರಟಿದ್ದಾರೆಯೇ?

ಹಿಂದೆ ಮುಖ್ಯಮಂತ್ರಿಗಳ ಸ್ಥಾನದಲ್ಲಿದ್ದವರು ತಮ್ಮ ಮೇಲೆ ಬಂದ ಗುರುತರ ಆರೋಪಗಳಿಂದ ಬಚಾವ್ ಆಗಲು, ಜೈಲುಗಳಿಗೆ ಸೇರಿದಾಗಲೂ ಜಾತಿ ಅಸ್ತ್ರವನ್ನು ಪ್ರಯೋಗಿಸಿರಲಿಲ್ಲವೆ? ಅವರವರ ಮಠ-ಮಾನ್ಯಗಳು, ಜಾತಿ ಸಂಘಟನೆಗಳು ತಮ್ಮ ಸ್ಥಾನ-ಮಾನಗಳ ಘನತೆಯನ್ನು ಮರೆತು ಬೀದಿಗಿಳಿದು ಬೆಂಬಲಿಸಿದ್ದು ಯಾಕಾಗಿ ಅನ್ನುವುದನ್ನು ಸಿದ್ದರಾಮಯ್ಯ ಅವರು ಜಾತಿ ಅಸ್ತ್ರ ಬಳಸಿ ಪಾರಾಗಲು ಯತ್ನಿಸುತ್ತಿದ್ದಾರೆ ಎಂದು ಬೊಬ್ಬಿಡುತ್ತಿರುವ ಜಾತಿಗ್ರಸ್ತರಿಗೆ ಮರೆತು ಹೋಗಿದೆಯೇ?

ಮೊನ್ನೆ ಮೊನ್ನೆ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ದೇಶದ ಪ್ರಧಾನಿ ‘‘ಹಿಂದುಳಿದ ವರ್ಗದವನೆಂಬ ಕಾರಣಕ್ಕೆ ನನ್ನ ಮೇಲೆ ವಿಪಕ್ಷಗಳು ದಾಳಿ ನಡೆಸುತ್ತಿವೆ’’ ಎಂದದ್ದು ಅಧಿಕಾರ ಉಳಿಸಿಕೊಳ್ಳಲು ಜಾತಿಯ ಗುರಾಣಿ ಹಿಡಿದದ್ದು ಎಂದೆನಿಸಲಿಲ್ಲವೆ?

ಈ ದೇಶವನ್ನು 10 ವರ್ಷ ಆಳಿದ ಪ್ರಧಾನ ಮಂತ್ರಿಯೊಬ್ಬರು ತನ್ನ ಕೆಲಸಗಳ ಮೂಲಕ ಮತ ಕೇಳದೆ ತನ್ನ ಜಾತಿ ಮುಂದಿಟ್ಟು ಮತ ಯಾಚಿಸಿದ್ದು ಜಾತ್ಯತೀತ ಮನೋಭಾವದ ಪುಣ್ಯದ ಕೆಲಸ, ‘ಬಾರಾ ಖೂನ್ ಮಾಫಿ’ ಎನ್ನುವುದೇ ಆದರೆ ಸಿದ್ದರಾಮಯ್ಯನವರು ಜಾತಿ ಬಳಸಿದ್ದು ಹೇಗೆ ತಪ್ಪಾಗುತ್ತದೆ?!

2006ರಿಂದ ಇದುವರೆಗೂ ಯಾರೆಲ್ಲಾ ರಾಜಕಾರಣಿಗಳ ಮೇಲೆ ಬಂದ ಆರೋಪಗಳನ್ನು ನೆನಪು ಮಾಡಿಕೊಂಡರೆ ಬಲಾಢ್ಯ ಜಾತಿಗಳಿಗೆ ಸೇರಿದವರದ್ದೇ ಸಿಂಹ ಪಾಲು. ಗಣಿ ಕಪ್ಪ, ಡಿ ನೋಟಿಫಿಕೇಶನ್, ಮುಖ್ಯಮಂತ್ರಿಗಳ ಸಹಿಯನ್ನೆ ಪೋರ್ಜರಿ ಮಾಡಿದವರು, ಹೌಸಿಂಗ್ ಹಗರಣ, ಅಕ್ರಮ ಸಂಪಾದನೆ ಹೀಗೆ.....ಹತ್ತು ಹಲವು ಹಗರಣ, ಆರೋಪಗಳಿಗೆ ತುತ್ತಾದವರು, ಜೈಲಿಗೆ ಹೋಗಿ ಬಂದವರೂ ಜಾತಿಬಲದ ಕಾರಣಕ್ಕಾಗಿ ಪರಿಶುದ್ಧರಾಗಿ ಮತ್ತೆ ರಾಜ್ಯವಾಳಿದರಲ್ಲ.!!! ಕಳಂಕಗಳಿಂದ ಮುಕ್ತರಾಗುವುದು ಈ ಸಮಾಜ ಬಲಾಢ್ಯ ಜಾತಿಗಳಿಗೆ ದಕ್ಕಿದ ‘ಸಾಮಾಜಿಕ ಆದ್ಯತೆ’ , ’ರಾಜಕೀಯ ಮೌಲ್ಯ’ ಎಂದಾಗಿದ್ದರೆೆ ಇಂತಹ ಆದ್ಯತೆಯಾಗಲಿ, ಮೌಲ್ಯವಾಗಲಿ ಈ ಸಮಾಜದ ತಬ್ಬಲಿ ಜಾತಿಗಳ ಪಾಲಿಗಿಲ್ಲ ಎನ್ನುವುದಕ್ಕೆ ಚರಿತ್ರೆಯುದ್ದಕ್ಕೂ ಸಾಕಷ್ಟು ಪುರಾವೆಗಳು ಸಿಗುತ್ತವೆ.

ವಾಜಪೇಯಿ ನೇತೃತ್ವದ ಎನ್‌ಡಿಎ ಆಡಳಿತದ ದಿನಗಳು. 2000- 2001ರವರೆಗೆ ಬಂಗಾರು ಲಕ್ಷ್ಮಣ ಎಂಬ ದಲಿತ ನಾಯಕರೋರ್ವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು. ಲಂಚಪ್ರಕರಣದಲ್ಲಿ ಅವರನ್ನು ಪದಚ್ಯುತಿಗೊಳಿಸಲಾಯಿತು. ಈ ಪ್ರಕರಣದಲ್ಲಿ 2012ರಲ್ಲಿ ಅವರಿಗೆ ಜೈಲು ಶಿಕ್ಷೆ ಕೂಡ ಆಯಿತು. ದಲಿತನೋರ್ವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದದ್ದು ಸಹಿಸಲಾರದ ಪರಿವಾರದ ಹಿತಾಸಕ್ತಿಗಳೇ ಬಂಗಾರು ಲಕ್ಷ್ಮಣ ಅವರನ್ನು ಲಂಚ ಪ್ರಕರಣಕ್ಕೆ ಸಿಲುಕಿಸಿ ಅಧಿಕಾರ ಹೀನಗೊಳಿಸಿದವು ಎಂಬ ವಿಶ್ಲೇಷಣೆಗಳು ಆಗ ಕೇಳಿಬಂದವು. ಈ ವಿಶ್ಲೇಷಣೆಗಳಿಗೆ ಪ್ರಚಾರ ಸಿಗಲಿಲ್ಲ. ದಲಿತರಿಗೆ ಉನ್ನತ ವಾದ ಹುದ್ದೆಯನ್ನು ನಿಭಾಯಿಸುವ ಸಾಮರ್ಥ್ಯವಿಲ್ಲ ಎಂಬ ಅಭಿಪ್ರಾಯವನ್ನೇ ನಂಬಿಸುತ್ತ ಬರಲಾಯಿತು.

ಕರ್ನಾಟಕದ ಮಟ್ಟಿಗೆ ಒಕ್ಕಲಿಗ, ಲಿಂಗಾಯತ ಜಾತಿಗಳ ಆಡುಂಬೊಲದಂತಿದ್ದ ರಾಜಕಾರಣದ ಮಾದರಿಯನ್ನು ಕುಟ್ಟಿ ಕೆಡವಿದವರು ದೇವರಾಜ ಅರಸು. ಅತ್ಯಂತ ಹಿಂದುಳಿದ ವರ್ಗದಿಂದ ಬಂದ ಅರಸು ಬಲಾಢ್ಯ ಜಾತಿಗಳೇತರ ಸಮುದಾಯಗಳಲ್ಲಿ ರಾಜಕೀಯ ಭರವಸೆ ಮೂಡಿಸಿದವರು. ಸಾಮಾಜಿಕ ನ್ಯಾಯವನ್ನು ದಿಟ್ಟವಾಗಿ ನೆಲೆಗೊಳಿಸಿದವರು. ಅವರ ನಿರ್ಗಮನದ ಕೀರ್ತಿ ಜಾತಿಕೋರರಿಗೆ ಸಲ್ಲುತ್ತದೆ.

ಎಸ್. ಬಂಗಾರಪ್ಪ ಅಹಿಂದ ನಾಯಕತ್ವಕ್ಕೆ ಒತ್ತು ಕೊಟ್ಟವರು. ವೀರೇಂದ್ರ ಪಾಟೀಲ್ ಅವರ ಪದಚ್ಯುತಿಯ ಫಲವಾಗಿ ಸಿಎಂ ಆದ ಬಂಗಾರಪ್ಪ ಸೇಡಿಗೆ ತುತ್ತಾಗಬೇಕಾಯಿತು. ಕೇವಲ 5.7 ಕೋಟಿ ರೂ. ಮೊತ್ತದ ಕ್ಲಾಸಿಕ್ ಕಂಪ್ಯೂಟರ್ ಪ್ರಕರಣ ಅವರ ಜನಪರವಾದ ದಿಟ್ಟ ಹೋರಾಟ ಮಸುಕುಗೊಳಿಸಿತು.(ಅವರು ಕೊನೆಯುಸಿರೆಳೆಯವ ದಿನಗಳು ಹತ್ತಿರವಿದ್ದಾಗ ಆರೋಪಮುಕ್ತರಾದರು.) ಕಾವೇರಿ ವಿವಾದದ ಹೆಸರಲ್ಲಿ ಬಂಗಾರಪ್ಪ ಅವರನ್ನು ಅಧಿಕಾರ ಹೀನಗೊಳಿಸಿದ್ದರ ಹಿಂದೆ ಜಾತಿಯೂ ಕೆಲಸ ಮಾಡಿತ್ತು.

ಆನಂತರದಲ್ಲಿ ಅತಿ ಹಿಂದುಳಿದವರ್ಗದ ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಯಾಗಿದ್ದರೂ ಅವರನ್ನೂ ಜಾತಿಗ್ರಸ್ತ ಸಮಾಜ ಅವರೋರ್ವ ಸುಳ್ಳುಗಾರ ಎಂಬ ಹಣೆಪಟ್ಟಿಕಟ್ಟಿತು.

ಧರಂ ಸಿಂಗ್ ಎಂಬ ಅತಿಸಣ್ಣ ಸಮುದಾಯದ ನಾಯಕನನ್ನು ಕಾರಣವೇ ಕೊಡದೆ ರಾತ್ರೋರಾತ್ರಿ ಸಿಎಂ ಕುರ್ಚಿಯಿಂದ ಕೆಳಗಿಳಿಸಲಾಯಿತು.

ಬಸವಲಿಂಗಪ್ಪ ಎಂಬ ತಾಯಿಗುಣದ ನಿಜನಾಯಕನನ್ನು ಬಲಿತೆಗೆದು ಕೊಂಡದ್ದು ಯಾರು?

ಈ ನಾಯಕರುಗಳಿಗಾದ ಅನ್ಯಾಯದ ಬಗ್ಗೆ ಒಟ್ಟಾರೆ ಅಹಿಂದ ಸಮುದಾಯಗಳಿರಲಿ, ಅವರವರ ಜಾತಿಗಳಾದರೂ ಪ್ರತಿಭಟನೆ ಮಾಡುವುದಿರಲಿ, ದನಿ ಎತ್ತಿದರೂ ಅದೊಂದು ಜಾತಿವಾದದ ಪರಮ ಅಪರಾಧ, ಜಾತ್ಯತೀತ ಪರಿಕಲ್ಪನೆಗೆ ಎಸಗಿದ ಅಪಚಾರ ಎಂಬ ಉಪದೇಶಗಳು ಮೊಳಗುತ್ತವೆ.

ಬಲಾಢ್ಯ ಜಾತಿಗಳ ನಾಯಕರುಗಳನ್ನು ಶ್ರೇಷ್ಠ ಮುತ್ಸದ್ದಿ, ಮಣ್ಣಿನಮಗ, ನಂಬರ್ ವನ್ ಸಿಎಂ, ಅಭಿವೃದ್ಧಿ ಹರಿಕಾರ..ಹೀಗೆ ಏನೆಲ್ಲಾ ಬಿರುದು ಸಮ್ಮಾನಗಳಿಂದ ನೆಲೆಗೊಳಿಸುವ ಜಾತಿಸಮಾಜ ತಬ್ಬಲಿ ಜಾತಿಗಳು ಮಾತ್ರ ಭ್ರಷ್ಟರು, ಅಸಮರ್ಥರು ಎಂದು ನಿರೂಪಿಸುವ ಸಂಚಿಗೆ ಕೊನೆ ಎಂಬುದಿಲ್ಲ.

ಕೋಮುವಾದ ಮತ್ತು ಜಾತಿವಾದಕ್ಕೆ ಪ್ರಬಲ ಎದುರಾಳಿಯಾಗಿ ನಿಂತಿರುವ ಸಿದ್ದರಾಮಯ್ಯ ಅವರನ್ನು ತಮ್ಮ ರಾಜಕೀಯ ಹಾದಿಯಿಂದ ಸರಿಸುವುದು ಸುಲಭದ ಕೆಲಸವಲ್ಲ ಎಂದು ಗೊತ್ತಿದ್ದೇ ಕೋಮುವಾದಿಗಳು - ಜಾತಿವಾದಿಗಳು ಮುಡಾ, ವಾಲ್ಮೀಕಿ ಪ್ರಕರಣಗಳನ್ನು ಮುಂದಿಟ್ಟುಕೊಂಡು ಅವರ ರಾಜಕೀಯವನ್ನು ಮುಗಿಸಿಹಾಕಲು ತಹತಹಿಸುತ್ತಿವೆ.

ಈ ಮೂಲಕ ಮತ್ತೆ ಮತ್ತೆ ರಾಜ್ಯದ ಅಹಿಂದ ರಾಜಕಾರಣವನ್ನೇ ಹತ್ತಿಕ್ಕುವ ಸಂಘಟಿತ ಸಾಮಾಜಿಕ ಅಪರಾಧ ಎಸಗುವ ಕ್ರೌರ್ಯ ಎಸಗಲಾಗುತ್ತಿದೆ.

ಏಕೆಂದರೆ ದೇವರಾಜ ಅರಸು ಅವರೇ ಹೇಳಿದಂತೆ ಹಿಂದುಳಿದ ಜಾತಿಗಳು ಹೆಚ್ಚೆಂದರೆ ಪ್ರಯೋಜನಗಳನ್ನು ಪಡೆಯುವುದಕ್ಕಾಗಿ ಒಂದು ವರ್ಗವಾಗಿ ಒಗ್ಗೂಡಿ ಮುಂದೆ ಬರುತ್ತವೆಯೇ ಹೊರತು, ತಮ್ಮ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದಂತಹವರಿಗೆ ನಿರಂತರ ರಾಜಕೀಯ ಬೆಂಬಲ ನೀಡುವುದಕ್ಕೆ ಒಂದು ಜಾತಿಯಾಗಿ ಒಗ್ಗೂಡಿ ನಿಲ್ಲುವುದಿಲ್ಲ.

ಸಿದ್ದರಾಮಯ್ಯ ಅವರ ವಿಷಯದಲ್ಲೂ ಈ ಮಾತು ನಿಜವಾದರೆ ಬಹುಜನ ರಾಜಕಾರಣ ಅನ್ನುವುದಕ್ಕೆ ಇನ್ನೆಂದೂ ಭವಿಷ್ಯ ಇರಲಾರದು.

share
ಎನ್. ರವಿಕುಮಾರ್ ಟೆಲೆಕ್ಸ್
ಎನ್. ರವಿಕುಮಾರ್ ಟೆಲೆಕ್ಸ್
Next Story
X