ಅರಸು ದಾಖಲೆ ಮುರಿದ ಸಿದ್ದರಾಮಯ್ಯ: ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಸಂಭ್ರಮವಿಲ್ಲ..!

ಬೆಂಗಳೂರು : ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಸಿಎಂ ಸಿದ್ದರಾಮಯ್ಯ ಮುರಿಯುವ ಮೂಲಕ ದೀರ್ಘಾವಧಿ ಸರಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಆದರೆ, ಈ ಮಹತ್ವದ ಸಾಧನೆಗೂ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಯಾವುದೇ ರೀತಿಯ ಸಂಭ್ರಮ ಕಂಡುಬಂದಿಲ್ಲ.
ಕಾಂಗ್ರೆಸ್ ಪಕ್ಷದ ಕಚೇರಿಗಳಲ್ಲಿ ಕನಿಷ್ಠ ಒಂದು ಬ್ಯಾನರ್ ಕೂಡ ಕಾಣಿಸಲಿಲ್ಲ. ಸಿಹಿ ಹಂಚುವ ಮೂಲಕ ಸಂತಸ ಹಂಚಿಕೊಳ್ಳುವ ಪ್ರಯತ್ನವೂ ನಡೆದಿಲ್ಲ. ಇದಕ್ಕೂ ಮುನ್ನ ಅತಿಹೆಚ್ಚು 16 ಬಾರಿ ಆಯವ್ಯಯ (ಬಜೆಟ್) ಮಂಡಿಸಿದ ದಾಖಲೆಯನ್ನೂ ಸಿದ್ದರಾಮಯ್ಯ ಹೊಂದಿದ್ದು, 2026–27ನೇ ಸಾಲಿನಲ್ಲಿ ತಮ್ಮ 17ನೇ ಬಜೆಟ್ ಮಂಡಿಸುವ ನಿರೀಕ್ಷೆಯಲ್ಲಿದ್ದಾರೆ.
ಅರಸು ದಾಖಲೆ ಸರಿಗಟ್ಟಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯರ ಅಭಿಮಾನಿಗಳು, ಬೆಂಬಲಿಗರು ಹಾಗೂ ಹಿತೈಷಿಗಳು ರಾಜ್ಯದ ವಿವಿಧೆಡೆ ಸಾಲು–ಸಾಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಭ್ರಮಿಸಿದ್ದಾರೆ. ನೆಲಮಂಗಲದಲ್ಲಿ 10 ಸಾವಿರ ಜನರಿಗೆ ನಾಟಿಕೋಳಿ ಊಟವನ್ನು ಅಭಿಮಾನಿಗಳು ಆಯೋಜಿಸಿದ್ದರು. ಸಿದ್ದರಾಮಯ್ಯರ ತವರು ಜಿಲ್ಲೆ ಮೈಸೂರು, ಕಲಬುರಗಿ, ವಿಜಯಪುರ, ಹಾಸನ ಸೇರಿದಂತೆ ಹಲವೆಡೆ ರಕ್ತದಾನ ಶಿಬಿರಗಳು ನಡೆದವು. ಆದರೆ, ಪಕ್ಷದ ಮಟ್ಟದಲ್ಲಿ ಯಾವುದೇ ಸಂಭ್ರಮ ಕಂಡುಬರಲಿಲ್ಲ.
ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಉಳಿದುಕೊಂಡಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಗುಂಪು ಘರ್ಷಣೆ ಹಿನ್ನೆಲೆಯಲ್ಲಿ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಹುತೇಕ ಸಚಿವರು ತಮ್ಮ ತಮ್ಮ ಜಿಲ್ಲೆಗಳಲ್ಲಿ ತಂಗಿದ್ದು, ಕೆಪಿಸಿಸಿ ಕಚೇರಿಯಲ್ಲೂ ಸಂಭ್ರಮದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.
ಡಿಕೆಶಿ ಬಣದಲ್ಲಿ ಮೌನ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದ ಡಿಕೆಶಿ ಬೆಂಬಲಿಗರು ಇದೀಗ ಮೌನಕ್ಕೆ ಶರಣಾಗಿದ್ದಾರೆ. ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಅವರು ಜ.6 ಅಥವಾ 9ರಂದು ಡಿ.ಕೆ.ಶಿವಕುಮಾರ್ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವುದು “ನೂರಕ್ಕೆ 200ರಷ್ಟು ಖಚಿತ” ಎಂದು ಹೇಳಿದ್ದರು. ಆದರೆ, ಆ ಹೇಳಿಕೆ ಸುಳ್ಳಾಗಿದ್ದು, ನಾಯಕತ್ವ ಬದಲಾವಣೆಯ ಯಾವುದೇ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ.
ಅಂಬೇಡ್ಕರ್ ಆಶಯಗಳನ್ನು ಪಾಲಿಸುವ ದೊಡ್ಡ ನಾಯಕ
“ನಾಲ್ಕು ದಶಕಗಳ ನನ್ನ ಹಾಗೂ ಸಿದ್ದರಾಮಯ್ಯ ಅವರ ಒಡನಾಟದಲ್ಲಿ ಜನಸೇವೆಯ ವಿಚಾರದಲ್ಲಿ ಅವರು ಪ್ರಾಮಾಣಿಕ ನಾಯಕ ಎಂಬುದು ನನಗೆ ಸ್ಪಷ್ಟವಾಗಿದೆ. ಜನರ ತೆರಿಗೆ ಹಣವನ್ನು ಎಲ್ಲ ಕ್ಷೇತ್ರಗಳಿಗೂ ಪರಿಣಾಮಕಾರಿಯಾಗಿ ಬಳಸಿ, ತಾವೊಬ್ಬ ಸಮರ್ಥ ಆಡಳಿತಗಾರ ಎಂಬುದನ್ನು ಅವರು ಈಗಾಗಲೇ ಸಾಬೀತುಪಡಿಸಿದ್ದಾರೆ.
ರೈತಾಪಿ ಕುಟುಂಬದಿಂದ ಬಂದು ರಾಜಕೀಯದ ಏಳು–ಬೀಳುಗಳನ್ನು ಕಂಡು, ಇಂದು ರಾಜ್ಯದ ಮೇರು ನಾಯಕರ ಸಾಲಿಗೆ ಸೇರ್ಪಡೆಯಾಗಿರುವ ಸಿದ್ದರಾಮಯ್ಯ ಅವರು ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿಯಾಗಿರುವುದು ನನಗೆ ವೈಯಕ್ತಿಕವಾಗಿ ಅತ್ಯಂತ ಸಂತೋಷ ತಂದಿದೆ. ಶೋಷಿತ ವರ್ಗಗಳನ್ನು ಸಂಘಟಿಸುವ ಮೂಲಕವೇ ರಾಜಕೀಯ ಅಧಿಕಾರ ಸಾಧಿಸಬೇಕೆಂಬ ಅಂಬೇಡ್ಕರ್ ಆಶಯಗಳಿಗೆ ಅನುಗುಣವಾಗಿ ಜನಾಧಿಕಾರ ಪಡೆದ ನಾಯಕ ಸಿದ್ದರಾಮಯ್ಯ ಎಂಬುದು ನಿರ್ವಿವಾದ ಸತ್ಯ.”
— ಡಾ. ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ







