ಕಟ್ಟಕಡೆಯವರನ್ನು ಕಡೆಗಣಿಸಿದ್ದೇ ಸಿದ್ದರಾಮಯ್ಯನವರ ಕಲ್ಪನೆಯ ಸಾಮಾಜಿಕ ನ್ಯಾಯ

ಸಿದ್ದರಾಮಯ್ಯ
ಅಲೆಮಾರಿಗಳ ಅಂತ್ಯಕ್ರಿಯೆ ಆಗಿದೆ, ನಿನ್ನೆ ಫ್ರೀಡಂ ಪಾರ್ಕ್ ನಲ್ಲಿ ಅನೇಕ ದಿಕ್ಕುಗಳಿಂದ ಬಂದ ಅಲೆಮಾರಿಗಳು ತಮಗೆ ಒಂದು ಪರ್ಸೆಂಟ್ ಮೀಸಲಾತಿ ನೀಡಬೇಕೆಂದು ಸಮಾವೇಶ ಮಾಡುತ್ತಿರುವಾಗಲೇ ಸರಕಾರ ರೋಸ್ಟರ್ ಅನ್ನು ಜಾರಿ ಮಾಡಿದೆ!
ಇದಕ್ಕೂ ಹಿಂದೆ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಒಳಮೀಸಲಾತಿ ವರದಿಯನ್ನು 18-08-2025ರಂದು ನಡೆದ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ಮಾರ್ಪಡಿಸಿದ ವಿವರವಿರುವ ‘ವಿಷಯ ಹಾಳೆ’ ಸರಕಾರದಿಂದ ಪ್ರಕಟಿಸಲಾಯಿತು. ಇದರಲ್ಲಿ ವಿಷಯ-2 (ಅ)ರಲ್ಲಿ ಪ್ರವರ್ಗ-ಎ ರಲ್ಲಿನ 59 ಜಾತಿಗಳನ್ನು ಪ್ರವರ್ಗ-ಡಿ ರೊಂದಿಗೆ ವಿಲೀನಗೊಳಿಸುವುದು. ಏಕೆಂದರೆ ಪ್ರವರ್ಗ-ಎ ರಲ್ಲಿನ ಸಣ್ಣ ಸಮುದಾಯಕ್ಕೆ ಅವಕಾಶವನ್ನು ಕಲ್ಪಿಸುವ ದೃಷ್ಟಿಯಿಂದ ಈ ರೀತಿ ವಿಲೀನಗೊಳಿಸುವುದು ಎಂದು ವಿವರಿಸಲಾಗಿದೆ. ಇದರ ಅರ್ಥವೇನೆಂದರೆ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿ ಅಸ್ಪಶ್ಯ ಸಮುದಾಯಗಳನ್ನು, ಸ್ಪಶ್ಯರಾದ ಲಂಬಾಣಿ, ಭೋವಿ, ಕೊರಮ, ಕೊರಚರೊಂದಿಗೆ ಸೇರಿಸಿ ‘ನಿಮ್ಮ ಪಾಲನ್ನು ಪಡೆದುಕೊಳ್ಳಿ’ ಎನ್ನುವುದೇ ಆಗಿದೆ. ಅಂದರೆ ಹುಲಿಚಿರತೆಗಳ ಬೋನಿನಲ್ಲಿ ಕುರಿ, ಮೇಕೆಗಳಾದ ನಿಮಗೂ ಆಹಾರ ಇಟ್ಟಿದ್ದೇವೆ, ನೀವೂ ಅವರೊಂದಿಗೆ ಪಾಲು ಪಡೆದುಕೊಳ್ಳಿ ಎಂದರ್ಥ. ಇದು ಕಟ್ಟಕಡೆಯವರಿಗೆ ಸಾಮಾಜಿಕ ನ್ಯಾಯ ನೀಡುವ ಸಿದ್ದರಾಮಯ್ಯನವರ ಸರಕಾರದ ಪರಿಕಲ್ಪನೆ!
ಈಚೆಗೆ ನಡೆದ ದೇವರಾಜ ಅರಸು ಜನ್ಮದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬ್ಯಾಂಕ್ವೆಟ್ ಹಾಲ್ನಲ್ಲಿ ಮಾತನಾಡುತ್ತಾ ಕಟ್ಟ ಕಡೆಯ ವ್ಯಕ್ತಿಗೆ ಸಾಮಾಜಿಕ ನ್ಯಾಯ ನೀಡುವುದೇ ನನ್ನ ಉದ್ದೇಶ ಎಂದು ಅತ್ಯಂತ ಬದ್ಧತೆಯ ಧ್ವನಿಯಲ್ಲಿ ಉಚ್ಚರಿಸಿದಾಗ ಇಡೀ ಸಭಾಂಗಣವೇ ಕರತಾಡನದಲ್ಲಿ ಮುಳುಗಿಹೋಗಿತ್ತು.
ಮೊನ್ನೆಯ ಸದನದಲ್ಲೂ ಸಿದ್ದರಾಮಯ್ಯನವರು ಇದೇ ಮಾತನ್ನು ಮುಂದುವರಿಸಿದಂತೆ ಸಮಾಜದ ಕಟ್ಟಕಡೆಯವರೇ ನನ್ನವರು... ನಾನೆಂದಿಗೂ ಅವರ ಪರ...ಎಂದು ಅತ್ಯಂತ ಭಾವುಕವಾಗಿ ನುಡಿದಾಗಲೂ ಇಡೀ ಸದನವೇ ಸ್ತಬ್ಧವಾಗಿ ನೋಡುತಿತ್ತು! (ಸ್ವಲ್ಪ ಹೆಚ್ಚೂ ಕಡಿಮೆ ಇದೇ ಸಂದರ್ಭದಲ್ಲಿಯೇ ಅಲೆಮಾರಿಗಳಿಗೆ ಮರಣ ಶಾಸನವಾದ ಈ ಕ್ಯಾಬಿನೆಟ್ ನೋಟ್ ಸಿದ್ಧವಾಗುತಿತ್ತು!) ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ಈ ಮಾತನ್ನು ನೂರಾರು ಬಾರಿ ವೇದಿಕೆಗಳ ಮೇಲೆ ಉಚ್ಚರಿಸಿ ನೂರಾರು ಬಾರಿ ಚಪ್ಪಾಳೆ ಗಿಟ್ಟಿಸಿದ್ದಾರೆ! ಆದರೆ ವಾಸ್ತವದಲ್ಲಿ ಕಟ್ಟಕಡೆಯವರನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಿದ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಹೇರಳವಾಗಿವೆ!
ಇಲ್ಲಿ ಕಟ್ಟಕಡೆಯವರೆಂದರೆ ಯಾರು? ನ್ಯಾ.ನಾಗಮೋಹನದಾಸ್ ವರದಿಯಲ್ಲಿ ನೀಡಿರುವ ಅಂಕಿ ಅಂಶಗಳ ಪ್ರಕಾರವೇ ಕಟ್ಟಕಡೆಯವರೆಂದರೆ ಪರಿಶಿಷ್ಟ ಜಾತಿಯಲ್ಲಿಯೇ ಇರುವ, ಈವರೆಗೂ ಯಾವುದೇ ಸರಕಾರಿ ಅನುದಾನ, ಸವಲತ್ತು, ಮೀಸಲಾತಿ ಸೌಲಭ್ಯ ಮುಂತಾದ ಯಾವುದೇ ರೀತಿಯ ಪ್ರಾತಿನಿಧ್ಯವನ್ನೂ ಪಡೆಯದವರು. ಶಿಕ್ಷಣದಿಂದ, ಉದ್ಯೋಗದಿಂದ ವಂಚಿತರಾದವರು.
ಪರಿಶಿಷ್ಟರ ಪಟ್ಟಿಯಲ್ಲಿರುವ ನೂರೊಂದೂ ಜಾತಿಗಳಿಗೂ ಸೇರಿ ಒಟ್ಟು ಶೇ.15ರಷ್ಟು ಮೀಸಲಾತಿಯನ್ನು ನೀಡಲಾಗಿತ್ತು. ಅದರಲ್ಲಿ ಅತಿ ಹಿಂದುಳಿದವರನ್ನು ಪ್ರತ್ಯೇಕವಾಗಿ ಪರಿಗಣಿಸಿರಲಿಲ್ಲ. ಇಲ್ಲಿ ಬಲಿಷ್ಠರೇ ಸಿಂಹಪಾಲು ಪಡೆಯತೊಡಗಿದರು, ಇದರ ಪರಿಣಾಮ 25 ಅಲೆಮಾರಿ ಅತಿಸೂಕ್ಷ್ಮ ಜಾತಿಗಳಲ್ಲಿ ಒಬ್ಬರೂ ತಾಂತ್ರಿಕ ಪದವಿಯನ್ನು ಪಡೆದಿಲ್ಲ. 14 ಜಾತಿಗಳಲ್ಲಿ ಒಬ್ಬರೂ ಸ್ನಾತಕೋತ್ತರ ಪದವಿ ಪಡೆದಿಲ್ಲ. ಮತ್ತೆ 14 ಜಾತಿಗಳಲ್ಲಿ ಒಬ್ಬರೂ ಎಂಬಿಬಿಎಸ್ ಇಲ್ಲ. 54 ಜಾತಿಗಳಲ್ಲಿ ಒಬ್ಬರೂ ಪಿಎಚ್.ಡಿ ಪಡೆದಿಲ್ಲ! ದಕ್ಕಲಿಗ, ಸಿಂಧೋಳ್ಳು, ಚಾಂಡಾಳ, ಗರೋಡಿ ಮುಂತಾದ 12 ಉಪಜಾತಿಗಳಲ್ಲಿ ಈವರೆಗೆ ಒಬ್ಬರಿಗೂ ಸರಕಾರಿ ಉದ್ಯೋಗ ಸಿಕ್ಕಿಲ್ಲ. 27,917 ಪರಿಶಿಷ್ಟ ಗ್ರಾಮಪಂಚಾಯತ್ ಸದಸ್ಯರಲ್ಲಿ ಪರಿಶಿಷ್ಟರ 101 ಜಾತಿಗಳಲ್ಲಿ 41 ಜಾತಿಗಳಿಗೆ ಈವರೆಗೂ ಪ್ರಾತಿನಿಧ್ಯ ಸಿಕ್ಕಿಲ್ಲ. ಮಹಾನಗರ ಪಾಲಿಕೆಯ 52 ಸದಸ್ಯತ್ವದಲ್ಲಿ 89 ಜಾತಿಗಳಿಗೆ ಒಮ್ಮೆಯೂ ಪ್ರಾತಿನಿಧ್ಯ ಸಿಕ್ಕಿಲ್ಲ. ನಗರಪಾಲಿಕೆಯ 308 ಪರಿಶಿಷ್ಟ ಸ್ಥಾನಗಳಲ್ಲಿ 82 ಉಪಜಾತಿಗಳಿಗೆ ಈವರೆಗೆ ಅವಕಾಶ ಸಿಕ್ಕಿಲ್ಲ. ಪುರಸಭೆಗಳ 516 ಸ್ಥಾನಗಳಲ್ಲಿ 79 ಉಪಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಹಾಗೂ ಪಟ್ಟಣ ಪಂಚಾಯತ್ನ 252 ಸ್ಥಾನಗಳಲ್ಲಿ 78 ಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಇವೆಲ್ಲವೂ ಅಲೆಮಾರಿ ಜಾತಿಗಳೇ ಆಗಿವೆ ಎಂಬುದು ಗಮನಾರ್ಹ.
ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡೇ ನ್ಯಾ.ದಾಸ್ ಅವರು ಪರಿಶಿಷ್ಟರಲ್ಲಿ ಒಳಮೀಸಲಾತಿ ನೀಡುವಾಗ ಈ ಕಟ್ಟಕಡೆಯ ಅಲೆಮಾರಿಗಳಿಗಾಗಿಯೇ ಪ್ರವರ್ಗ-ಂ ಅನ್ನು ಸೃಷ್ಟಿಸಿ, ಈ ಪ್ರಾತಿನಿಧ್ಯ ವಂಚಿತ ಅಲೆಮಾರಿಗಳಿಗಾಗಿ ಒಂದು ಪರ್ಸೆಂಟ್ ಮೀಸಲಾತಿಯನ್ನು ನೀಡಲು ಶಿಫಾರಸು ಮಾಡಿದ್ದರು. ಇದರ ಹಿಂದಿನ ನ್ಯಾ.ಸದಾಶಿವ ವರದಿಯಲ್ಲೂ ಈ ನತದೃಷ್ಟ ಸಮುದಾಯಗಳಿಗೆ ಒಂದು ಪರ್ಸೆಂಟ್ ಮೀಸಲಾತಿ ಶಿಫಾರಸು ಮಾಡಲಾಗಿತ್ತು, ಬಿಜೆಪಿ ಸರಕಾರದ ಮಾಧುಸ್ವಾಮಿ ಸಮಿತಿಯೂ ಅಲೆಮಾರಿಗಳನ್ನೂ ಸೇರಿದಂತೆ ಇತರ ಸಣ್ಣಪುಟ್ಟ ಸಮುದಾಯಗಳನ್ನು ಸೇರಿಸಿ 89 ಜಾತಿಗಳಿಗೆ ಒಂದು ಪರ್ಸೆಂಟ್ ಮೀಸಲಾತಿ ನೀಡಲು ಸಲಹೆ ನೀಡಿದ್ದರು. ಆದರೆ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯನವರ ಸರಕಾರ ನ್ಯಾ.ನಾಗಮೋಹನದಾಸ್ ವರದಿಯಲ್ಲಿ ಅತ್ಯಂತ ಹಿಂದುಳಿದ ಜಾತಿಗಳೆಂದು ಪರಿಗಣಿಸಲ್ಪಟ್ಟಿದ್ದ 59 ಜಾತಿಗಳನ್ನು, ಪರಿಶಿಷ್ಟರೊಳಗೇ ಇರುವ ಉಳಿದ ಎಲ್ಲ ಜಾತಿಗಳಿಗಿಂತಲೂ ಹೋಲಿಕೆಯಲ್ಲಿ ಅತಿಹೆಚ್ಚು ಪ್ರಾತಿನಿಧ್ಯ ಪಡೆದು ಮುಂದುವರಿದಿರುವ ಸ್ಪಶ್ಯ ಜಾತಿಗಳ ಗುಂಪಿನಲ್ಲಿ ವಿಲೀನ ಮಾಡಿ ಶಿಫಾರಸು ಮಾಡಿದ್ದ 1:6:5:4:1 ಸೂತ್ರಕ್ಕೆ ಬದಲಾಗಿ 6:6:5 ಸೂತ್ರವನ್ನು ಅಳವಡಿಸಿದ್ದಾರೆ. ಇದು ಅಲೆಮಾರಿಗಳ ಪಾಲಿನ ಮರಣಶಾಸನವಾಗಿದೆ.
ಸರಕಾರದ ಈ ಸೂತ್ರ ಸಾಮಾಜಿಕ ನ್ಯಾಯದ ಎಲ್ಲ ಮಾನದಂಡಗಳ ಉಲ್ಲಂಘನೆಯಾಗಿದೆ ಮತ್ತು ಸುಪ್ರೀಂ ಕೋರ್ಟ್ನ ಮಾರ್ಗದರ್ಶನದ ಸ್ಪಷ್ಟ ಉಲ್ಲಂಘನೆಯೂ ಆಗಿದೆ ಎನ್ನುವುದು ಗಮನಾರ್ಹ.
ಸರಕಾರದ ಸಚಿವ ಸಂಪುಟದ ‘ವಿಷಯ ಹಾಳೆ’ಯ ಪುಟ 3, ಪ್ಯಾರ 3ರಲ್ಲಿ ಈ ರೀತಿ ನಿರ್ಧರಿಸುವಲ್ಲಿ, ಸಚಿವ ಸಂಪುಟವು 2011ರ ಪ್ರಕರಣ ಅಂ 2317 ರಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಪಂಜಾಬ್ ರಾಜ್ಯ ಮತ್ತಿತರರು v/s ದೇವೇಂದರ್ ಸಿಂಗ್ ಪ್ರಕರಣದಲ್ಲಿ ನೀಡಿರುವ ತೀರ್ಪಿನಲ್ಲಿ ನಮೂದಿಸಲಾದ ತತ್ವಗಳನ್ನು ಗಮನದಲ್ಲಿಟ್ಟುಕೊಂಡಿದೆ ಎಂದು ಹೇಳಲಾಗಿದೆ. ಆದರೆ ದೇವೇಂದರ್ ಸಿಂಗ್ ಪ್ರಕರಣದ ಮೂಲ ಆಶಯ ಅಸಮಾನರನ್ನು ಸಮಾನರೆಂದು ಪರಿಗಣಿಸಬಾರದು ಎಂಬುದು. ಇದರ ಅರ್ಥ ಅಸಮಾನವಾಗಿಹಿಂದುಳಿದಿರುವ ಜಾತಿಗಳನ್ನು ಒಂದೇ ಗುಂಪಿಗೆ ವರ್ಗೀ
ಕರಣ ಮಾಡಬಾರದು. ಅದರ ಜೊತೆಗೆ ಸಮಾನ ಹಿಂದುಳಿದಿರುವಿಕೆಯ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ವರ್ಗೀ
ಕರಣವಾದ ಗುಂಪಿನಲ್ಲಿ ಸೇರಿಸಲ್ಪಟ್ಟ ಜಾತಿಗಳು, ಸಾಮಾಜಿಕ ಹಿಂದುಳಿದಿರುವಿಕೆಯ ದೃಷ್ಟಿಯಲ್ಲಿ ಅತಿ ಹೆಚ್ಚಿನ ಏಕರೂಪತೆಯನ್ನು (homogeneous)ಹೊಂದಿರಬೇಕು ಎಂಬುದು. ಇಲ್ಲಿ ಹೆಚ್ಚು ಪ್ರಾತಿನಿಧ್ಯ ಪಡೆದು ಮೇಲ್ಸ್ತರಕ್ಕೆ ಏರಿದ ಸ್ಪೃಶ್ಯರನ್ನು ಪ್ರಾತಿನಿಧ್ಯವೇ ಪಡೆಯದ ಅಸ್ಪಶ್ಯ ಅಲೆಮಾರಿ, ಅರೆಅಲೆಮಾರಿಗಳೊಂದಿಗೆ ಹೇಗೆ ವಿಲೀನಗೊಳಿಸುತ್ತೀರಿ ಎಂಬುದೇ ಇಲ್ಲಿನ ಮುಖ್ಯ ಪ್ರಶ್ನೆಯಾಗಿದೆ. ಇಲ್ಲಿ ಸುಪ್ರೀಂಕೋರ್ಟ್ನ ದೇವೇಂದ್ರ ಸಿಂಗ್ ಪ್ರಕರಣದ ಸಲಹೆಯನ್ನು ಗಾಳಿಗೆ ತೂರಲಾಗಿದೆ.
ಸರಕಾರ ಹೊಸದಾಗಿ ರೂಪಿಸಲಾದ ಈ ಪ್ರವರ್ಗದಲ್ಲಿ ಏಕರೂಪತೆಯೇ ಇಲ್ಲ. ಅಸಮಾನ ಹಿಂದುಳಿದಿರುವಿಕೆಯನ್ನು ಹೊಂದಿರುವ ಜಾತಿಗಳನ್ನು ಒಂದೇ ಗುಂಪಿಗೆ ವರ್ಗೀಕರಣ ಮಾಡಬಾರದು ಜತೆಗೆ ಸಮಾನ ಹಿಂದುಳಿದಿರುವಿಕೆಯ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ವರ್ಗೀಕರಣವಾದ ಗುಂಪಿನಲ್ಲಿ ಸೇರಿಸಲ್ಪಟ್ಟ ಜಾತಿಗಳು ಸಾಮಾಜಿಕ ಹಿಂದುಳಿದಿರುವಿಕೆಯ ದೃಷ್ಟಿಯಲ್ಲಿ ಅತಿ ಹೆಚ್ಚಿನ ಏಕರೂಪತೆಯನ್ನು ಹೊಂದಿರಬೇಕು. ಎಂಬುದೇ ಸುಪ್ರೀಂಕೋರ್ಟ್ನ ಸ್ಪಷ್ಟ ನಿರ್ದೇಶನವಾಗಿದೆ ಆದರೆ ಇದನ್ನು ಇಲ್ಲಿ ಪಾಲಿಸಿಲ್ಲ.
ಬಲಿಷ್ಠರ ಒತ್ತಡಕ್ಕೆ ಮಣಿದು ಅಬಲರನ್ನು, ಅಸಹಾಯಕರನ್ನು ಸದೆಬಡೆಯುವುದು ಹೇಗೆ ಸಾಮಾಜಿಕ ನ್ಯಾಯವಾದೀತು? ಅಸ್ಪಶ್ಯರಿಗೇ ಅಸ್ಪೃಶ್ಯರಾದ ದಕ್ಕಲಿಗರು, ತಮ್ಮನ್ನು ತಾವೇ ಚಾಟಿಯಲ್ಲಿ ಹೊಡೆದುಕೊಂಡು ಭಿಕ್ಷೆ ಬೇಡುವ ಸಿಂದೊಳ್ಳು, ದುರ್ಗಮುರ್ಗಿಯರು, ಸ್ಮಶಾನ ಕಾಯುವ ಸುಡುಗಾಡುಸಿದ್ದರೇ ಮುಂತಾದ ಟೆಂಟು, ಗುಡಾರಗಳಲ್ಲಿ, ಪಾಳು ಮಂಟಪಗಳಲ್ಲಿ, ರೈಲ್ವೆ ಹಳಿಗಳ ಪಕ್ಕ, ಊರಾಚೆಯ ಕೊಳಚೆಯಲ್ಲಿ ವಾಸಿಸುವ ತಬ್ಬಲಿಗಳನ್ನು ಅಸಮಾನರೊಂದಿಗೆ ವಿಲೀನಗೊಳಿಸುವ ಹೀನ ಪ್ರಕ್ರಿಯೆ ಭಾರತದ ಇತಿಹಾಸದಲ್ಲಿ ಹಿಂದೆಂದೂ ಆಗಿರಲಿಲ್ಲವೇನೋ! ಇತಿಹಾಸ ಈ ಸಾಮಾಜಿಕ ಅನ್ಯಾಯವನ್ನು ಸಹಿಸಲಾರದು.
ಇದೇ ಸಿದ್ದರಾಮಯ್ಯನವರ ಸರಕಾರ ಎರಡು ವರ್ಷಗಳ ಹಿಂದಿನ ಬಜೆಟ್ ನಲ್ಲಿ ಅಲೆಮಾರಿಗಳಲ್ಲಿರುವ ಗೊಂದಲಗಳನ್ನು ಸರಿಪಡಿಸಲು ಅಲೆಮಾರಿ ಆಯೋಗ ಮಾಡುತ್ತೇವೆಂದು ಪ್ರಕಟಿಸಿತ್ತು. ಆದರೆ ಸದರಿ ಆಯೋಗ ಕೇವಲ ಹಿಂದುಳಿದ ವರ್ಗದ ಅಲೆಮಾರಿಗಳಿಗೆ ಸೀಮಿತವಾಗಿ ಆಯೋಗದ ರಚನೆಯಲ್ಲೇ ಗೊಂದಲವಿತ್ತು. ಇಲ್ಲಿ ನಿಜಕ್ಕೂ ಗೊಂದಲವಿದ್ದದ್ದು ಒಂದೇ ಜಾತಿಗೆ ಸೇರಿದ ವಿವಿಧ ಹೆಸರುಗಳಲ್ಲಿ, ಅಂದರೆ ಚೆನ್ನದಾಸ, ದೊಂಬಿದಾಸ, ಮಾಲದಾಸ, ಚಕ್ರವಾದ್ಯದಾಸರ ನಡುವೆ ಮತ್ತು ಶಿಳ್ಳೇಕ್ಯಾತ, ಸಿಳ್ಳೀಕ್ಯಾತ, ಕಿಳ್ಳೇಕ್ಯಾತ ಮುಂತಾದ ಜಾತಿಗಳು ಪರಿಶಿಷ್ಟ ಜಾತಿಗಳ ಮತ್ತು ಹಿಂದುಳಿದ ವರ್ಗಗಳ ಪಟ್ಟಿಗಳಲ್ಲಿ ಹಂಚಿಹೋಗಿ ಅಧಿಕಾರಿಗಳು ಈ ಸಮುದಾಯಗಳಿಗೆ ಜಾತಿ ಪ್ರಮಾಣ ಸಿಂಧುತ್ವ ಸರ್ಟಿಫಿಕೇಟ್ ನೀಡಲು ಸತಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಲೆಮಾರಿ ಆಯೋಗ ನೇಮಕ ಮಾಡಬೇಕಿತ್ತು. ಈ ಬಗ್ಗೆ ಅಲೆಮಾರಿಗಳು ಹತ್ತಾರು ಬಾರಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಪತ್ರ ನೀಡಿದ್ದರೂ ಈವರೆಗೂ ಸ್ಪಂದಿಸಲಿಲ್ಲ. ಇನ್ನೂ ಘೋರ ಅನ್ಯಾಯವೆಂದರೆ ಪರಿಶಿಷ್ಟ ಜಾತಿಯ ಅಲೆಮಾರಿ ನಿಗಮವನ್ನೂ ಸ್ಪಶ್ಯ ಜಾತಿಯವರಿಗೆ ನೀಡಿ ಅಸ್ಪಶ್ಯ ಅಲೆಮಾರಿಗಳಲ್ಲಿನ ಅರ್ಹರನ್ನು ನಿರ್ಲಕ್ಷಿಸಿದ್ದು. ಕಟ್ಟಕಡೆಯ ಸಮುದಾಯಗಳಾದ ಅಲೆಮಾರಿಗಳಿಗೆ ಈ ಸರಕಾರದಲ್ಲಿ ಹೀಗೇ ಸಾಲುಸಾಲು ಅನ್ಯಾಯಗಳಾಗುತ್ತಲೇ ಇವೆ.
ಈ ಮಧ್ಯೆ ಯಾರೋ ನೊಂದ ಅಲೆಮಾರಿಗಳು ‘ನಮಗೆ ವಿಷ ಕೊಳ್ಳಲೂ ಹಣವಿಲ್ಲ.. ನೀವು SCP TSP ಹಣವನ್ನು ಏನೇನಕ್ಕೋ ಬಳಸುತ್ತೀರಿ, ದಯವಿಟ್ಟು ಆ ಹಣದಲ್ಲಿ ಸ್ವಲ್ಪ ಭಾಗವನ್ನು ಬಳಸಿ ನಮಗೆ ವಿಷವನ್ನಾದರೂ ಕೊಡಿಸಿ’ ಎಂದು ಬೇಡಿಕೊಂಡಿದ್ದ ಸಾಮಾಜಿಕ ಜಾಲತಾಣದ ಪೋಸ್ಟ್
ವೊಂದನ್ನು ನೋಡಿ ಎದೆಯಲ್ಲಿ ಬೆಂಕಿ ಬಿದ್ದಂತಾಯಿತು. ಇದನ್ನೇ ಅಲ್ಲವೆ ಸರ್ ‘ಬಾಯಲ್ಲಿ ಬೆಲ್ಲ, ಎದೆಯಲ್ಲಿ ಕತ್ತರಿ’ ಎನ್ನುವುದು..? ಎಂದು ಸುಡುಗಾಡುಸಿದ್ದರ ವ್ಯಕ್ತಿಯೊಬ್ಬ ಅಂದಾಗ ನನ್ನಲ್ಲಿ ಮಾತುಗಳಿರಲಿಲ್ಲ.







