ಸೋಮಲಾಪುರ ಹಳ್ಳದಲ್ಲಿ ಹೂಳು ತೆರವು

ಸಂಡೂರು: ಕಳೆದ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ತಾಲೂಕಿನ ಯಶವಂತನಗರ ಗ್ರಾಪಂ ವ್ಯಾಪ್ತಿಯ ಸೋಮಲಾಪುರ ಹಳ್ಳದಲ್ಲಿ ಇದೀಗ ಭಾರೀ ಪ್ರಮಾಣದ ಸ್ವಚ್ಛತಾ ಹಾಗೂ ಹೂಳು ತೆರವುಗೊಳಿಸುವ ಕಾರ್ಯ ಆರಂಭಗೊಂಡಿದೆ. ಮಳೆಗಾಲದ ಮುನ್ನವೇ ಕೂಡ್ಲಿಗಿಯ ಸಣ್ಣ ನೀರಾವರಿ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಗಂಡಿ ಮಾರಮ್ಮ ದೇವಸ್ಥಾನದಿಂದ ಗಂಡಿ ನರಸಿಂಹ ದೇವಸ್ಥಾನದವರೆಗೆ ಸುಮಾರು ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಎರಡು ಎಕ್ಸ್ಕವೇಟರ್ ಯಂತ್ರಗಳು, ಲಾರಿಗಳು ಹಾಗೂ ಸಿಬ್ಬಂದಿಯ ಸಹಾಯದಿಂದ ಹಳ್ಳದಲ್ಲಿ ವರ್ಷಗಳಿಂದ ಸಂಗ್ರಹವಾಗಿದ್ದ ಹೂಳು, ಮರದ ದಿಮ್ಮಿಗಳು, ಪೊದೆಗಳು ಮತ್ತು ಪ್ಲಾಸ್ಟಿಕ್ ಸೇರಿ ವಿವಿಧ ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಲಾಗುತ್ತಿದೆ. ಹಳ್ಳವನ್ನು ಮೊದಲಿನಂತೆ ಸಮರ್ಪಕವಾಗಿ ರೂಪಿಸುವ ಕೆಲಸ ನಡೆಯುತ್ತಿದೆ.
ವಾರ್ತಾಭಾರತಿ ವಿಶೇಷ ವರದಿಗೆ ಎಚ್ಚೆತ್ತ ಇಲಾಖೆ :
ನಾರಿಹಳ್ಳ ಜಲಾಶಯದ ಸ್ಥಿತಿ, ಹಳ್ಳಗಳ ದುಸ್ಥಿತಿ ಹಾಗೂ ಮಳೆಗಾಲದ ಅಪಾಯಗಳ ಕುರಿತು ಈ ಹಿಂದೆ ವಾರ್ತಾಭಾರತಿ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ವರದಿಯಲ್ಲಿ ಹಳ್ಳಗಳ ನಿರ್ವಹಣೆಯ ಕೊರತೆಯಿಂದ ಎದುರಾಗಬಹುದಾದ ಸಮಸ್ಯೆಗಳನ್ನು ವಿವರವಾಗಿ ಬೆಳಕು ಚೆಲ್ಲಲಾಗಿತ್ತು. ಈ ವರದಿ ಪ್ರಕಟವಾದ ನಂತರ ಎಚ್ಚೆತ್ತುಕೊಂಡ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತುರ್ತು ಕ್ರಮವಾಗಿ ಹೂಳು ತೆರವು ಹಾಗೂ ಸ್ವಚ್ಛತಾ ಕಾರ್ಯ ಆರಂಭಿಸಿದ್ದಾರೆ. ಸ್ಥಳೀಯರು ಪತ್ರಿಕೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಜಲಾಶಯಕ್ಕೆ ನೀರು ಹರಿವಿಗೆ ಅನುಕೂಲ :
ಸೋಮಲಾಪುರ ಹಳ್ಳದ ಮೂಲಕ ಮಳೆ ನೀರು ನಾರಿಹಳ್ಳ ಜಲಾಶಯ ಸೇರುತ್ತದೆ. ಹೂಳು ಮತ್ತು ತ್ಯಾಜ್ಯ ತೆರವುಗೊಳಿಸಿದ್ದರಿಂದ ನೀರು ವೇಗವಾಗಿ ಹಾಗೂ ಸುಗಮವಾಗಿ ಹರಿಯುವ ನಿರೀಕ್ಷೆ ಮೂಡಿದೆ. ಇದರಿಂದ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಲಿದ್ದು, ಮಳೆಗಾಲದಲ್ಲಿ ನೀರು ರಸ್ತೆಗೆ ಬರುವ ಸಮಸ್ಯೆ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾರಿಹಳ್ಳ ಜಲಾಶಯಕ್ಕೆ ಸರಾಗವಾಗಿ ನೀರು ಹರಿಯವಂತೆ ಮಾಡಲು ಸುಮಾರು 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಸಾರ್ವಜನಿಕರು ಕೂಡ ಹಳ್ಳಗಳಲ್ಲಿ ತ್ಯಾಜ್ಯ ಹಾಕದೆ ಸಹಕರಿಸಿದರೆ ನೀರಿನ ಹರಿವು ಸುಗಮವಾಗುತ್ತದೆ.
-ಶಬ್ಬೀರ್, ಜೆಇ, ಸಣ್ಣ ನೀರಾವರಿ ಇಲಾಖೆ ಕೂಡ್ಲಿಗಿ ಉಪವಿಭಾಗ
ಕಳೆದ ಹಲವು ವರ್ಷಗಳಿಂದ ಮಳೆ ಬಂದಾಗ ಹಳ್ಳದ ನೀರು ರಸ್ತೆಯ ಮೇಲೆ ಹರಿದು ಸಾರ್ವಜನಿಕರು ತುಂಬಾ ಸಂಕಷ್ಟ ಅನುಭವಿಸುತ್ತಿದ್ದರು. ಇದೀಗ ಸಣ್ಣ ನೀರಾವರಿ ಇಲಾಖೆ ಮಳೆಗಾಲಕ್ಕೂ ಮುಂಚಿತವಾಗಿಯೇ ಹೂಳು ಮತ್ತು ತ್ಯಾಜ್ಯ ತೆರವುಗೊಳಿಸುವ ಕಾರ್ಯ ಕೈಗೊಂಡಿರುವುದು ಸಂತಸ ತಂದಿದೆ.
-ಮಾರಣ್ಣ, ಸೋಮಲಾಪುರ ನಿವಾಸಿ






