Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಧಿಕಾರಿ-ರಾಜಕಾರಣಿಗಳಿಂದ ಪಾಪ ಕೃತ್ಯ,...

ಅಧಿಕಾರಿ-ರಾಜಕಾರಣಿಗಳಿಂದ ಪಾಪ ಕೃತ್ಯ, ಕೆಪಿಎಸ್‌ಸಿಗೆ ಕಳಂಕ!

ಹರೀಶ್ ಕುಮಾರ್ ಕುಡ್ತಡ್ಕಹರೀಶ್ ಕುಮಾರ್ ಕುಡ್ತಡ್ಕ29 Sept 2026 11:46 AM IST
share
ಅಧಿಕಾರಿ-ರಾಜಕಾರಣಿಗಳಿಂದ ಪಾಪ ಕೃತ್ಯ, ಕೆಪಿಎಸ್‌ಸಿಗೆ ಕಳಂಕ!

ಕೆಪಿಎಸ್‌ಸಿಯನ್ನು ಮುಚ್ಚುವ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರವನ್ನು ತೆಗೆದು ಕೊಳ್ಳಲಾಗುವುದೆಂದು ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ. ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಕೆಪಿಎಸ್‌ಸಿಯಲ್ಲಿ ನಿರಂತರವಾಗಿ ಹಗರಣಗಳ ಮೇಲೆ ಹಗರಣ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಈ ಹೇಳಿಕೆ ಹೊರ ಬಿದ್ದಿದೆ. ಮೊದಲಿಗೆ ಕೆಪಿಎಸ್‌ಸಿ ಅಧ್ಯಕ್ಷರು ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ತನ್ನ ಮಗಳನ್ನು ನೇಮಕ ಮಾಡಲು ಅಡ್ಡ ಹಾದಿ ಹಿಡಿದಿರುವಂತಹ ಅವ್ಯವಹಾರ ವರದಿಯಾಯಿತು. ಇದು ಅವರನ್ನು ಹುದ್ದೆಯಿಂದ ಉಚ್ಚಾಟಿಸಲು ಕಾರಣವಾಯಿತು. ನಂತರ ಪಶು ವೈದ್ಯಾಧಿಕಾರಿ ಹುದ್ದೆಗಳಿಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದ ದೊಡ್ಡ ಮಟ್ಟದ ಹಗರಣ ಸುದ್ದಿ ಮಾಡಿತು. ಇಂತಹ ಹಗರಣಗಳಿಂದ ರಾಜ್ಯದ ಜನತೆ ಹಾಗೂ ಯುವಜನರು ರೋಸಿ ಹೋಗಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗ್ರಹಿಸಿರುವ ಮುಖ್ಯಮಂತ್ರಿಯವರು ಭಾವನಾತ್ಮಕವಾಗಿ ಸ್ಪಂದಿಸಲು ಹೊರಟು ಬಹುಶಃ ಎಡವಟ್ಟು ಮಾಡಿಕೊಟ್ಟಂತಿದೆ.

ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ‘‘ಕೆಪಿಎಸ್‌ಸಿಗೆ ಖದೀಮರನ್ನು ನೇಮಕ ಮಾಡಿದವರು ಯಾರು? ವಸೂಲಿಗೆ ಅವಕಾಶ ಕೊಟ್ಟದ್ದು ಯಾರು? ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂತವರೇ ಎಸಗಿದ ಪಾಪವಲ್ಲವೇ ಇದು? ಆ ಲೆಕ್ಕದಲ್ಲಿ ವಿಧಾನಸೌಧವನ್ನೇ ಮುಚ್ಚಬೇಕು. ಡಿ.ಕೆ.ಶಿವಕುಮಾರ್ ಸಾರಥ್ಯದಲ್ಲಿ ಈ ಕೆಲಸವೂ ನಡೆದು ಹೋಗಲಿ’’ ಎಂಬಿತ್ಯಾದಿ ವಾದ ಸರಣಿಯನ್ನೇ ಹೂಡಿದ್ದಾರೆ. ಜೊತೆಗೆ ಮುಖ್ಯಮಂತ್ರಿಯವರ ಹೇಳಿಕೆ ಹೊಣೆಗೇಡಿತನ ಮತ್ತು ಅಜ್ಞಾನದ ಪರಮಾವಧಿ ಎಂದಿದ್ದಾರೆ. ಕುಮಾರಸ್ವಾಮಿಯವರ ಹೇಳಿಕೆಯಲ್ಲಿ ಸಾಕಷ್ಟು ಹುರುಳಿದೆ ಎನ್ನಬಹುದು. ಅವರು ಅಕ್ಷರಶ: ನಿಜವನ್ನೇ ನುಡಿದಿದ್ದಾರೆ. ಹಾಗಂತ ಕೆಪಿಎಸ್‌ಸಿ ವಿಚಾರದಲ್ಲಿ ಕುಮಾರಸ್ವಾಮಿ ಮತ್ತು ಅವರ ಕುಟುಂಬಕ್ಕೇನೂ ಕ್ಲೀನ್‌ಚಿಟ್ ಸಿಗಲಾರದು. ಯಾಕೆಂದರೆ ಅವರು ಮತ್ತು ಅವರ ಕುಟುಂಬ ವರ್ಗದವರೂ ವಿಧಾನಸೌಧದ ಮೂರನೇ ಮಹಡಿಯಿಂದಲೇ ಕಾರ್ಯ ನಿರ್ವಹಿಸಿದವರಲ್ಲವೇ?

ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯವರನ್ನು ಕೆಪಿಎಸ್‌ಸಿ ಮುಚ್ಚುವ ವಿಚಾರದಲ್ಲಿ ಕಟುಟೀಕೆಗೆ ಗುರಿ ಮಾಡಿದಂತಹ ಈ ಸಮಯದಲ್ಲಿ, ನಿಷ್ಠುರ ರಾಜಕಾರಣಿಯಾಗಿದ್ದ ಎ.ಕೆ.ಸುಬ್ಬಯ್ಯನವರು ಈ ಹಿಂದೆ ಎಚ್.ಡಿ. ದೇವೇಗೌಡರ ವಿರುದ್ಧ ಮಾಡಿದ್ದ ಆರೋಪದ ಕುರಿತಾದ ವೀಡಿಯೊ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿದೆ. ಮಾಜಿ ಪ್ರಧಾನಿಯವರು ಎಪ್ಪತ್ತರ ದಶಕದಲ್ಲಿ ತಮ್ಮ ಹಿರಿಯ ಪುತ್ರ ಎಚ್.ಡಿ. ಬಾಲಕೃಷ್ಣ ಅವರಿಗೆ ಕೆ.ಎ.ಎಸ್. ಹುದ್ದೆ ದೊರಕಿಸಿ ಕೊಡಲು ಹಸ್ತಕ್ಷೇಪ ನಡೆಸಿದ್ದಾರೆ ಎಂಬ ಆರೋಪವನ್ನು ಎ.ಕೆ.ಸುಬ್ಬಯ್ಯನವರು ಮಾಡಿದ್ದರು ಎಂಬುದೇ ಆ ಆರೋಪ. ಇಲ್ಲಿ ಇನ್ನೊಂದು ಘಟನೆಯನ್ನು ನೆನಪಿಸಿಕೊಳ್ಳಬಹದು. ಹಿಂದೆ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಎಚ್.ಎನ್. ಕೃಷ್ಣ ಅವರು ಪರೀಕ್ಷಾ ಅವ್ಯವಹಾರ ಆರೋಪದ ಮೇಲೆ 2011ರಲ್ಲಿ ಜೈಲು ಸೇರಿದ್ದ ಸಂದರ್ಭದಲ್ಲಿ ಎಚ್.ಡಿ. ಕುಮಾರಸ್ವಾಮಿಯವರು ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದರು. ಇದು ಅಧ್ಯಕ್ಷರಿಗೆ ನೈತಿಕ ಬೆಂಬಲ ನೀಡುವ ಉದ್ದೇಶದ ಭೇಟಿ ಎಂದು ಕುಮಾರಸ್ವಾಮಿಯವರು ತಮ್ಮ ಭೇಟಿಯನ್ನು ಸಮರ್ಥಿಸಿ ಕೊಂಡಿದ್ದರು.

ಕೆಪಿಎಸ್‌ಸಿ ಜನತೆಯ ಕೆಂಗಣ್ಣಿಗೆ ಗುರಿಯಾಗಿ ದಶಕಗಳೇ ಕಳೆದಿವೆ. ಎಪ್ಪತ್ತರ ದಶಕದಲ್ಲಿ ಅವ್ಯವಹಾರ, ಸ್ವಜನಪಕ್ಷಪಾತಗಳ ಬಗ್ಗೆ ಶುರುವಾಗಿದ್ದ ಗುಸು ಗುಸು ಮಾತು ತೊಂಭತ್ತರ ದಶಕದಲ್ಲಿ ಗಟ್ಟಿಯಾಗಿಯೇ ಸುದ್ದಿ ಮಾಡತೊಡಗಿತ್ತು. 1998, 1999ರ ಗೆಜೆಟೆಡ್ ಅಧಿಕಾರಿಗಳ ನೇಮಕಾತಿ ದೊಡ್ಡ ಮಟ್ಟದ ವಿವಾದದ ಸುಳಿಯಲ್ಲಿ ಸಿಲುಕಿಗೊಂಡು ಅರ್ಹ ಅಭ್ಯರ್ಥಿಗಳು ಕಣ್ಣೀರಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಪಿಎಸ್‌ಸಿ ಹಗರಣಗಳಲ್ಲಿ ತೆರೆಮರೆಯಲ್ಲಿ ಅದರ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಒಂದೆಡೆ ಇದ್ದರೆ ರಾಜಕಾರಣಿಗಳು ಇನ್ನೊಂದೆಡೆ ಅಜ್ಞಾತರಾಗಿ ಹಸ್ತಕ್ಷೇಪ ಮಾಡುತ್ತಿದ್ದಂತಹ ವಿಚಾರ ಗುಟ್ಟಾಗೇನೂ ಉಳಿದಿಲ್ಲ. ರಾಜಕಾರಣಿಗಳಿಗಂತೂ ಕೆಪಿಎಸ್‌ಸಿ ಎಂಬುದು ಕಾಮಧೇನುವಿದ್ದಂತೆ. ಇಂತಹವರು ಅವರ ಮನೆಮಂದಿ, ಹಿಂಬಾಲಕರನ್ನು ಸರಕಾರಿ ಹುದ್ದೆಗಳಿಗೆ ಸೇರಿಸಿದ್ದಾರೆ. ಇನ್ನು ಕೆಲವರು ಉನ್ನತ ಹುದ್ದೆಗಳಲ್ಲಿ ತಮ್ಮ ಜಾತಿ, ವರ್ಗದ ನಂಬಿಕಸ್ಥರನ್ನು ಕೂರಿಸಲು ಯಶಸ್ವಿಯಾಗಿ ಅದರ ಪ್ರತಿಫಲವನ್ನು ತಮ್ಮ ಪಕ್ಷ ಅಧಿಕಾರದಲ್ಲಿರಲಿ, ಇಲ್ಲದಿರಲಿ ಪಡೆಯುವುದು ನಡೆದಿದೆ. ಇದೊಂದು ದೂರದೃಷ್ಟಿಯ ಕಾರ್ಯಾಚರಣೆ. ಒಟ್ಟಿನಲ್ಲಿ ಇದರಿಂದ ಕೆಪಿಎಸ್‌ಸಿ ಕಳಂಕಿತ ಸಂಸ್ಥೆಯೆಂಬ ಕುಖ್ಯಾತಿಗೀಡಾಗ ಬೇಕಾಗಿ ಬಂತು. ಹೀಗೆ ಈ ಸಂಸ್ಥೆಯ ವಿರುದ್ಧ ಜನರ ಆಕ್ರೋಶ ವ್ಯಾಪಕವಾಗುತ್ತಿದ್ದಂತೆ ರಾಜಕೀಯ ನಾಯಕರಿಗೂ ಸುಮ್ಮನಿರಲು ಸಾಧ್ಯವಾಗಲಿಲ್ಲ. ಅವರೂ ಬಿದ್ದ ಆಳಿಗೊಂದು ಕಲ್ಲೆಂಬಂತೆ ಕಟು ಟೀಕೆಗಳನ್ನು ಮಾಡುತ್ತಿದ್ದಾರೆ ಅಷ್ಟೇ.

ಕೆಪಿಎಸ್‌ಸಿ ಒಂದು ಸಾಂವಿಧಾನಿಕ ಸ್ವತಂತ್ರ ಸಂಸ್ಥೆ. ಅದು ತನ್ನಷ್ಟಕ್ಕೆ ತಾನೇ ಕಳಂಕಿತವಾಗಲು ಸಾಧ್ಯವಿಲ್ಲ. ಯಾವುದೇ ಸಂಸ್ಥೆಯಾದರೂ ಅದರ ಸಾರಥ್ಯ ವಹಿಸಿದವರು ಮತ್ತು ಸಿಬ್ಬಂದಿ ವರ್ಗ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ ಒಂದು ಹಂತಕ್ಕೆ ನೆಟ್ಟಗೆ ಇರಬಲ್ಲದು. ಹಾಗೆಯೇ ಕರ್ತವ್ಯ ಪ್ರಜ್ಞೆ, ನೈತಿಕತೆ ಮತ್ತು ನಿಷ್ಠರತೆಯುಳ್ಳ ವ್ಯವಸ್ಥೆಯೊಳಗೆ ರಾಜಕೀಯ ನಾಯಕರಿಗೂ ಮೂಗು ತೂರಿಸಲು ಸಾಧ್ಯವಾಗಲಾರದು. ಆದರೆ ಭ್ರಷ್ಟ ರಾಜಕಾರಣಿಗಳ ಮರ್ಜಿ ಮತ್ತು ಹಂಗಿಗೆ ಒಳಪಟ್ಟಂತಹ ಅಧ್ಯಕ್ಷ, ಸದಸ್ಯರು ಮತ್ತು ಉನ್ನತ ಅಧಿಕಾರಿಗಳಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಕೆಪಿಎಸ್‌ಸಿ ಹಳಿ ತಪ್ಪುತ್ತಾ ಸಾಗಿದ್ದು ಹೀಗೆನೇ. ಇಂದು ಇದಕ್ಕೆ ಕಾರಣದವರೆಲ್ಲ ತಮ್ಮ ಪಾಪ ಕೃತ್ಯ, ಹೊಣೆಗಾರಿಕೆಯಿಂದ ನುಣುಚಿ ಕೊಳ್ಳುತ್ತಿದ್ದಾರೆ. ಕೊನೆಗೆ ಕೆಪಿಎಸ್‌ಸಿಗೆ ಮಾತ್ರ ಕಳಂಕ ಪಟ್ಟ ಖಾಯಂ! ಇದು ಕೋತಿ ಮೊಸರು ತಿಂದು ಮೇಕೆ ಮೋರೆಗೆ ಮೆತ್ತಿದಂತೆ ಆಯಿತು.

ಇಂದು ಕೆಪಿಎಸ್‌ಸಿ ಅಪರಾಧಿ ಸ್ಥಾನದಲ್ಲಿ ನಿಂತಿದೆ. ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೀಡುವಂತಹ ಮಾತುಗಳು ಕೇಳಿ ಬರುತ್ತಿವೆ. ನಿಜ, ಈ ಪ್ರಾಧಿಕಾರ ಕೆಲವು ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ನಡೆಸಿ ಸೈ ಎನಿಸಿಕೊಂಡಿರುವುದು ಅದರ ಹೆಗ್ಗಳಿಕೆ ಇರಬಹುದು. ಆದರೆ ಇದು ಎಷ್ಟು ಸಮಯದವರೆಗೆ ಎಂಬುದು ಪ್ರಶ್ನೆ. ಇಲ್ಲಿ ಕೂಡ ಭ್ರಷ್ಟರು ನುಸುಳಿ ಕೊಂಡು ಮುಂದೆ ಕೆಪಿಎಸ್‌ಸಿ ರೀತಿಯಲ್ಲಿಯೇ ಕುಲಗೆಡಿಸುವುದಿಲ್ಲವೆಂಬ ಭರವಸೆ ಎಲ್ಲಿದೆ?

ಮುಖ್ಯಮಂತ್ರಿಯವರ ಪ್ರಸ್ತಾವದಂತೆ ಕೆಪಿಎಸ್‌ಸಿ ಮುಚ್ಚಲು ಸಾಧ್ಯವೇ? ಸಂವಿಧಾನದ 315 ವಿಧಿ ಪ್ರಕಾರ ಪ್ರತಿಯೊಂದು ರಾಜ್ಯ ಅಥವಾ ಎರಡು-ಮೂರು ರಾಜ್ಯಗಳು ಜೊತೆಗೂಡಿ ಲೋಕ ಸೇವಾ ಸಂಸ್ಥೆ(ಪಿ.ಎಸ್.ಸಿ.)ಯನ್ನು ಸ್ಥಾಪಿಸತಕ್ಕದ್ದು ಎಂದಿದೆ. ಹಾಗೆಯೇ ಅದು 320 ವಿಧಿ ಪ್ರಕಾರ ಸರಕಾರಿ ಹುದ್ದೆಗಳಿಗೆ ನೇಮಕಾತಿಗಾಗಿ ಸ್ಪರ್ಧಾತ್ಮಾಕ ಪರೀಕ್ಷೆಗಳನ್ನು ಸಹ ನಡೆಸ ಬೇಕಾಗಿದೆ. ಲೋಕ ಸೇವಾ ಆಯೋಗದ ಕುರಿತು ಸಂವಿಧಾನದ 315ರಿಂದ 323ರವರೆಗಿನ ವಿಧಿಗಳಿದ್ದು ಆ ಸಂಸ್ಥೆಯನ್ನು ಮುಚ್ಚುವುದಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಯಾವುದೇ ಅವಕಾಶ ಇದ್ದಂತಿಲ್ಲ.

ವಾಸ್ತವದಲ್ಲಿ ಇಂತಹ ಪ್ರತಿಷ್ಠಿತ ಸಂಸ್ಥೆಯನ್ನು ಮುಚ್ಚುವಂತಹ ಪ್ರಸ್ತಾವವೇ ಸಮಂಜಸವಾದುದಲ್ಲ. ಇದು ನೆಗಡಿಯಾದರೆ ಮೂಗನ್ನೇ ಕೊಯ್ದು ಕೊಂಡಂತೆ! ನಾವು ಕಾಯಿಲೆಯ ಮೂಲ ಹುಡುಕಿ ಚಿಕಿತ್ಸೆ ಮಾಡ ಬೇಕೇ ಹೊರತು ಸಂಸ್ಥೆಯನ್ನೇ ಮುಚ್ಚುವುದಕ್ಕೆ ಹೊರಡುವುದಲ್ಲ. ಈ ನಿಟ್ಟಿನಲ್ಲಿ ಪರಿಹಾರಗಳು ಇವೆ. ಆದರೆ ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ನೈತಿಕತೆ ಹಾಗೂ ಪ್ರಾಮಾಣಿಕತೆಯನ್ನು ಕಳೆದು ಕೊಂಡಿರುವ ಈ ಕಾಲಘಟ್ಟದಲ್ಲಿ ವ್ಯಕ್ತಿ ಆಧಾರಿತ ಸುಧಾರಣಾ ಕ್ರಮಗಳ ಮೇಲೆ ಹೆಚ್ಚಿನ ಭರವಸೆ ಇಟ್ಟು ಕೊಳ್ಳಲಾಗದು. ನಿಯಮಗಳ ಮೇಲೆ ನಿಯಮಗಳು, ಮೇಲ್ವಿಚಾರಣಾ ವ್ಯವಸ್ಥೆಯ ಮೇಲೆ ಮೇಲ್ವಿಚಾರಣೆಗಳಂತಹ ಕ್ರಮಗಳು ವಿಫಲ ಗೊಂಡಿರುವ ಉದಾಹರಣೆಗಳು ಕಣ್ಣ ಮುಂದಿವೆ. ಇನ್ನು ಎಲ್ಲಿಗೆಂತ ಬೇಲಿ ಹಾಕೋಣ? ಹೀಗಾಗಿ ಸಂಪೂರ್ಣ ಪಾರದರ್ಶಕ ಮಾದರಿ ಮಾತ್ರ ಸರಕಾರದ ಮುಂದಿರುವ ಆಯ್ಕೆಯಾಗಿದೆ. ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆಯಿಂದ ಹಿಡಿದು ಸಮಗ್ರ ಪರೀಕ್ಷಾ ವ್ಯವಸ್ಥೆ ಹಾಗೂ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರುವಂತೆ ನೋಡಿ ಕೊಳ್ಳಲು ಅಗತ್ಯ ನಿಯಮಗಳನ್ನು ಸರಕಾರ ರೂಪಿಸ ಬೇಕಾಗಿದೆ. ಜೊತೆಗೆ ಸಂಸ್ಥೆಯ ಉನ್ನತ ಅಧಿಕಾರಿಗಳು ಮತ್ತು ಸಿಬ್ಬಂದಿಯ ನೇಮಕ ಮತ್ತು ವರ್ಗಾವಣೆಯೂ ಪಾರದರ್ಶಕ ಮತ್ತು ಬಾಹ್ಯ ಹಸ್ತಕ್ಷೇಪದಿಂದ ಮುಕ್ತವಾಗಿರಲಿ. ಒಟ್ಟಿನಲ್ಲಿ ಸರಕಾರ ಕೆಪಿಎಸ್‌ಸಿಗೆ ಸೂಕ್ತ ಕಾಯಕಲ್ಪ ಮಾಡಲು ಮುಂದಾಗುವುದರಲ್ಲಿ ಜನತೆಯ ಹಿತವಿದೆ.

Tags

KPSC
share
ಹರೀಶ್ ಕುಮಾರ್ ಕುಡ್ತಡ್ಕ
ಹರೀಶ್ ಕುಮಾರ್ ಕುಡ್ತಡ್ಕ
Next Story
X