ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ

ಬೆಂಗಳೂರು : ಚುನಾವಣಾ ಆಯೋಗದ ವತಿಯಿಂದ ನಡೆಯುತ್ತಿರುವ ಮತಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಲ್ಲಿ ರಾಜ್ಯದ ಎಲ್ಲ ಮತಕ್ಷೇತ್ರಗಳ ಬೂತ್‌ಗಳಲ್ಲಿಯೂ ಶೇ.100ರಷ್ಟು ಗಣತಿ ನಮೂನೆ(ಎನ್ಯುಮರೇಷನ್ ಫಾರಂ)ಗಳನ್ನು ತಲುಪಿಸಿದ್ದೇವೆ ಎಂದು ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಹೇಳಿಕೆ ನೀಡಿರುವ ನಡುವೆಯೇ, ಕೊಡಗು ಜಿಲ್ಲೆಯ ಕೆಲವು ಆದಿವಾಸಿ ಹಾಡಿಗಳಲ್ಲಿ ಹಲವಾರು ಮತದಾರರಿಗೆ ಇನ್ನೂ ಗಣತಿ ನಮೂನೆಗಳು ತಲುಪಿಲ್ಲ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳುಗೋಡು ಮತ್ತು ಬಿ.ಶೆಟ್ಟಿಗೆರಿ ಸೇರಿದಂತೆ ವಿವಿಧ ಹಾಡಿಗಳಿಗೆ ನಾಗರಿಕ ಮತ ಕಾವಲು ಸಮಿತಿಯು ಭೇಟಿ ನೀಡಿ ಗಣತಿ ನಮೂನೆ ಕುರಿತು ಪರಿಶೀಲನೆ ನಡೆಸಿದಾಗ ಹಲವರಲ್ಲಿ ಸ್ಮಾರ್ಟ್ ವೋಟರ್ ಐಡಿ ಹೊಂದಿದ್ದರೂ, ಎರಡು ಬೂತ್‌ಗಳ ವ್ಯಾಪ್ತಿಯಲ್ಲಿ ಕನಿಷ್ಠ 20ಕ್ಕೂ ಹೆಚ್ಚು ಮತದಾರರಿಗೆ ಎಸ್‌ಐಆರ್ ಗಣತಿ ನಮೂನೆಗಳು ಸಿಗದಿರುವುದು ಬೆಳಕಿಗೆ ಬಂದಿದೆ ಎಂದು ಆದಿವಾಸಿ ಹೋರಾಟಗಾರ್ತಿ ಸವಿತಾ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.
ಗಣತಿ ನಮೂನೆ ದೊರೆಯದ ಬಗ್ಗೆ ಬಿಎಲ್‌ಒಗಳನ್ನು ಸಂಪರ್ಕಿಸಿದಾಗ, ‘ನೀವು ನಮ್ಮ ಬೂತ್ ವ್ಯಾಪ್ತಿಯಲ್ಲಿ ಇಲ್ಲ, ಬೇರೆ ಬೂತ್‌ಗೆ ಸೇರಿದ್ದೀರಿ’ ಎಂದು ತಿಳಿಸಲಾಗುತ್ತಿದೆ. ಆದರೆ, ಬಿಎಲ್‌ಒ ಸೂಚಿಸಿದ ಬೂತ್‌ಗೆ ತೆರಳಿ ವಿಚಾರಿಸಿದಾಗ, ‘ನಿಮ್ಮ ಹೆಸರನ್ನು ಇಲ್ಲಿನ ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ’ ಎಂಬ ಬೇಜವಾಬ್ದಾರಿ ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಲಲಿತಾ ಮತ್ತು ಕಮಲ ಎನ್ನುವರು ಆರೋಪ ಮಾಡಿದ್ದಾರೆ.
ಈ ಪರಸ್ಪರ ವಿರುದ್ಧ ಮಾಹಿತಿಯಿಂದ ಯಾವ ಬೂತ್‌ನಲ್ಲಿ ತಮ್ಮ ಹೆಸರು ಇದೆ, ಯಾರನ್ನು ಸಂಪರ್ಕಿಸಬೇಕು, ಗಣತಿ ನಮೂನೆಯನ್ನು ಎಲ್ಲಿಂದ ಪಡೆಯಬೇಕು ಎಂಬ ಗೊಂದಲದಲ್ಲಿ ಹಲವು ಆದಿವಾಸಿ ಮತದಾರರು ಒಂದು ಗ್ರಾಮ ಪಂಚಾಯತ್‌ನಿಂದ ಮತ್ತೊಂದು ಗ್ರಾಮ ಪಂಚಾಯತ್‌ಗೆ ಅಲೆದಾಡುವಂತಾಗಿದೆ. ದಿನಗೂಲಿ ಕೆಲಸವೇ ಜೀವನಾಧಾರವಾಗಿರುವ ಕುಟುಂಬಗಳು ಕೆಲಸ ಬಿಟ್ಟು ಕಚೇರಿಗಳು ಹಾಗೂ ಬೂತ್‌ಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಇವರ ಆದಾಯಕ್ಕೂ ಹೊಡೆತ ಬೀಳುತ್ತಿದೆ.
ಇದೇ ವೇಳೆ, ಗಣತಿ ನಮೂನೆ ದೊರೆತಿರುವ ಹಾಡಿಗಳಲ್ಲಿಯೂ ಮತ್ತೊಂದು ಸಮಸ್ಯೆ ಎದುರಾಗಿದೆ. ಅನೇಕ ಕುಟುಂಬಗಳಿಗೆ 2002ರ ಮತದಾರರ ದಾಖಲೆಗಳು ಲಭ್ಯವಾಗಿಲ್ಲ. ತಂದೆ-ತಾಯಿ ಹಾಗೂ ಅಜ್ಜ-ಅಜ್ಜಿಯರ ಮಾಹಿತಿಯ ಕೊರತೆಯಿಂದಲೂ ನಮೂನೆಗಳನ್ನು ಭರ್ತಿ ಮಾಡಲು ತೊಂದರೆ ಉಂಟಾಗಿದೆ. ಈಗಾಗಲೇ ಭರ್ತಿಯಾಗಿರುವ ಅನೇಕ ನಮೂನೆಗಳಲ್ಲಿ ಗಂಭೀರ ಲೋಪ-ದೋಷಗಳು ಕಂಡುಬಂದಿದ್ದು, ಪರಿಶೀಲಿಸಿದ 40ಕ್ಕೂ ಹೆಚ್ಚು ನಮೂನೆಗಳಲ್ಲಿ ಕೇವಲ ಒಂದು ಅರ್ಜಿ ಮಾತ್ರ ಸರಿಯಾಗಿ ತುಂಬಿದ್ದು, ಉಳಿದೆಲ್ಲವೂ ತಪ್ಪುತಪ್ಪಾಗಿ ಭರ್ತಿ ಮಾಡಲಾಗಿದೆ ಎಂದು ನಾಗರಿಕ ಮತಕಾವಲು ಸಮಿತಿಯ ಹೇಮಂತ್ ತಿಳಿಸಿದ್ದಾರೆ.
2002ರ ಮತದಾರರ ದಾಖಲೆಗಳು ಲಭ್ಯವಿಲ್ಲದಿರುವುದು, ಗಣತಿ ನಮೂನೆಗಳ ಕೊರತೆ ಮತ್ತು ಬೂತ್‌ವಾರು ಮಾಹಿತಿ ಗೊಂದಲದಿಂದ ಎಸ್‌ಐಆರ್ ಪ್ರಕ್ರಿಯೆ ಮತ್ತಷ್ಟು ಸಂಕೀರ್ಣವಾಗುತ್ತಿದೆ. ದೂರದ ಹಾಡಿಗಳಲ್ಲಿ ವಾಸಿಸುವ ಜನರು ಸಾರಿಗೆ ಸೌಲಭ್ಯ ಕೊರತೆಯ ನಡುವೆಯೇ ಹಲವು ಬಾರಿ ಬೂತ್‌ಗಳಿಗೆ ತೆರಳುತ್ತಿರುವುದು ಸಂಕಷ್ಟವನ್ನು ಹೆಚ್ಚಿಸಿದೆ. ಈ ರೀತಿಯ ಆಡಳಿತಾತ್ಮಕ ಗೊಂದಲಗಳು ಮುಂದುವರಿದರೆ ಅರ್ಹ ಮತದಾರರು ಎಸ್‌ಐಆರ್ ಪ್ರಕ್ರಿಯೆಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ನೆಲಮಟ್ಟದಲ್ಲಿ ವಿಶೇಷ ಪರಿಶೀಲನೆ ನಡೆಸಿ, ಎಲ್ಲ ಅರ್ಹ ಮತದಾರರಿಗೆ ಎನ್ಯುಮರೇಷನ್ ಫಾರಂಗಳನ್ನು ತಲುಪಿಸಿ, ಬೂತ್‌ವಾರು ಗೊಂದಲವನ್ನು ನಿವಾರಿಸಿ, ಬಿಎಲ್‌ಒಗಳಿಗೆ ಸ್ಪಷ್ಟ ಮಾರ್ಗದರ್ಶನ ನೀಡಿ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು.
-ಮೊಣ್ಣಪ್ಪ, ರಾಜ್ಯಾಧ್ಯಕ್ಷ ಬಹುಜನ ಕಾರ್ಮಿಕ ಸಂಘ
ಕೊಡಗಿನ ಎಸ್ಟೇಟ್ ಮತ್ತು ಲೈನ್ ಮನೆಗಳಲ್ಲಿ ಕೆಲಸ ಮಾಡುವ ಆದಿವಾಸಿಗಳು ಬಹುತೇಕ ಅನಕ್ಷರಸ್ಥರು. ತೋಟದ ಮಾಲಕರ ಮನೆಯಲ್ಲಿ ಜೀವನ ಮಾಡುವುದೇ ದುಸ್ತರವಾಗಿದ್ದು, ಶಿಕ್ಷಣ ಎಲ್ಲಿಂದ ಸಿಗಬೇಕು, ಹೇಗೆ ಕಲಿಯಬೇಕು? ಅಂತಹದ್ದರಲ್ಲಿ ಚುನಾವಣಾ ಆಯೋಗ ಕೇಳಿರುವ ದಾಖಲೆಗಳನ್ನು ಹೇಗೆ ಕೊಡಬೇಕು? ಈಗಾಗಲೇ ತೋಟ ಮತ್ತು ಲೈನ್ ಮನೆಗಳಲ್ಲಿ ಕೆಲಸ ಮಾಡುವ ಆದಿವಾಸಿಗಳ ಹತ್ತಿರ ಇರುವ ಕನಿಷ್ಠ ದಾಖಲೆಗಳಾದ ಆಧಾರ್, ರೇಷನ್ ಕಾರ್ಡ್, ಗುರುತಿನ ಚೀಟಿಗಳು ಮಾಲಕರ ವಶದಲ್ಲಿವೆ. ಇವರಿಗೆ ಅವಶ್ಯಕತೆ ಇದ್ದಾಗ ಮಾತ್ರ ಕೊಡುತ್ತಾರೆ, ಉಳಿದಂತೆ ವರ್ಷಪೂರ್ತಿ ಮಾಲಕರ ವಶದಲ್ಲಿಯೇ ಇರುತ್ತವೆ. ಇಂತಹ ಸ್ಥಿತಿಯಲ್ಲಿ ಆಯೋಗ ಕೇಳಿರುವ ದಾಖಲೆಗಳನ್ನು ಕೊಡುವುದು ದೊಡ್ಡ ಸವಾಲಾಗಿದೆ.
-ಉಮೇಶ್ ಬಿ.ನೂರಲಕುಪ್ಪೆ, ಜಿಲ್ಲಾ ಸಂಯೋಜಕರು ನಾಗರಿಕ ಮತಕಾವಲು ಸಮಿತಿ






