ಎಸ್‌ಐಆರ್ ಮೊದಲ ಹಂತ ಮುಕ್ತಾಯ: ಕರಡು ಪಟ್ಟಿಯಿಂದ ಹೊರಗುಳಿದ 1.08 ಕೋಟಿ ಮತದಾರರು

ಬೆಂಗಳೂರು : ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್)ಯ ಮೊದಲ ಹಂತ ಸೋಮವಾರ ಮುಕ್ತಾಯಗೊಂಡಿದ್ದು, ಮತದಾರರ ಮನೆ ಮನೆ ಸಮೀಕ್ಷೆ ಹಾಗೂ ಗಣತಿ ನಮೂನೆಗಳ ಸಂಗ್ರಹ, ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಮೊದಲ ಹಂತ ಮುಕ್ತಾಯದ ವೇಳೆಗೆ ರಾಜ್ಯದಲ್ಲಿ ಸುಮಾರು 1.08 ಕೋಟಿ ಮತದಾರರು ಎಎಸ್‌ಡಿಡಿಒ ಪಟ್ಟಿಯಲ್ಲಿ ಬಂದಿದ್ದು, ಅಷ್ಟೂ ಮತದಾರರು ಆ.24ರಂದು ಪ್ರಕಟವಾಗುವ ಕರಡು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಜೂ.30ರಂದು ಪ್ರಾರಂಭವಾಗಿತ್ತು. ಚುನಾವಣಾ ಆಯೋಗವು ವಿವಿಧ ಕಾರಣಗಳಿಂದ ಎರಡು ಬಾರಿಗೆ ದಿನಾಂಕಗಳನ್ನು ಮುಂದೂಡಿದ್ದರಿಂದಾಗಿ ಆ.17ರಂದು ಎಸ್‌ಐಆರ್ ಮೊದಲ ಹಂತದ ಕೊನೆ ದಿನವಾಯಿತು. ಗಣತಿ ನಮೂನೆ ತುಂಬಿ ಸಹಿ ಹಾಕಿ ಕೊಟ್ಟಿರುವ ಎಲ್ಲ ಮತದಾರರ ಹೆಸರುಗಳು ಆ.24ರಂದು ಕರಡು ಪಟ್ಟಿಯಲ್ಲಿ ಬರಲಿವೆ. ಗಣತಿ ನಮೂನೆ ಕೊಡಲು ನಿರಾಕರಿಸಿದವರು ಮತ್ತು ಎಎಸ್‌ಡಿಡಿಒ ಪಟ್ಟಿಯಲ್ಲಿರುವರ ಹೆಸರುಗಳು ಕರಡು ಪಟ್ಟಿಯಲ್ಲಿ ಪ್ರಕಟವಾಗುವುದಿಲ್ಲ.
ಈ ಮೊದಲ ಹಂತದಲ್ಲಿ ಮತದಾರರ ಹಿಂದಿನ ವಿವರಗಳೊಂದಿಗೆ ಹೊಂದಾಣಿಕೆ ಆಗದ, ಸ್ಥಳಾಂತರಗೊಂಡಿರುವ, ಮೃತಪಟ್ಟಿರುವ ಅಥವಾ ಪತ್ತೆಯಾಗದಿರುವ/ ಗೈರು ಸಾಧ್ಯತೆಯಿರುವ ಮತದಾರರನ್ನು ಒಳಗೊಂಡ ಎಎಸ್‌ಡಿಡಿಒ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಿ, ಆ.3ರಿಂದ ಸಾರ್ವಜನಿಕರಿಗೆ ಪಟ್ಟಿ ಸಿಗುವಂತೆ ಸಿಇಒ ಕರ್ನಾಟಕ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಮತ್ತು ಬಿಎಲ್‌ಒ, ಇಆರ್‌ಒ ಹಾಗೂ ನೋಂದಾಯಿತ ರಾಜಕೀಯ ಪಕ್ಷಗಳ ಕಚೇರಿಗಳಿಗೆ ತಲುಪಿಸಲಾಗಿದೆ.
ಎಎಸ್‌ಡಿಡಿಒ ಪಟ್ಟಿಯಲ್ಲಿ ಆ.4 ರಂದು 1,11,07,461 ಮತದಾರರಿದ್ದು, ಆ.17ಕ್ಕೆ ಈ ಸಂಖ್ಯೆ 1,08,31,945 ರಷ್ಟಾಗಿದೆ. ಅಂದರೆ ಸುಮಾರು 2,75,516 ಮತದಾರರ ಹೆಸರುಗಳನ್ನು ‘ರೋಲ್‌ಬ್ಯಾಕ್’ ಪ್ರಕ್ರಿಯೆಯ ಮೂಲಕ ವಾಪಸಾಗಿದೆ. ಎಎಸ್‌ಡಿಡಿಒ ಪಟ್ಟಿಗೆ ಸೇರಿಸಲಾಗಿದ್ದರೂ ತಮ್ಮ ಹೆಸರು ತಪ್ಪಾಗಿ ಗುರುತಿಸಲಾಗಿದೆ ಎಂದು ಪತ್ತೆಯಾದ ಕೆಲವು ಮತದಾರರ ಹೆಸರುಗಳನ್ನು ಮತ್ತೆ ಹಿಂದಿನ ಸ್ಥಿತಿಗೆ ತರಲಾಗಿದೆ. ಆದರೆ, ರೋಲ್‌ಬ್ಯಾಕ್ ಮೂಲಕ ಮರುಸ್ಥಾಪನೆಯಾಗಿರುವ 2.7 ಲಕ್ಷ ಹೆಸರುಗಳಿಗೆ ಹೋಲಿಸಿದರೆ, ಎಎಸ್‌ಡಿಡಿಒ ಪಟ್ಟಿಯಲ್ಲಿ ಇನ್ನೂ ಉಳಿದಿರುವ 1.08 ಕೋಟಿ ಮತದಾರರ ಸಂಖ್ಯೆ ಆಘಾತವಾಗಿದೆ.
ವಿಶೇಷವಾಗಿ, ತಮ್ಮ ಮೂಲ ವಿಳಾಸದಲ್ಲೇ ವಾಸಿಸುತ್ತಿರುವವರು, ಮನೆಮನೆಗೆ ನೀಡಿದ ಗಣತಿ ನಮೂನೆಯನ್ನು ಸಲ್ಲಿಸಿರುವವರು ಹಾಗೂ ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಪರಿಸ್ಥಿತಿ ಇಲ್ಲದವರ ಹೆಸರುಗಳೂ ಕೂಡ ಎಎಸ್‌ಡಿಡಿಒ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಈಗಾಗಲೇ ಹಲವು ದೂರುಗಳು ಕೇಳಿಬಂದಿವೆ. ಮೊದಲ ಹಂತ ಮುಕ್ತಾಯವಾಗಿರುವುದರಿಂದ ಇದೀಗ ಎಎಸ್‌ಡಿಡಿಒ ಪಟ್ಟಿಯಲ್ಲಿರುವ 1.08 ಕೋಟಿ ಮತದಾರರ ಪೈಕಿ ಎಷ್ಟು ಮಂದಿ ನಿಜವಾಗಿಯೂ ಸ್ಥಳಾಂತರಗೊಂಡಿದ್ದಾರೆ, ಎಷ್ಟು ಮಂದಿ ಮೃತಪಟ್ಟಿದ್ದಾರೆ, ಎಷ್ಟು ಮಂದಿ ಪತ್ತೆಯಾಗಿಲ್ಲ ಹಾಗೂ ಎಷ್ಟು ಮಂದಿ ಕೇವಲ ದಾಖಲೆಗಳ ಹೊಂದಾಣಿಕೆ ಸಮಸ್ಯೆಯಿಂದ ಪಟ್ಟಿಗೆ ಸೇರಿದ್ದಾರೆ ಎಂಬುದು ಸ್ಪಷ್ಟವಾಗಬೇಕಿದೆ.
ರೋಲ್‌ಬ್ಯಾಕ್ ಮೂಲಕ ಮರುಸ್ಥಾಪಿಸಲಾದ 2.7 ಲಕ್ಷ ಮತದಾರರ ವಿವರಗಳನ್ನೂ ಸಾರ್ವಜನಿಕಗೊಳಿಸಿದರೆ, ಎಎಸ್‌ಡಿಡಿಒ ಪಟ್ಟಿಯಲ್ಲಿ ನಡೆದಿರುವ ತಪ್ಪುಗಳ ಸ್ವರೂಪದ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ. ಮೊದಲ ಹಂತ ಮುಗಿದಿರುವ ಹಿನ್ನೆಲೆಯಲ್ಲಿ, ಮುಂದಿನ ಹಂತದಲ್ಲಿ ಎಎಸ್‌ಡಿಡಿಒ ಪಟ್ಟಿಯಲ್ಲಿರುವ ಮತದಾರರಿಗೆ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲು ಇರುವ ಅವಕಾಶಗಳು, ಸಲ್ಲಿಸಬೇಕಾದ ದಾಖಲೆಗಳು ಹಾಗೂ ಆಕ್ಷೇಪ ಸಲ್ಲಿಸುವ ವಿಧಾನ ಕುರಿತು ಚುನಾವಣಾ ಆಯೋಗವು ವ್ಯಾಪಕವಾಗಿ ಮಾಹಿತಿ ನೀಡಬೇಕಿದೆ.
ಸಫಲವಾಗದ ಹೋರಾಟಗಾರರ ಬೇಡಿಕೆ: ಮನೆ-ಮನೆಗೆ ಗಣತಿ ನಮೂನೆ ಹಂಚಿಕೆ, ನಮೂನೆಗಳ ಡಿಜಿಟಲೀಕರಣಕ್ಕೆ ನಿಗದಿಪಡಿಸಿರುವ ಅವಧಿ ಆ.17ಕ್ಕೆ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ, ಸುಮಾರು 1.08 ಕೋಟಿ ಮತದಾರರ ಮಾಹಿತಿಯನ್ನು ಆತುರದಲ್ಲಿ ಪೂರ್ಣಗೊಳಿಸುವ ಬದಲು ಸಮರ್ಪಕ ಪರಿಶೀಲನೆಗೆ ಹೆಚ್ಚುವರಿ ಕಾಲಾವಕಾಶ ನೀಡಬೇಕು. ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ತರಾತುರಿಯಲ್ಲಿ ಮಾಡಬೇಕೆಂಬ ಯಾವ ಅಗತ್ಯವೂ ಇಲ್ಲ. ಆದುದರಿಂದ ಮೊದಲ ಹಂತದ ಪ್ರಕ್ರಿಯೆಯನ್ನು ಮೂರು ತಿಂಗಳ ಕಾಲ ಮತ್ತು ಇಡೀ ಪ್ರಕ್ರಿಯೆ ಒಂದು ವರ್ಷದ ಅವಧಿಗೆ ವಿಸ್ತರಿಸಬೇಕು.
ಎಎಸ್‌ಡಿಡಿಒಯಲ್ಲಿನ ಶಾಶ್ವತ ಸ್ಥಳಾಂತರ, ಗೈರು ಸೇರಿದಂತೆ ವಿವಿಧ ಕಾರಣಗಳಿಂದ ಮತದಾರರನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಹಲವು ತಪ್ಪುಗಳಾಗಿವೆ. ಆದುದರಿಂದ ಪ್ರತಿಯೊಬ್ಬ ಮತದಾರನಿಗೂ ತನ್ನ ವಿವರಗಳನ್ನು ಪರಿಶೀಲಿಸಿಕೊಳ್ಳಲು ಹಾಗೂ ತಪ್ಪಾಗಿ ಗುರುತಿಸಿದ್ದರೆ ಸರಿಪಡಿಸಿಕೊಳ್ಳಲು ಸಮಯ ನೀಡಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದರು. ಆದರೆ ಕೇಂದ್ರ/ರಾಜ್ಯ ಚುನಾವಣಾ ಆಯೋಗ ಹೋರಾಟಗಾರರ ಬೇಡಿಕೆಯನ್ನು ನಿರಾಕರಿಸಿದೆ.
ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕರಡು ಮತದಾರರ ಪಟ್ಟಿಯ ಪ್ರಕಟಣೆಗೆ ಸಂಬಂಧಿಸಿದ ಚಟುವಟಿಕೆಗಳ ಕುರಿತು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳು, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳು, ಜಿಬಿಎಯ ಹೆಚ್ಚುವರಿ ಜಿಲ್ಲಾಧಿಕಾರಿಗಳು, ಮತದಾರರ ನೋಂದಣಾಧಿಕಾರಿಗಳು ಹಾಗೂ ಜಿಲ್ಲಾ ತಾಂತ್ರಿಕ ಕಾರ್ಯಕ್ರಮ ನಿರ್ವಾಹಕರಿಗೆ ತರಬೇತಿ ನೀಡಲಾಗಿದೆ.
ಮುಖ್ಯಾಂಶಗಳು
2026ರ ಜೂ.16ಕ್ಕೆ ರಾಜ್ಯದ ಮತದಾರರ ಪಟ್ಟಿಯಲ್ಲಿ ಇದ್ದವರ ಸಂಖ್ಯೆ - 5,54,32,314.
ಆ.17ರ ಸಂಜೆ 6ಗಂಟೆಯೊಳಗೆ ಡಿಜಿಟಲೀಕರಣ ಆದ ಗಣತಿ ನಮೂನೆಗಳು - 4,46,00,369
ಆ.17ರ ಸಂಜೆ 6 ಗಂಟೆಯೊಳಗೆ ಎಎಸ್‌ಡಿಡಿಒ ಪಟ್ಟಿಯಲ್ಲಿರುವರು-1,08,31,945
ಎ-ಪತ್ತೆಯಾಗದ/ ಗೈರು ಆದವರು- 15,28,985
ಎಸ್-ಶಾಶ್ವತ ಸ್ಥಳಾಂತರ-65,61,607
ಡಿ-ಮೃತಪಟ್ಟವರು- 16,38,839
ಡಿ-ಬೇರೆಡೆ ನೋಂದಾಯಿತರಾಗಿರುವವರು(ನಕಲಿ)- 7,07,792
ಒ-ಇತರ ವರ್ಗಕ್ಕೆ ಸೇರಿದವರು-3,94,722






