ಎಸ್ಐಆರ್: 2002ರ ಮತದಾರರ ಪಟ್ಟಿಯಲ್ಲಿ ಹೆಸರು ಕಣ್ಮರೆ

ಸಾಂದರ್ಭಿಕ ಚಿತ್ರ | Photo credit : PTI
ಬೆಂಗಳೂರು, ಜು.12: ಭಾರತೀಯ ಚುನಾವಣಾ ಆಯೋಗವು ರಾಜ್ಯದಲ್ಲಿ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳು ಕಣ್ಮರೆಯಾಗಿರುವುದು ನೈಜ ಮತದಾರರ ಮೇಲೆ ಪರಿಣಾಮ ಬೀರುತ್ತಿದೆ. ಆದುದರಿಂದ, 2002ರಲ್ಲಿ ಸಿದ್ಧಪಡಿಸಲಾಗಿರುವ ಪೂರಕ ಮತದಾರರ ಪಟ್ಟಿಯ ಪರಿಶೀಲನೆ ಮಾಡುವಂತೆ ಮತದಾರರು ಆಗ್ರಹಿಸಿದ್ದಾರೆ.
ಈ ಸಂಬಂಧ ಮನೋರಾಯನಪಾಳ್ಯ, ಕಾವೇರಿ ನಗರ, ವಿಶ್ವನಾಥ ನಾಗೇನಹಳ್ಳಿ, ಕನಕ ನಗರ, ಸೀತಪ್ಪ ಲೇಔಟ್, ಚಾಮುಂಡಿ ನಗರ, ದಿಣ್ಣೂರು ರಸ್ತೆ, ಸುಲ್ತಾನ್ ಪಾಳ್ಯ ಮತ್ತು ಸುತ್ತಮುತ್ತಲಿನ ನಿವಾಸಿಗಳು, ಈ ಗಂಭೀರ ಸಮಸ್ಯೆಯನ್ನು ಪತ್ರದ ಮೂಲಕ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಹಾಗೂ ಭಾರತೀಯ ಚುನಾವಣಾ ಆಯೋಗದ ಗಮನ ಸೆಳೆದಿದ್ದಾರೆ.
2002ರ ಜುಲೈ-ಅಕ್ಟೋಬರ್ ಅವಧಿಯಲ್ಲಿ ವಿತರಿಸಲಾದ ಮತದಾರರ ಗುರುತಿನ ಚೀಟಿ(EPIC CARD)ಗಳನ್ನು ಇಲ್ಲಿನ ಮತದಾರರು ಹೊಂದಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳು ಈಗಿರುವ 2025-26ನೇ ಸಾಲಿನ ಮತದಾರರ ಪಟ್ಟಿಯಂತೆ ಇವರಿಗೆ ಗಣತಿ ನಮೂನೆ(ಎನ್ಯುಮರೇಷನ್ ಫಾರಂ)ಗಳನ್ನು ವಿತರಣೆ ಮಾಡಿದ್ದಾರೆ.
2002ಕ್ಕಿಂತ ಮೊದಲು ಈ ಪ್ರದೇಶಗಳು ಜಯಮಹಲ್ ವಿಧಾನಸಭಾ ಕ್ಷೇತ್ರ-87ದ ಭಾಗವಾಗಿದ್ದವು. ಇಲ್ಲಿನ ಮತದಾರರು 1995 ಮತ್ತು 1996ರಲ್ಲಿ ವಿತರಿಸಲಾದ ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ. ಆದರೂ, 2002ರ ಜುಲೈ-ಅಕ್ಟೋಬರ್ ಅವಧಿಯಲ್ಲಿ ನೀಡಲಾಗಿರುವ ಮತದಾರರ ಗುರುತಿನ ಚೀಟಿಯಲ್ಲಿ ಜಯಮಹಲ್ ಬದಲಾಗಿ ‘ಯಲಹಂಕ ವಿಧಾನಸಭಾ ಕ್ಷೇತ್ರ-88, ಬೆಂಗಳೂರು ನಗರ(ಹೆಚ್ಚುವರಿ)’ ಎಂದು ನಮೂದಿಸಲಾಗಿದೆ. ಆದರೆ, ಆ ಅವಧಿಯಲ್ಲಿ ಈ ಮೇಲೆ ತಿಳಿಸಲ್ಪಟ್ಟಿರುವ ಪ್ರದೇಶಗಳು ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿರಲಿಲ್ಲ. ಈ ಅಸ್ಪಷ್ಟವಾದ ಮ್ಯಾಪಿಂಗ್ ಅಥವಾ ಮುದ್ರಣ ದೋಷದ ಪರಿಣಾಮವಾಗಿ, ಜಯಮಹಲ್ ಅಥವಾ ಯಲಹಂಕ ಎರಡು ಕ್ಷೇತ್ರಗಳ 2002ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪತ್ತೆಹಚ್ಚಲು ಇಲ್ಲಿನ ಮತದಾರರಿಗೆ ಸಾಧ್ಯವಾಗುತ್ತಿಲ್ಲ. ಇದು ಮತದಾರರ ದಾಖಲೆಗಳ ಸಿಂಧುತ್ವ ಮತ್ತು ಪತ್ತೆಹಚ್ಚುವಿಕೆಗೆ ಸಂಬಂಧಿಸಿದಂತೆ ಗಮನಾರ್ಹ ಗೊಂದಲವನ್ನು ಉಂಟುಮಾಡಿದೆ.
ಇಲ್ಲಿನ ಮತದಾರರೊಬ್ಬರ ಮಾಹಿತಿ ಪ್ರಕಾರ, ಅವರು ಆರ್.ಟಿ.ನಗರದಲ್ಲಿರುವ ಬಿಬಿಎಂಪಿ ಕಚೇರಿಗೆ ಭೇಟಿ ನೀಡಿ, ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿ (ERO) ಮತ್ತು ಜಿಲ್ಲಾ ಚುನಾವಣಾಧಿಕಾರಿಗಳನ್ನು (DEO) ಭೇಟಿ ಮಾಡಿ ವಿಚಾರಿಸಿದಾಗ, 2002ರ ಪೂರಕ (ಹೆಚ್ಚುವರಿ) ಮತದಾರರ ಪಟ್ಟಿಯ ಮೂಲಕ ಅವರ ಮಾಹಿತಿಯನ್ನು ನೀಡಲಾಗಿದೆ. ಆದರೆ, ಚುನಾವಣಾ ಆಯೋಗದ ಪೋರ್ಟಲ್ನಲ್ಲಿ ಪ್ರಸ್ತುತ ಲಭ್ಯವಿರುವ ಮುಖ್ಯ 2002ರ ಮತದಾರರ ಪಟ್ಟಿಯಲ್ಲಿ ಅವರ ಹೆಸರುಗಳು ಕಾಣಿಸುತ್ತಿಲ್ಲ. ಪ್ರದೇಶದ ನಿವಾಸಿಗಳೊಂದಿಗೆ ಈ ವಿಷಯವನ್ನು ಚರ್ಚಿಸಿದಾಗ, ಹೆಚ್ಚಿನ ಸಂಖ್ಯೆಯ ಮತದಾರರು 2002ರ ಜುಲೈ-ಅಕ್ಟೋಬರ್ ಅವಧಿಯಲ್ಲಿ ನೋಂದಾಯಿಸಿಕೊಂಡವರು ಈ ಸಮಸ್ಯೆಯನ್ನು ಎದುರಿಸುತ್ತಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ಈ ಸುತ್ತಮುತ್ತಲಿನ ಪ್ರದೇಶಗಳಲ್ಲಿ 10,000ಕ್ಕೂ ಹೆಚ್ಚು ಮತದಾರರು ಇದೇ ರೀತಿಯಲ್ಲಿ ತೊಂದರೆಗೆ ಒಳಗಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಇಸಿಐ (ECI) ಪೋರ್ಟಲ್ ಮೂಲಕ ಈ ಸಮಸ್ಯೆಯ ಕುರಿತು ನಾಲ್ಕು ಬಾರಿ ದೂರು ಸಲ್ಲಿಸಲಾಗಿದೆ. ಆದರೆ, ಸಮಸ್ಯೆಗೆ ಸ್ಪಷ್ಟೀಕರಣ ಅಥವಾ ಪರಿಹಾರ ನೀಡದೆ ‘ಪರಿಹರಿಸಲಾಗಿದೆ’ ಎಂಬ ಸ್ಟೇಟಸ್ನೊಂದಿಗೆ ಅಂತ್ಯಗೊಳಿಸಲಾಗುತ್ತಿದೆ.
ಅರ್ಹ ಮತದಾರರು ಹಳೆಯ ಆಡಳಿತಾತ್ಮಕ ಅಥವಾ ಡಿಜಿಟಲೀಕರಣದ ಸಮಸ್ಯೆಗಳಿಂದಾಗಿ ತೊಂದರೆ ಅನುಭವಿಸಬಾರದು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ಚುನಾವಣಾಧಿಕಾರಿ ಹಾಗೂ ಕೇಂದ್ರೀಯ ಚುನಾವಣಾ ಆಯೋಗಕ್ಕೆ ಈ ಭಾಗದ ಮತದಾರರು ಮನವಿ ಮಾಡಿದ್ದು, ಮುಂದೆ ಚುನಾವಣಾ ಆಯೋಗ ಯಾವ ಹೆಜ್ಜೆಯನ್ನಲಿಡಲಿದೆ ಎಂಬುದು ಕಾದು ನೋಡಬೇಕಿದೆ.
ನೈಜ್ಯ ಮತದಾರರಿಗೆ ನ್ಯಾಯ ಒದಗಿಸಲು ಚುನಾವಣಾ ಆಯೋಗವು 2002ರ ಜುಲೈ-ಅಕ್ಟೋಬರ್ ಅವಧಿಯಲ್ಲಿ ಸಿದ್ಧಪಡಿಸಲಾಗಿರುವ ಮತದಾರರ ಪಟ್ಟಿಯ ಮೂಲಕ ಮತದಾರರ ಮಾಹಿತಿಯನ್ನು ಪರಿಶೀಲಿಸಬೇಕು. 2002ರ ಪೂರಕ ಮತದಾರರ ಪಟ್ಟಿಯನ್ನು ಡಿಜಿಟಲೀಕರಣಗೊಳಿಸಿ ಸಾರ್ವಜನಿಕ ಪೋರ್ಟಲ್ನಲ್ಲಿ ಲಭ್ಯವಾಗುವಂತೆ ಮಾಡಬೇಕು. ಇಲ್ಲದಿದ್ದರೆ, ಪರ್ಯಾಯ ಪರಿಶೀಲನಾ ವ್ಯವಸ್ಥೆಯನ್ನು ಒದಗಿಸಬೇಕು ಎಂಬುದು ಮತದಾರರ ಆಗ್ರಹವಾಗಿದೆ.






