ಎಸ್‌ಐಆರ್ ನೋಟಿಸ್: ಅಸಂಘಟಿತ ದಿನಗೂಲಿ ಮತದಾರರಿಗೆ ಆರ್ಥಿಕ ಹೊರೆ
►ದೂರದ ಊರುಗಳಿಂದ ಬರಲು ಪರದಾಟ ►ಕರಾವಳಿಯ ಗಲ್ಫ್ ವಲಸೆ ಮತದಾರರಿಗೂ ಸಂಕಷ್ಟ

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್) ನೋಟಿಸ್ ವಿತರಣೆ ಆರಂಭವಾಗುತ್ತಿದ್ದಂತೆ, ಮತದಾರರ ಪಟ್ಟಿಯಲ್ಲಿರುವ ಹೆಸರನ್ನು ಉಳಿಸಿಕೊಳ್ಳಲು ಅಸಂಘಟಿತ ವಲಯದ ದಿನಗೂಲಿ ಕಾರ್ಮಿಕರು ಆರ್ಥಿಕ ಹೊರೆಯನ್ನೂ ಹೊರುವಂತಾಗಿದೆ. ನೂರಾರು ಕಿ.ಮೀ.ದೂರದ ಊರುಗಳಿಂದ ಮರಳಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ಮತ್ತೊಂದೆಡೆ ದಿನದ ಕೂಲಿ ಕಳೆದುಕೊಳ್ಳುವ ಆತಂಕವೂ ಎದುರಾಗಿದೆ.
ಉದ್ಯೋಗಕ್ಕಾಗಿ ಹುಟ್ಟಿದ ಊರು ತೊರೆದು ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ತೆರಳಿರುವ ದೊಡ್ಡಸಂಖ್ಯೆಯ ಅಸಂಘಟಿತ ಕಾರ್ಮಿಕರಿಗೆ ತಾರ್ಕಿಕ ವ್ಯತ್ಯಾಸ ಹಾಗೂ ಅನ್‌ಮ್ಯಾಪಡ್ ವರ್ಗದಲ್ಲಿ ನೋಟಿಸ್ ಬಂದರೆ, ಅವರು ತಮ್ಮ ಮತಹಕ್ಕನ್ನು ಉಳಿಸಿಕೊಳ್ಳಲು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ಚುನಾವಣಾಧಿಕಾರಿಗಳ ಮುಂದೆ ಹಾಜರಾಗಬೇಕಾದ ಸ್ಥಿತಿ ಎದುರಾಗಿದೆ. ಹೀಗಾಗಿ ನೋಟಿಸ್ ಪಡೆದುಕೊಳ್ಳಲಿರುವ ವಲಸೆ ಕಾರ್ಮಿಕರು ದೂರದ ಊರುಗಳಿಗೆ ಮರಳಬೇಕಾದ ಅನಿವಾರ್ಯತೆ ಸೃಷ್ಟಿಸಿದೆ.
ದಿನಗೂಲಿ ಕಾರ್ಮಿಕರು ಒಂದು ದಿನ ಕೆಲಸಕ್ಕೆ ಗೈರಾಗುವುದೆಂದರೆ ಅಂದಿನ ಆದಾಯವನ್ನು ಕಳೆದುಕೊಳ್ಳುವುದು ನಿಶ್ಚಿತ. ಬೆಂಗಳೂರು, ಮಂಗಳೂರು, ಗೋವಾ, ಮುಂಬೈ ನಗರಗಳಲ್ಲಿರುವ ಕಲಬುರಗಿ, ಬೀದರ್, ಬೆಳಗಾವಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳ ವಲಸೆ ಕಾರ್ಮಿಕರು ಸಾವಿರಾರು ರೂ.ಗಳನ್ನು ಖರ್ಚು ಮಾಡಿಕೊಂಡು, ದೂರದ ಊರಿಗೆ ತೆರಳಿ ನೋಟಿಸ್ ಪ್ರಕ್ರಿಯೆ ಪೂರ್ಣಗೊಳಿಸಲು ಒಂದಕ್ಕಿಂತ ಹೆಚ್ಚು ದಿನಗಳು ಅನಿವಾರ್ಯವಾಗಿದೆ.
ಕಟ್ಟಡ ನಿರ್ಮಾಣ, ಕೃಷಿ, ಹೋಟೆಲ್, ಗಾರ್ಮೆಂಟ್ಸ್, ಲೋಡಿಂಗ್-ಅನ್‌ಲೋಡಿಂಗ್ ಸೇರಿದಂತೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಬಹುತೇಕ ಕಾರ್ಮಿಕರಿಗೆ ವೇತನ ಸಹಿತ ರಜೆ ಸೌಲಭ್ಯ ಇರುವುದಿಲ್ಲ. ಹೀಗಾಗಿ ಮತದಾರರ ಪಟ್ಟಿಯಲ್ಲಿನ ತಮ್ಮ ಹೆಸರನ್ನು ಉಳಿಸಿಕೊಳ್ಳಲು ಅವರು ಕೆಲಸವನ್ನು ಬಿಟ್ಟು ಊರಿಗೆ ತೆರಳಲೇ ಬೇಕಾದ ಅನಿವಾರ್ಯತೆ ಇದೆ. ಇದರಿಂದ ಅವರಿಗೆ ದಿನಗೂಲಿ ಮತ್ತು ಪ್ರಯಾಣ ಸೇರಿದಂತೆ ಇನ್ನಿತರ ಖರ್ಚುಗಳಿಂದಲೂ ಆರ್ಥಿಕ ನಷ್ಟ ಮತ್ತಷ್ಟು ಹೆಚ್ಚಲಿದೆ.
ಗಲ್ಫ್ ರಾಷ್ಟ್ರಗಳಲ್ಲಿರುವ ಮತದಾರರಿಗೂ ಸಮಸ್ಯೆ: ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ದುಬೈ, ಸೌದಿ ಅರೇಬಿಯ, ಖತರ್, ಕುವೈತ್ ಸೇರಿದಂತೆ ಗಲ್ಫ್ ರಾಷ್ಟ್ರಗಳಿಗೆ ತೆರಳಿರುವ ದೊಡ್ಡಸಂಖ್ಯೆಯ ಮತದಾರರ ವಿಚಾರದಲ್ಲೂ ಇದೇ ಸಮಸ್ಯೆಯಾಗಿದೆ. ವಿದೇಶದಲ್ಲಿ ಉದ್ಯೋಗದಲ್ಲಿರುವವರ ಮತದಾರರ ಪಟ್ಟಿಯಲ್ಲಿನ ಹೆಸರು ಮತ್ತು ವಿಳಾಸ ಮೂಲ ಊರಿನಲ್ಲೇ ಇರಬಹುದು. ಅಂತಹ ಮತದಾರರಿಗೆ ಎಸ್‌ಐಆರ್ ನೋಟಿಸ್ ನೀಡಿದರೆ, ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಲು ವಿದೇಶದಿಂದಲೇ ಭಾರತಕ್ಕೆ ಮರಳುವುದು ಬಹುತೇಕ ಅಸಾಧ್ಯ. ವಿಮಾನ ಪ್ರಯಾಣದ ವೆಚ್ಚ, ಉದ್ಯೋಗದ ರಜೆ ಹಾಗೂ ಕುಟುಂಬದ ಜವಾಬ್ದಾರಿಗಳು ಅಡ್ಡಿಯಾಗಬಹುದು.
ಮತದಾರರ ಪಟ್ಟಿಯ ಶುದ್ಧೀಕರಣದ ಉದ್ದೇಶ ಅರ್ಹ ಮತದಾರರ ಹೆಸರನ್ನು ಖಚಿತಪಡಿಸುವುದೇ ಆಗಿದ್ದರೆ, ಅದಕ್ಕಾಗಿ ದೂರದ ಊರುಗಳಿಂದ ಬಂದು ದಿನಗೂಲಿ ಕಳೆದುಕೊಳ್ಳುವ ಅಥವಾ ವಿದೇಶದಿಂದ ಭಾರತಕ್ಕೆ ಮರಳುವ ಪರಿಸ್ಥಿತಿ ನಿರ್ಮಾಣವಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯೂ ಚುನಾವಣಾ ಆಯೋಗದ ಮೇಲಿದೆ. ಹೀಗಾಗಿ ನೋಟಿಸ್ ಪ್ರಕ್ರಿಯೆಯಲ್ಲೇ ಆನ್‌ಲೈನ್ ದಾಖಲೆ ಸಲ್ಲಿಕೆ, ಪ್ರತಿನಿಧಿ ಮೂಲಕ ದಾಖಲೆ ಸಲ್ಲಿಕೆ ಸೇರಿದಂತೆ ಸರಳೀಕೃತ ವ್ಯವಸ್ಥೆ ಕಲ್ಪಿಸುವುದು ಅಗತ್ಯವಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿಸುತ್ತಿದೆ.
ಪರ್ಯಾಯ ವ್ಯವಸ್ಥೆಗೆ ಆಗ್ರಹ
ಊರಿನಲ್ಲಿ ಇಲ್ಲದ ಮತದಾರರಿಗೆ ದೂರದ ಸ್ಥಳದಿಂದಲೇ ದಾಖಲೆ ಸಲ್ಲಿಸುವ ಅವಕಾಶ, ಅಧಿಕೃತ ಪ್ರತಿನಿಧಿ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸುವ ವ್ಯವಸ್ಥೆ, ವೃದ್ಧರು ಮತ್ತು ಅಸಹಾಯಕರಿಗೆ ವಿಶೇಷ ನೆರವು ಹಾಗೂ ಅಗತ್ಯವಿದ್ದಲ್ಲಿ ಹೆಚ್ಚುವರಿ ಕಾಲಾವಕಾಶ ಕಲ್ಪಿಸುವ ಅಗತ್ಯವಿದೆ. ಎಸ್‌ಐಆರ್‌ನಲ್ಲಿ ಅರ್ಹ ಮತದಾರರು ತಮ್ಮ ಹಕ್ಕನ್ನು ಉಳಿಸಿಕೊಳ್ಳಲು ಅವಕಾಶ ನೀಡುವುದು ಎಷ್ಟು ಮುಖ್ಯವೋ, ಆ ಅವಕಾಶವನ್ನು ಬಳಸಿಕೊಳ್ಳಲು ಅವರಿಗೆ ವಾಸ್ತವಿಕವಾಗಿ ಸಾಧ್ಯವಾಗುವಂತಹ ವ್ಯವಸ್ಥೆ ಕಲ್ಪಿಸುವುದೂ ಅಷ್ಟೇ ಮುಖ್ಯ. ಇಲ್ಲವಾದರೆ ಮತದಾರರ ಪಟ್ಟಿಯ ಪರಿಷ್ಕರಣೆಯ ಹೊರೆ ಆರ್ಥಿಕವಾಗಿ ದುರ್ಬಲ ವರ್ಗದ ಮೇಲೆಯೇ ಬೀಳುವ ಅಪಾಯವಿದೆ. ಇದು ಕೇವಲ ಆಡಳಿತಾತ್ಮಕ ಸಮಸ್ಯೆಯಲ್ಲ, ಅಸಂಘಟಿತ ಕಾರ್ಮಿಕರ ಮೇಲೆ ನೇರವಾಗಿ ಬೀಳುವ ಆರ್ಥಿಕ ಹೊರೆ.
-ಎಸ್.ವರಲಕ್ಷ್ಮೀ,
ಪ್ರಧಾನ ಕಾರ್ಯದರ್ಶಿ, ಸಿಐಟಿಯು
‘ಹಕ್ಕು-ಆಕ್ಷೇಪಣೆ’ ಆನ್‌ಲ್ರೆನ್ ಮೂಲಕ ಸಲ್ಲಿಸಲು ಮನವಿ
ಎಸ್‌ಐಆರ್‌ನ ಗಣತಿ ನಮೂನೆ ಪ್ರಕ್ರಿಯೆ ಯಲ್ಲಿ ಮತದಾರರಿಗೆ ಆನ್‌ಲೈನ್‌ನಲ್ಲಿ ಮಾಹಿತಿ ತುಂಬಲು ಅವಕಾಶ ಮಾಡಿಕೊಟ್ಟಿದ್ದಿದ್ದು ಸರಿಯಾಗಿದೆ. ಆದರೆ, ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಹಂತದಲ್ಲಿ ದಾಖಲೆಗಳನ್ನು ಸಲ್ಲಿಸಲು ಯಾಕೆ ಅವಕಾಶ ನೀಡುವುದಿಲ್ಲ. ಅಷ್ಟೇ ಅಲ್ಲದೆ, ಗಣತಿ ನಮೂನೆಯನ್ನು ಕೊಡಬೇಕಾದರೆ 18 ವರ್ಷ ಮೇಲ್ಪಟ್ಟ ಮನೆಯಲ್ಲಿರುವ ಒಬ್ಬರ ಕೈಯಲ್ಲಿ ಎಲ್ಲರದ್ದೂ ಕೊಟ್ಟು ಹೋಗಿದ್ದಿರಿ. ಆದರೆ ಈಗ ಇಆರ್‌ಒ/ಎಇಆರ್‌ಒ ಮುಂದೆ ದಾಖಲೆ ಸಲ್ಲಿಸಲು ಸಂಬಂಧಪಟ್ಟ ಮತದಾರರನ್ನೇ ಕರೆಯುವುದು ಅರ್ಥಹೀನ. ಮುಖ್ಯ ಚುನಾವಣಾಧಿಕಾರಿಗಳೂ ಹಕ್ಕು-ಆಕ್ಷೇಪಣೆ ಸಲ್ಲಿಸಲು ಆನ್‌ಲೈನ್ ಮೂಲಕ ಅವಕಾಶ ಮಾಡಿಕೊಡಬೇಕು.
-ಸೌಮ್ಯ, ನೋಟಿಸ್ ಪಡೆದುಕೊಂಡ ಮತದಾರರು
ನೋಟಿಸ್ ತಲುಪಿಸುವುದು ಸವಾಲು
ಎಸ್‌ಐಆರ್‌ನ ಮೊದಲ ಹಂತದಲ್ಲಿ ನೂರಾರು ಮನೆಗಳಿಗೆ ಮಳೆ, ಬಿಸಿಲು ಎನ್ನದೇ ಹೋಗಿ ಗಣತಿ ನಮೂನೆಗಳನ್ನು ಮತದಾರರಿಗೆ ತಲುಪಿಸಿ, ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಹಿಂಪಡೆದುಕೊಂಡು ನಂತರ ಅವುಗಳನ್ನು ಡಿಜಿಟಲೀಕರಣ ಮಾಡಿದ್ದೇವೆ. ಇದೀಗ ನಮ್ಮ ಬೂತ್‌ನಲ್ಲಿ ನೋಟಿಸ್ ಪಡೆದುಕೊಳ್ಳಲಿರುವ ಮತದಾರರೆಲ್ಲರೂ ಬೆಂಗಳೂರಿನಲ್ಲಿ ದಿನಗೂಲಿ ಮಾಡಿಕೊಳ್ಳುತ್ತಿರುವವರೇ ಆಗಿದ್ದಾರೆ. ಮತದಾರರ ಮನೆಗೆ ನೋಟಿಸ್ ನೀಡಲು ತೆರಳಿದಾಗ ಮನೆಗೆ ಬೀಗ ಹಾಕಿರುವುದು ಕಂಡುಬಂದಿದೆ. ಮನೆಯಲ್ಲಿರುವ ಕುಟುಂಬದ ಹಿರಿಯ ಸದಸ್ಯರು ನೋಟಿಸ್ ಸ್ವೀಕರಿಸಿದರೂ, ಅದರ ಮಹತ್ವದ ಮಾಹಿತಿ ಮತದಾರರಿಗೆ ಸಮಯಕ್ಕೆ ತಲುಪುತ್ತದೆಯೇ? ಏಳು ದಿನಗಳೊಳಗಾಗಿ ಅವರು ಇಆರ್‌ಒ ಎದುರಿಗೆ ದಾಖಲೆಗಳನ್ನು ಸಲ್ಲಿಸುತ್ತಾರೇಯೇ? ಎಂಬುದು ಪ್ರಶ್ನೆಯಾಗಿದೆ.
-ಬಿಎಲ್‌ಒ, ತುಮಕೂರು ಜಿಲ್ಲೆ
ಎಸ್‌ಐಆರ್ ಪ್ರಕ್ರಿಯೆಯಲ್ಲಿ ನೋಟಿಸ್ ಬಂದಿರುವ ವಿಚಾರ ಗೊತ್ತಾಗಿದೆ. ಆದರೆ, ದುಬೈಯಿಂದ ತಕ್ಷಣ ಭಾರತಕ್ಕೆ ಬಂದು ಪ್ರಕ್ರಿಯೆ ಪೂರ್ಣಗೊಳಿಸುವುದು ಕಷ್ಟಸಾಧ್ಯವಾಗಿದೆ. ಉದ್ಯೋಗದ ವೀಸಾ, ಕಂಪೆನಿಯ ಒಪ್ಪಂದ ಹಾಗೂ ರಜೆ ಪಡೆಯುವ ನಿಯಮಗಳಿಂದಾಗಿ ಏಕಾಏಕಿ ಊರಿಗೆ ಬರುವುದು ಸಾಧ್ಯವಾಗುವುದಿಲ್ಲ. ಅದರ ಜತೆಗೆ, ವಿಮಾನ ಟಿಕೆಟ್ ಸೇರಿದಂತೆ ಬಂದು-ಹೋಗುವ ಸಂಪೂರ್ಣ ವೆಚ್ಚ ಕೂಡ ಹೊರೆಯಾಗಲಿದೆ. ಹೀಗಾಗಿ ವಿದೇಶದಲ್ಲಿರುವ ಮತದಾರರಿಗೆ ದಾಖಲೆಗಳನ್ನು ಆನ್‌ಲೈನ್‌ನಲ್ಲೇ ಸಲ್ಲಿಸಿ, ಅಗತ್ಯವಿದ್ದರೆ ವಿಚಾರಣೆಯನ್ನೂ ಆನ್‌ಲೈನ್ ಮೂಲಕ ನಡೆಸುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಬೇಕು.
-ಅಬ್ದುಲ್ ಮಜೀದ್ ಸಿ.ಎಚ್.,
ಸೌದಿಅರೇಬಿಯದಲ್ಲಿ ಉದ್ಯೋಗದಲ್ಲಿರುವ ಮತದಾರ






