ಎಸ್ಐಆರ್: ಗುಡ್ಡೆಹೊಸೂರು ಬೂತ್ನಲ್ಲಿ ಕೊಡಗಿನಲ್ಲೇ ಅತಿ ಹೆಚ್ಚು ಮತದಾರರಿಗೆ ನೋಟಿಸ್

ಸಾಂದರ್ಭಿಕ ಚಿತ್ರ
ಮಡಿಕೇರಿ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಕರಡು ಪಟ್ಟಿ ಪ್ರಕಟಗೊಂಡ ಬಳಿಕ ಇದೀಗ ಲಾಜಿಕಲ್ ಡಿಸ್ಕ್ರಿಪೆನ್ಸಿ ಮತ್ತು ನೋ ಮ್ಯಾಪಿಂಗ್ ಅಡಿಯಲ್ಲಿ ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ.
ಕೊಡಗಿನಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಮತ್ತು ನೋ ಮ್ಯಾಪಿಂಗ್ ಸೇರಿ 58,883 ಮತದಾರರಿಗೆ ನೋಟಿಸ್ ನೀಡಲು ಗುರುತಿಸಲಾಗಿದ್ದು, ನೋಟಿಸ್ ಪಡೆಯುವ ಮತದಾರರ ವಿವರವನ್ನು ಚುನಾವಣಾ ಆಯೋಗ ಸೋಮವಾರ ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ನೋಟಿಸ್ ಪಡೆಯಲಿರುವ ಮತದಾರರಿಗೆ ಯಾವ ಕಾರಣಕ್ಕಾಗಿ ನೋಟಿಸ್ ಜನರೇಟ್ ಆಗಿದೆ ಎಂದು ಉಲ್ಲೇಖಿಸಲಾಗಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಗುಡ್ಡೆಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 194 ಬೂತ್ ಸಂಖ್ಯೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಗುಡ್ಡೆಹೊಸೂರು (ಎಡ ಪಾರ್ಶ್ವ) ಮತದಾರರಿಗೆ ಕೊಡಗಿನಲ್ಲೇ ಅತೀ ಹೆಚ್ಚು ನೋಟಿಸ್ ಜನರೇಟ್ ಆಗಿರುವ ಬೂತ್.
910 ಮತದಾರರಲ್ಲಿ 549 ಮತದಾರರಿಗೆ ನೋಟಿಸ್ ವಿತರಣೆಯಾಗಲಿದೆ. ಶೇ.60ರಷ್ಟು ಮತದಾರರು ದಾಖಲೆಯೊಂದಿಗೆ ವಿಚಾರಣೆಗೆ ಹಾಜರಾಗಬೇಕು. ಈ ಮಾಹಿತಿಯನ್ನು ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ 183 ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಕಂಡಂಗಾಲ ಬೂತ್ ನಲ್ಲಿ 1,133 ಮತದಾರರ ಪೈಕಿ 536 ಮತದಾರರಿಗೆ ನೋಟಿಸ್ ಜನರೇಟ್ ಆಗಿದೆ.ಇದು ವಿರಾಜಪೇಟೆ ಕ್ಷೇತ್ರದ ಬೂತ್ ವಾರು ನೋಟಿಸ್ ಪಡೆಯಲಿರುವ ಮತದಾರರ ಪೈಕಿ ಅತೀ ಹೆಚ್ಚು.
ಮಡಿಕೇರಿ ನಗರದಲ್ಲಿ 4,368 ಮತದಾರರು ವಿಚಾರಣೆಗೆ ಹಾಜರಾಗಬೇಕು.
ಕೊಡಗಿನ ಕೆಲವೊಂದು ಬೂತ್ಗಳಲ್ಲಿ ಶೇ.50ಕ್ಕೂ ಹೆಚ್ಚು ಮತದಾರರಿಗೆ ನೋಟಿಸ್:
ಲಾಜಿಕಲ್ ಡಿಸ್ಕ್ರಿಪೆನ್ಸಿ ಹಾಗೂ ನೋ ಮ್ಯಾಪಿಂಗ್ ಅಡಿಯಲ್ಲಿ ನೋಟಿಸ್ ನೀಡಲಾಗುವ ಮತದಾರರಲ್ಲಿ ಕೆಲವೊಂದು ಬೂತ್ಗಳಲ್ಲಿ ಶೇ.50ಕ್ಕೂ ಮತದಾರರಿಗೆ ನೋಟಿಸ್ ಜನರೇಟ್ ಆಗಿರುವ ಮಾಹಿತಿ ಬಹಿರಂಗಗೊಂಡಿದೆ. ತಿತಿಮತಿ ವ್ಯಾಪ್ತಿಯ ಬಹುತೇಕ ಎಲ್ಲ ಬೂತ್ಗಳಲ್ಲಿ 150ಕ್ಕೂ ಹೆಚ್ಚು ಮತದಾರರಿಗೆ ನೋಟಿಸ್ ಜನರೇಟ್ ಆಗಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಮಡಿಕೇರಿ ನಗರದ ಬೂತ್ 235ರಲ್ಲಿ 983 ಮತದಾರರ ಪೈಕಿ 358 ಮತದಾರರಿಗೆ ನೋಟಿಸ್ ಜನರೇಟ್ ಆಗಿದೆ.ಮಡಿಕೇರಿ ನಗರದ 236 ಬೂತ್ನಲ್ಲಿ 866 ಮತದಾರರ ಪೈಕಿ 316 ಮತದಾರರು ವಿಚಾರಣೆಗೆ ಹಾಜರಾಗಬೇಕಿದೆ. ಮಡಿಕೇರಿ ನಗರದ 237 ಬೂತ್ನಲ್ಲಿ 276 ಮತದಾರರು ನೋಟಿಸ್ ಪಡೆಯಲಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ 284 ಬೂತ್ನಲ್ಲಿ 220 ಮತದಾರರು,276 ಬೂತ್ನಲ್ಲಿ 288 ಮತದಾರರು,242 ಬೂತ್ನಲ್ಲಿ 248 ಮತದಾರರಿಗೆ ನೋಟಿಸ್ ಜನರೇಟ್ ಆಗಿದೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬೂತ್ 36 ರಲ್ಲಿ 334 ಮತದಾರರು, ಬೂತ್ 55ರಲ್ಲಿ 333, 143ನೇ ಬೂತ್ನಲ್ಲಿ 301 ಮತದಾರರು,180ನೇ ಬೂತ್ನಲ್ಲಿ 420 ಮತದಾರರು,188ನೇ ಬೂತ್ನಲ್ಲಿ 389 ಮತದಾರರು, 191ನೇ ಬೂತ್ನಲ್ಲಿ 389 ಮತದಾರರು ವಿಚಾರಣೆಗೆ ಹಾಜರಾಗಬೇಕಿದೆ. 228ನೇ ಬೂತ್ನಲ್ಲಿ 395 ಹಾಗೂ 217 ಬೂತ್ನಲ್ಲಿ 372 ಮತದಾರರು ನೋಟಿಸ್ ಪಡೆಯಲಿದ್ದಾರೆ.
ದುಬೈನಲ್ಲಿರುವ ಮತದಾರರಿಗೆ ನೋಟಿಸ್:
ಕೊಡಗು ಜಿಲ್ಲೆಯಲ್ಲಿ ಇದೀಗ ಪ್ರಸಕ್ತ ದುಬೈನಲ್ಲಿ ಉದ್ಯೋಗದಲ್ಲಿರುವ ಮತದಾರರೊಬ್ಬರಿಗೆ ನೋಟಿಸ್ ನೀಡಲಾಗಿದೆ.
ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ 109ರ ಮತದಾರ ಅಮನ್ ಎಂ.ಎಂ. ಅವರಿಗೆ ನೋಟಿಸ್ ಜನರೇಟ್ ಆಗಿದ್ದು, ಸೆ.10ರಂದು ಬೆಳಗ್ಗೆ 9ರಿಂದ 12 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಬೇಕೆಂದು ಬಿಎಲ್ಒ ನೋಟಿಸ್ ನೀಡಿದ್ದಾರೆ. ಆದರೆ ಅಮನ್ ಎಂ.ಎಂ. ಪ್ರಸಕ್ತ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.
ಆದರೆ ಇದುವರೆಗೆ ಕೂಡ ಚುನಾವಣಾ ಆಯೋಗ ವಿದೇಶದಲ್ಲಿ ಉದ್ಯೋಗದಲ್ಲಿರುವ ಮತದಾರರಿಗೆ ನೋಟಿಸ್ ಜಾರಿಯಾದರೆ ಏನು ಮಾಡಬೇಕೆಂದು ಸ್ಪಷ್ಟವಾಗಿ ಲಿಖಿತ ಆದೇಶ ನೀಡಿಲ್ಲ. ಖುದ್ದಾಗಿ ಹಾಜರಾಗಬೇಕೇ! ಅಥವಾ ಅವರ ಪರವಾಗಿ ಕುಟುಂಬಸ್ಥರು ವಿಚಾರಣೆಗೆ ಹಾಜರಾದರೆ ಸಾಕೇ ಎಂದು ಮತದಾರರು ಗೊಂದಲದಲ್ಲಿದ್ದಾರೆ.ನೋಟಿಸ್ ವಿಚಾರಣೆಗಾಗಿ ದುಬೈನಿಂದ ಏಕಾಏಕಿ ಬರಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ.
ಮಂಗಳವಾರದವರೆಗೆ ವಿದೇಶದಲ್ಲಿರುವ ಕೊಡಗಿನ ಮತದಾರರಿಗೆ ನೋಟಿಸ್ ವಿತರಣೆಯಾಗಿರುವ ಏಕೈಕ ಘಟನೆ ಮಾತ್ರ ವರದಿಯಾಗಿದ್ದು,ಸಂಪೂರ್ಣ ನೋಟಿಸ್ ವಿತರಣೆಯ ಬಳಿಕ ಎಷ್ಟು ಮಂದಿ ವಿಶೇದಲ್ಲಿರುವ ಕೊಡಗಿನ ಮತದಾರರಿಗೆ ನೋಟಿಸ್ ನೀಡಲಾಗಿದೆ ಎಂಬುದು ಸ್ಪಷ್ಟ ಮಾಹಿತಿ ದೊರೆಯಲಿದೆ.
ಬಿಎಲ್ಒ ಎಡವಟ್ಟು, ಮತದಾರರಿಗೆ ಸಂಕಷ್ಟ:
ಎಸ್ಐಆರ್ ಪ್ರಕ್ರಿಯೆಯ ಮೊದಲ ಹಂತದಲ್ಲಿ ಎನ್ಯುಮರೇಶನ್ ಫಾರಂ ಅಪ್ಲೋಡ್ ಮಾಡುವಾಗ ಬಿಎಲ್ಒ ಮಾಡಿರುವ ಎಡವಟ್ಟಿನಿಂದ ಮತದಾರರು ನೋಟಿಸ್ ಪಡೆದು ವಿಚಾರಣೆಗೆ ಹಾಜರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಅದಲ್ಲದೇ ಲಾಜಿಕಲ್ ಡಿಸ್ಕ್ರಿಪೆನ್ಸಿಯಲ್ಲಿ ಪ್ರತ್ಯೇಕಿಸಲಾಗಿರುವ ಮತದಾರರ ಮಾಹಿತಿ ಬಿಎಲ್ಒ ಆ್ಯಪ್ನಲ್ಲಿ ಇತ್ತು. ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳುವುದಕ್ಕಿಂತ ಮುಂಚಿತವಾಗಿ ಸರಿಪಡಿಸಲು ಕೂಡ ಅವಕಾಶ ಇತ್ತು.ಆದರೆ ಬೆರಳೆಣಿಕೆಯಷ್ಟು ಭಾಗದಲ್ಲಿ ಮಾತ್ರ ಸರಿಪಡಿಸಲಾಗಿದೆ.ಲಾಜಿಕಲ್ ಡಿಸ್ಕ್ರಿಪೆನ್ಸಿ ಅಡಿಯಲ್ಲಿ ಗುರುತಿಸಿರುವ ಮತದಾರರಿಗೆ ಕೂಡ ಬಿಎಲ್ಒ ಮಾಹಿತಿ ನೀಡಿಯೇ ಇಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ.
ಅಮ್ಮತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಲಿಯೇರಿಯಲ್ಲಿ ಮತದಾರರೊಬ್ಬರು ಎನ್ಯುಮರೇಶನ್ ಫಾರಂ ಭರ್ತಿ ಮಾಡಿ ಕೊಟ್ಟಿದ್ದರೂ ಬಿಎಲ್ಒ ಅಪ್ಲೋಡ್ ಮಾಡದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಮತದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೆ.7ರವರೆಗಿನ ಪ್ರಗತಿ
ಒಟ್ಟು 58,884 ನೋಟಿಸ್ಗಳಲ್ಲಿ 58,883 ನೋಟಿಸ್ ಜನರೇಟ್ ಆಗಿದೆ. 31,247 ನೋಟಿಸ್ಗಳು ವಿತರಣೆ ಮಾಡಲಾಗಿದ್ದು, 27,636 ನೋಟಿಸ್ ವಿತರಣೆ ಬಾಕಿ ಇದೆ. ಮಡಿಕೇರಿ ಕ್ಷೇತ್ರದಲ್ಲಿ 10,874 ಮತ್ತು ವಿರಾಜಪೇಟೆಯಲ್ಲಿ 20,373 ನೋಟಿಸ್ಗಳನ್ನು ವಿತರಿಸಲಾಗಿದೆ.
ನಾನು ಪ್ರಸಕ್ತ ದುಬೈನಲ್ಲಿ ಉದ್ಯೋಗದಲ್ಲಿದ್ದೇನೆ. ಎಸ್ಐಆರ್ ಲಾಜಿಕಲ್ ಡಿಸ್ಕ್ರೆಪೆನ್ಸಿ ಎಂದು ನೋಟಿಸ್ ಜಾರಿಯಾಗಿರುವ ವಿಷಯ ಮನೆಯವರು ತಿಳಿಸಿದ್ದಾರೆ. ಸೆ.10ರಂದು ಹಾಜರಾಗಬೇಕೆಂದು ನೋಟಿಸ್ನಲ್ಲಿ ಮಾಹಿತಿ ಇದೆ. ಲಾಜಿಕಲ್ ಡಿಸ್ಕ್ರಿಪೆನ್ಸಿ ವಿಷಯ ಬಿಎಲ್ಒ ಮೊದಲೇ ತಿಳಿಸಿದ್ದರೆ ನಾವು ಸರಿಪಡಿಸುತ್ತಿದ್ದೇವೆ.ಬಿಎಲ್ಒ ಯಾವುದೇ ಮಾಹಿತಿ ನೀಡಿಲ್ಲ.ವೀಡಿಯೊ ಕಾನ್ಫರೆನ್ಸ್ ಅಥವಾ ನನ್ನ ಪರವಾಗಿ ವಿಚಾರಣೆಗೆ ಹಾಜರಾಗಲು ಕುಟುಂಬಸ್ಥರಿಗೆ ಅವಕಾಶ ನೀಡಬೇಕು.
-ಅಮನ್ ಎಂ.ಎಂ. ಸಿದ್ದಾಪುರ






