ಎಸ್‌ಐಆರ್ ನೋಟಿಸ್: ವಿಚಾರಣೆಗೆ ಹಾಜರಾಗಲು ಸಂತ್ರಸ್ತರಿಗೆ ರಜೆ ಸಂಕಷ್ಟ!
‘ಮತ ಹಕ್ಕು ಉಳಿಸಿಕೊಳ್ಳಲು ವೇತನ ಸಹಿತ ರಜೆ ನೀಡಲು ಆಯೋಗ ಯಾಕೆ ಆದೇಶಿಸುವುದಿಲ್ಲ್ಲ?’

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಲ್ಲಿ ನೋಟಿಸ್ ಪಡೆದಿರುವ ಮತದಾರರಿಗೆ ಇದೀಗ ದಾಖಲೆಗಳ ಸಮಸ್ಯೆಯ ಜತೆಗೆ ವಿಚಾರಣೆಗೆ ಹಾಜರಾಗಲು ರಜೆ ಪಡೆಯುವುದೇ ಮತ್ತೊಂದು ಸವಾಲಾಗಿ ಪರಿಣಮಿಸಿದೆ. ಉದ್ಯೋಗಕ್ಕೆ ರಜೆ ಹಾಕಿದರೆ ವೇತನ ಕಡಿತದ ಆತಂಕ ಒಂದೆಡೆಯಾದರೆ, ವಿಚಾರಣೆಗೆ ಹಾಜರಾಗದಿದ್ದರೆ ಮತಹಕ್ಕಿಗೆ ಧಕ್ಕೆಯಾಗಬಹುದೆಂಬ ಭೀತಿ ಮತ್ತೊಂದೆಡೆಯಾಗಿದೆ.
ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಎಸ್‌ಐಆರ್ ಸಂತ್ರಸ್ತೆ ಸುಮಾ ವಿ. ಎನ್ನುವವರು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ‘ಪೋಷಕರ ವಿವರಗಳು ಮತ್ತು ಮತದಾರ ನಡುವಿನ ವಯಸ್ಸಿನ ವ್ಯತ್ಯಾಸವು 15 ವರ್ಷಗಳಿಗಿಂತ ಕಡಿಮೆ ಇದೆ’ ಎನ್ನುವ ವಿಚಾರಕ್ಕೆ ಚುನಾವಣಾ ಆಯೋಗದಿಂದ ನೋಟಿಸ್ ಪಡೆದುಕೊಂಡಿದ್ದರು.
ಅವರಿಗೆ ಸೆ.8ರ ಮಧ್ಯಾಹ್ನ 12 ಗಂಟೆಗೆ ಇಆರ್‌ಒ ಮುಂದೆ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿತ್ತು. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಕೆಲಸ ಮಾಡುತ್ತಿರುವ ಖಾಸಗಿ ಕಾಲೇಜಿನವರು ವೇತನ ಸಹಿತ ರಜೆ ನೀಡದ ಕಾರಣ, ವಿಚಾರಣೆಗೆ ಹಾಜರಾಗಲು ಸಾಧ್ಯವಾಗದೆ ಗೈರು ಹಾಜರಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಉದ್ಯೋಗದ ಕಾರಣದಿಂದ ನಿಗದಿತ ಸಮಯದಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದಿರುವುದು ಮತದಾರರ ಮುಂದಿರುವ ವಾಸ್ತವಿಕ ಸಮಸ್ಯೆಯನ್ನು ತೋರಿಸುತ್ತದೆ.
ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅನೇಕ ಮತದಾರರಿಗೆ ಎಸ್‌ಐಆರ್ ವಿಚಾರಣೆಗೆ ಹಾಜರಾಗಲು ರಜೆ ಪಡೆಯುವುದು ಸುಲಭವಲ್ಲ. ರಜೆ ಸಿಕ್ಕರೂ ಆ ದಿನದ ವೇತನ ಕಡಿತವಾಗುವ ಸಾಧ್ಯತೆ ಇದೆ. ದಿನಗೂಲಿ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಒಂದು ದಿನ ಕೆಲಸ ತಪ್ಪಿದರೂ ಕಷ್ಟವಾಗುತ್ತದೆ. ದೂರದ ಪ್ರದೇಶಗಳಿಂದ ವಿಚಾರಣೆಗೆ ಬರಬೇಕಾದವರಿಗೆ ಪ್ರಯಾಣ ವೆಚ್ಚವೂ ಹೆಚ್ಚುವರಿ ಹೊರೆಯಾಗುತ್ತದೆ.
ಎಸ್‌ಐಆರ್ ನೋಟಿಸ್ ಪಡೆದಿರುವ 43.81 ಲಕ್ಷ ಮತದಾರರಲ್ಲಿ ವಲಸೆ ಕಾರ್ಮಿಕರು, ಖಾಸಗಿ ಉದ್ಯೋಗಿಗಳು, ದಿನಗೂಲಿ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ ಜನರಿದ್ದಾರೆ. ಕೆಲವರು ಉದ್ಯೋಗಕ್ಕಾಗಿ ತಮ್ಮ ಕ್ಷೇತ್ರದಿಂದ ಹೊರಗಿರುವುದರಿಂದ ನಿಗದಿತ ದಿನಾಂಕದಂದು ವಿಚಾರಣೆಗೆ ಹಾಜರಾಗುವುದೇ ಕಷ್ಟವಾ
ಗಿದೆ. ಇಂತಹ ಸಂದರ್ಭಗಳಲ್ಲಿ ಪರ್ಯಾಯ ದಿನಾಂಕ, ಆನ್‌ಲೈನ್ ಅಥವಾ ಅಧಿಕೃತ ಪ್ರತಿನಿಧಿ ಮೂಲಕ ದಾಖಲೆ ಸಲ್ಲಿಸುವ ಅವಕಾಶ ಸೇರಿದಂತೆ ಮತದಾರರಿಗೆ ಅನುಕೂಲಕರ ವ್ಯವಸ್ಥೆ ಕಲ್ಪಿಸಬೇಕು ಎಂದು ಹಿರಿಯ ವಕೀಲ ಎಸ್.ಬಾಲನ್ ಒತ್ತಾಯಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳುವ ಹಕ್ಕು ಕೂಡ ಪ್ರಜಾಪ್ರಭುತ್ವದ ಮೂಲಭೂತ ಭಾಗವಾಗಿದೆ. ಆದುದರಿಂದ ಆ ಹಕ್ಕನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯೇ ಸಾಮಾನ್ಯ ನಾಗರಿಕನಿಗೆ ಉದ್ಯೋಗ ಮತ್ತು ಆದಾಯದ ಸಂಕಷ್ಟ ತಂದೊಡ್ಡದಂತೆ ಚುನಾವಣಾ ವ್ಯವಸ್ಥೆ ಕ್ರಮ ಕೈಗೊಳ್ಳಬೇಕು ಎಂದು ಬಾಲನ್ ಹೇಳಿದ್ದಾರೆ.
ರಜೆ ದಿನಗಳಲ್ಲೂವಿಚಾರಣೆ ನಡೆಸಿ
ನೋಟಿಸ್ ಪಡೆದುಕೊಂಡ ಮತದಾರರನ್ನು ಸೋಮವಾರ ದಿಂದ ಶುಕ್ರವಾರದ ಮಧ್ಯದ ದಿನಗಳಲ್ಲಿ ಇಆರ್‌ಒ/ಎಇಆರ್‌ಒಗಳ ಮುಂದೆ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಹೇಳುತ್ತಿರುವುದರಿಂದ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನನ್ನಂತಹ ಕಾರ್ಮಿಕರ ದಿನಗೂಲಿಗಷ್ಟೇ ಅಲ್ಲದೆ, ನಮ್ಮ ಕೆಲಸಕ್ಕೂ ಸಮಸ್ಯೆ ಆಗುತ್ತಿದೆ. ಹಾಗಾಗಿ ಚುನಾವಣಾ ಆಯೋಗವು ನೋಟಿಸ್ ಪಡೆದುಕೊಂಡ ಮತದಾರರು ತಮ್ಮ ಮತಹಕ್ಕನ್ನು ಸಾಬೀತುಪಡಿಸಿಕೊಳ್ಳಲು ರವಿವಾರ ಸೇರಿದಂತೆ ಇನ್ನಿತರ ಸರಕಾರಿ ರಜಾ ದಿನಗಳಲ್ಲೂ ವಿಚಾರಣೆ ನಡೆಸುವಂತೆ ಆದೇಶ ಹೊರಡಿಸಬೇಕು.
-ಸುಮಾ ವಿ. ನೋಟಿಸ್ ಸಂತ್ರಸ್ತೆ
ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಗೆ ಮತದಾನ ಮಾಡುವ ದಿನದಂದು ಎಲ್ಲ ರೀತಿಯ ಕಾರ್ಮಿಕರಿಗೂ ವೇತನ ಸಹಿತ ರಜೆ ನೀಡಬೇಕೆಂದು ಆದೇಶಿಸುವ ಚು.ಆಯೋಗ, ಚುನಾವಣೆಯಲ್ಲಿ ಭಾಗವಹಿಸಲು ಮತಹಕ್ಕನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯಾದ ಎಸ್‌ಐಆರ್ ವಿಚಾರಣೆಗೆ ಹಾಜರಾಗಲು ಅದೇ ರೀತಿಯ ನೆರವು ಯಾಕೆ ನೀಡಬಾರದು? ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಮುಂದುವರಿಯುವಂತೆ ನೋಡಿಕೊಳ್ಳಲು ಅಗತ್ಯವಾದ ವಿಚಾರಣೆ, ದಾಖಲೆ ಸಲ್ಲಿಕೆ ಹಾಗೂ ಆಕ್ಷೇಪಣೆ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಉದ್ಯೋಗಿಗಳಿಗೆ ವಿಶೇಷ ರಜೆ ಅಥವಾ ವೇತನ ಸಹಿತ ರಜೆಯ ಕುರಿತು ಸ್ಪಷ್ಟ ವ್ಯವಸ್ಥೆ ಇಲ್ಲದಿರುವುದು ಎಸ್‌ಐಆರ್ ಪ್ರಕ್ರಿಯೆಯಲ್ಲಿರುವ ಅಸಾಂವಿಧಾನಿಕ ಲೋಪದೋಷಗಳನ್ನು ತೋರುತ್ತದೆ.
-ಪ್ರೊ.ನಗರಗೆರೆ ರಮೇಶ್, ನಿವೃತ್ತ ಪ್ರಾಧ್ಯಾಪಕ
ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ಯಾವುದೇ ಅರ್ಹ ಮತದಾರ ತನ್ನ ಹೆಸರನ್ನು ಉಳಿಸಿಕೊಳ್ಳಲು ತಮ್ಮ ಕೆಲಸವನ್ನು ಕಳೆದುಕೊಳ್ಳುವ ಮತ್ತು ಆರ್ಥಿಕವಾಗಿ ನಷ್ಟ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು. ವಿಶೇಷವಾಗಿ ಕಡಿಮೆ ಆದಾಯದ ಕುಟುಂಬಗಳ ಪಾಲಿಗೆ ಒಂದು ದಿನದ ವೇತನವೂ ಮಹತ್ವದ್ದಾಗಿದೆ. ಹೀಗಾಗಿ ಎಸ್‌ಐಆರ್ ವಿಚಾರಣೆಗೆ ಹಾಜರಾಗುವ ಮತದಾರರಿಗೆ ಉದ್ಯೋಗದಾತರು ರಜೆ ನೀಡುವಂತೆ ಸರಕಾರ ಮತ್ತು ಚುನಾವಣಾ ಆಯೋಗ ಸ್ಪಷ್ಟ ಮಾರ್ಗಸೂಚಿ ನೀಡಬೇಕು. ಅಗತ್ಯವಿದ್ದಲ್ಲಿ ವೇತನ ಸಹಿತ ವಿಶೇಷ ರಜೆ, ಪರ್ಯಾಯ ವಿಚಾರಣಾ ದಿನಾಂಕ ಹಾಗೂ ದೂರದಲ್ಲಿರುವ ಮತದಾರರಿಗೆ ಸುಲಭವಾದ ದಾಖಲೆ ಸಲ್ಲಿಕೆ ವ್ಯವಸ್ಥೆ ಕಲ್ಪಿಸಬೇಕು.
-ಸುಷ್ಮಾ, ರಾಜ್ಯಾಧ್ಯಕ್ಷೆ
ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆ.






