ಎಸ್‌ಐಆರ್ ಸಾಂವಿಧಾನಿಕ ಹಕ್ಕುಗಳ ನಿರಾಕರಣೆಗೆ ನೆಪವಾಗದಿರಲಿ

ಡಾ. ಬಿ.ಅರ್. ಅಂಬೇಡ್ಕರ್ ಮತದಾನ ಮತ್ತು ಪ್ರಜಾತಾಂತ್ರಿಕ ವ್ಯವಸ್ಥೆ ಬಗ್ಗೆ ಸೌತ್‌ಬೋರೊ ಆಯೋಗದ (1918) ಮುಂದೆ ಮತದಾನ ಹಕ್ಕು, ಶಿಕ್ಷಣ, ಖಾಸಗಿ ಆಸ್ತಿ,ಮತ್ತು ಪೂರ್ವ ಷರತ್ತುಗಳಡಿ ನಿರ್ಧಾರವಾಗಬಾರದೆಂದು ಅಭಿಮತಿಸಿದ್ದರು. ಈ ಬಗೆಗಿನ ಅವಕಾಶಗಳನ್ನು ರಾಜ್ಯಾಂಗ ಸಭೆಯಲ್ಲಿ ಮತದಾನಕ್ಕೆ ಹಾಕಿ ಸಂಸತ್‌ನಿಂದ ನಿರ್ಗಮಿಸುತ್ತಿದ್ದಾಗ ಆಚಾರ್ಯ ಕೃಪಾಲಿನಿ ‘‘ಏನು ಸಮಾಚಾರ? ಇಂದು ಬಹಳಷ್ಟು ಹಸನ್ಮುಖಿಯಾಗಿದ್ದೀರಿ’’ ಎಂದಾಗ ‘‘ಮೊದಲು ರಾಜರು ರಾಣಿಯರ ಹೊಟ್ಟೆಯಲ್ಲಿ ಹುಟ್ಟುತ್ತಿದ್ದರು. ಆದರೆ ನಾವೀಗ ಈ ವ್ಯವಸ್ಥೆ ಬದಲಾಯಿಸಿದ್ದೇವೆ. ಇನ್ನುಮುಂದೆ ರಾಜರು ಮತದಾನದ ಪಟ್ಟಿಗೆಯಿಂದ ಹುಟ್ಟುವರು’’ ಎಂದು ಅಂಬೇಡ್ಕರ್ ನುಡಿದರು. ಈ ಆಶಯಗಳು ವಯಸ್ಕರ ಮತದಾನ ಹಕ್ಕಾಗಿ ರೂಪುಗೊಂಡಿತು. 1935ರ ಪೂರ್ವದಲ್ಲಿ ಮತದಾನ ಹಕ್ಕು ಅನೇಕ ವೈರುಧ್ಯಗಳಿಂದ ಕೂಡಿತ್ತು. ಸಂವಿಧಾನ ಪ್ರಜೆಗಳೆಲ್ಲರನ್ನು ಸಮಾನರನ್ನಾಗಿಸಿ, ಪೌರತ್ವವನ್ನು ನಿರ್ಧರಿಸುವ ಅಂಶಗಳನ್ನು (ಅನುಚ್ಛೇದ 5-11ರಲ್ಲಿ) ಬಹು ಆಯಾಮಗಳಲ್ಲಿ ವ್ಯಾಖ್ಯಾನಿಸಿದೆ. ಅದರಲ್ಲಿ ಹುಟ್ಟಿನಿಂದ ‘ಪೌರತ್ವ’ ನಿರ್ಧರಿಸುವುದು ಅತಿಮುಖ್ಯವಾಗಿದೆ. ಭಾರತ-ಪಾಕಿಸ್ತಾನ ರಾಷ್ಟ್ರಗಳಿಗೆ ಜನರ ಆಗಮನ-ನಿರ್ಗಮನದಡಿ ಸಂವಿಧಾನ ಪೌರತ್ವ ಸೂತ್ರವಿಧಿಸಿದೆ. ಇದರಡಿ ಮೊದಲ ಮತದಾರರ ಪಟ್ಟಿ (1952) ಅಖೈರಾಗಿತ್ತು. ಅವುಗಳ ಮುಂದುವರಿಕೆಯಾಗಿ ಅನೇಕ ಪರಿಷ್ಕರಣೆ ಆಗುತ್ತಾ ಬಂದಿದೆ. 1952ರಿಂದಲೂ ಮತದಾರರ ಪರಿಷ್ಕರಣೆ ಎಂದರೆ ಕಾನೂನುಬಾಹಿರವಾಗಿ ಮತದಾರರನ್ನು ಕೈಬಿಡುವುದಲ್ಲ ಅಥವಾ ಹಕ್ಕುಗಳ ಸಾಮೂಹಿಕ ನಿರಾಕರಣೆಯಾಗಿಲ್ಲ.
ಹಿಂದಿನಿಂದಲೂ ಮತದಾರರ ಪರಿಷ್ಕರಣೆ ಸಂದರ್ಭದಲ್ಲಿ ಮೃತರು, ಊರುಬಿಟ್ಟವರು, ವಯಸ್ಕರ ಹೊಸ ಸೇರ್ಪಡೆ, ಕೈಬಿಟ್ಟವರ ಸೇರ್ಪಡೆ, ವರ್ಗಾವಣೆ ಸಹಜವಾಗಿ ಆಗುತ್ತಿದ್ದವು. ಇಂದಿನ ವಿಶೇಷ ತೀವ್ರ ಪರಿಷ್ಕರಣೆ (SIR-Special Intensive Revision) ಎಲ್ಲಿಲ್ಲದಷ್ಟು ಗೊಂದಲದ ಗೂಡಾಗಿದೆ. ಅನೇಕರಲ್ಲಿ ಆತಂಕ, ಗಾಬರಿ, ಅನುಮಾನ ಮತ್ತು ಸಂಶಯಗಳನ್ನು ಹುಟ್ಟು ಹಾಕಿದೆ. ಈ ಮತದಾರರ ಪರಿಷ್ಕರಣೆ ಸಂದರ್ಭದಲ್ಲಿ ನಕಲಿ ಮತ್ತು ಅಸಲಿ ಮತದಾರರು ಯಾರೆಂಬುವುದನ್ನು ಧರ್ಮ, ಭಾಷೆ, ಜಾತಿ ಮತ್ತು ಸಂಸ್ಕೃತಿ ಆಚರಣೆಗಳಡಿ ಗುರುತಿಸಲು ಸಾಧ್ಯವಿಲ್ಲ. ನೆಹರೂ ಚುನಾವಣೆ ಪ್ರಕ್ರಿಯೆಗಳು ಪ್ರಜಾಪ್ರಭುತ್ವದೊಳಗಿನ ಅವ್ಯವಸ್ಥೆಗಳನ್ನು ತುಳಿದು ನಡೆಯುವ ವಿಶ್ವವಿದ್ಯಾನಿಲಯಗಳೆಂದೇ ಭಾವಿಸಿದ್ದರು. ಬಹುಶಃ ವ್ಯವಸ್ಥೆಯ ಲೋಪಗಳನ್ನು ಸರಿಪಡಿಸುವ ಮತ್ತು ವ್ಯಕ್ತಿಗಳ ಬೇಕು ಬೇಡಗಳನ್ನು ಆಯ್ಕೆ ಮಾಡುವ ಮತದಾರರನ್ನು ‘ನಕಲಿ ಮತ್ತು ಅಸಲಿ’ ಎಂಬ ಗುಮ್ಮನ ಮೂಲಕ ಅನೂಚಾನವಾಗಿ ಮತದಾರರಾಗಿರುವವರ ಹಕ್ಕುಗಳನ್ನು ಹರಣ ಮಾಡಲು ಸಂವಿಧಾನ ಪ್ರೋತ್ಸಾಹಿಸುವುದಿಲ್ಲ. ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನದಲ್ಲಿ ಈಶಾನ್ಯ ರಾಜ್ಯಗಳಲ್ಲಿ ಅಕ್ರಮ ನುಸುಳುಕೋರ ಬಾಂಗ್ಲಾದೇಶಿಯರನ್ನು ಪತ್ತೆಹಚ್ಚುವ ಕಾರ್ಯಕ್ಕಿಂತ ಇಲ್ಲೇ ಹುಟ್ಟಿ ಬೆಳೆದವರೂ ಆಕಸ್ಮಿಕವಾಗಿ ಮತದಾನದ ಹಕ್ಕನ್ನು ಕಳೆದುಕೊಂಡವರ ಪರವಾಗಿ ಭಾರತೀಯ ಚುನಾವಣಾ ಆಯೋಗ ನ್ಯಾಯಸಮ್ಮತವಾದ ಕಾನೂನಿನ ಸಹಕಾರ ಮತ್ತು ಬೆಂಬಲ ನೀಡುವಲ್ಲಿ ಪಕ್ಷಪಾತ ಧೋರಣೆ ತುಳಿದಿದೆ ಎಂಬ ಆರೋಪ ಎಲ್ಲೆಡೆ ವ್ಯಾಪಕ ಚರ್ಚೆಗಳಾಗಿವೆ.
ಇತ್ತೀಚೆಗೆ, ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ವೀಡಿಯೊ ಚಿತ್ರವನ್ನು ಪ್ರದರ್ಶಿಸಿ ರಾಮನಗರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದು ಸಹ ಪರಿಶೀಲನಾರ್ಹ ಅಂಶವಾಗಿದೆ. ಆದರೆ ರಾಜ್ಯದಲ್ಲಿರುವ ಅಲ್ಪಸಂಖ್ಯಾತರೆಲ್ಲರೂ ಅಲ್ಲಿನವರೆಂದರೆ ನಗೆಪಾಟಿಲಿನ ಸಂಗತಿಯಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ 12-05-2026ಕ್ಕೆ 5.56 ಕೋಟಿ ಮತದಾರರನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಆದರೆ ಕೇಂದ್ರ ಸರಕಾರ 2014ರಿಂದ 2024 ತನಕ 3,500 ಬಾಂಗ್ಲಾದೇಶಿಗರು ನುಸುಳಿದ್ದಾರೆಂದು ಸಾರಿದೆ. ಕೇಂದ್ರ ಮತ್ತು ರಾಜ್ಯಗಳ ನಿರ್ವಹಣಾ ವಿಷಯಗಳ ಹಂಚಿಕೆಯಡಿ ಅನ್ಯದೇಶಿಯರ ನಿಯಂತ್ರಣ ರಾಜ್ಯಗಳ ವ್ಯಾಪ್ತಿಗೆ ಬರುವುದಿಲ್ಲ. ಇವುಗಳಿಗೆ ಕಾನೂನು ಸುವ್ಯವಸ್ಥೆ ಪರಿಪಾಲನೆ ಆಗಿರುತ್ತದೆ. ಗಡಿ ಮತ್ತು ವಲಸೆ ನಿಯಂತ್ರಣ ಕೇಂದ್ರದ ನೇರ ಕರ್ತವ್ಯವಾಗಿದೆ. ರಾಜ್ಯ ಸಭೆಯಲ್ಲಿ ಸಂಸದರು ಕೇಳಿದ್ದ ಪ್ರಶ್ನೆಯೊಂದಕ್ಕೆ ಈ ಸರಕಾರ (2020) 79 ವಿದೇಶಗಳಿಂದ ಅಕ್ರಮವಾಗಿ 2018ರಲ್ಲಿ 1,731 ಜನರು ಮತ್ತು 2019ರಲ್ಲಿ 1,580 ಜನರು ನುಗ್ಗಿದ್ದಾರೆಂದು ಲಿಖಿತ ಉತ್ತರದಲ್ಲಿ ಹೇಳಿದೆ. ಒಟ್ಟು 3,311 ಜನರಲ್ಲಿ ನೈಜೀರಿಯಾದವರು 1,368 (ಶೇ.41.32) ಜನರಾದರೆ ಬಾಂಗ್ಲಾದೇಶಿಗಳು 744 (ಶೇ.22.47) ಜನರಿದ್ದರು. ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಪ್ರಕಾರ 5,000. ಒಟ್ಟಾರೆ ಅಕ್ರಮ ಬಾಂಗ್ಲದೇಶಿಗಳು ಎಷ್ಟಿದ್ದಾರೆನ್ನುವ ನಿಖರ ಅಂಕಿಅಂಶಗಳ ಹುಡುಕಾಟ ಮುಗಿಯದ ಯಕ್ಷಪ್ರಶ್ನೆಯಾಗಿದೆ. ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಸಂಘ-ಸಂಸ್ಥೆಗಳು ಆರೋಪಿಸಿದಂತೆ ನಿರಂತರವಾಗಿ ಬಾಂಗ್ಲಾದೇಶಿಗರು ನುಸುಳಿದ್ದರೆ ಅಲ್ಲಿನ ಜನಸಂಖ್ಯೆ ತೀವ್ರವಾಗಿ ಕುಗ್ಗಬೇಕಿತ್ತು. ಕಳೆದ ಅಲ್ಲಿನ ಚುನಾವಣೆಯಲ್ಲಿ ಮತದಾರರ ಸಂಖ್ಯೆ ತೀವ್ರವಾಗಿ ಇಳಿಮುಖವಾಗಿಲ್ಲ. ಬಾಂಗ್ಲಾದೇಶಿ ನುಸುಳುಕೋರರ ಸಮಸ್ಯೆ 2014 ತರುವಾಯ ಶೂನ್ಯವಾಗಬೇಕಿತ್ತು. ಆದರೂ ಜೀವಂತವಾಗುತ್ತಿದೆ. ಇದು ವ್ಯವಸ್ಥೆಯ ವೈಫಲ್ಯವೋ ಅಥವಾ ಗುಮ್ಮನಾಟವೊ ತಿಳಿಯದಾಗಿದೆ. ಹಿಡಿ ಮಂದಿ ವಲಸಿಗರನ್ನು ಹಿಡಿಯಲು ಹಲವು ದಾರಿಗಳಿವೆ. ಅವರಿಗಾಗಿ ಕೋಟ್ಯಂತರ ಮತದಾರರನ್ನು ಸಂಕಷ್ಟಕ್ಕೆ ದೂಡುವುದು ಪರಿಷ್ಕರಣೆಯ ಉದ್ದೇಶವಾಗಬಾರದು.
ಬಹುತೇಕ ಮಾಹಿತಿ ಜಾಲಗಳು: ‘ಆರೆಸ್ಸೆಸ್ ಕಾರ್ಯಕರ್ತರು ಬಂಗಾಳದ ಪರಿಷ್ಕರಣೆಯಲ್ಲಿ ಸಕ್ರಿಯವಾಗಿದ್ದ ಕಾರಣಕ್ಕೆ ಅಲ್ಲಿ ಭಾಜಪ ಗೆದ್ದಿದೆ’ ಎಂದು ಅಭಿಮತಗಳನ್ನು ಉಲ್ಲೇಖಿಸಿವೆ. ಒಂದುವೇಳೆ, ಇಂದಿನ ಪರಿಷ್ಕರಣೆ ಜನ್ಮತಃ ಬಂದಿರುವ ದಾಖಲೆಗಳನ್ನು ಚುನಾವಣೆ ಆಯೋಗ ಸ್ವೀಕರಿಸದಿದ್ದರೆ, ಅಹಿಂದ ಸಮುದಾಯಗಳಲ್ಲಿ ಶಿಕ್ಷಣ ಮಟ್ಟ ಹೆಚ್ಚಿದ್ದರೂ ಸಹ ದಾಖಲೀಕರಣದಲ್ಲಿ ಅವರೆಲ್ಲರೂ ಹಿಂದೆಬೀಳುತ್ತಾರೆ; ಹಾಗೂ ಮತದಾನ ಹಕ್ಕಿನಿಂದಲೂ ವಂಚಿತರಾಗುತ್ತಾರೆ. ಬಾಂಗ್ಲಾದೇಶಿ ಅಕ್ರಮ ವಲಸಿಗರ ಗುಮ್ಮನ ಮೂಲಕ ನೈಜ ದೇಶೀಯ ಮತದಾರರಾದ ಅಲ್ಪಸಂಖ್ಯಾತ, ಆದಿವಾಸಿ, ಅತಿಹಿಂದುಳಿದ ಮತ್ತು ಪರಿಶಿಷ್ಟರಿಗೆ ಅಥವಾ ಇತರ ವರ್ಗಗಳಿಗೆ ಮತದಾನದ ಹಕ್ಕನ್ನು ತಿರಸ್ಕರಿಸುವ ಹುನ್ನಾರವಾದರೆ, ಕೋಟ್ಯಂತರ ಜನರು ‘ಯೋಗ್ಯ ಸರಕಾರಗಳ ಆಯ್ಕೆಯಲ್ಲಿ’ ದೂರಸರಿದು ಮೂಲೆಗುಂಪಾಗುತ್ತಾರೆ. ಇದನ್ನು ಸಂವಿಧಾನ ಮಾನ್ಯ ಮಾಡುವುದಿಲ್ಲ. ಚುನಾವಣಾ ಆಯೋಗ ಪ್ರತಿಪಾದಿಸುವ Logical Discrepancy ಎಂದರೆ- ‘ತಾರ್ಕಿಕ ವ್ಯತ್ಯಾಸ’ ಅಥವಾ ‘ತಾರ್ಕಿಕ ಅಸಂಗತತೆ’ ಎಂದರ್ಥ. ಇದನ್ನೇ ಸರಳವಾಗಿ ಅಭಿಮತಿಸುವುದಾದರೆ, ಲಭ್ಯವಿರುವ ಎರಡು ಅಂಶಗಳು ಒಂದಕ್ಕೊಂದು ತಾಳೆ ಆಗದಿದ್ದಾಗ ಅಥವಾ ತಾರ್ಕಿಕವಾಗಿ ತಪ್ಪಾಗಿ ಕಂಡುಬಂದಾಗ ಉಂಟಾಗುವ ಗೊಂದಲ-ಗೋಜಲುಗಳನ್ನು ಸರಿಪಡಿಸಲು ಸಹಾಯವಾಗುತ್ತದೆ. ಒಂದು ವೇಳೆ ಮತದಾರರು ತಮ್ಮ ಹಕ್ಕುಗಳಿಂದ ವಂಚಿತರಾದರೆ ಈ ತಾರ್ಕಿಕ ವ್ಯತ್ಯಾಸ ಅನ್ವಯಿಕತೆ ಮೂಲಕ ಸಾಂವಿಧಾನಿಕ ಹಕ್ಕುಗಳ ಮುರುಸ್ಥಾಪನೆ ಹೇಗೆಂಬ ಯಕ್ಷ ಪ್ರಶ್ನೆ ಹಾಗೆಯೇ ಉಳಿದಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಸಹ ಸಮತೂಕದ ನ್ಯಾಯ ಅಭಿದಾನ ನೀಡಲಿಲ್ಲವೆಂದು ಹಾದಿಬೀದಿಯಲ್ಲಿ ವಿಮರ್ಶೆಯಾಗುತ್ತಿದೆ.
ಈಗಾಗಲೇ ಬಿಹಾರ, ಪ.ಬಂಗಾಳ ಮತ್ತು ತಮಿಳುನಾಡಿನಲ್ಲಿ ಎಸ್‌ಐಆರ್ ಪ್ರಕ್ರಿಯೆಗಳು ಕೆಲವು ರಾಜಕೀಯ ಪಕ್ಷಗಳಿಗೆ ಬಯಸಿರದ ಮರ್ಮಘಾತವನ್ನು ನೀಡಿದೆಯೆಂದು ರಾಜಕೀಯ ತಜ್ಞರ ಅಭಿಮತಗಳಾಗಿವೆ. ಸೈದ್ಧಾಂತಿಕವಾಗಿ ಪ್ರತಿಯೊಂದು ಚುನಾವಣೆಗಳಲ್ಲಿ ಮತದಾರರು ತಮ್ಮ ವಿರೋಧಾಭಾಸ ಮತದಾನ (Paradox of Voting system)ದ ಮೂಲಕ ಸರಕಾರಗಳನ್ನು ಆಯ್ಕೆ ಮಾಡುತ್ತಾರೆ. ಈ ಪ್ರಕ್ರಿಯೆಗಳಿಗೆ ಮತಗಟ್ಟೆಗಳವ್ಯಾಪ್ತಿಯಲ್ಲಿ ವಾಸಿಸುವ ಅರ್ಹ ಎಲ್ಲಾ ಮತದಾರರು ಭಾಗೀದಾರರಾದಾಗ ಮಾತ್ರ ವಿರೋಧಾಭಾಸ ಮತದಾನ ಸೈದ್ಧಾಂತಿಕತೆಗಳಿಗೆ ನ್ಯಾಯ ಸಿಗುತ್ತದೆ.
ಎಸ್‌ಐಆರ್ ಪ್ರಕ್ರಿಯೆಗಳು ಮತದಾರರ ಪಟ್ಟಿಯಲ್ಲಿರುವ ತಾರ್ಕಿಕ ವ್ಯತ್ಯಾಸಗಳನ್ನು ಸರಿಪಡಿಸುವ ಉದ್ದೇಶವಿದ್ದರೆ ಸ್ವಾಗತಾರ್ಹ. ಇದರ ನಾಮದಡಿ ರಾಜ್ಯದ ಲಕ್ಷಾಂತರ ಮತದಾರರ ಹಕ್ಕನ್ನು ಹರಣಮಾಡುವುದಾದರೆ ಅದನ್ನು ಸಂವಿಧಾನಬಾಹಿರ ಕೃತ್ಯವೆಂದು ಜನತಾ ನ್ಯಾಯಾಲಯ ತೀರ್ಮಾನಿಸುತ್ತದೆ. ಸಂವಿಧಾನದ ಆಶಯಗಳಡಿ ಆಯ್ದ ಮತದಾರರನ್ನು ವಂಚಿಸುವ ಸಂಸದೀಯ ವ್ಯವಹಾರಗಳ ಹೀನಕೃತ್ಯವಾಗುತ್ತದೆ. ಈಗಾಗಲೇ ಎಸ್‌ಐಆರ್‌ಬಗ್ಗೆ ರಾಜಕೀಯ ಪಕ್ಷಗಳಲ್ಲೇ ಪರ-ವಿರೋಧಗಳು ಸದ್ದುಮಾಡುತ್ತಿವೆ. ಮತ್ತೊಂದು, ಕಡೆ ಅಲ್ಲಲ್ಲಿ ಮತಗಟ್ಟೆ ಅಧಿಕಾರಿಗಳಿಂದಾಗುವ ಲೋಪಗಳೂ ಸಹಜವಾಗಿ ಮತದಾರರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ.
ಹಾಗೆಯೇ ಬಹುತೇಕ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಲಾಂಛನಗಳಡಿ ಮತದಾರರನ್ನು ಸಂಧಿಸುತ್ತಿದ್ದಾರೆ. ಈ ರಗಳೆಗಳು ನಿಲ್ಲಬೇಕಾದರೆ, ಪೌರತ್ವ ಮತ್ತು ಚುನಾವಣೆ ಆಯೋಗದ ಕರ್ತವ್ಯಗಳೆರಡೂ ಸಾಂವಿಧಾನಿಕ ಹಕ್ಕುಗಳ ಚೌಕಟ್ಟಿನಲ್ಲಿ ನೈಜತೆಗಳನ್ನು ಪ್ರತಿಪಾದಿಸುವ ಸಂಸದೀಯ ವ್ಯವಹಾರವಾಗಬೇಕಿದೆ. ಇಲ್ಲದಿದ್ದರೆ ಭಾರತೀಯ ಪ್ರಜಾಪ್ರಭುತ್ವ ಆಶಯಗಳು ಎಸ್‌ಐಆರ್ ಪ್ರಕ್ರಿಯೆಗಳ ಮೂಲಕ ನೇಣುಗಂಬಕ್ಕೇರುತ್ತವೆ. ಇದು ಸಂವಿಧಾನದ ಆಶಯಗಳಲ್ಲ. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ಸರಕಾರವು ವಿಶೇಷ ತೀವ್ರ ಪರಿಷ್ಕರಣೆ ಮೂಲಕ ಕೈಬಿಟ್ಟವರಿಗೆ ಅದರಲ್ಲೂ ಬಡವರಾದವರಿಗೆ ಧರ್ಮಾಧಾರಿತವಾಗಿ ಪಡಿತರ ಮತ್ತು ಇತರ ಸೌಲಭ್ಯಗಳನ್ನು ನೀಡಲು ನಿರಾಕರಿಸಿತ್ತು. ಅದರ ವಿರುದ್ಧ ಬಂಗಾಳದ ನಾಗರಿಕರು ಸುಪ್ರೀಂ ಕೋರ್ಟ್ ಮುಂದೆ ಮೇಲ್ಮನವಿ ಸಲ್ಲಿಸಿದಾಗ ಘನ ನ್ಯಾಯಾಲಯ ‘‘ವಿಶೇಷ ತೀವ್ರ ಪರಿಷ್ಕರಣೆ ಮೂಲಕ ಕೈಬಿಟ್ಟವರಿಗೆ ಯಾವುದೇ ಸೌಲಭ್ಯ ನಿರಾಕರಣೆ ಸಾಂವಿಧಾನಿಕ ವಿರೋಧಿ ಧೋರಣೆ ಆಗುತ್ತದೆ’’ ಎಂದು ಬಿಹಾರ ರಾಜ್ಯದ ದಾವೆಯಲ್ಲಿ ಉಲ್ಲೇಖಿಸಿದ ಅಂಶಗಳನ್ನು ಸಮರ್ಥಿಸಿ ಘನ ನ್ಯಾಯಾಲಯ ಅಭಿಮತಿಸಿದೆ.






