ಎಸ್‌ಐಆರ್ ವಿಶೇಷ ಅಭಿಯಾನ: ಎರಡು ದಿನಗಳಲ್ಲಿ 79,897 ಅರ್ಜಿ ಸ್ವೀಕಾರ
ನಮೂನೆ-6 ‘ಸ್ಥಳಾಂತರ-ಗೈರು’ ವರ್ಗದ ಶೇ.1ರಷ್ಟೂ ತಲುಪದ ಅರ್ಜಿ ಪ್ರಮಾಣ

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಎಎಸ್‌ಡಿಡಿಒ ಮೂಲಕ ‘ಶಾಶ್ವತ ಸ್ಥಳಾಂತರ’ ಹಾಗೂ ‘ಗೈರುಹಾಜರು’ ಎಂದು ಗುರುತಿಸಲ್ಪಟ್ಟಿರುವ 80.63ಲಕ್ಷ ಮತದಾರರಿಗೆ ಹೋಲಿಸಿದರೆ, ಸೆ.19 ಮತ್ತು 20ರಂದು ನಡೆದ ವಿಶೇಷ ಅಭಿಯಾನದಲ್ಲಿ ಕೇವಲ 53,682 ನಮೂನೆ-6 ಅರ್ಜಿಗಳು ಸಲ್ಲಿಕೆಯಾಗಿವೆ. ಎರಡು ದಿನಗಳಲ್ಲಿ ಸ್ವೀಕರಿಸಲಾದ ಎಲ್ಲ ಬಗೆಯ ಅರ್ಜಿಗಳನ್ನು ಸೇರಿಸಿದರೂ ಸಂಖ್ಯೆ 79,897ಕ್ಕೆ ಸೀಮಿತವಾಗಿದೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಎಎಸ್‌ಡಿಡಿಒ ವರ್ಗದ ಮೂಲಕ ಡಿಲೀಟ್ ಆದ ಅರ್ಹ ಮತದಾರರರು ಅ.27ರಂದು ಪ್ರಕಟವಾಗುವ ಅಂತಿಮ ಮತಪಟ್ಟಿಯಲ್ಲಿ ಸೇರ್ಪಡೆಗೊಳ್ಳಬೇಕಾದರೆ, ನಮೂನೆ-6 ಅನ್ನು ಸಲ್ಲಿಸಬೇಕು ಎಂದು ರಾಜ್ಯಮುಖ್ಯಚುನಾವಣಾಧಿಕಾರಿ ತಿಳಿಸಿದ್ದರು. ಇದರ ಭಾಗವಾಗಿ ಕೇಂದ್ರ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಕರ್ನಾಟಕದಲ್ಲಿ ನಾಲ್ಕು ದಿನಗಳ ಕಾಲ ವಿಶೇಷ ಅಭಿಯಾನವನ್ನು ಚುನಾವಣಾಧಿಕಾರಿಗಳು ಹಮ್ಮಿಕೊಂಡಿದ್ದರು.
ವಿಶೇಷ ಅಭಿಯಾನದ ಮೊದಲ ಹಂತವು ಆ.29 ಮತ್ತು 30 ರಂದು ನಡೆದಿತ್ತು. ಮೊದಲ ಹಂತದ ಅಭಿಯಾನಕ್ಕೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಎರಡನೇ ಹಂತದಲ್ಲಿ ಸೆ.19 ಮತ್ತು 20 ರಂದು ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿ ಅಭಿಯಾನ ನಡೆದಿದೆ. ಈ ವೇಳೆ ಮತದಾರರಿಗೆ ಹಕ್ಕು-ಆಕ್ಷೇಪಣೆ ಸಲ್ಲಿಕೆ, ವಿವರಗಳ ಪರಿಶೀಲನೆ ಹಾಗೂ ಮತದಾರರ ನೋಂದಣಿ ಸಂಬಂಧಿತ ಸೇವೆಗಳನ್ನು ಒದಗಿಸಲಾಗಿತ್ತು.
ಅಭಿಯಾನದ ಮೊದಲ ದಿನವಾದ ಸೆ.19ರಂದು ಒಟ್ಟು 36,034 ಅರ್ಜಿಗಳು ಬಂದಿದ್ದರೆ, ಸೆ.20 ರಂದು 43,863 ಅರ್ಜಿಗಳು ಸಲ್ಲಿಕೆಯಾಗಿವೆ. ಎರಡು ದಿನಗಳ ಒಟ್ಟು ಅರ್ಜಿಗಳಲ್ಲಿ ನಮೂನೆ-6ಕ್ಕೆ 53,682, ನಮೂನೆ-7ಕ್ಕೆ 1,608 ಹಾಗೂ ನಮೂನೆ-8ಕ್ಕೆ 24,607 ಅರ್ಜಿಗಳು ಸೇರಿವೆ. ಎಸ್‌ಐಆರ್ ನಲ್ಲಿ ಆಗಸ್ಟ್ 18ರ ವೇಳೆಗೆ ಅಂತಿಮಗೊಳಿಸಲಾಗಿದ್ದ ಎಎಸ್‌ಡಿಡಿಒ ಅಂಕಿಅಂಶಗಳ ಪ್ರಕಾರ, 65,45,721 ಮತದಾರರನ್ನು ಶಾಶ್ವತ ಸ್ಥಳಾಂತರ ಹಾಗೂ 15,17,056 ಮತದಾರರನ್ನು ಗೈರುಹಾಜರು/ ಪತ್ತೆಯಾಗದವರು ಎಂದು ಗುರುತಿಸಲಾಗಿತ್ತು. ಈ ಎರಡು ವರ್ಗಗಳ ಒಟ್ಟು ಸಂಖ್ಯೆ 80,62,777 ಆಗಿದೆ.
ಇದಕ್ಕೆ ಹೋಲಿಸಿದರೆ, ಸೆ.19 ಮತ್ತು 20ರಂದು ಸಲ್ಲಿಕೆಯಾದ 53,682 ನಮೂನೆ-6 ಅರ್ಜಿಗಳು 80.62 ಲಕ್ಷದ ಶೇ.0.67 ರಷ್ಟು ಮಾತ್ರ. ಆದರೆ, ನಮೂನೆ-6 ಅರ್ಜಿಗಳೆಲ್ಲವೂ ಎಎಸ್‌ಡಿಡಿಒ ಪಟ್ಟಿಯಲ್ಲಿರುವ ‘ಸ್ಥಳಾಂತರ’ ಅಥವಾ ‘ಗೈರುಹಾಜರು’ ಮತದಾರರಿಂದಲೇ ಬಂದಿವೆ ಎಂದು ಹೇಳಲು ಸಾಧ್ಯವಿಲ್ಲ. ನಮೂನೆ-6 ಅನ್ನು ಹೊಸದಾಗಿ ಅರ್ಹತೆ ಪಡೆದವರು ಸೇರಿದಂತೆ ಇತರ ಅರ್ಹ ಮತದಾರರೂ ಸಲ್ಲಿಸಬಹುದಾಗಿದೆ. ಹೀಗಾಗಿ ವಿಶೇಷ ಅಭಿಯಾನದಲ್ಲಿ ಬಂದ ನಮೂನೆ-6 ಅರ್ಜಿಗಳ ಸಂಖ್ಯೆಯನ್ನು ಎಎಸ್‌ಡಿಡಿಒ ಪಟ್ಟಿಯಿಂದ ಮರಳಿ ಮತಪಟ್ಟಿಗೆ ಸೇರ್ಪಡೆಗೊಂಡವರ ನಿಖರ ಸಂಖ್ಯೆಯೆಂದು ಪರಿಗಣಿಸಲು ಸಾಧ್ಯವಿಲ್ಲ.
ಕರ್ನಾಟಕದ ಎಸ್‌ಐಆರ್‌ನಲ್ಲಿ ಒಟ್ಟು 1,07,96,415 ಮತದಾರರನ್ನು ಎಎಸ್‌ಡಿಡಿಒ ವರ್ಗಕ್ಕೆ ಸೇರಿಸಲಾಗಿತ್ತು. ಇದು ಜೂ.16ರಂದು ಸ್ಥಗಿತಗೊಳಿಸಿದ್ದ 5,54,32,314 ಮತದಾರರ ಪಟ್ಟಿಯ ಶೇ.19.48ರಷ್ಟಾಗಿದೆ. ಈ ಎಎಸ್‌ಡಿಡಿಒ ವರ್ಗದಲ್ಲಿ ಶಾಶ್ವತ ಸ್ಥಳಾಂತರ, ಗೈರುಹಾಜರು, ಮೃತರು, ಈಗಾಗಲೇ ಬೇರೆಡೆ ನೋಂದಣಿಯಾಗಿರುವವರು ಹಾಗೂ ಇತರರು ಸೇರಿದ್ದಾರೆ. ಈ ಪೈಕಿ ಅತಿ ದೊಡ್ಡ ಎರಡು ವರ್ಗಗಳಾದ ‘ಶಾಶ್ವತ ಸ್ಥಳಾಂತರ’ ಮತ್ತು ‘ಗೈರುಹಾಜರು’ ಮತದಾರರ ಸಂಖ್ಯೆ 80.63 ಲಕ್ಷವಾಗಿರುವ ಹಿನ್ನೆಲೆಯಲ್ಲಿ, ಎರಡು ದಿನಗಳ ವಿಶೇಷ ಅಭಿಯಾನದಲ್ಲಿ ಬಂದ ಅರ್ಜಿಗಳ ಪ್ರಮಾಣ ತೀರ ಕಡಿಮೆ ಇಂದ ಕೂಡಿದೆ. ಇದಕ್ಕೂ ಮುನ್ನ ಆ.18ರ ವರೆಗೆ 4,34,235 ನಮೂನೆ-6 ಅರ್ಜಿಗಳು ಸ್ವೀಕರಿಸಲಾಗಿದ್ದವು.
ಸೆ.19 ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಚುನಾವಣಾ ಆಯೋಗದಿಂದ ಬೈಕ್ ರ್ಯಾಲಿ, ಆಟೊ ಪ್ರಚಾರ ಸೇರಿದಂತೆ ವ್ಯಾಪಕ ಜಾಗೃತಿ ಅಭಿಯಾನ ನಡೆಸಲಾಗಿತ್ತು. ಇದರ ಮರುದಿನವೇ ನಮೂನೆ-6 ಅರ್ಜಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಸೆ.19 ರಂದು 24,328 ನಮೂನೆ-6 ಅರ್ಜಿಗಳು ಬಂದಿದ್ದರೆ, ಸೆ.20 ರಂದು ಈ ಸಂಖ್ಯೆ 29,354ಕ್ಕೆ ಏರಿಕೆಯಾಗಿದೆ. ಅಂದರೆ ಒಂದೇ ದಿನದಲ್ಲಿ 5,026 ಅರ್ಜಿಗಳ ಹೆಚ್ಚಳ, ಸುಮಾರು ಶೇ.20.7ರಷ್ಟು ಏರಿಕೆ ಆಗಿದೆ. ಆದರೂ ಎರಡು ದಿನಗಳ ಒಟ್ಟು ನಮೂನೆ-6 ಅರ್ಜಿಗಳು 53,682 ಮಾತ್ರ ಎಂದು ನಾಗರಿಕ ಮತಕಾವಲು ಸಮಿತಿ ವಕ್ತಾರ ಸರೋವರ ತಿಳಿಸಿದ್ದಾರೆ.
80.62 ಲಕ್ಷ ತಲುಪಲು ಕನಿಷ್ಠ 300 ದಿನ ಅಗತ್ಯ ವಿಶೇಷ ಅಭಿಯಾನದ ಎರಡು ದಿನಗಳ ಸರಾಸರಿ ದಿನಕ್ಕೆ 26,841ಅರ್ಜಿಗಳು ಎಂಬ ವೇಗವನ್ನು ಗಣನೀಯವಾಗಿ ಮುಂದುವರಿಸಿದರೆ, ಎಸ್‌ಐಆರ್‌ನಲ್ಲಿ ‘ಶಾಶ್ವತ ಸ್ಥಳಾಂತರ’ ಮತ್ತು ‘ಗೈರುಹಾಜರು’ ಎಂದು ಗುರುತಿಸಲಾದ 80,62,777ಮತದಾರರ ಪ್ರಮಾಣವನ್ನು ತಲುಪಲು ಸುಮಾರು 300 ದಿನಗಳು ಬೇಕಾಗುತ್ತವೆ. -ಸರೋವರ ಬೆಂಕಿಕೆರೆ, ನಾಗರಿಕ ಮತಕಾವಲು ಸಮಿತಿ






