ಎಸ್ಐಆರ್ ಪಾರದರ್ಶಕವಾಗಿ ನಡೆಯಲಿದೆ, ಅನುಮಾನ ಬೇಡ : ರಾಜ್ಯ ಮುಖ್ಯಚುನಾವಣಾಧಿಕಾರಿ ವಿ.ಅನ್ಬುಕುಮಾರ್

ವಿ.ಅನ್ಬುಕುಮಾರ್
ಬೆಂಗಳೂರು : ಸದ್ಯ ದೇಶದಲ್ಲಿ ದೊಡ್ಡ ಚರ್ಚೆಯಾಗುತ್ತಿರುವುದು ವಿಶೇಷ ಮತಪಟ್ಟಿ ಪರಿಷ್ಕರಣೆ(SIಖ). ಪಶ್ಚಿಮ ಬಂಗಾಳ ಬಿಹಾರ, ತಮಿಳುನಾಡು ಹಾಗು ಕೇರಳದಲ್ಲಿ ನಡೆದ ಎಸ್ಐಆರ್ ಪ್ರಕ್ರಿಯೆ ಬಗ್ಗೆ ದೇಶದಲ್ಲಿ ಚರ್ಚೆ ನಡೀತಾ ಇದೆ. ಈಗ ಕರ್ನಾಟಕದಲ್ಲೂ ವಿಶೇಷ ಮತಪಟ್ಟಿ ಪರಿಷ್ಕರಣೆ ಜೂನ್ 20ರಿಂದ ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ವಾರ್ತಾ ಭಾರತಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರ ಸಂದರ್ಶನ ನಡೆಸಿದೆ. ಈ ವೇಳೆ ವಿ ಅನ್ಬುಕುಮಾರ್ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ವಾರ್ತಾ ಭಾರತಿ ನಡೆಸಿದ ಸಂದರ್ಶನದ ಪೂರ್ಣ ಪಠ್ಯ ಇಲ್ಲಿದೆ
ವಾರ್ತಾ ಭಾರತಿ : ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭವಾಗುತ್ತಿದೆ. ಹೇಗಿದೆ ರಾಜ್ಯದ ಎಸ್ಐಆರ್ ವೇಳಾಪಟ್ಟಿ?
ವಿ.ಅನ್ಬುಕುಮಾರ್ : ಮೇ 14ರಂದು ಕೇಂದ್ರ ಚುನಾವಣಾ ಆಯೋಗ ನೋಟಿಫಿಕೇಶನ್ ಹೊರಡಿಸಿದ್ದು ಅದರಲ್ಲಿ ಕರ್ನಾಟಕದ ಎಸ್ಐಆರ್ ವೇಳಾಪಟ್ಟಿಯೂ ಇದೆ. ಅದರಂತೆ ಜೂನ್ 20 ರಿಂದ ಪ್ರಿಂಟಿಂಗ್ ಶುರುವಾಗುತ್ತೆ. ಜೂನ್ 30ರಿಂದ ಜುಲೈ 29ರವರೆಗೆ ಮನೆ ಮನೆಗೂ ಪ್ರಿಂಟ್ ಮಾಡಲಾದ ಅರ್ಜಿಗಳನ್ನು ತಲುಪಿಸಿ ಅದನ್ನು ಭರ್ತಿ ಮಾಡಿಸಿ ವಾಪಸ್ಪಡೆಯಲಾಗುತ್ತದೆ. ಆಗಸ್ಟ್ 5ರಂದು ಡ್ರಾಫ್ಟ್ ರೋಲ್ ಪ್ರಕಟಣೆ ಮಾಡಲಾಗುತ್ತದೆ. ಆಗಸ್ಟ್ 5 ರಿಂದ ಅಕ್ಟೋಬರ್ 3 ರವರೆಗೂ ಅಕ್ಷೇಪಗಳಿದ್ದರೆ ಸಲ್ಲಿಸಬಹುದು ಹಾಗೂ ಆ ಅವಧಿಯಲ್ಲಿ ಅವುಗಳನ್ನ ಬಗೆಹರಿಸಲಾಗುತ್ತದೆ. ಅ.7ರಂದು ಫೈನಲ್ ರೋಲ್ ಬಿಡುಗಡೆಯಾಗುತ್ತದೆ. ಇದು ವೇಳಾಪಟ್ಟಿ. ಈ ಪ್ರಕ್ರಿಯೆ ಶುರುವಾಗಲು ಇನ್ನೊಂದು ತಿಂಗಳು ಮಾತ್ರ ಬಾಕಿ ಇದೆ. ನಾವು ತಯಾರಾಗುತ್ತಿದ್ದೇವೆ.
ವಾರ್ತಾ ಭಾರತಿ : ಈ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮತದಾರರು ಯಾವೆಲ್ಲ ದಾಖಲೆಗಳನ್ನು ನೀಡಬೇಕು?
ವಿ.ಅನ್ಬುಕುಮಾರ್ : ನಾವು ಎರಡು ಸೆಟ್ ಅರ್ಜಿಗಳನ್ನು ಪ್ರಿಂಟ್ ಮಾಡಿ ಯಾರೆಲ್ಲ 2025 ರ ಮತಪಟ್ಟಿಯಲ್ಲಿ ಇರುವ ಎಲ್ಲ ಮತದಾರರಿಗೂ ನೀಡುತ್ತೇವೆ. ಈ ಅರ್ಜಿ ಬಹಳ ಸರಳವಾಗಿ ಇದೆ. ಇದರಲ್ಲಿ ನಾವು ಸ್ವಲ್ಪ ಭಾಗ ಮಾಹಿತಿ ಹಾಕಿರುತ್ತೇವೆ. ಮಾಹಿತಿ ಅಂದರೆ ನಿಮ್ಮ ಮತಪಟ್ಟಿಯಲ್ಲಿ ಇರುವ ಪೋಟೊ ಹೆಸರು ವಿಳಾಸವನ್ನು ನಾವು ತುಂಬಿಸಿರುತ್ತೇವೆ. ಮತದಾರರ ಹೆಸರು, ತಂದೆ-ತಾಯಿ ಹೆಸರು, ಬರೆದು ಸಹಿ ಮಾಡಿ ನೀಡಬೇಕು. ಇಷ್ಟನ್ನು ಮಾತ್ರ ನಾವು ಮತದಾರರಿಂದ ನಿರೀಕ್ಷಿಸುವುದು. ಇದನ್ನ ಮಾಡಿದವರ ಹೆಸರು ಡ್ರಾಪ್ಟ್ ರೋಲ್ನಲ್ಲಿ ಇರುತ್ತೆ. ನಂತರ ಅದೇ ಅರ್ಜಿಯಲ್ಲಿ ವಿವರಿಸಲಾಗಿದೆ. ಯಾರು ಕೊಟ್ಟಿರುವ ಮಾಹಿತಿ 2002ರ ಮತಪಟ್ಟಿಯ ಮಾಹಿತಿಯ ಜೊತೆ ಹೊಂದಾಣಿಕೆ ಆಗದಿಲ್ಲವೋ ಅಥವಾ ಯಾರು ಅರ್ಜಿ ವಾಪಸ್ ನೀಡುವುದಿಲ್ಲವೋ ಅವರಿಗೆ ಮಾತ್ರ ನೋಟಿಸ್ ನೀಡಲಾಗುತ್ತದೆ. ಹೀಗೆ ನೋಟಿಸ್ ಪಡೆದವರು ಚುನಾವಣಾ ಆಯೋಗ ಹೇಳಿರುವ ಒಟ್ಟು 11 ದಾಖಲೆಗಳಲ್ಲಿ ಒಂದರ ಜೊತೆಗೆ ಸುಪ್ರೀಂ ಕೋರ್ಟ್ ಸೂಚಿಸಿರುವ ಅಧಾರ್ ಕಾರ್ಡ್ ದಾಖಲೆಯನ್ನು ನೀಡಬೇಕು.
ವಾರ್ತಾ ಭಾರತಿ : 11 ದಾಖಲೆಗಳಲ್ಲಿ ಎಲ್ಲವನ್ನೂ ನೀಡಬೇಕಾ ?
ವಿ.ಅನ್ಬುಕುಮಾರ್ : ಈ ಹನ್ನೊಂದು ದಾಖಲೆಗಳಲ್ಲಿ ಒಂದು ಜೊತೆಗೆ ಅಧಾರ್ ಕಾರ್ಡ್ ಕೊಟ್ಟರೆ ಸಾಕು. ಅದನ್ನ ಇಟ್ಟುಕೊಂಡು ಪರಿಶೀಲನೆ ಮಾಡುತ್ತಾರೆ.ಇಲ್ಲಿ ಎಲ್ಲರಿಗೂ ನೋಟಿಸ್ ಕೊಡಲ್ಲ. ಯಾರ ಮಾಹಿತಿ ಹೊಂದಾಣಿಕೆ ಆಗುವುದಿಲ್ಲವೋ ಅಂತಹವರಿಗೆ ಮಾತ್ರ ನೋಟಿಸ್ ನೀಡುತ್ತೇವೆ. ಅಥವಾ 2002 ರಲ್ಲಿ ಯಾರ ತಂದೆ ತಾಯಿ ಅಜ್ಜ ಅಜ್ಜಿಯ
ಹೆಸರೂ ಇರೋದಿಲ್ಲವೋ ಅಂತವರಿಗೆ ಮಾತ್ರ ನೋಟಿಸ್ ಜನರೇಟ್ ಆಗುತ್ತೆ. ಹೆಸರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಸಂಬಂಧ ಖಂಡಿತವಾಗಿಯೂ ನೋಟಿಸ್ ಜನರೇಟ್ ಆಗುತ್ತೆ. ಆದರೆ ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ನೀಡಿದರೆ ಅದನ್ನ ಸರಿ ಮಾಡಲಾಗುತ್ತದೆ.
ವಾರ್ತಾಭಾರತಿ : ಸ್ಪೆಲ್ಲಿಂಗ್ ಮಿಸ್ಟೇಕ್ ಸಂಬಂಧ ಯಾಕೆ ಚುನಾವಣಾ ಆಯೋಗವೇ ಪರಿಶೀಲನೆ ಮಾಡಿ ಖಾತ್ರಿಪಡಿಸಿಕೊಳ್ಳಬಾರದು ? ಅವರಿಗೆ ಎಲ್ಲ ದಾಖಲೆಗಳು ಬೇಗ ಸಿಗುತ್ತೆ. ಹೀಗಾಗಿ ಮತದಾರರಿಗೆ ಯಾಕೆ ಹೆಚ್ಚಿನ ಹೊರೆ ಹಾಕಬೇಕು ?
ವಿ.ಅನ್ಬುಕುಮಾರ್ : ತುಂಬಾ ಒಳ್ಳೆಯ ಪ್ರಶ್ನೆ. 18 ವರ್ಷದ ಎಲ್ಲರೂ ಮತದಾರರು ಆಗಬಹುದು ಅಂತ ಕಾನೂನು ಇದೆ. ಆದರೆ ಫಾರ್ಮ್ 6 ತುಂಬಿ ಕೊಡುವವರೆಗೂ ಅವರನ್ನು ಮತಪಟ್ಟಿಗೆ ಸೇರಿಸಲ್ಲ. ಅವರು ಸಹಿ ಮಾಡದ ಹೊರತು ನಾವು ಅವರನ್ನು ಮತಪಟ್ಟಿಗೆ ಸೇರಿಸಲು ಆಗಲ್ಲ. ಹಾಗೇ ಮತಪಟ್ಟಿಯಲ್ಲಿ ಕೋಮಾ, ಫುಲ್ಸ್ಟಾಪ್ ಬದಲಾವಣೆಯಾಗಬೇಕಾದರೂ ಮತದಾರನ ಲಿಖಿತ ಅನುಮತಿ ಕಡ್ಡಾಯ. ಹೀಗಾಗಿ ಕಾನೂನು ಅದೇ ರೀತಿ ಇದೆ. ಹೀಗಾಗಿ ಚುನಾವಣಾ ಆಯೋಗವೇ ಸ್ವತಂತ್ರವಾಗಿ ಸರಿಪಡಿಸಲು ಆಗುವುದಿಲ್ಲ. ಹೀಗಾಗಿ ನಾವು ಅವರಿಗೆ ನೋಟಿಸ್ ನೀಡಲೇಬೇಕು. ಅಲ್ಲದೆ ಎಲ್ಲ ನೋಟಿಸ್ ಮತದಾರರ ಹೆಸರನ್ನು ತೆಗೆಯುವ ಸಲುವಾಗಿಯೇ ಆಗಿರಲ್ಲ.. ನೋಟಿಸ್ ಎಂಬುದು ಸಂವಹನದ ಭಾಗ ಅಷ್ಟೇ..
ವಾರ್ತಾ ಭಾರತಿ : 2002 ರ ಮತದಾರರ ಪಟ್ಟಿಯನ್ನು ರೆಫರೆನ್ಸ್ ಆಗಿ ತೆಗೆದುಕೊಂಡಿರುವುದು ಏಕೆ..?
ವಿ.ಅನ್ಬುಕುಮಾರ್ : ಸಂವಿಧಾನದ ಪ್ರಕಾರ ಈಗ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕಾದರೆ ಭಾರತಿಯನಾಗಿರಬೇಕು, 18 ವಯಸ್ಸಾಗಿರಬೇಕು, ನಿರ್ದಿಷ್ಟ ಅಸೆಂಬ್ಲಿ ಕ್ಷೇತ್ರದಲ್ಲಿ ವಾಸವಾಗಿರಬೇಕು. ಕೋರ್ಟ್ನಿಂದ ಯಾವುದೇ ತಡೆ ಇರಬಾರದು. ಹೀಗಿದ್ದಲ್ಲಿ ಮತದಾರರಾಗಬಹುದು. 2002ನ್ನು ಯಾಕೆ ತೆಗೆದುಕೊಂಡಿದ್ದೇವೆ ಅಂದರೆ, 2002ರಲ್ಲಿ ಎಸ್ ಐಆರ್ ನಡೆದಿತ್ತು, ನಿಮ್ಮ ಹೆಸರು 2002ರ ಮತದಾರರ ಪಟ್ಟಿಯಲ್ಲಿ ಇದ್ದರೆ ನೀವು ಮತ್ತೆ ಭಾರತೀಯ ಎಂಬುದನ್ನು ಸಾಬೀತು ಮಾಡಬೇಕಾಗಿಲ್ಲ.
ವಾರ್ತಾ ಭಾರತಿ : ಮತದಾರರ ಪಟ್ಟಿ ಪರಿಷ್ಕರಣೆ ಅನ್ನೋದು ಅಗ್ಗಿಂದಾಗ ನಡೆಯುತ್ತಿರುತ್ತೆ. ಈಗ ಯಾಕೆ ವಿಶೇಷ ಮತ ಪಟ್ಟಿ ಪರಿಷ್ಕರಣೆ..?
ವಿ.ಅನ್ಬುಕುಮಾರ್ : ಈ ದೇಶದಲ್ಲಿ ಈಗ ನಡೆಯುತ್ತಿರುವುದು 9ನೇ ಬಾರಿಯ ಎಸ್ ಐಆರ್ಕೊನೆಯದಾಗಿ 2002ರಲ್ಲಿ ನಡೆದಿತ್ತು. ಅಮೇಲೆ ಯಾಕೆ ನಡೆದಿಲ್ಲ ಅಂತ ನಾನು ಹೇಳಲು ಆಗಲ್ಲ. ಅದು ನನ್ನ ವ್ಯಾಪ್ತಿಯಲ್ಲ.
ವಾರ್ತಾ ಭಾರತಿ : ಪ್ರತೀ ವರ್ಷ ಮತಪರಿಷ್ಕರಣೆ ನಡೆಯುವಾಗ ಈ ವಿಶೇಷ ಮತ ಪರಿಷ್ಕರಣೆಯ ಅವಶ್ಯಕತೆ ಏಕೆ ಬೇಕಿತ್ತು..?
ವಿ.ಅನ್ಬುಕುಮಾರ್ : ನಾವು ವರ್ಷ ವರ್ಷ ಮತ್ತಪಟ್ಟಿ ಪರಿಷ್ಕರಣೆ ಮಾಡುತ್ತೇವೆ. ಎರಡು ರೀತಿಯಲ್ಲಿ ಮತ ಪರಿಷ್ಕರಣೆ ಮಾಡಬಹುದು. ಒಂದು ಎಸ್ಎಸ್ಆರ್ ಇದರಲ್ಲಿ ಯಾರು ಹೊಸದಾಗಿ ಸೇರ್ಪಡೆಯಾಗುತ್ತಾರೋ, ಬೇರೆ ಕಡೆ ಶಿಪ್ಟ್ ಆಗ್ತಾರೋ ಅಥವಾ ಡಿಲೀಟ್ ಆಗ್ತಾರೋ ಅಂತವರನ್ನು ಮಾತ್ರ ಮಾಡುತ್ತೇವೆ. ಎಸ್ಐಆರ್ ಅನ್ನು ಯಾವಾಗ ಬೇಕಾದರೂ ಚುನಾವಣಾ ಆಯೋಗ ನಡೆಸಬಹುದು. ಇದರಲ್ಲಿ ಶೇಕಡಾ 100 ರಷ್ಟು ಮತಪಟ್ಟಿ ಪರಿಷ್ಕರಣೆ ಆಗುತ್ತದೆ. ಅದಕ್ಕಾಗಿಯೇ ನಾವು ಫಾರ್ಮ್ ಪ್ರಿಂಟ್ ಮಾಡಿ ಮತದಾರರಿಗೆ ಕೊಡುತ್ತೇವೆ. ಅಲ್ಲದೆ ಅವರು ಸಹಿ ಮಾಡುವ ಮೊದಲು ನಾನು ಭಾರತೀಯ ಪ್ರಜೆ, ನಾನು ಒಂದು ಕಡೆ ಮಾತ್ರ ಮತದಾರ, ಇದರಲ್ಲಿ ತಪ್ಪಿದ್ದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬಹುದು ಎಂದು ಇರುತ್ತದೆ.
ವಾರ್ತಾ ಭಾರತಿ: ವಲಸೆ ಕಾರ್ಮಿಕರು ಅರ್ಜಿ ತುಂಬಿಸಿ ವಾಪಸ್ ಕೆಲಸಕ್ಕೆ ಹೋದರೆ ಅವರಿಗೆ ನೋಟಿಸ್ ಹೇಗೆ ನೀಡುತ್ತೀರಾ..?
ವಿ.ಅನ್ಬುಕುಮಾರ್ : ಸಾಮಾನ್ಯವಾಗಿ ಬಿಎಲ್ಒಗಳು ಒಂದು ಮತದಾರನ ಮನೆಗೆ ಹೋದಾಗ ಆತ ಸಿಗದೇ ಇದ್ದರೆ ಮೂರು ಬಾರಿ ಹೋಗಿ ಪರಿಶೀಲಸಬೇಕು. ಹಾಗೂ ರಾಜಕೀಯ ಪಕ್ಷಗಳ ಏಜೆಂಟ್ಗಳ ಜೊತೆ ಸಂಪರ್ಕ ಮಾಡಿ ಅರ್ಜಿ ತಲುಪಿಸುವ ಕೆಲಸ ಮಾಡಬೇಕು. ಅಥವಾ ಅನ್ಲೈನ್ ಮೂಲಕವೂ ಅರ್ಜಿಯನ್ನು ಸಲ್ಲಿಸಬಹುದು ಅದಕ್ಕೂ ಚುನಾವಣಾ ಆಯೋಗ ಅವಕಾಶ ನೀಡಿದೆ. ನೋಟಿಸ್ ಕೊಡುವ ವಿಚಾರ ಈ ಹಂತದಲ್ಲಿ ನಾನು ಏನು ಹೇಳಲು ಆಗುವುದಿಲ್ಲ. ಡ್ರಾಫ್ಟ್ ರೋಲ್ ಪಬ್ಲಿಷ್ ಆಗುವ ಮೊದಲು ನಾನು ನೋಟಿಸ್ ಸಂಬಂಧ ಹೇಳಲಾರೆ.
ವಾರ್ತಾ ಭಾರತಿ : 59 ಸಾವಿರ ಬಿಎಲ್ಒಗಳು ಪ್ರತೀ ಮನೆಯನ್ನು ಹೇಗೆ ತಲುಪಿದರು ಎಂಬುದನ್ನು ಹೇಗೆ ಮೇಲ್ವಿಚಾರಣೆ ಮಾಡುತ್ತೀರಿ...?
ವಿ.ಅನ್ಬುಕುಮಾರ್ : ಒಂದು ಆ್ಯಪ್ ಸಿದ್ಧಪಡಿಸಿದ್ದೇವೆ. ಇದರಲ್ಲಿ ಎಷ್ಟು ಅರ್ಜಿ ಪ್ರಿಂಟ್ ಮಾಡಲಾಗಿದೆ. ಎಷ್ಟು ಮನೆಗೆ ತಲುಪಿದೆ. ಎಷ್ಟು ವಾಪಸ್ ಬಂದಿದೆ. ಎಷ್ಟು ಅರ್ಜಿ ವಾಪಸ್ಬಂದಿಲ್ಲ. ಬರದೇ ಇರಲು ಕಾರಣ ಏನು..? ಇದೆಲ್ಲವನ್ನು ಸಂಗ್ರಹಿಸಿ ವೆಬ್ಸೈಟ್ನಲ್ಲಿ ಪ್ರಸಾರ ಮಾಡುತ್ತೇವೆ. ಜೊತೆಗೆ ಗ್ರಾಮ ಚಾವಡಿಯಲ್ಲೂ ಪ್ರಕಟಣೆ ಮಾಡುತ್ತೇವೆ. ಇದು ಬಹಳ ಪಾರದರ್ಶಕವಾಗಿ ನಡೆಯುತ್ತದೆ.
ವಾರ್ತಾ ಭಾರತಿ : ಕೆಲವರು ಅವಿದ್ಯಾವಂತರು ಇದ್ದು ಅವರು ಇಷ್ಟು ದೊಡ್ಡ ಅರ್ಜಿಯನ್ನು ಹೇಗೆ ತುಂಬಿಸಬೇಕು..?
ವಿ.ಅನ್ಬುಕುಮಾರ್ : ಅವರು ಬಿಎಲ್ಒಗಳ ಬಳಿಯೇ ಉತ್ತರ ಪಡೆಯಬಹುದು ಅವರಿಂದಲೇ ಸಹಾಯ ಪಡೆದು ಅರ್ಜಿ ತುಂಬಿಸಬಹುದು..
ವಾರ್ತಾ ಭಾರತಿ : ಪಶ್ಚಿಮ ಬಂಗಾಳದಲ್ಲಿ ಇನ್ನೂ 21 ಲಕ್ಷ ಮತಗಳು ಅಡ್ಡಕತ್ತರಿಯಲ್ಲಿದೆ. ಹೀಗಿರುವಾಗ ಇಲ್ಲಿಯ ಜನಕ್ಕೆ ಆ ರೀತಿ ಆಗಲ್ಲ ಎಂದು ಹೇಗೆ ಆಶ್ವಾಸನೆ ನೀಡುತ್ತೀರಾ..?
ವಿ.ಅನ್ಬುಕುಮಾರ್ : ನಾನು ಬೇರೆ ರಾಜ್ಯಗಳ ಬಗ್ಗೆ ಕಮೆಂಟ್ ಮಾಡುವುದಿಲ್ಲ. ಆದರೆ ಈ ಮತಪಟ್ಟಿ ಪರಿಷ್ಕರಣೆ ಬಹಳ ಪ್ರಾಮಾಣಿಕವಾಗಿ ಕಾನೂನಾತ್ಮಕವಾಗಿ ಪಾರದರ್ಶಕವಾಗಿ ನಡೆಯುತ್ತಿದೆ. ದಯವಿಟ್ಟು ಎಲ್ಲರೂ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು ಹಾಗೂ ಇದನ್ನು ಯಶಸ್ವಿ ಮಾಡಬೇಕು ಎಂದು ಕೋರಿಕೊಳ್ಳುತ್ತೇನೆ.
ವಾರ್ತಾ ಭಾರತಿ : ಮುಸ್ಲಿಮ್ ಸಮುದಾಯ, ಸೇರಿ ಅಲ್ಪಸಂಖ್ಯಾತ ಸಮುದಾಯಗಳು, ವಲಸೆ ಕಾರ್ಮಿಕರು, ಅಲೆಮಾರಿಗಳಿಗೆ ದೇಶದ ಇತರ ರಾಜ್ಯಗಳ ಎಸ್ಐಆರ್ ಪ್ರಕ್ರಿಯೆಯ ಬೆಳವಣಿಗೆ ನೋಡಿ ಭಯಭೀತರಾಗಿದ್ದಾರೆ. ಅವರಿಗೆ ರಾಜ್ಯ ಚುನಾವಣಾ ಆಯೋಗ ಯಾವ ಅಭಯ ನೀಡುತ್ತೆ..?
ವಿ.ಅನ್ಬುಕುಮಾರ್ : ಕರ್ನಾಟಕದಲ್ಲಿ 5 ಕೋಟಿ 55 ಲಕ್ಷ 37 ಸಾವಿರ ಮತದಾರರು ಇದ್ದಾರೆ. ಇದರಲ್ಲಿ ಶೇಕಡಾ 86ರಷ್ಟು ಮ್ಯಾಪಿಂಗ್ ಮಾಡಲಾಗಿದೆ. ಮತದಾರರ ಹೆಸರು, ವಿಳಾಸ ಬಿಟ್ಟು ನಾವು ಯಾವುದೇ ಡಾಟಾ ಇಟ್ಟುಕೊಂಡಿಲ್ಲ. ಅವರ ಆರ್ಥಿಕ ಸ್ಥಿತಿ, ಸಾಮಾಜಿಕ ಸ್ಥಿತಿ ನಮಗೆ ಅವಶ್ಯಕತೆ ಇಲ್ಲ. ಇದರ ಬಗ್ಗೆ ಯಾವುದೇ ಅನುಮಾನ ಯಾರಿಗೂ ಬೇಡ. ಇದರಿಂದ ಯಾರಿಗೂ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ನಾನು ಈ ಆಶ್ವಾಸನೆ ಜನರಿಗೆ ನೀಡಬಲ್ಲೆ.






