ಶಾಲೆಹಕ್ಲುವಿನಲ್ಲಿ ದಲಿತರ ಸಹಿತ 6 ಮನೆಯವರಿಗೆ ಜೀವಜಲಕ್ಕೆ ತತ್ವಾರ

ಹೊಳೆಯ ಸಮೀಪದಲ್ಲಿ ನಿರ್ಮಿಸಿಕೊಂಡ ಗುಮ್ಮಿಯ (ನೀರಿನ ಹೊಂಡ) ನೀರು ಕೆಟ್ಟಿರುವುದು.
ಕುಂದಾಪುರ : ಮನೆಯ ಸಮೀಪವೇ ಹರಿಯುವ ಹೊಳೆಯಿದ್ದರೂ ನೀರು ಉಪಯೋಗಕ್ಕಿಲ್ಲ. ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರಿನ ಸೌಲಭ್ಯಕ್ಕೆ ಅಲೆದಾಡಿದರೂ ಸಮಸ್ಯೆ ಪರಿಹಾರವಾಗಿಲ್ಲ. ದಲಿತ-ದಮನಿತರ ಅಭಿವೃದ್ಧಿ, ಅವರಿಗೆ ಮೂಲಸೌಕರ್ಯ ಕಲ್ಪಿಸುವ ಚಿಂತನೆ ಎಂಬುದು ಕೇವಲ ಭಾಷಣಕ್ಕೆ ಮಾತ್ರವೇ ಸೀಮಿತವಾಗಿದೆ. ಇದಕ್ಕೆ ತಾಜಾ ಉದಾಹರಣೆ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರೂರು.
ಕಾರೂರು ಗ್ರಾಮದ ಶಾಲೆಹಕ್ಲು ಎಂಬಲ್ಲಿ ಕಳೆದ ನಾಲ್ಕು ದಶಕಗಳಿಂದ ನೆಲೆಸಿರುವ ನಾಲ್ಕು ದಲಿತ ಕುಟುಂಬಗಳು, ಎರಡು ಬಂಟ ಸಮುದಾಯದ ಕುಟುಂಬಗಳು ಕುಡಿಯುವ ನೀರಿನ ಸಮಸ್ಯೆಗೆ ನಲುಗಿ ಹೋಗಿವೆ. ಪರಿಶಿಷ್ಟ ಜಾತಿ ಸಮುದಾಯದ ರುಕ್ಮಿಣಿ ಮತ್ತು ಕುಟುಂಬ, ಆನಂದ ಕಾರೂರು ಕುಟುಂಬ, ಶ್ವೇತಾ ಕುಟುಂಬ, ಸವಿತಾ ಕುಟುಂಬ ಕೂಲಿ ಕಾರ್ಯವನ್ನೇ ನೆಚ್ಚಿಕೊಂಡಿದ್ದಾರೆ.
ಅದೇ ರೀತಿ ಬಂಟ ಸಮುದಾಯದ ಅಶೋಕ್ ಶೆಟ್ಟಿ, ಸಾಧಮ್ಮ ಶೆಟ್ಟಿ ಎಂಬವರ ಮನೆಗಳೂ ಇಲ್ಲಿವೆ. ಒಟ್ಟು 6 ಮನೆಗಳ ಪೈಕಿ 2 ಮನೆಗಳಿಗೆ ಮಾತ್ರ ಹಕ್ಕು ಪತ್ರವಿದ್ದು, ನಾಲ್ಕು ಮನೆಗಳು ಹಕ್ಕುಪತ್ರ ವಂಚಿತವಾಗಿವೆ. ನಿವಾಸಿಗಳಿಗೆ ಒಂದಷ್ಟು ಜಾಗವಿದ್ದರೂ ನೀರಿನ ಅಭಾವದಿಂದಾಗಿ ಕೃಷಿ- ತೋಟಗಾರಿಕೆ ಮಾಡಲು ಅಡ್ಡಿಯಾಗಿದೆ. ಕೆಲ ದಿನಗಳಿಂದ ಗ್ರಾಪಂ ಮುತುವರ್ಜಿ ವಹಿಸಿ ಟ್ಯಾಂಕ್ ಮೂಲಕ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಂಡಿದ್ದರೂ, ಇವರು ಕೇಳುತ್ತಿರುವುದು ಶಾಶ್ವತ ಪರಿಹಾರವನ್ನು.
ಕುಡಿಯುವ ನೀರಿಗೆ ತಾತ್ವಾರ!: ಶಾಲೆಹಕ್ಲುವಿನ ಈ ಮನೆಗಳಿರುವ ಕೊಂಚ ಕೆಳಭಾಗದಲ್ಲಿ ಕುಬ್ಜಾ ನದಿ ಹರಿಯು ತ್ತದೆ. ಅದರ ಪಕ್ಕದಲ್ಲಿ ಗುಮ್ಮಿಗಳನ್ನು (ಚಿಕ್ಕ ಬಾವಿ ಮಾದರಿಯ ನೀರಿನ ಹೊಂಡ) ನಿರ್ಮಿಸಿಕೊಂಡು ಅದೇ ನೀರನ್ನು ಸೋಸಿ ಕುಡಿಯುವುದಲ್ಲದೆ ಗೃಹಬಳಕೆಗೆ ಉಪಯೋಗಿಸಲಾಗುತ್ತಿತ್ತು. ಮಳೆಗಾಲದಲ್ಲಿ ಹಾಗೂ ಜನವರಿ ಮೊದಲ ವಾರದವರೆಗೆ ಈ ನೀರು ಅನುಕೂಲವಾಗುತ್ತಿತ್ತು.
ನದಿಯಲ್ಲಿ ತ್ಯಾಜ್ಯಗಳು ಕಂಡುಬಂದ ಹಿನ್ನೆಲೆ ಹಾಗೂ ನೀರು ಕಲುಷಿತಗೊಂಡ ಕಾರಣ ಒಂದೆಡೆಯಾದರೆ ಇದೀಗ ಮಂಗಗಳು ಈ ನೀರು ಆಶ್ರಯಿಸಿದ್ದು, ತಿಂಗಳುಗಳಿಂದೀಚೆಗೆ ಸ್ಥಳೀಯ ಭಾಗದಲ್ಲಿ ಮಂಗನ ಕಾಯಿಲೆ ಹೆಚ್ಚಿದ್ದರಿಂದ ಹೊಂಡದಲ್ಲಿ ಶೇಖರಗೊಂಡ ನೀರನ್ನು ಕುಡಿಯಲು ಇಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ. ಇದರಿಂದ ಬೇಸಿಗೆ ಆರಂಭಕ್ಕೂ ಮೊದಲೇ ಈ ಆರು ಕುಟುಂಬಗಳಿಗೆ ಕುಡಿಯುವ ನೀರಿಗೆ ಸಂಚಕಾರ ಬಂದಿದೆ.
ಇದೀಗ ಈ ಕುಟುಂಬಗಳು ತಮ್ಮ ಸುದೀರ್ಘ ಕಾಲದ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಬಯಸುತ್ತಿವೆ. ಗ್ರಾಪಂ ಮನಸ್ಸು ಮಾಡಿ, ಇಚ್ಛಾಶಕ್ತಿಯನ್ನು ಪ್ರದರ್ಶಿಸಿದರೆ ಇದೇನು ಕಠಿಣ ಸವಾಲು ಅಲ್ಲ. ಆದರೆ ಗ್ರಾಪಂನ ಆಡಳಿತಾವಧಿ ಶೀಘ್ರವೇ ಮುಕ್ತಾಯಗೊಳ್ಳುವುದರಿಂದ ಮುಂದೆ ಈಗಿರುವ ತಾತ್ಕಾಲಿಕ ಪರಿಹಾರ ಮುಂದುವರಿಯುವುದೇ ಅಥವಾ ಕಡುಬೇಸಿಗೆಯಲ್ಲಿ ಇವರ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವುದೇ ಎಂಬ ಭೀತಿ ಈ ಕುಟುಂಬಗಳನ್ನು ಆವರಿಸಿದೆ.
‘ಉಪಯೋಗಕ್ಕಿಲ್ಲದ ಕೊಳವೆಬಾವಿ’
ಕಳೆದ 40-45 ವರ್ಷಗಳಿಂದ ಈ ಕುಟುಂಬಗಳು ಇಲ್ಲಿ ನೆಲೆಸಿವೆ. ಇಲ್ಲಿನ ಮನೆಗಳಲ್ಲಿ ಶಾಲೆಗೆ ಹೋಗುವ ಮೂರ್ನಾಲ್ಕು ಮಕ್ಕಳಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಈ ಭಾಗದಲ್ಲಿ ಉಪಯೋಗಿಸುತ್ತಿದ್ದ ನೀರಿನ ಸಾರ್ವಜನಿಕ ಬೋರ್ವೆಲ್ ಹಳೆಯದಾಗಿ ದುಸ್ಥಿತಿಗೊಂಡ ಕಾರಣ ನೀರು ಬಳಸಲಾಗದೆ ಸಮಸ್ಯೆ ಉಲ್ಬಣಿಸಿದೆ. ಬಳಿಕ ಗ್ರಾಪಂನಿಂದ ಕೊರೆಸಲಾದ 2 ಕೊಳವೆ ಬಾವಿಯಲ್ಲಿ ನೀರು ಸಿಗದೆ ಉಪಯೋಗಕ್ಕಿಲ್ಲದಂತಾಗಿದೆ ಎಂದು ಸಂತ್ರಸ್ತ ಆನಂದ ಕಾರೂರು ಹೇಳಿದ್ದಾರೆ.
ಜಲಜೀವನ್ ಮಿಷನ್ ಯೋಜನೆಯಡಿ ಇಲ್ಲಿ ಪೈಪ್ಲೈನ್ಗಳ ಮೂಲಕ ಮನೆಗಳಿಗೆ ನಳ್ಳಿ ಅಳವಡಿಸಿದರೂ ಯೋಜನೆ ನೀರು ಬಂದಿಲ್ಲ ಎಂದು ನಿವಾಸಿ ಆನಂದ ಕಾರೂರು ಹೇಳುತ್ತಾರೆ. ಹಲವು ವರ್ಷಗಳಿಂದ ನೀರಿನ ಸಮಸ್ಯೆಯಿದೆ. ಕೂಲಿಕೆಲಸ ಮಾಡುವ ನಾವು ಲಕ್ಷಾಂತರ ರೂ. ವೆಚ್ಚ ಮಾಡಿ ಬಾವಿ ತೋಡಿಸುವಷ್ಟು ಸಶಕ್ತರಾಗಿಲ್ಲ. ಸದ್ಯ ಗ್ರಾಪಂ ಟ್ಯಾಂಕ್ ಮೂಲಕ ಸರಬರಾಜು ಮಾಡುವ ನೀರನ್ನು ಬಳಸುತ್ತಿದ್ದೇವೆ. ಸಂಬಂಧಪಟ್ಟವರು ಶಾಶ್ವತ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ ಎಂದು ಸಂತ್ರಸ್ತೆ ನಿವಾಸಿ ರುಕ್ಮಿಣಿ ಸಮಸ್ಯೆಯನ್ನು ವಿವರಿಸಿದರು.
ಶಾಲೆಹಕ್ಕು ನಿವಾಸಿಗಳ ಕುಡಿಯುವ ನೀರಿನ ಮನವಿಗೆ ಗ್ರಾಪಂ ಸ್ಪಂದಿಸಿದೆ. ಇತ್ತೀಚೆಗೆ ಇಲ್ಲಿನ ಆರು ಮನೆಗಳ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅರಿವಿಗೆ ಬಂದ ಕೂಡಲೇ ಸ್ಥಳೀಯಾಡಳಿತ ಸ್ಪಂದನ ನೀಡಿ ಎರಡು ದಿನಕ್ಕೊಮ್ಮೆ 2 ಸಾವಿರ ಲೀಟರ್ ಟ್ಯಾಂಕ್ನಲ್ಲಿ ಕುಡಿಯಲು ಯೋಗ್ಯವಾದ ಶುದ್ಧ ನೀರನ್ನು ಪೂರೈಸುತ್ತಿದ್ದೇವೆ. ಇಲ್ಲಿಗೆ ಸಮೀಪದ ರಾಂಪೈಜೆಡ್ಡು ಎಂಬಲ್ಲಿ ಇತ್ತೀಚೆಗೆ ಕೊರೆಸಿದ ಸಾರ್ವಜನಿಕ ಕೊಳವೆಬಾವಿಯಲ್ಲಿ ಯಥೇಚ್ಛ ನೀರಿದ್ದು ಅದಕ್ಕೆ ಮೋಟರ್ ಪಂಪ್ ಅಳವಡಿಸಿ ಜೆಜೆಎಂ ನೀರಿನ ಪೈಪ್ ಮೂಲಕ ಟ್ಯಾಂಕ್ನಿಂದ ನಳ್ಳಿಗೆ ಪೂರೈಸಿದರೆ ತಾತ್ಕಾಲಿಕ ಅನುಕೂಲ. ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯಿಂದ ಮೇಲಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಿದ ಮಾಹಿತಿಯಿದೆ. ಶಾಶ್ವತ ಪರಿಹಾರವಾಗಿ ಆದ್ಯತೆ ಮೇರೆಗೆ ಕೊಳವೆಬಾವಿ ನಿರ್ಮಿಸಿದಲ್ಲಿ ಇಲ್ಲಿನ ನಿವಾಸಿಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ.
-ರವಿ ಶೆಟ್ಟಿ, ಹೊಸಂಗಡಿ ಗ್ರಾಪಂ ಸದಸ್ಯ
ಸಮಸ್ಯೆ ಬಗೆಹರಿಯದಿದ್ದರೆ ಪ್ರತಿಭಟನೆ ಅನಿವಾರ್ಯ. ದಲಿತರ ಕಷ್ಟ- ಕಾರ್ಪಣ್ಯಕ್ಕೆ ಸರಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮನ್ವಯತೆ ಹಾಗೂ ಇಚ್ಛಾಶಕ್ತಿಯ ಸ್ಪಂದನ ಅಗತ್ಯ. ಇಲ್ಲವಾದಲ್ಲಿ ಎಲ್ಲವನ್ನೂ ಹೋರಾಟದ ಮುಖಾಂತರವೇ ಪಡೆಯುವುದು ಅನಿವಾರ್ಯ. ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಆದರೆ ಇದಕ್ಕೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಒಂದೆರಡು ಮನೆಗೆ ಅನುಕೂಲವಾಗುವ ಬದಲು ಆರೇಳು ಮನೆಗಳಿಗೆ ನೀರು ಸಿಗುವಂತೆ ತೆರೆದ ಬಾವಿ ರಚಿಸಿದ್ದರೆ ನಮಗೆ ಈ ಕಷ್ಟ ಬರುತ್ತಿರಲಿಲ್ಲ. ತಾತ್ಕಾಲಿಕವಾಗಿ ಸ್ಥಳೀಯಾಡಳಿತ ಚುನಾಯಿತ ಪ್ರತಿನಿಧಿಗಳು ಸ್ಪಂದನ ನೀಡಿ ಟ್ಯಾಂಕ್ನಲ್ಲಿ ನೀರು ನೀಡುತ್ತಿದ್ದಾರೆ. ತಿಂಗಳುಗಳಲ್ಲಿ ಅವರ ಅವಧಿ ಮುಗಿಯುತ್ತದೆ. ಬಳಿಕ ನಾವು ಯಾರ ಬಳಿ ಸಮಸ್ಯೆ ಹೇಳಬೇಕು?. ಬೇಸಿಗೆ ಆರಂಭವಾದರೆ ನೀರಿಗೆ ಸಮೀಪದ ಮನೆಯವರ ಬಾಗಿಲಿಗೆ ಹೋಗಬೇಕು. ನಮ್ಮ ಮೂಲಭೂತ ಸೌಕರ್ಯಗಳ ಬಗ್ಗೆ ಹಲವು ಬಾರಿ ಸ್ಥಳೀಯಾಡಳಿತ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿರುವ ಇಲ್ಲಿನ ದುಡಿಯುವ ಜನರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಬೇಕು.
-ಆನಂದ ಕಾರೂರು, ಸ್ಥಳೀಯ ದಲಿತ ಮುಖಂಡರು







