ಕರ್ನಾಟಕದಲ್ಲಿ ಐತಿಹಾಸಿಕ ಅಸಮಾನತೆಗಳನ್ನು ನಿವಾರಿಸಲು ಸಾಮಾಜಿಕ ನ್ಯಾಯ ಮತ್ತು ನ್ಯಾಯಾಂಗದ ಹೊಣೆಗಾರಿಕೆ

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತ್ತು. ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ. 15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಹೆಚ್ಚಿಸುವ ಕುರಿತು ಸಮಗ್ರ ಅಧ್ಯಯನ ನಡೆಸಿ, ವಸ್ತುನಿಷ್ಠ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿತ್ತು.
ಸಮಿತಿಯು ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆ, ಸರಕಾರಿ ಉದ್ಯೋಗಗಳಲ್ಲಿನ ಪ್ರಾತಿನಿಧ್ಯ, ಶೈಕ್ಷಣಿಕ ಸ್ಥಿತಿಗತಿ, ಭೂ ಒಡೆತನ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಿತು. ಈ ಅಧ್ಯಯನದ ಆಧಾರದ ಮೇಲೆ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ. 17ಕ್ಕೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ. 7ಕ್ಕೆ ಹೆಚ್ಚಿಸಲು ಶಿಫಾರಸು ಮಾಡಲಾಯಿತು. ಈ ಶಿಫಾರಸುಗಳನ್ನು ಆಧರಿಸಿ ರಾಜ್ಯ ಸರಕಾರವು ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಕ್ರಮಗಳನ್ನು ಕೈಗೊಂಡಿತು.
ಆದರೆ, 2026ರ ಅಕ್ಟೋಬರ್ 8ರಂದು ಕರ್ನಾಟಕ ಹೈಕೋರ್ಟ್ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಸರಕಾರದ ಆದೇಶವನ್ನು ರದ್ದುಗೊಳಿಸಿದೆ ಎಂಬುದು ಇಲ್ಲಿ ಚರ್ಚಿಸಬೇಕಾದ ಪ್ರಮುಖ ವಿಷಯವಾಗಿದೆ. ಒಟ್ಟು ಮೀಸಲಾತಿಯ ಪ್ರಮಾಣವು ಶೇ. 50ರ ಮಿತಿಯನ್ನು ಮೀರಿ ಶೇ. 56ಕ್ಕೆ ತಲುಪಿರುವುದು ಇಲ್ಲಿ ನಮ್ಮ ಮುಂದಿರುವ ಮೂಲಭೂತ ಪ್ರಶ್ನೆಯೆಂದರೆ, ತಳಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ಸರಕಾರವೇ ನೇಮಿಸಿದ ಸಮಿತಿಯು ಸಮಗ್ರ ಅಧ್ಯಯನ ನಡೆಸಿ, ಅಂಕಿಅಂಶಗಳ ಆಧಾರದ ಮೇಲೆ ವರದಿ ಸಲ್ಲಿಸಿದಾಗಲೂ, ಅದರ ಶಿಫಾರಸುಗಳ ಆಧಾರದ ಮೇಲೆ ಕೈಗೊಂಡ ಕ್ರಮಗಳಿಗೆ ಕಾನೂನಾತ್ಮಕ ಅಡೆತಡೆಗಳು ಎದುರಾದರೆ, ಸಾಮಾಜಿಕ ನ್ಯಾಯವನ್ನು ಸಾಧಿಸುವ ಮಾರ್ಗ ಯಾವುದು?
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮೀಸಲಾತಿಯನ್ನು ಕೇವಲ ಕಾನೂನಾತ್ಮಕ ಅಥವಾ ಆಡಳಿತಾತ್ಮಕ ವಿಷಯವಾಗಿ ನೋಡದೆ, ಭಾರತದ ಸಂವಿಧಾನದ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳ ಆಶಯಗಳ ಹಿನ್ನೆಲೆಯಲ್ಲಿ ಪರಿಶೀಲಿಸಬೇಕಾಗಿದೆ.
ಇಡಬ್ಲ್ಯುಎಸ್ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ
ಭಾರತದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳ (ಇಡಬ್ಲ್ಯುಎಸ್) ಮೀಸಲಾತಿಯನ್ನು ಜಾರಿಗೆ ತರುವ ಸಂದರ್ಭದಲ್ಲಿ, ವ್ಯಾಪಕವಾದ ಸಾಮಾಜಿಕ ಅಧ್ಯಯನ ಮತ್ತು ಆಯೋಗಗಳ ಶಿಫಾರಸುಗಳ ಪ್ರಕ್ರಿಯೆಯಿಲ್ಲದೆ, ಸಂವಿಧಾನದ 103ನೇ ತಿದ್ದುಪಡಿಯ ಮೂಲಕ ಮುಂದುವರಿದ ಜಾತಿಗಳ ಆರ್ಥಿಕವಾಗಿ ದುರ್ಬಲರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಲಾಯಿತು. ಇದನ್ನು ಪ್ರಶ್ನಿಸಿದಾಗ ಸುಪ್ರೀಂ ಕೋರ್ಟ್ ಬಹುಮತದ ತೀರ್ಪಿನ ಮೂಲಕ ಸಾಂವಿಧಾನಿಕವಾಗಿ ಮಾನ್ಯವೆಂದು ಎತ್ತಿಹಿಡಿಯಿತು.
ಆದರೆ, ಕರ್ನಾಟಕದಲ್ಲಿ ಶತಮಾನಗಳಿಂದ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಲು ಸರಕಾರ ನಿರ್ಧರಿಸಿದಾಗ, ಹೈಕೋರ್ಟ್ ಅದನ್ನು ರದ್ದುಪಡಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಂದು ಕಡೆ ಇಡಬ್ಲ್ಯುಎಸ್ ಮೀಸಲಾತಿಗೆ ಸಂವಿಧಾನ ತಿದ್ದುಪಡಿಯ ಮೂಲಕ ಅವಕಾಶ ಕಲ್ಪಿಸಿದಾಗ, ಮತ್ತೊಂದೆಡೆ ಐತಿಹಾಸಿಕವಾಗಿ ಅವಕಾಶವಂಚಿತ ಸಮುದಾಯಗಳ ಪ್ರಾತಿನಿಧ್ಯ ಹೆಚ್ಚಿಸುವ ಪ್ರಯತ್ನಗಳಿಗೆ ಅನ್ವಯಿಸಲಾಗುತ್ತಿರುವ ಕಾನೂನು ಮಾನದಂಡಗಳನ್ನು ತುಲನಾತ್ಮಕವಾಗಿ ಪರಿಶೀಲಿಸಬೇಕಾಗಿದೆ.
ಜಾತಿ ವ್ಯವಸ್ಥೆಯ ಮೂಲಕ ಶತಮಾನಗಳಿಂದ ಶೋಷಣೆಗೊಳಗಾದ ಸಮುದಾಯಗಳಿಗೆ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸುವ ಸಾಂವಿಧಾನಿಕ ಆಶಯಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿವೆಯೇ ಎಂಬುದನ್ನು ಸಮಾಜ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ನ್ಯಾಯಾಂಗದ ತೀರ್ಪುಗಳನ್ನು ಕಾನೂನುಬದ್ಧವಾಗಿ ವಿಶ್ಲೇಷಿಸುವುದರ ಜೊತೆಗೆ, ಅವುಗಳ ಸಾಮಾಜಿಕ ಪರಿಣಾಮಗಳ ಬಗ್ಗೆಯೂ ಮುಕ್ತ ಚರ್ಚೆ ಅಗತ್ಯ.
ಶತಮಾನಗಳಿಂದ ಜಾತಿ ಆಧಾರಿತ ಶೋಷಣೆ, ಅಸ್ಪಶ್ಯತೆ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿರುವ ಸಮುದಾಯಗಳಿಗೆ ನ್ಯಾಯಯುತ ಅವಕಾಶಗಳನ್ನು ಕಲ್ಪಿಸುವುದು ಸಂವಿಧಾನದ ಪ್ರಮುಖ ಆಶಯವಾಗಿದೆ. ಈ ಆಶಯಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸರಕಾರ, ನ್ಯಾಯಾಂಗ ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳ ಪಾತ್ರವನ್ನು ನಿರಂತರವಾಗಿ ವಿಮರ್ಶಿಸಬೇಕು.
ಕರ್ನಾಟಕದ ಸಾಮಾಜಿಕ ರಚನೆ ಮತ್ತು ಜನಸಂಖ್ಯಾ ವಾಸ್ತವಿಕತೆ
ಕರ್ನಾಟಕದ ಜನಸಂಖ್ಯೆಯ ವರ್ಗವಾರು ಹಂಚಿಕೆಯ ಅಂಕಿಅಂಶಗಳ ಪ್ರಕಾರ, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಒಟ್ಟಾಗಿ ರಾಜ್ಯದ ಜನಸಂಖ್ಯೆಯಲ್ಲಿ ಶೇ. 91ರಷ್ಟು ಪಾಲನ್ನು ಹೊಂದಿವೆ. ಈ ಅಂಕಿಅಂಶಗಳು ಕರ್ನಾಟಕದ ಸಾಮಾಜಿಕ ರಚನೆ, ಸಂಪನ್ಮೂಲಗಳ ಹಂಚಿಕೆ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ಹಾಗೂ ರಾಜಕೀಯ ಪ್ರಾತಿನಿಧ್ಯದ ಕುರಿತು ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತವೆ.
ಜನಸಂಖ್ಯೆಯ ಪ್ರಮಾಣವನ್ನು ಮಾತ್ರ ಪರಿಗಣಿಸುವುದು ಸಾಕಾಗುವುದಿಲ್ಲ. ವಿವಿಧ ಸಮುದಾಯಗಳ ಸಾಮಾಜಿಕ ಸ್ಥಿತಿ, ಶೈಕ್ಷಣಿಕ ಸಾಧನೆ, ಆರ್ಥಿಕ ಸಂಪನ್ಮೂಲಗಳ ಮೇಲಿನ ಹಿಡಿತ, ಸರಕಾರಿ ಉದ್ಯೋಗಗಳಲ್ಲಿನ ಪ್ರಾತಿನಿಧ್ಯ ಮತ್ತು ನಿರ್ಧಾರ ಕೈಗೊಳ್ಳುವ ವ್ಯವಸ್ಥೆಗಳಲ್ಲಿನ ಪಾಲ್ಗೊಳ್ಳುವಿಕೆಯನ್ನು ಕೂಡ ವಿಶ್ಲೇಷಿಸಬೇಕು. ಕರ್ನಾಟಕದಲ್ಲಿ 881 ಹಿಂದುಳಿದ ಜಾತಿಗಳು/ವರ್ಗಗಳು ಅದರಲ್ಲಿ 46 ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳು, 101 ಪರಿಶಿಷ್ಟ ಜಾತಿಗಳು ಅದರಲ್ಲಿ 51 ಅಲೆಮಾರಿ ಅರೆ ಅಲೆಮಾರಿ ಸಮುದಾಯಗಳು ಮತ್ತು 51 ಪರಿಶಿಷ್ಟ ಪಂಗಡಗಳಿವೆ. ಅದರಲ್ಲಿ 23 ಅಲೆಮಾರಿ-ಅರೆ ಅಲೆಮಾರಿ ಸಮುದಾಯಗಳು ಎಂಬ ವಿವರವು ಸಮುದಾಯಗಳೊಳಗಿನ ವೈವಿಧ್ಯ ಮತ್ತು ಅಸಮಾನತೆಗಳನ್ನು ಗುರುತಿಸುವ ಅಗತ್ಯವನ್ನು ತೋರಿಸುತ್ತದೆ.
ಮೀಸಲಾತಿಯ ಪ್ರಯೋಜನಗಳು ಎಲ್ಲರಿಗೂ ತಲುಪುತ್ತಿವೆಯೇ?
ಸಮುದಾಯಗಳೊಳಗಿನ ಅಸಮಾನತೆಗಳನ್ನು ಗುರುತಿಸುವ ಉದ್ದೇಶ ಯಾವುದೇ ಸಮುದಾಯದ ಹಕ್ಕುಗಳನ್ನು ನಿರಾಕರಿಸುವುದಲ್ಲ. ಬದಲಾಗಿ, ಸೌಲಭ್ಯಗಳು ಮತ್ತು ಅವಕಾಶಗಳು ಅತ್ಯಂತ ಹಿಂದುಳಿದ ಜನರಿಗೂ ತಲುಪುವಂತೆ ನೀತಿಗಳನ್ನು ರೂಪಿಸುವುದಾಗಿದೆ. ಸಾಮಾಜಿಕ ನ್ಯಾಯದ ನಿಜವಾದ ಉದ್ದೇಶವು ಸಮಾಜದ ವಿವಿಧ ವರ್ಗಗಳ ನಡುವಿನ ಅಂತರವನ್ನು ಕಡಿಮೆ ಮಾಡಿ, ಪ್ರತಿಯೊಬ್ಬರಿಗೂ ಘನತೆಯ ಬದುಕು ಮತ್ತು ಸಮಾನ ಅವಕಾಶಗಳನ್ನು ಒದಗಿಸುವುದಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಇಂದಿನ ಸಾಮಾಜಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಐತಿಹಾಸಿಕ ಶೋಷಣೆ, ಜಾತಿ ಆಧಾರಿತ ಬಹಿಷ್ಕಾರ, ಅಸ್ಪಶ್ಯತೆ, ಸಂಪನ್ಮೂಲಗಳ ಮೇಲಿನ ಸೀಮಿತ ಹಕ್ಕುಗಳು ಮತ್ತು ಶಿಕ್ಷಣದಿಂದ ವಂಚಿತವಾಗಿದ್ದ ಪರಿಸ್ಥಿತಿಗಳನ್ನು ಪರಿಗಣಿಸಬೇಕು. ಸಂವಿಧಾನವು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಅವಕಾಶಗಳ ಸಮಾನತೆಯನ್ನು ಪ್ರತಿಪಾದಿಸುತ್ತದೆ. ಈ ಸಮುದಾಯಗಳಿಗಾಗಿ ಕಲ್ಪಿಸಲಾದ ಮೀಸಲಾತಿ ಹಾಗೂ ಇತರ ರಕ್ಷಣಾತ್ಮಕ ಕ್ರಮಗಳು ಆ ಆಶಯಗಳನ್ನು ಸಾಕಾರಗೊಳಿಸುವ ಪ್ರಮುಖ ಸಾಧನಗಳಾಗಿವೆ.
ಸಂವಿಧಾನಾತ್ಮಕ ರಕ್ಷಣೆಗಳಿದ್ದರೂ ಅನೇಕ ಸಮುದಾಯಗಳು ಶಿಕ್ಷಣ, ಸರಕಾರಿ ಉದ್ಯೋಗ, ವಸತಿ, ಆರೋಗ್ಯ ಸೇವೆ, ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಘನತೆಯ ವಿಚಾರದಲ್ಲಿ ಸವಾಲುಗಳನ್ನು ಎದುರಿಸುತ್ತಿವೆ. ಪರಿಶಿಷ್ಟ ಪಂಗಡಗಳ ಕೆಲವು ಸಮುದಾಯಗಳು ಭೌಗೋಳಿಕ ಪ್ರತ್ಯೇಕತೆ, ಮೂಲಸೌಕರ್ಯದ ಕೊರತೆ, ಸಾಂಪ್ರದಾಯಿಕ ಜೀವನೋಪಾಯದ ನಷ್ಟ ಮತ್ತು ಸ್ಥಳಾಂತರದ ಸಮಸ್ಯೆಗಳನ್ನು ಎದುರಿಸುತ್ತಿವೆ. ಆದ್ದರಿಂದ ಮೀಸಲಾತಿಯ ಪ್ರಮಾಣವನ್ನು ನಿರ್ಧರಿಸುವಾಗ ಜನಸಂಖ್ಯೆಯ ಜೊತೆಗೆ ಸಾಮಾಜಿಕ ಹಿಂದುಳಿತನ, ಪ್ರಾತಿನಿಧ್ಯದ ಕೊರತೆ ಮತ್ತು ಸಂವಿಧಾನಾತ್ಮಕ ಉದ್ದೇಶಗಳನ್ನು ಪರಿಗಣಿಸಬೇಕು.
ನ್ಯಾಯಾಂಗದ ಪಾತ್ರ ಮತ್ತು ಸಾಮಾಜಿಕ ನ್ಯಾಯದ ಹೊಣೆಗಾರಿಕೆ
ಭಾರತೀಯ ಸಮಾಜದಲ್ಲಿ ಜಾತಿ ಎಂಬುದು ಕೇವಲ ಸಾಮಾಜಿಕ ಗುರುತಲ್ಲ; ಅದು ಅಧಿಕಾರ, ಸಂಪನ್ಮೂಲ, ಶಿಕ್ಷಣ, ಉದ್ಯೋಗ ಮತ್ತು ನಿರ್ಧಾರ ಕೈಗೊಳ್ಳುವ ಅವಕಾಶಗಳ ಹಂಚಿಕೆಯನ್ನು ಪ್ರಭಾವಿಸುವ ವ್ಯವಸ್ಥೆಯಾಗಿದೆ. ಸಾಮಾಜಿಕವಾಗಿ ಪ್ರಬಲವಾಗಿರುವ ಸಮುದಾಯಗಳು ತಮ್ಮ ಐತಿಹಾಸಿಕ ಸಾಮಾಜಿಕ ಬಂಡವಾಳವನ್ನು ವಿವಿಧ ಸಾಂಸ್ಥಿಕ ಕ್ಷೇತ್ರಗಳಲ್ಲಿ ಬಳಸಿಕೊಳ್ಳುವ ಸಾಧ್ಯತೆಯನ್ನೂ ನಿರ್ಲಕ್ಷಿಸಲಾಗದು.
ರಾಜಕೀಯ, ಆಡಳಿತ, ಶಿಕ್ಷಣ ಮತ್ತು ನ್ಯಾಯಾಂಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕ ಹಿನ್ನೆಲೆ ಮತ್ತು ಅಧಿಕಾರ ಸಂಬಂಧಗಳು ಪ್ರಾತಿನಿಧ್ಯ ಹಾಗೂ ಅವಕಾಶಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಕುರಿತು ಗಂಭೀರವಾದ ಅಧ್ಯಯನ ಅಗತ್ಯವಾಗಿದೆ. ಈ ಪ್ರಶ್ನೆಗಳನ್ನು ಎತ್ತುವುದು ಯಾವುದೇ ಸಂಸ್ಥೆಯನ್ನು ಪೂರ್ವಗ್ರಹದಿಂದ ದೂಷಿಸುವುದಲ್ಲ; ಬದಲಾಗಿ, ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಎಲ್ಲ ಸಂಸ್ಥೆಗಳೂ ಹೆಚ್ಚು ಸಮಾನತೆಯಿಂದ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸುವುದಾಗಿದೆ.
ನ್ಯಾಯಾಂಗದ ಸ್ವಾಯತ್ತತೆ ಮತ್ತು ಕಾನೂನಿನ ಆಳ್ವಿಕೆ ಪ್ರಜಾಪ್ರಭುತ್ವದ ಮೂಲಾಧಾರಗಳಾಗಿವೆ. ಅದೇ ಸಂದರ್ಭದಲ್ಲಿ, ನ್ಯಾಯಾಂಗದ ತೀರ್ಪುಗಳ ಸಾಮಾಜಿಕ ಪರಿಣಾಮಗಳ ಕುರಿತು ಪ್ರಜಾಸತ್ತಾತ್ಮಕ ಚರ್ಚೆ ನಡೆಸುವುದೂ ಅಗತ್ಯ. ಮೀಸಲಾತಿಗೆ ಸಂಬಂಧಿಸಿದ ಕಾನೂನಾತ್ಮಕ ಮಾನದಂಡಗಳನ್ನು ಅನ್ವಯಿಸುವಾಗ ಸಾಮಾಜಿಕ ವಾಸ್ತವಿಕತೆ, ಲಭ್ಯವಿರುವ ದತ್ತಾಂಶ ಮತ್ತು ಸಂವಿಧಾನದ ಸಮಾನತೆಯ ಆಶಯಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಬೇಕು.
ಕರ್ನಾಟಕದ ಮೀಸಲಾತಿ ವಿವಾದವನ್ನು ಕೇವಲ ಶೇ. 50ರ ಮಿತಿ ಅಥವಾ ಆಡಳಿತಾತ್ಮಕ ಆದೇಶದ ಪ್ರಶ್ನೆಗೆ ಸೀಮಿತಗೊಳಿಸದೆ, ಐತಿಹಾಸಿಕ ಅಸಮಾನತೆ, ಸಾಮಾಜಿಕ ಪ್ರಾತಿನಿಧ್ಯ ಮತ್ತು ಅವಕಾಶಗಳ ಸಮಾನತೆಯ ವಿಶಾಲ ಚೌಕಟ್ಟಿನಲ್ಲಿ ಪರಿಶೀಲಿಸಬೇಕು. ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಕ್ರಮಗಳು ಕಾನೂನಾತ್ಮಕವಾಗಿ ಸಮರ್ಥನೀಯವಾಗಿರಲು ಅಗತ್ಯವಾದ ಅಧ್ಯಯನ, ದತ್ತಾಂಶ ಮತ್ತು ಸಂವಿಧಾನಬದ್ಧ ಪ್ರಕ್ರಿಯೆಗಳಿಗೆ ಆದ್ಯತೆ ನೀಡಬೇಕು.
ಸಾಮಾಜಿಕ ನ್ಯಾಯಕ್ಕಾಗಿ ಸಂಘಟಿತ ಹೋರಾಟ ಅಗತ್ಯ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಇತರ ಅವಕಾಶವಂಚಿತ ಸಮುದಾಯಗಳು ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಾಮಾನ್ಯ ಆಶಯಗಳ ಆಧಾರದ ಮೇಲೆ ಸಂಘಟಿತರಾಗಬೇಕು. ಸಮುದಾಯಗಳ ನಡುವಿನ ಸ್ಪರ್ಧೆ ಅಥವಾ ಪರಸ್ಪರ ವಿರೋಧಕ್ಕಿಂತ ಎಲ್ಲರಿಗೂ ನ್ಯಾಯಯುತ ಅವಕಾಶಗಳು ದೊರೆಯುವಂತಹ ನೀತಿಗಳಿಗಾಗಿ ಸಾಮೂಹಿಕ ಪ್ರಯತ್ನ ಅಗತ್ಯವಾಗಿದೆ.
ಕರ್ನಾಟಕದ ಮೀಸಲಾತಿ ವಿವಾದವು ನಮಗೆ ಒಂದು ಮಹತ್ವದ ಪ್ರಶ್ನೆಯನ್ನು ಮುಂದಿಡುತ್ತದೆ: ಸಂವಿಧಾನವು ಭರವಸೆ ನೀಡಿರುವ ಸಾಮಾಜಿಕ ನ್ಯಾಯವು ಸಮಾಜದ ಅತ್ಯಂತ ಹಿಂದುಳಿದ ಜನರನ್ನು ತಲುಪುತ್ತಿದೆಯೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸರಕಾರ, ನ್ಯಾಯಾಂಗ, ಶೈಕ್ಷಣಿಕ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು ಮತ್ತು ಜನಸಾಮಾನ್ಯರು ಒಟ್ಟಾಗಿ ಚಿಂತಿಸಬೇಕಾಗಿದೆ.
ಸಾಮಾಜಿಕ ನ್ಯಾಯವು ಕೇವಲ ಸಂವಿಧಾನದಲ್ಲಿ ಉಲ್ಲೇಖಿಸಿರುವ ತತ್ವವಲ್ಲ; ಅದು ಪ್ರತಿಯೊಬ್ಬ ನಾಗರಿಕನಿಗೂ ಘನತೆಯ ಬದುಕು, ಸಮಾನ ಅವಕಾಶ ಮತ್ತು ನ್ಯಾಯಯುತ ಪ್ರಾತಿನಿಧ್ಯ ದೊರೆಯುವಂತೆ ಮಾಡುವ ನಿರಂತರ ಪ್ರಕ್ರಿಯೆಯಾಗಿದೆ. ಐತಿಹಾಸಿಕ ಅಸಮಾನತೆಗಳನ್ನು ನಿವಾರಿಸಲು ವೈಜ್ಞಾನಿಕ ದತ್ತಾಂಶ, ಸಂವಿಧಾನಬದ್ಧ ನೀತಿಗಳು ಮತ್ತು ಸಂಘಟಿತ ಪ್ರಜಾಸತ್ತಾತ್ಮಕ ಹೋರಾಟಗಳ ಮೂಲಕ ಮುಂದುವರಿಯುವುದು ಇಂದಿನ ತುರ್ತು ಅಗತ್ಯವಾಗಿದೆ.






