ಏರ್ ಇಂಡಿಯಾ ಎಕ್ಸ್ಪ್ರೆಸ್ ಪ್ರಯಾಣಿಕರಿಗೆ ಕೆಲವು ಸಲಹೆಗಳು

Image Source : PTI
ಮಾನ್ಯರೇ,
ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಪ್ರಯಾಣಿಸುವವರಿಗೆ ಇಲ್ಲಿ ಕೆಲವು ಸಲಹೆಗಳಿವೆ.(ಇದನ್ನು ಯಾವುದೇ ವಿಮಾನ ಪ್ರಯಾಣದ ಸಂದರ್ಭ ದಲ್ಲಿ ಅನುಸರಿಸುವ ಟ್ರಾವೆಲ್ ಗೈಡ್ಲೈನ್ಸ್ಗಳಂತೆ ಪರಿಗಣಿಸಿ ಪಾಲಿಸುವುದು ಪ್ರಯಾಣಿಕರ ದೈಹಿಕ, ಮಾನಸಿಕ ಹಾಗೂ ಆರ್ಥಿಕ ಆರೋಗ್ಯಕ್ಕೆ ಒಳ್ಳೆಯದು)
1. ವಿಮಾನದೊಳಗೆ ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಹಾಗಾಗಿ ಕನಿಷ್ಠ ಕಾಲು ಗಂಟೆ ಕಾಲ ಉಸಿರಾಟದ ತೊಂದರೆ ಎದುರಿಸಲು ಅಗತ್ಯ ತರಬೇತಿ ಪಡೆದುಕೊಳ್ಳಿ ಹಾಗೂ ತಯಾರಿ ಮಾಡಿಕೊಳ್ಳಿ. ಯಾಕೆಂದರೆ ವಿಮಾನದೊಳಗೆ ಹೋಗಿ ನಿಮ್ಮ ಸೀಟಿನಲ್ಲಿ ಕೂತು ವಿಮಾನ ಹೊರಡುವವರೆಗೂ ಅಂದರೆ ಹಾರುವವರೆಗೂ ಅದರ ಎಸಿ ಸರಿಯಾಗಿ ಕೆಲಸ ಮಾಡುವುದಿಲ್ಲ (ಆಮೇಲೆಯೂ ಅದು ಕೆಲಸ ಮಾಡುತ್ತೆ ಎಂಬುದು ಕೇವಲ ನಂಬಿಕೆಯ ವಿಷಯ). ಆ ಬಗ್ಗೆ ನೀವು ವಿಮಾನದ ಗಗನ ಸಖಿಯರ ಬಳಿ ಕೇಳಿದರೆ ‘‘ಈಗಷ್ಟೇ ಇಂಜಿನ್ ಆನ್ ಆಗಿದೆ. ಸ್ವಲ್ಪ ಸಮಯ ತಗಲುತ್ತೆ. ತಾಳ್ಮೆ ಇರಲಿ’’ ಎಂಬ ಖಡಕ್ ಉತ್ತರ ಸಿಗುತ್ತೆ. ಆಗ ನಿಮ್ಮ ಉಸಿರು, ನಿಮ್ಮ ಜೀವ ನಿಮ್ಮದೇ ಕೈಯಲ್ಲಿ.
2. ಏರ್ ಇಂಡಿಯಾ ಎಕ್ಸ್ ಪ್ರೆಸ್ನಲ್ಲಿ ಪ್ರಯಾಣಿಸುವಾಗ ನೀವು ಹೋಗಿ ತಲುಪುವ ಸ್ಥಳದಲ್ಲಿ ಕನಿಷ್ಠ ಮೊದಲ ಎರಡು ದಿನಗಳಿಗೆ ಬೇಕಾಗುವ ಬಟ್ಟೆ ಬರೆಯನ್ನು ನಿಮ್ಮ ಕೈಯಲ್ಲೇ ಇಟ್ಟುಕೊಳ್ಳಿ. ಕೈಯಲ್ಲಿ ಅಂದರೆ ವಿಮಾನದೊಳಗೆ ತೆಗೆದುಕೊಂಡು ಹೋಗುವ ಹ್ಯಾಂಡ್ಬ್ಯಾಗ್ನಲ್ಲಿ ಅಲ್ಲ ಎಂಬುದು ಬಹಳ ಮುಖ್ಯ. ಯಾಕೆಂದರೆ ಆ ಹ್ಯಾಂಡ್ಬ್ಯಾಗ್ ಅನ್ನೂ ವಿಮಾನದೊಳಗೆ ಇನ್ನೇನು ನೀವು ಕಾಲಿಡಬೇಕು ಅನ್ನುವಾಗ ನಿಮ್ಮಿಂದ ಕಿತ್ತುಕೊಂಡು ಲಗೇಜ್ ವಿಭಾಗಕ್ಕೆ ಹಾಕಿ ಬಿಡುತ್ತಾರೆ. ಹಾಗಾಗಿ ಎರಡು ದಿನಗಳ ಬಟ್ಟೆ ಬರೆಯನ್ನು ನಿಮ್ಮ ಹ್ಯಾಂಡ್ ಬ್ಯಾಗ್ನಲ್ಲೂ ಅಲ್ಲ, ತಿಂಡಿಯ ಪೊಟ್ಟಣದ ಹಾಗೆ ನಿಮ್ಮ ‘ಹ್ಯಾಂಡ್’ನಲ್ಲೇ ಇಟ್ಟುಕೊಳ್ಳಿ. ಇಲ್ಲದಿದ್ದರೆ ವಿಮಾನದಿಂದ ಇಳಿದು ಒಂದೆರಡು ದಿನ ನೀವು ಹಾಕಿಕೊಂಡು ಬಂದ ಬಟ್ಟೆಯಲ್ಲೇ ಇರಲು ಮಾನಸಿಕವಾಗಿ ನೀವೂ ಸಿದ್ಧ ಇರಬೇಕು, ನಿಮ್ಮನ್ನು ಹಾಗೆ ಸಹಿಸಿಕೊಳ್ಳಲು ನೀವು ತಲುಪಿದ ಸ್ಥಳದಲ್ಲಿ ನಿಮ್ಮ ಜೊತೆ ಇರುವವರೂ ಸಜ್ಜಾಗಿರಬೇಕು. ಇಲ್ಲದಿದ್ದರೆ ಹೋಗಿ ತಲುಪಿದಲ್ಲಿ ಸಿಕ್ಕಿದ ಹೊಸ ಬಟ್ಟೆ ಖರೀದಿಸಲು ನೀವು ರೆಡಿ ಇರಬೇಕು.
3. ಸರ್ಪ್ರೈಸ್ ಕೊಡುವುದರಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ನವರಿಗೆ ಅವರೇ ಸಾಟಿ. (ಕೆಲವೊಮ್ಮೆ ಇಂಡಿಗೋದವರೂ ಈ ವಿಷಯದಲ್ಲಿ ಸ್ಪರ್ಧೆಗೆ ಇಳಿಯುತ್ತಾರಾದರೂ ಏರ್ ಇಂಡಿಯಾ ಎಕ್ಸ್ ಪ್ರೆಸ್ ಅನ್ನು ಅವರು ಹಿಂದಿಕ್ಕುವುದು ಕಷ್ಟ ಮಾತ್ರವಲ್ಲ ಅಸಾಧ್ಯ.) ನೀವು ದುಬೈಯಿಂದ ಮಂಗಳೂರಿಗೆ ಬಂದು ಲಗೇಜ್ ಕಲೆಕ್ಟ್ ಮಾಡಲು ನಿಂತಾಗ ಅವರ ಸಿಬ್ಬಂದಿ ಬಂದು ನಿಮಗೆ ಸರ್ಪ್ರೈಸ್ ಕೊಡುತ್ತಾರೆ. ಅಲ್ಲಿ ಬೇಡ ಬೇಡ ಅಂದರೂ ಸರ್ಪ್ರೈಸ್ ಖಚಿತ ಮತ್ತು ಉಚಿತ. (ಇಲ್ಲಿ ಸರ್ಪ್ರೈಸ್ ಅನ್ನು ಶಾಕ್ ಎಂದು ಓದಿಕೊಳ್ಳುವುದು). ‘‘ನೀವು ಲಗೇಜಿಗೆ ಕಾಯಬೇಡಿ. ನಿಮ್ಮ ಲಗೇಜು ದುಬೈಯಲ್ಲೇ ಇದೆ. ನೀವಿನ್ನು ಹೊರಡಬಹುದು’’ ಎಂದು ತಣ್ಣಗೆ ಹೇಳುತ್ತಾರೆ. ಯಾಕೆ ಎಂದು ಕೇಳಿದರೆ ‘‘ಫ್ಲೈಟ್ ಫುಲ್ ಇತ್ತು, ಅದಕ್ಕಾಗಿ ಹಾಗೆ ಮಾಡಬೇಕಾಯಿತು’’ ಅನ್ನುತ್ತಾರೆ. ‘‘ನಿಮಗೆ ನಾವೇ ನಾಳೆ ಲಗೇಜ್ ತಲುಪಿಸುತ್ತೇವೆ, ಈಗ ಹೊರಡಿ’’ ಎನ್ನುತ್ತಾರೆ. ಅದನ್ನು ದುಬೈಯಲ್ಲೇ ಯಾಕೆ ಹೇಳಿಲ್ಲ ಎಂದು ಕೇಳಿದರೆ ಅದಕ್ಕೆ ನೋ ಆನ್ಸರ್. ‘‘ನನಗೀಗ ಉಟ್ಟ ಬಟ್ಟೆ ಬಿಟ್ಟು ಬೇರೇನೂ ಇಲ್ಲದ ಹಾಗಾಗಿದೆ, ನಾನು ಒಂದೇ ದಿನಕ್ಕಾಗಿ ಕುಟುಂಬದ ಕಾರ್ಯಕ್ರಮಕ್ಕೆ ಬಂದವನು, ನನ್ನ ಲಗೇಜಲ್ಲಿ ರಾತ್ರಿ ಕಳೆದರೆ ಹಾಳಾಗುವ ವಸ್ತು ಇದೆ’’ ಅಂತ ನೀವೇನೇ ಹೇಳಿದ್ರೂ ಲಗೇಜು ದುಬೈಯಲ್ಲಿ ರಜೆಯ ಮಜಾ ಅನುಭವಿಸುತ್ತಿದೆ. ಈಗ ನೀವು ಇಲ್ಲಿ ಅನುಭವಿಸಬೇಕು ಅಷ್ಟೇ.
4. ಇಲ್ಲಿ ಹೇಳಲೇಬೇಕಾದ್ದು ಏರ್ ಇಂಡಿಯಾ ಎಕ್ಸ್ ಪ್ರೆಸ್ನ ಸಮಾನತೆಯ ನೀತಿ ಬಗ್ಗೆ. ದುಬೈಯಲ್ಲಿ ಪ್ರಯಾಣಿಕರಲ್ಲಿ ಹೇಳದೆ ಕೇಳದೆ ಅವರ ಲಗೇಜು ಹೊರಗಿಡುವಾಗ ಅವರು ಲಕ್ಕಿಡಿಪ್ ನೀತಿ ಅನುಸರಿಸುತ್ತಾರೆ. ಕೈಗೆ ಸಿಕ್ಕಿದವರ ಲಗೇಜು ತೆಗೆದು ಹೊರಗಿಡುತ್ತಾರೆ. ಅದು ಯಾರದ್ದೂ ಆಗಿರಬಹುದು. ಅದರಲ್ಲಿ ಯಾವುದೇ ಅಸಮಾನತೆ ಇಲ್ಲ. ಅವರು ನಿರ್ಧರಿಸಿದ ಸಂಖ್ಯೆಯ ಲಗೇಜುಗಳನ್ನು ಎತ್ತಿ ವಿಮಾನದಿಂದ ಹೊರಗೆ ಹಾಕಿ ಬಿಡುತ್ತಾರೆ ಅಷ್ಟೇ.
5. ಏರ್ ಇಂಡಿಯಾ ಎಕ್ಸ್ಪ್ರೆಸ್ನ ಈ ಎಲ್ಲ ಸಮಸ್ಯೆಗಳ ಬಗ್ಗೆ ನನ್ನ ಕುಟುಂಬದವರೊಬ್ಬರಿಗೆ ಹೇಳಿದಾಗ ಅವರ ಪ್ರತಿಕ್ರಿಯೆ ‘‘ಏನೂ ತಲೆಬಿಸಿ ಮಾಡಿಕೊಳ್ಳಬೇಡ, ಏರ್ ಇಂಡಿಯಾ ಎಕ್ಸ್ಪ್ರೆಸ್ನಲ್ಲಿ ಬಂದು ನೀನು ಮಂಗಳೂರಿಗೆ ಸುರಕ್ಷಿತವಾಗಿ ತಲುಪಿದ್ದೀಯ, ಅದಕ್ಕಿಂತ ಮುಖ್ಯ ಯಾವುದೂ ಅಲ್ಲ, ಅದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಮನೆಗೆ ಹೋಗು. ಲಗೇಜು ಯಾವತ್ತಾದರೂ ಬಂದರೂ ಬರಬಹುದು. ನೀನು ಬಂದಿದ್ದೀಯಲ್ಲ, ಅಷ್ಟು ಸಾಕು.’’







