ಸೆಪ್ಟಂಬರ್ ತಿಂಗಳಲ್ಲಿ ಕುಕನೂರಲ್ಲಿ ಸರಣಿ ಕಳ್ಳತನ !
► ದೇವಸ್ಥಾನ, ದರ್ಗಾಗಳೇ ಕಳ್ಳರ ಟಾರ್ಗೆಟ್; ಕಳಸ, ಘಂಟೆ, ಹುಂಡಿ, ಬೆಳ್ಳಿ ಪಂಜಾ ಕಳವು! ►ರಾತ್ರಿ ಪೊಲೀಸ್ ಗಸ್ತು ಹೆಚ್ಚಿಸಲು ಸಾರ್ವಜನಿಕರ ಆಗ್ರಹ!

ಸಾಂದರ್ಭಿಕ ಚಿತ್ರ
ಕುಕನೂರು : ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ದೇವಸ್ಥಾನ, ದರ್ಗಾಗಳಲ್ಲಿ ಕಳವು ಪ್ರಕರಣಗಳು ಮುಂದುವರಿದಿದ್ದು, ಸಾರ್ವಜನಿರಲ್ಲಿ ಆತಂಕ ಮೂಡಿಸಿವೆೆ.
ಸೆಪ್ಟೆಂಬರ್ನಲ್ಲಿ ಹಲವು ಧಾರ್ಮಿಕ ಕೇಂದ್ರಗಳಲ್ಲಿ ಕಳವು ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಕಳವು ತಡೆಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ರಾತ್ರಿ ಬೀಟ್ ಗಸ್ತು ಹೆಚ್ಚಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸೆ.10ರಂದು ಪಟ್ಟಣದ ಕೊಪ್ಪಳ ರಸ್ತೆಯ ಹೊವಲಯದಲ್ಲಿರುವ ಸಂಗನಬಸಪ್ಪ ದೇವಸ್ಥಾನದ ಗೋಪುರಕ್ಕೆ ಅಳವಡಿಸಿದ್ದ ಸುಮಾರು 5 ಅಡಿ ಎತ್ತರ ಮತ್ತು 15.5 ಕೆ.ಜಿ. ತೂಕದ ಹಿತ್ತಾಳೆಯ ಕಳಸ ಹಾಗೂ ದೇವಸ್ಥಾನದ ಘಂಟೆಯನ್ನು ಕಳ್ಳರು ಕದ್ದೊಯ್ದಿದ್ದರು. ಈ ಕುರಿತು ದೇವಸ್ಥಾನ ಸಮಿತಿ ಪೊಲೀಸರಿಗೆ ದೂರು ನೀಡಿತ್ತು. ಇದಾದ ಬಳಿಕ ಸೆ.28ರ ರಾತ್ರಿ ವಾರ್ಡ್ 7ರ ಕೋಳಿಪೇಟೆಯ ಗ್ರಾಮದೇವತೆ ದುರ್ಗಾದೇವಿ ದೇವಸ್ಥಾನದ ಕಾಣಿಕೆ ಹುಂಡಿ ಕಳವಾಗಿತ್ತು.
ಸೆ.29ರಂದು ಬೆಳಿಗ್ಗೆ ಪೂಜೆಗೆ ತೆರಳಿದ ಪೂಜಾರಿ ಲಿಂಗರಾಜ ಕೋನಾರಿ ಅವರು ಹುಂಡಿ ಕಾಣಿಸದಿರುವುದನ್ನು ಗಮನಿಸಿ ದೇವಸ್ಥಾನ ಸಮಿತಿ ಅಧ್ಯಕ್ಷ ರುದ್ರಪ್ಪ ಕರೀಗಾರಗೆ ಮಾಹಿತಿ ನೀಡಿದ್ದರು. ಅದು ಗೊರ್ಲೆಕೊಪ್ಪ ರಸ್ತೆಯಲ್ಲಿರುವ ಹಾಳು ಹನುಮಪ್ಪ ದೇವಸ್ಥಾನದ ಸಮೀಪದ ಚರಂಡಿಯಲ್ಲಿ ಪತ್ತೆಯಾಗಿತ್ತು. ಅದರಲ್ಲಿದ್ದ ಅಂದಾಜು 1ರಿಂದ 2 ಲಕ್ಷ ರೂ. ನಗದು ಕಳವಾಗಿರುವ ಶಂಕೆ ವ್ಯಕ್ತವಾಗಿದೆ.
ದರ್ಗಾದಲ್ಲೂ ಕಳವು :
ಕುಕನೂರು ತಾಲೂಕಿನ ನಿಟ್ಟಾಲಿ ಗ್ರಾಮದ ಹೊರವಲಯದಲ್ಲಿರುವ ದಾವಲ್ ಮಲ್ಲಿಕ ದರ್ಗಾದಲ್ಲೂ ಸೆ.4ರ ರಾತ್ರಿ ಕಳವು ನಡೆದಿದೆ. ಗದ್ದಿಗೆ ಮುಂದೆ ಇಡಲಾಗಿದ್ದ ಸುಮಾರು ಸುಮಾರು 1.65 ಲಕ್ಷ ರೂ. ಮೌಲ್ಯದ 800 ಗ್ರಾಮ್ ತೂಕದ ಬೆಳ್ಳಿ ಪಂಜಾ ಹಾಗೂ ಸುಮಾರು 5 ಕೆ.ಜಿ. ತೂಕದ ಕಂಚು ಮತ್ತು ಬೆಳ್ಳಿಯ ಮಿಶ್ರಣದ ಕುದುರೆ ಮೂರ್ತಿಯನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ದರ್ಗಾದ ಮುಜಾವರ್ ಬಾಬುಸಾಬ್ ಜಾಫರಸಾಬ್ ನದಾಫ್ ಕುಕನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇತ್ತೀಚೆಗೆ ತಾಲೂಕಿನ ಕೋನಾಪುರ ಗ್ರಾಮದಲ್ಲಿಯೂ ಶರಣಬಸವೇಶ್ವರ ದೇವಸ್ಥಾನದ ಐದು ಕಂಚಿನ ಕಳಸಗಳು ಕಳವಾಗಿರುವ ಪ್ರಕರಣ ವರದಿಯಾಗಿತ್ತು. ಈ ಕುರಿತು ಗ್ರಾಮಸ್ಥರು ಹಾಗೂ ದೇವಸ್ಥಾನ ಸಮಿತಿ ಸದಸ್ಯರು ಕುಕನೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಗ್ರಾಮೀಣ ಭಾಗದ ಹಲವು ದೇವಸ್ಥಾನ ಹಾಗೂ ದರ್ಗಾಗಳಲ್ಲಿ ಸುರಕ್ಷತೆಗೆ ಆಡಳಿತ ಸಮಿತಿಗಳು ಹೆಚ್ಚಿನ ಆದ್ಯತೆ ನೀಡಬೇಕಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸದಿರುವುದು, ರಾತ್ರಿ ವೇಳೆ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದಿರುವುದು ಹಾಗೂ ಬಾಗಿಲುಗಳಿಗೆ ಬಲವಾದ ಬೀಗಗಳ ವ್ಯವಸ್ಥೆ ಮಾಡದಿರುವುದು ಕಂಡುಬರುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ತಮ್ಮ ಕೃತ್ಯ ನಡೆಸುವ ಸಾಧ್ಯತೆ ಇದೆ ಕಂಡುಬಂದಿದೆ. ಅಗತ್ಯವಿರುವ ಕಡೆ ಭದ್ರತಾ ಸಿಬ್ಬಂದಿ ನಿಯೋಜನೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹೇಳಿದ್ದಾರೆ.
ಪಟ್ಟಣದ ಹೊರವಲಯ ಹಾಗೂ ಜನವಸತಿ ಕಡಿಮೆ ಇರುವ ಪ್ರದೇಶಗಳಲ್ಲಿನ ಧಾರ್ಮಿಕ ಕೇಂದ್ರಗಳ ಸುತ್ತ ರಾತ್ರಿ ವೇಳೆ ನಿಯಮಿತ ಪೊಲೀಸ್ ಬೀಟ್ ಗಸ್ತು ನಡೆಸಬೇಕು. ನಿರ್ದಿಷ್ಟ ಅವಧಿಯಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲಿಸುವ ಜತೆಗೆ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳ ಚಲನವಲನದ ಮೇಲೂ ನಿಗಾ ಇರಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ದೇವಸ್ಥಾನ, ದರ್ಗಾಗಳಲ್ಲಿ ಕಳವು ಪ್ರಕರಣಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಹಾಗೂ ಧಾರ್ಮಿಕ ಕೇಂದ್ರಗಳ ಆಡಳಿತ ಸಮಿತಿಗಳು ಸಮನ್ವಯದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಹಿಂದೆ ನಡೆದಿರುವ ಕಳವು ಪ್ರಕರಣಗಳಲ್ಲಿಯೂ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ದೇವಸ್ಥಾನದಲ್ಲಿರುವ ಕಾಣಿಕೆ ಹುಂಡಿಯನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ತೆರೆದು ಎಣಿಕೆ ಮಾಡಲಾಗುತ್ತದೆ. ಈ ಹಣವನ್ನು ದೇವರ ಜಾತ್ರೆ ಸೇರಿದಂತೆ ದೇವಸ್ಥಾನದ ಕಾರ್ಯಗಳಿಗೆ ಬಳಸಲಾಗುತ್ತಿತ್ತು. ಕೊನೆಯದಾಗಿ 2024ರಲ್ಲಿ ಹುಂಡಿ ತೆರೆಯಲಾಗಿತ್ತು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ಶೀಘ್ರ ತನಿಖೆ ಕೈಗೊಂಡು ಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು.
-ರುದ್ರಪ್ಪ ಕರೀಗಾರ, ದೇವಸ್ಥಾನ ಸಮಿತಿ ಅಧ್ಯಕ್ಷ
ನಾನು ಇದೀಗ ಅಧಿಕಾರ ವಹಿಸಿಕೊಂಡಿದ್ದೇನೆ. ತಾಲೂಕಿನಲ್ಲಿ ನಡೆದಿರುವ ದೇವಸ್ಥಾನಗಳ ಹಾಗೂ ದರ್ಗಾದ ಸರಣಿ ಕಳವು ಪ್ರಕರಣಗಳ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ. ಪ್ರಕರಣಗಳ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ಮೌನೇಶ್ ರಾಠೋಡ, ಪಿಎಸ್ಐ, ಕುಕನೂರ
ದೇವಸ್ಥಾನದ ಘಂಟೆ, ಹುಂಡಿ, ಕಳಸವನ್ನೇ ಕಳ್ಳತನ ಮಾಡುತ್ತಿರುವುದನ್ನು ನೋಡಿದರೆ ಕಳ್ಳರಿಗೆ ದೇವರ ಮೇಲೆ ಭಕ್ತಿಯೂ ಇಲ್ಲ. ಭಯವೂ ಇಲ್ಲ ಎನ್ನುವಂತಾಗಿದೆ. ಪವಿತ್ರ ಸ್ಥಳಗಳನ್ನೂ ಬಿಡದೆ ಕಳ್ಳತನ ಮಾಡುತ್ತಿರುವುದು ಖಂಡನೀಯ. ಇಂತಹ ಕೃತ್ಯ ಎಸಗುವವರನ್ನು ಪೊಲೀಸರು ಕೂಡಲೇ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು.
-ಯಮನೂರಪ್ಪ ಗೊರ್ಲೆಕೊಪ್ಪ, ಹೋರಾಟಗಾರ, ಕುಕನೂರ






