ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ: ಕನ್ನಡದಲ್ಲಿ 123 ಅಂಕ ಪಡೆದ ಮಲಯಾಳಂ ಹುಡುಗಿ

ಮಡಿಕೇರಿ, ಮೇ 14: ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಬಹುತೇಕರಿಗೆ ಅಸಹನೆ ಒಂದೆಡೆಯಾದರೆ ಮತ್ತೊಂದೆಡೆ ಕನ್ನಡದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.
ಕನ್ನಡ ಮಾತನಾಡಲು ಹಿಂಜರಿಕೆ ತೋರುತ್ತಿರುವುದು ಸಾಮಾನ್ಯವಾಗಿದೆ. ಬಹುತೇಕರಲ್ಲಿ ಇಂಗ್ಲಿಷ್ ವ್ಯಾಮೋಹವೇ ಹೆಚ್ಚು. ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಿಕ್ಷಣದವರೆಗೂ ಕನ್ನಡ ಮಾಧ್ಯಮದಲ್ಲೇ ಕಲಿತರೂ ಕನ್ನಡವನ್ನು ಓದಲು, ಬರೆಯಲು ಮತ್ತು ಮಾತನಾಡಲು ಬಾರದ ಹಲವು ಮಂದಿ ನಮ್ಮ ನಡುವೆ ಇದ್ದಾರೆ. ಈ ಬಾರಿಯ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಕಡಿಮೆಯೇನೂ ಇಲ್ಲ.
ಏತನ್ಮಧ್ಯೆ ಪ್ರಾಥಮಿಕ ಶಿಕ್ಷಣವನ್ನು ಕೇರಳದ ಕಣ್ಣೂರಿನಲ್ಲಿ ಮಲಯಾಳಂ ಮಾಧ್ಯಮದಲ್ಲಿ ಪೂರ್ಣ ಗೊಳಿಸಿದ ವಿದ್ಯಾರ್ಥಿನಿಯೊಬ್ಬಳು ಎಸೆಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125ಕ್ಕೆ 123 ಅಂಕಗಳನ್ನು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾಳೆ. ಮಲಯಾಳಂ ಹುಡುಗಿಯ ಕನ್ನಡ ಸಾಧನೆ ಕೊಡಗಿನ ಜನತೆ ಪ್ರಶಂಸೆ ವ್ಯಕ್ತಪಡಿಸಿದೆ.
ಮಲಯಾಳಂ ಮಾಧ್ಯಮದಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿರುವ ಫಿಝಾ ಎಂಬ ವಿದ್ಯಾರ್ಥಿನಿ ಕನ್ನಡವೇನೆಂದೂ ಅರಿಯದ ಹುಡುಗಿ. ಆದರೆ, ಕೇವಲ ಒಂದು ತಿಂಗಳಲ್ಲಿ ಕನ್ನಡವನ್ನು ಕರಗತ ಮಾಡಿ, ಕನ್ನಡಿಗರೇ ನಾಚುವಂತೆ ಇದೀಗ ಕನ್ನಡ ಮಾತಾನಾಡುತ್ತಾಳೆ.
ಕೊಡಗು ಜಿಲ್ಲೆಯ ಸಿದ್ದಾಪುರ ಇಕ್ರಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಫಿಝಾ ಎಸೆಸೆಲ್ಸಿ ಪರೀಕ್ಷೆಯಲ್ಲಿ 618/625 ಅಂಕ ಗಳಿಸುವುದರ ಮೂಲಕ ಶಾಲೆ ಹಾಗೂ ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ, ತಾಲೂಕಿನಲ್ಲಿ ಮೂರನೇ ಸ್ಥಾನ, ಜಿಲ್ಲೆಗೆ ನಾಲ್ಕನೇ ಸ್ಥಾನ ಹಾಗೂ ರಾಜ್ಯಕ್ಕೆ 8ನೇ ಸ್ಥಾನದಲ್ಲಿ ಪಡೆದುಕೊಂಡಿದ್ದಾಳೆ.
ಫಿಝಾ ಕಣ್ಣೂರಿನ ಕೆಎಂಜಿ ಮಲಯಾಳಂ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೆ ಮಲಯಾಳಂನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾಳೆ. ನಂತರ ವ್ಯಾಪಾರ ನಿಮಿತ್ತ ತಂದೆಯೊಂದಿಗೆ ಚೆಟ್ಟಳ್ಳಿಗೆ ಬಂದ ಫಿಝಾ ಪ್ರೌಢಶಿಕ್ಷಣವನ್ನು ಮುಂದು ವರಿಸಲು ಇಕ್ರಾ ಪಬ್ಲಿಕ್ ಶಾಲೆಗೆ ಆಗಮಿಸಿ 8ನೇ ತರಗತಿಯ ದಾಖಲಾತಿಗೆ ಮುಂದಾಗಿದ್ದಳು.
ಆಂಗ್ಲ ಮಾಧ್ಯಮ ಶಾಲೆಯಾದರೂ ಕನ್ನಡವು ಕಡ್ಡಾಯವಾಗಿದ್ದು, ಕನ್ನಡ ಓದು, ಮಾತನಾಡಲು ಬಾರದ ವಿದ್ಯಾರ್ಥಿನಿಯ ದಾಖಲಾತಿ ಮಾಡಿಕೊಳ್ಳಲು ಸಾಧ್ಯವಾಗದಂತಹ ಸ್ಥಿತಿ ಎದುರಾಗಿತ್ತು. ಮತ್ತೆ ಶಾಲೆಗೆ ಬಂದ ವಿದ್ಯಾರ್ಥಿನಿ ಕನ್ನಡ ಕಲಿಕೆಗೆ ಆಸಕ್ತಿ ತೋರಿ ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದಳು.
ಒಂದು ತಿಂಗಳಲ್ಲಿ ಕನ್ನಡ ಕಲಿತ ಫಿಝಾ: ಶಾಲೆಯ ಪ್ರಾಂಶುಪಾಲರು ಒಂದು ತಿಂಗಳ ಕಾಲ ಸಮಯಾವಕಾಶ ನೀಡಿ ಕನ್ನಡ ಓದು ಬರಹ ಕಲಿತರೆ ದಾಖಲಾತಿ ಮಾಡಿಕೊಳ್ಳುವುದಾಗಿ ಫಿಝಾಗೆ ಭರವಸೆ ನೀಡಿದ್ದರು. ಶಾಲೆಯ ಶಿಕ್ಷಕರ ಸಹಕಾರದೊಂದಿಗೆ ಕನ್ನಡ ಕಲಿತು 8ನೇ ತರಗತಿಗೆ ಸೇರ್ಪಡೆಗೊಂಡ ಫಿಝಾ, ಎಸೆಸೆಲ್ಸಿ ಪರೀಕ್ಷೆಯಲ್ಲಿ 125ಕ್ಕೆ 123 ಅಂಕ ಗಳಿಸುವ ಮೂಲಕ ಇತರ ಪರೀಕ್ಷೆ ವಿಷಯದಲ್ಲೂ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿದ್ದಾಳೆ. ಕನ್ನಡ ಸಾಹಿತ್ಯ ಅಭಿಮಾನ ಮೈಗೂಡಿಸಿಕೊಂಡಿರುವ ವಿದ್ಯಾರ್ಥಿನಿ ಫಿಝಾ ಕನ್ನಡ ಭಾಷೆಯಲ್ಲಿ ಉತ್ತಮ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾಳೆ.
ಕನ್ನಡದ ಬಗ್ಗೆ ಏನೂ ಅರಿಯದ ವಿದ್ಯಾರ್ಥಿನಿ ಫಿಝಾಳ ಕನ್ನಡ ಭಾಷೆಯ ಅಭಿಮಾನ ಎಲ್ಲರಿಗೂ ಮಾದರಿಯಾಗಬೇಕಾಗಿದೆ.
- ಕೆ.ಯು.ಅಬ್ದುಲ್ ರಝಾಕ್, ಇಕ್ರಾ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ







