ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಸಿಬ್ಬಂದಿ ಕೊರತೆ

ದೇವನಹಳ್ಳಿ : ತಾಲೂಕಿನ ವಿಜಯಪುರ ಪಟ್ಟಣದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ, ಆನ್‌ಲೈನ್ ಮೂಲಕ ಹರಾಜಾದ ಗೂಡನ್ನು, ರೈತರ ಒಪ್ಪಿಗೆ ಪಡೆದುಕೊಂಡು, ತೂಕಕ್ಕೆ ಕಳುಹಿಸುವ ಸಿಬ್ಬಂದಿಯ ಕೊರತೆಯಿಂದ ನಮಗೆ ತಡವಾಗುತ್ತಿದೆ ಎಂದು ನೂಲು ಬಿಚ್ಚಾಣಿಕೆದಾರ ಝಮೀರ್ ಆರೋಪಿಸಿದ್ದಾರೆ.
ಪಟ್ಟಣದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಮಾತನಾಡಿದ ಅವರು, ಇಲ್ಲಿಗೆ ಆವಕವಾಗುತ್ತಿರುವ ಗೂಡಿನ ಪ್ರಮಾಣಕ್ಕೆ ತಕ್ಕಂತೆ ಸಿಬ್ಬಂದಿಯನ್ನು ಕೊಡಿ ಎಂದು ನಾವು ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ, ಆಯುಕ್ತರಿಗೂ ಹಲವು ಬಾರಿ ಮನವಿ ಮಾಡಿದ್ದೇವೆ. ಅವರು ಸಿಬ್ಬಂದಿಯನ್ನು ನೇಮಕ ಮಾಡುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ, ಸಿಬ್ಬಂದಿಯನ್ನು ನೇಮಕ ಮಾಡಿಲ್ಲ.
ಇಲ್ಲಿರುವ ಉಪನಿರ್ದೇಶಕಿ ಹಾಗೂ ನಾಲ್ಕು ಸಿಬ್ಬಂದಿ ಮಾತ್ರವೇ ಕೆಲಸ ಮಾಡುತ್ತಾರೆ. ಇವರಲ್ಲಿ ಯಾರಾದರೂ ಅನಿವಾರ್ಯ ಕಾರಣಗಳಿಂದ ರಜೆ ಹಾಕಿದರೆ, ನೂಲು ಬಿಚ್ಚಾಣಿಕೆದಾರರು ಹಾಗೂ ರೈತರು ಇಬ್ಬರಿಗೂ ತೊಂದರೆಯಾಗುತ್ತದೆ. ಆದ್ದರಿಂದ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಬೇಕಿದೆ.
ಗೂಡಿನ ಆವಕ ಕಡಿಮೆಯಾಗಲು ಮೇಲಧಿಕಾರಿಗಳೇ ಕಾರಣ: ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆಗೂಡು ಬರುತ್ತಿತ್ತು. ನಾವೂ ಸಹಾ ನಮಗೆ ಅಗತ್ಯವಿರುವಷ್ಟು ಗೂಡು ಸಿಗುತ್ತದೆ ಎಂದು ನೂಲು ಬಿಚ್ಚಾಣಿಕೆ ಘಟಕಗಳನ್ನು ಮಾಡಿಕೊಂಡಿದ್ದೇವೆ. ಆದರೆ, ಈಗ ಇಲ್ಲಿಗೆ ಬರುವ ಗೂಡಿನ ಆವಕ ಪ್ರಮಾಣ ತೀರಾ ಕಡಿಮೆಯಾಗುತ್ತಿದೆ. ಇದಕ್ಕೆ ಮೂಲ ಕಾರಣ ಇಲಾಖೆಯ ಮೇಲಧಿಕಾರಿಗಳು, ಸಿಬ್ಬಂದಿಯನ್ನು ನೇಮಕ ಮಾಡದೆ ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ. ಇಲ್ಲಿ, ತಡವಾಗುವ ಕಾರಣಕ್ಕೆ, ಬಹಳಷ್ಟು ರೈತರು, ಗೂಡು ಬೇರೆ ಕಡೆಗೆ ತೆಗೆದುಕೊಂಡು ಹೋಗುತ್ತಾರೆ. ಹೀಗಾದರೆ, ನಾವು ಹೇಗೆ ಜೀವನ ಮಾಡಬೇಕು, ನಮ್ಮಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು ಬದುಕು ಏನಾಗಬೇಕು? ಎಂದು ಕೆಲ ನೂಲು ಬಿಚ್ಚಾಣಿಕೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಸಿಬ್ಬಂದಿಯ ಕೊರತೆಯಿರುವ ಬಗ್ಗೆ ಇಲಾಖೆಗೆ ಪತ್ರ ಬರೆದಿದ್ದೇವೆ. ಸಭೆಯಲ್ಲೂ ಪ್ರಸ್ತಾಪ ಮಾಡಿದ್ದೇನೆ. ನೇಮಕ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಆದರೂ, ಇರುವ ಸಿಬ್ಬಂದಿ ಜವಾಬ್ದಾರಿ ತೆಗೆದುಕೊಂಡು ಎಲ್ಲಾ ಕೆಲಸವನ್ನು ಮಾಡುತ್ತಿದ್ದೇವೆ.
-ರೆಡ್ಡಿಲಕ್ಷ್ಮೀ, ಉಪನಿರ್ದೇಶಕಿ, ರೇಷ್ಮೆಗೂಡು ಮಾರುಕಟ್ಟೆ ವಿಜಯಪುರ
ಇಲಾಖೆಯಿಂದ ನೂಲು ಬಿಚ್ಚಾಣಿಕೆದಾರರಿಗೆ ಬಿಡುಗಡೆ ಮಾಡಬೇಕಾಗಿರುವ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಿದರೆ, ನಮಗೆ ಕನಿಷ್ಟ ಬಂಡವಾಳಕ್ಕಾದರೂ ಅನುಕೂಲವಾಗುತ್ತದೆ.
-ಅಕ್ಮಲ್ ಪಾಷಾ, ನೂಲು ಬಿಚ್ಚಾಣಿಕೆದಾರ
‘ಸರಕಾರಕ್ಕೊಂದು ನ್ಯಾಯ, ನಮಗೊಂದು ನ್ಯಾಯವೇ?’
ನಾವು ಮಾರುಕಟ್ಟೆಯಲ್ಲಿ ಸ್ಯಾಂಪಲ್ ಗೂಡು ತೆಗೆದುಕೊಂಡು ಹೋಗುವುದಕ್ಕೆ ಆಕ್ಷೇಪ ಮಾಡುತ್ತಾರೆ, ಆದರೆ, ನಾವು ರೇಷ್ಮೆ ಮಾರಾಟ ಮಾಡಲು ಹೋದಾಗ, ನಮ್ಮಲ್ಲಿ ಸ್ಯಾಂಪಲ್ ರೇಷ್ಮೆ ತೆಗೆದುಕೊಂಡು ಪರೀಕ್ಷಿಸಿದ ನಂತರವೇ ನೂಲು ಖರೀದಿ ಮಾಡ್ತಾರೆ. ಸರಕಾರಕ್ಕೆ ಒಂದು ನ್ಯಾಯ, ನಮಗೊಂದು ನ್ಯಾಯವೇ? ಎಂದು ನೂಲು ಬಿಚ್ಚಾಣಿಕೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.






