ದಾರಿ ತಪ್ಪುವ ಮಕ್ಕಳು: ಹೆತ್ತವರ ಮುಗಿಯದ ಗೋಳು

ಈಹುಡುಗ ತನ್ನ ಮನೆ, ತಂದೆ-ತಾಯಿ, ವಿದ್ಯಾಭ್ಯಾಸವೆಂದು ಎಲ್ಲರಂತೆ ಚೆನ್ನಾಗಿಯೇ ಇದ್ದ. ಅದ್ಯಾವುದೋ ಗಳಿಗೆಯಲ್ಲಿ ಕೋಮು ಸಂಘಟನೆಯೊಂದಕ್ಕೆ ಸೇರಿಕೊಂಡ. ಇದೇನೋ ಸಾಮಾಜಿಕ ಚಟುವಟಿಕೆ ಇರಬಹುದೆಂದು ಭಾವಿಸಿ ಹೆತ್ತವರು ಸುಮ್ಮನಿದ್ದರು. ಸಂಘಟನೆಯ ನಾಯಕರ ಬೋಧನೆ, ಭಾಷಣಗಳಿಂದ ಪ್ರಭಾವಿತನಾಗಿದ್ದ ಹುಡುಗ ಪ್ರೌಢಾವಸ್ಥೆಗೆ ಬರುತ್ತಿದಂತೆ ಪೂರ್ವಗ್ರಹ, ದ್ವೇಷ ಭಾವನೆಗಳಿಂದ ಮನಸ್ಸು ಕೆಡಿಸಿಕೊಂಡು ಬಿಟ್ಟಿದ್ದ. ಮುಂದೆ ಸಂಘರ್ಷ, ಹಲ್ಲೆ, ದಾಳಿಗಳಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳತೊಡಗಿದ. ಇದಕ್ಕೆ ಇಂತಹದ್ದೇ ಮನೋಭಾವವುಳ್ಳ ಜನರಿಂದ ಮೆಚ್ಚುಗೆ, ಹೊಗಳಿಕೆ ಒಂದು ಕಡೆಯಿದ್ದರೆ ಅವನ ಸಹಚರರಿಂದ ಹೀರೊ ಪಟ್ಟ! ಈ ನಡುವೆ ಕೇಸು, ವಿಚಾರಣೆ, ಜೈಲು ಅಂತ ಪೊಲೀಸ್ ಸ್ಟೇಷನ್, ನ್ಯಾಯಾಲಯಗಳಿಗೆ ಅಲೆದಾಡುವುದು ಅವನಿಗೆ ಸಾಮಾನ್ಯವೆಂಬತಾಗಿತ್ತು. ಖರ್ಚು-ವೆಚ್ಚಗಳಿಗೆ ತೆರೆ ಮರೆಯಲ್ಲಿರುವ ಸೂತ್ರಧಾರರಿದ್ದರು. ಮತೀಯ ಕ್ರಿಮಿನಲ್ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಈತ, ಕೊನೆಗೆ ಕೋಮು ಘರ್ಷಣೆಯೊಂದರಲ್ಲಿ ಬೀದಿಯಲ್ಲಿ ಹೆಣವಾಗಿ ಬಿದ್ದು ಅಂತ್ಯ ಕಾಣುವಂತಾಯಿತು. ಇವೆಲ್ಲದಕ್ಕೂ ಹೆತ್ತ ಜೀವಗಳು ಅಸಹಾಯಕರಾಗಿ ಮೂಕ ಸಾಕ್ಷಿಗಳಾಗಿ ನಿಲ್ಲುವಂತಾಗಿತ್ತು. ಇದು ಇಂದಿನ ಯುವಜನಾಂಗ ದಿಕ್ಕು ತಪ್ಪಿ ಸಾಗುತ್ತಿರುವ ಆಯಾಮದ ಒಂದು ಮಗ್ಗುಲನ್ನು ಪ್ರತಿಬಿಂಬಿಸುವಂತಹ ಉದಾಹರಣೆ.
ಜನರು ಸಾಮಾನ್ಯವಾಗಿ ಬದುಕಿನಲ್ಲಿ ಹಾದಿ ತಪ್ಪುವ ಇಂತಹ ಯುವಕರ ಬಗ್ಗೆ ಚರ್ಚಿಸುತ್ತಾರೆ. ಬದುಕಿ ಬಾಳ ಬೇಕಾಗಿರುವ ಯುವಕರ ಅಕಾಲಿಕ ಸಾವಿಗೆ ಮರುಗುವುದು ಸಹಜವಾದ ಮಾನವೀಯ ಗುಣ. ಸಾಮಾಜಿಕ ಪ್ರಜ್ಞೆಯುಳ್ಳವರು ಇದನ್ನೊಂದು ಸಾಮಾಜಿಕ ಸಮಸ್ಯೆಯೆಂದು ಪರಿಗಣಿಸಿ ವಿಶ್ಲೇಷಣೆ ನಡೆಸುತ್ತಾರೆ. ಇವೆಲ್ಲ ಸ್ವಾಭಾವಿಕವಾದದ್ದೇ. ಆದರೆ ಇಂತಹ ಯುವಜನರ ಹೆತ್ತವರು ಅನುಭವಿಸುವ ನೋವು, ಯಾತನೆಗಳ ಕುರಿತು ಜನರ ಗಮನ ಹರಿಯುವುದು ತುಂಬಾ ಕಡಿಮೆ ಎನ್ನಬಹುದು. ಇಲ್ಲಿ ಹೆತ್ತವರದ್ದು ನಿಜಕ್ಕೂ ಕರುಣಾಜನಕವಾದ ತ್ರಿಶಂಕು ಸ್ಥಿತಿ. ಒಂದೆಡೆ ಹಾದಿ ತಪ್ಪಿ ನಡೆಯುವ ಮಕ್ಕಳನ್ನು ಸರಿ ದಾರಿಗೆ ತರಲು ಹೆಣಗಾಡಿಯೂ ಅಸಹಾಯಕರಾಗಿ ನಿಲ್ಲ ಬೇಕಾದ ಪರಿಸ್ಥಿತಿ. ಇನ್ನೊಂದಡೆ ಮಕ್ಕಳ ಸಂಪರ್ಕ ಕಡಿದುಕೊಂಡು ತಮ್ಮ ಪಾಡಿಗೆ ತಾವಿರಲು ಅಡ್ಡ ಬರುವ ಭಾವನಾತ್ಮಕ ಸಂಬಂಧದ ತುಡಿತ.
ಮತೀಯವಾದ, ಮೂಲಭೂತವಾದಗಳ ಚಕ್ರವ್ಯೆಹದೊಳಗೆ ಸಿಲುಕುವ ಯುವಜನರು ಸಮಾಜದ ಅಮಾಯಕರ ಸಾವು-ನೋವುಗಳಿಗೆ ಹೊಣೆಗಾರರಾಗುವುದರೊಂದಿಗೆ ತಮ್ಮ ಹೆತ್ತವರಿಗೂ ನಿಧಾನ ವಿಷವುಣಿಸುವಂತಹ ಪಾಪಕ್ಕೆ ಒಳಗಾಗುತ್ತಾರೆ. ಇದರಂತೆ ಇನ್ನಿತರ ಸಮಾಜಘಾತುಕ ಕೃತ್ಯಗಳಿಗೆ ಬಲಿ ಬೀಳುತ್ತಿರುವ ಯುವಕರು ಸೃಷ್ಟಿಸುವ ಅವಾಂತರಗಳು ಕಡಿಮೆಯೇನಿಲ್ಲ. ಯಾವುದೋ ಒಂದು ಸನ್ನಿವೇಶಕ್ಕೆ ಬಲಿಯಾಗಿಯೋ, ಆಕರ್ಷಣೆಗಾಗಿಯೋ, ಮೈ ಬಗ್ಗಿಸಿ ದುಡಿಯುವ ಕಷ್ಟವನ್ನು ತಪ್ಪಿಸಲೋ ಎಂಬಂತೆ ರೌಡಿಸಂ, ದಾದಾಗಿರಿಗೆ ಇಳಿಯವ ಯುವಕರು ಹೆತ್ತವರಿಗೆ ನಿರಂತರ ಹಿಂಸೆ ಕೊಡುವ ಮನೆ ಮಾರಿಗಳಾಗಿ ಬಿಡುತ್ತಾರೆ. ಇನ್ನು ಕುಡಿತ, ಮಾದಕ ವಸ್ತುಗಳ ದಾಸರಾಗುವ ಯುವಜನರು ಸ್ವತಃ ತಮ್ಮ ಬಾಳನ್ನು ನರಕ ಮಾಡಿಕೊಳ್ಳುವುದಲ್ಲದೆ ಮನೆಮಂದಿಯನ್ನು ಇನ್ನಿಲ್ಲದಂತೆ ಕಾಡುತ್ತಾರೆ. ಇಂತಹವರು ಸಹಜ ಬದುಕಿನ ಹಳಿಗೆ ಮರಳುವುದು ಸುಲಭದ ಮಾತಲ್ಲ. ಹಾಗೆಯೇ ಮಾದಕ ವಸ್ತುಗಳ ಮಾರಾಟ ಜಾಲದೊಳಗೆ ಸಿಲುಕಿರುವ ನಿರುದ್ಯೋಗಿ ಯುವಕರು ಅಪಾಯಕಾರಿಗಳಾಗಿ ಬಿಡುವುದು ಕಣ್ಣೆದೆರಿನ ಸತ್ಯ. ಇವರು ತಮ್ಮ ಭವಿಷ್ಯವನ್ನು ಕೆಡಿಸಿಕೊಳ್ಳುವುದಲ್ಲದೆ ದೊಡ್ಡ ಸಂಖ್ಯೆಯ ಮುಗ್ಧ ಯುವಜನರ ಭವಿಷ್ಯಕ್ಕೂ ಕಲ್ಲು ಹಾಕುತ್ತಾರೆ. ಇದು ಸಮಾಜದ ನಿದ್ದೆ ಕೆಡಿಸಿರುವ ಇತ್ತೀಚೆಗಿನ ವಿದ್ಯಮಾನ.
ಸಾಮಾನ್ಯವಾಗಿ ಇಂತಹ ಚಟುವಟಿಕೆಗಳತ್ತ ಆಕರ್ಷಿತರಾಗುವವರು ಸಮಾಜದ ಬಡ ವರ್ಗದ ಹುಡುಗರಾಗಿರುತ್ತಾರೆ. ಬಡತನದ ನಡುವೆ ಗುದ್ದಾಡಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಬೆಳೆಸುವುದು ಸುಲಭದ ಮಾತಲ್ಲ. ಇದಕ್ಕಾಗಿ ಸಾಕಷ್ಟು ತ್ಯಾಗ, ಪರಿಶ್ರಮ ಪಡುವ ಹೆತ್ತವರು, ತಮ್ಮ ಮಕ್ಕಳು ಮುಂದೆ ಮನೆಯ ಬೆಳಕಾಗಬಹುದೆಂದು ಕನಸು ಕಾಣುತ್ತಾರೆ. ಕೊನೆಗೆ ಮನೆ ಮಕ್ಕಳು ಹೀಗೆ ದಾರಿ ತಪ್ಪಿದಾಗ ಪಡುವಂತಹ ಅಪಾರ ನೋವು, ಯಾತನೆ ಉಳಿದವರ ಕಲ್ಪನೆಗೆ ನಿಲುಕುವಂತಹದ್ದಲ್ಲ. ಇವರಿಗೆ ಹಾದಿ ತಪ್ಪಿದ ತಮ್ಮ ಮಕ್ಕಳ ಅಕಾಲಿಕ ಸಾವು ತರುವ ಶೋಕಕ್ಕಿಂತ ಮೊದಲು ಅವರು ಜೀವಂತವಿರುವಾಗಲೇ ಪಟ್ಟಿರುವ ಯಾತನೆ ಯಾವ ಕಠಿಣ ಹಿಂಸೆಗಿಂತಲೂ ಕಡಿಮೆಯಿರಲಾರದು. ಕ್ರಿಮಿನಲ್‌ಕೇಸು, ಪೊಲೀಸ್ ದಾಳಿ, ನ್ಯಾಯಾಲಯದ ವಿಚಾರಣೆ ಇತ್ಯಾದಿಗಳೆಲ್ಲ ಅದಾಗಲೇ ಈ ಹೆತ್ತವರನ್ನು ಹಿಂಡಿ ಹಿಪ್ಪೆ ಮಾಡಿ ಬಿಟ್ಟಿರುತ್ತವೆ. ಒಂದು ಕಡೆ ಬೆಳೆದ ಮಕ್ಕಳಿಂದ ಯಾವುದೇ ಪ್ರಯೋಜನವಿಲ್ಲ ದಂತಾಯಿತಲ್ಲವೆನ್ನುವ ನೋವು, ಇನ್ನೊಂದೆಡೆ ಸಮಾಜದಲ್ಲಿ ಎದುರಿಸ ಬೇಕಾಗಿರುವ ಅವಮಾನ, ಕೊಂಕು ಮಾತುಗಳು ಅವರನ್ನು ಹೈರಾಣಾಗಿಸಿ ಬಿಟ್ಟಿರುತ್ತದೆ. ಕೊನೆಗೆ ವಂಶದ ಕುಡಿ ಹೆಣವಾಗಿ ಬಿದ್ದಾಗ ಸುರಿಸಲು ಕಣ್ಣೀರೇ ಉಳಿದಿರುವುದಿಲ್ಲ!
ಜೀವನವೆಂದರೆ ಕೇವಲ ಪ್ರೀತಿ-ಪ್ರಣಯವೆಂದು ಬಗೆಯುವ ಯುವಜನರದ್ದು ಇನ್ನೊಂದು ಕತೆ. ಹದಿ ಹರೆಯದಲ್ಲಿ ಯಾವುದೇ ದುಡಿಮೆ, ಆದಾಯವಿಲ್ಲದೆ ಪ್ರೀತಿ-ಪ್ರೇಮವೆಂಬ ಭಾವನಾತ್ಮಕ ನೆಲೆಯಲ್ಲಿ ನಿರ್ಧಾರ ತೆಗೆದುಕೊಂಡು ತಪ್ಪು ದಾರಿ ಹಿಡಿಯುವವರು ಹೆತ್ತವರ ನಿದ್ದೆ ಕೆಡಿಸುತ್ತಾರೆ. ಇಂತಹವರು ಮನೆ ಬಿಟ್ಟು ಪರಾರಿಯಾಗುವುದರಿಂದ ಹಿಡಿದು ಆತ್ಮಹತ್ಯೆಗೆ ಶರಣಾಗುವುದನ್ನೂ ನಾವು ಕಾಣುತ್ತೇವೆ. ಇಂತಹ ಪ್ರಕರಣಗಳಲ್ಲಿ ಹೆಚ್ಚು ತೊಂದರೆಗೀಡಾಗುವವರು ಹುಡುಗಿಯರು ಮತ್ತು ಅವರ ಹೆತ್ತವರು. ವಿವಾಹಕ್ಕಿಂತ ಮೊದಲು ದೈಹಿಕ ಸಂಪರ್ಕ ಬೆಳೆಸಿ ಗರ್ಭ ಧರಿಸುವುದು ಅಥವಾ ಮಗುವಿಗೆ ಜನ್ಮ ನೀಡುವುದು ಎಂತಹ ಕೆಟ್ಟ ಪರಿಣಾಮಗಳಿಗೆ ಎಡೆ ಮಾಡ ಬಹುದೆಂದು ಊಹಿಸುವುದು ಸುಲಭವಲ್ಲ. ಇವೆಲ್ಲ ಹೆತ್ತವರು ತಾವು ಮಾಡದ ತಪ್ಪಿಗೆ ಜೀವನ ಪರ್ಯಂತ ಅನುಭವಿಸಬೇಕಾದ ಶಿಕ್ಷೆ!
ಕೆಲವು ಯುವಕರು ಹೇಳಿ ಕೊಳ್ಳುವಂತಹ ಯಾವುದೇ ಕೆಟ್ಟ ಕೆಲಸಗಳನ್ನು ಮಾಡದೆಯೂ ಹೆತ್ತವರ ಪಾಲಿಗೆ ಹೊರೆಯಾಗುವುದಿದೆ. ಇಂತಹವರು ಸರಿಯಾದ ವಯಸ್ಸಲ್ಲಿ ದುಡಿಮೆ, ಉದ್ಯೋಗಕ್ಕಿಳಿಯದೆ ಅಂಡೆಲೆಯುತ್ತಾರೆ. ಇವರು ಸಮಾರಂಭ, ಪಾರ್ಟಿ, ಮೋಜು, ಮಸ್ತಿ ಅಂತ ಅಲೆದಾಡಿ ಸ್ವತ: ತಮ್ಮ ವೈಯಕ್ತಿಕ ಬದುಕನ್ನು ಹಾಳುಗೆಡಹುವುದಲ್ಲದೆ ಹೆತ್ತವರಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸುತ್ತಾರೆ. ಸ್ವಂತ ದುಡಿಮೆಯಿಲ್ಲದ ಇವರಿಗೆ ಹೆತ್ತವರು ಕಷ್ಟಪಟ್ಟು ಗಳಿಸಿದ ಹಣದ ಮೌಲ್ಯವೇ ತಿಳಿಯದು. ಹೆತ್ತವರನ್ನು ಇಳಿವಯಸ್ಸಲ್ಲೂ ಹಣಕ್ಕಾಗಿ ಪೀಡಿಸುತ್ತ ಗೋಳು ಹೊಯ್ದುಕೊಳ್ಳುತ್ತಿರುತ್ತಾರೆ.
ಬದುಕಿಗೆ ಮುನ್ನುಡಿ ಬರೆಯವ ಸರಿವಯಸ್ಸಲ್ಲಿ ಹೆಜ್ಜೆ ತಪ್ಪುವ ಯುವಜನರ ಈ ರೀತಿಯ ನಡವಳಿಕೆಗಳಿಗೆ ಸಂಬಂಧಿಸಿದ ಸಮಸ್ಯೆ ಸಂಕೀರ್ಣವಾದುದು. ಹೀಗಾಗಿ ಪರಿಹಾರವೂ ಸರಳವೇನಲ್ಲ. ಸಾಮಾಜಿಕವಾಗಿ ಕುಸಿತ ಕಂಡಿರುವ ನೈತಿಕತೆ ಹಾಗೂ ಮೌಲ್ಯಗಳು, ಮಾಯಾ ಜಾಲದಂತಿರುವ ಪರಿಸರ, ಸಹವಾಸ ದೋಷ ಮುಂತಾದ ಅಂಶಗಳೆಲ್ಲ ಇಂತಹ ಒಂದು ಸಮಸ್ಯೆಯನ್ನು ಹುಟ್ಟು ಹಾಕಿ ಪೋಷಿಸುವಂತಿದೆ. ಇಲ್ಲಿ ಹಾದಿ ತಪ್ಪಿದ ಯುವಜನರ ಹೆತ್ತವರ ಕುರಿತು ಜನರು, ‘‘ಬಾಲ್ಯದಲ್ಲಿ ಹೆತ್ತವರು ಸರಿಯಾದ ಸಂಸ್ಕಾರ ನೀಡಿದ್ದರೆ ಮಕ್ಕಳು ಈ ರೀತಿ ಖಂಡಿತ ದಾರಿ ತಪ್ಪುತ್ತಿರಲಿಲ್ಲ.’’ ಎಂಬ ಬೀಸು ಹೇಳಿಕೆಯನ್ನು ನೀಡುವುದಿದೆ. ಯಾವ ಹೆತ್ತವರೂ ತಮ್ಮ ಮಕ್ಕಳು ಅಡ್ಡ ದಾರಿಯಲ್ಲಿ ಸಾಗಿ ಭವಿಷ್ಯ ಕಂಡುಕೊಳ್ಳಲಿ ಎಂದು ಬಯಸಲಾರರು. ಅವರಿಗೆ ತಮ್ಮ ಮಕ್ಕಳಿಗೆ ಮೇಲ್ವರ್ಗದ ಮಾದರಿಯ ಧಾರ್ಮಿಕ ಸಂಸ್ಕಾರ, ಆಚಾರ-ವಿಚಾರಗಳನ್ನು ನೀಡಲು ಸಾಧ್ಯವಾಗದಿದ್ದರೂ ಸಕಾಲಿಕ ಎಚ್ಚರ, ತಿಳುವಳಿಕೆ, ಬುದ್ಧಿವಾದಗಳನ್ನೆಲ್ಲ ತಪ್ಪಿಸಲಾರರು. ಇದಕ್ಕೆ ಅಪವಾದಗಳು ಇರಬಹುದು. ಆದರೆ ಹೆತ್ತವರೆಲ್ಲರೂ ಜೀವನ ಪರ್ಯಂತ ತಮ್ಮ ಮಕ್ಕಳ ಉನ್ನತಿಗಾಗಿ ಹೆಣಗಾಡುವವರೇ ಆಗಿರುತ್ತಾರೆ ಎಂಬುದನ್ನು ಮರೆಯಲಾಗದು.
ಆದರೆ ಮಕ್ಕಳಿಂದ ನೋವು, ಕಷ್ಟ ಅನುಭವಿಸುವಂತಹ ಅದೃಷ್ಟ ಹೀನ ಹೆತ್ತವರು, ‘‘ಇವೆಲ್ಲ ಮೊದಲೇ ಗೊತ್ತಿದ್ದರೆ ಮದುವೆ, ಮಕ್ಕಳು ಯಾವುದೂ ಬೇಡವಾಗಿತ್ತು’’ ಎಂದು ನಿಡುಸುಯ್ಯುವುದಿದೆ. ಒಂದು ಕಡೆ ಮಕ್ಕಳ ಪೀಡನೆ, ಇನ್ನೊಂದು ಕಡೆ ಸಾಮಾಜಿಕವಾಗಿಯೂ, ಕೌಟುಂಬಿಕವಾಗಿಯೂ ಅನುಭವಿಸಬೇಕಾಗಿ ಬರುವಂತಹ ಅವಮಾನ ಈ ಬಡಪಾಯಿಗಳನ್ನು ಸಾವಿನವರೆಗೆ ನಿರಂತರವಾಗಿ ಹಿಂಸಿಸುತ್ತಲೇ ಇರುತ್ತವೆ. ಇವೆಲ್ಲ ಮಮತೆ, ಪ್ರೀತಿಯಿಂದ ಸಾಕಿ ಬೆಳೆಸಿದ ಮಕ್ಕಳಿಗೆ ಅರ್ಥವಾಗುವುದೇ ಇಲ್ಲ. ಕೊನೆಗೆ ಅರ್ಥವಾಗುವ ಹೊತ್ತಿಗೆ ಹೆತ್ತವರೇ ಜೀವಂತವಾಗಿ ಇರುವುದಿಲ್ಲ.







