ಹಗಲಲ್ಲೂ ಉರಿಯುವ ಬೀದಿ ದೀಪಗಳು; ವಿದ್ಯುತ್ ವ್ಯರ್ಥಕ್ಕೆ ಕಡಿವಾಣ ಎಂದು?
ಹಲವು ಗ್ರಾಮ ಪಂಚಾಯತ್‌ಗಳಲ್ಲಿ ನಿರ್ಲಕ್ಷ್ಯ; ಕ್ರಮಕ್ಕೆ ಮುಂದಾಗಲು ಆಗ್ರಹ

ಹರಪನಹಳ್ಳಿ: ತಾಲೂಕಿನ ಹಲವು ಗ್ರಾಪಂಗಳ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತು ಬೆಳಗಬೇಕಾದ ಬೀದಿ ದೀಪಗಳು ಹಗಲಿನಲ್ಲಿಯೂ ನಿರಂತರವಾಗಿ ಉರಿಯುತ್ತಿವೆ. ಇದರಿಂದ ವಿದ್ಯುತ್ ವ್ಯರ್ಥವಾಗುವುದರ ಜತೆಗೆ ಸರಕಾರದ ಬೊಕ್ಕಸಕ್ಕೂ ಅನಗತ್ಯ ಆರ್ಥಿಕ ಹೊರೆ ಬೀಳುತ್ತಿದೆ. ಬೀದಿ ದೀಪಗಳ ನಿರ್ವಹಣೆಯಲ್ಲಿ ಕಂಡುಬರುತ್ತಿರುವ ನಿರ್ಲಕ್ಷ್ಯ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಗ್ರಾಮೀಣ ಪ್ರದೇಶಗಳ ರಸ್ತೆಗಳು, ವೃತ್ತಗಳು ಹಾಗೂ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ಸಂಚಾರಕ್ಕೆ ಅನುಕೂಲವಾಗಲೆಂದು ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆದರೆ, ಇವು ಹಗಲಿನಲ್ಲಿಯೂ ಉರಿಯುತ್ತಿರುವುದು ಹಲವು ಗ್ರಾಮಗಳಲ್ಲಿ ಸಾಮಾನ್ಯ ದೃಶ್ಯವಾಗಿದೆ. ನಿಗದಿತ ಸಮಯಕ್ಕೆ ದೀಪಗಳನ್ನು ಆರಿಸುವ ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಇಲ್ಲದಿರುವುದು ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಕೆಲವು ಗ್ರಾಮಗಳಲ್ಲಿ ಸ್ವಯಂಚಾಲಿತ ನಿಯಂತ್ರಣ ವ್ಯವಸ್ಥೆಯೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳಿವೆ.
ಈ ಸಮಸ್ಯೆ ಒಂದೆರಡು ದಿನಗಳಿಗೆ ಸೀಮಿತವಾಗಿಲ್ಲ. ಹಲವು ಗ್ರಾಪಂಗಳ ವ್ಯಾಪ್ತಿಯಲ್ಲಿ ಇದೇ ಪರಿಸ್ಥಿತಿ ಮುಂದುವರಿದಿದ್ದರೂ, ಸಮಸ್ಯೆಯ ಮೂಲ ಪತ್ತೆಹಚ್ಚಿ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈ.ಎಚ್. ಚಂದ್ರಶೇಖರ್ ಅವರ ಗಮನಕ್ಕೂ ಹಲವು ಬಾರಿ ತರಲಾಗಿದ್ದರೂ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರಕಾರ ವಿದ್ಯುತ್ ಉಳಿತಾಯ, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಗೂ ಸಾರ್ವಜನಿಕ ಸಂಪನ್ಮೂಲಗಳ ಸದ್ಬಳಕೆಗೆ ಆದ್ಯತೆ ನೀಡುತ್ತಿದೆ. ಆದರೆ, ಗ್ರಾಪಂಗಳ ವ್ಯಾಪ್ತಿಯಲ್ಲಿ ಹಗಲಿನಲ್ಲಿಯೇ ಬೀದಿ ದೀಪಗಳು ಉರಿಯುತ್ತಿರುವುದು ಸ್ಥಳೀಯ ಆಡಳಿತದ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮೂಡಿಸಿದೆ.
ಒಂದು ಗ್ರಾಮದಲ್ಲಿ ದಿನವಿಡೀ ಅನಗತ್ಯವಾಗಿ ಉರಿಯುವ ಬೀದಿ ದೀಪಗಳಿಂದ ಉಂಟಾಗುವ ವಿದ್ಯುತ್ ವೆಚ್ಚ ಅಲ್ಪವೆನಿಸಬಹುದು. ಆದರೆ, ತಾಲೂಕಿನ ಹಲವು ಗ್ರಾಪಂಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಒಟ್ಟಾರೆ ವೆಚ್ಚ ಗಣನೀಯ ಪ್ರಮಾಣಕ್ಕೆ ತಲುಪಲಿದೆ. ಸಾರ್ವಜನಿಕರ ತೆರಿಗೆ ಹಣದಿಂದ ಭರಿಸಲಾಗುವ ವಿದ್ಯುತ್ ವೆಚ್ಚವನ್ನು ಮಿತವಾಗಿ ಮತ್ತು ಸಮರ್ಪಕವಾಗಿ ಬಳಸಿಕೊಳ್ಳುವ ಜವಾಬ್ದಾರಿ ಸ್ಥಳೀಯ ಆಡಳಿತ ಸಂಸ್ಥೆಗಳ ಮೇಲಿದೆ.
ತಾಲೂಕಿನ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಬೀದಿ ದೀಪಗಳ ಕಾರ್ಯನಿರ್ವಹಣೆ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು. ಅಗತ್ಯವಿರುವ ಕಡೆ ಸ್ವಯಂಚಾಲಿತ ನಿಯಂತ್ರಣ ವ್ಯವಸ್ಥೆ ಅಳವಡಿಸಿ, ನಿಗದಿತ ಸಮಯಕ್ಕೆ ದೀಪಗಳು ಬೆಳಗುವ ಹಾಗೂ ಆರಿಸುವ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ, ಗ್ರಾಪಂ ಮಟ್ಟದಲ್ಲಿ ಬೀದಿ ದೀಪಗಳ ನಿರ್ವಹಣೆಗೆ ನಿರ್ದಿಷ್ಟ ಜವಾಬ್ದಾರಿ ವಹಿಸಿ, ನಿಯಮಿತ ಮೇಲ್ವಿಚಾರಣೆ ನಡೆಸುವ ಮೂಲಕ ವಿದ್ಯುತ್ ವ್ಯರ್ಥವಾಗುವುದನ್ನು ತಡೆಯಬೇಕಿದೆ.
ತಾಲೂಕಿನ ಚಟ್ನಿಹಳ್ಳಿ, ಉಚ್ಚಂಗಿದುರ್ಗ, ತೌಡೂರು, ಕಡಬಗೆರೆ, ಅರಸೀಕೆರೆ, ಅಣಜಿಗೆರೆ, ಹಲವಾಗಲು, ಕಂಚಿಕೆರೆ, ನಿಟ್ಟೂರು, ಪುಣಬಗಟ್ಟ, ಹಿರೇಮೇಗಳಗೆರೆ, ಲಕ್ಷ್ಮೀಪುರ ಸೇರಿದಂತೆ ಹಲವು ಗ್ರಾಪಂ ವ್ಯಾಪ್ತಿಯಲ್ಲಿ ಹಗಲಿನಲ್ಲಿಯೇ ಬೀದಿ ದೀಪಗಳು ಉರಿಯುತ್ತಿರುವುದು ಕಂಡುಬರುತ್ತಿದೆ. ಇದರಿಂದ ಅನಗತ್ಯವಾಗಿ ವಿದ್ಯುತ್ ವ್ಯರ್ಥವಾಗುತ್ತಿದ್ದು, ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳು ಕೂಡಲೇ ಗಮನಹರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹಗಲಿನಲ್ಲಿಯೇ ಬೀದಿ ದೀಪಗಳು ಉರಿಯುತ್ತಿರುವ ಸಮಸ್ಯೆ ಕುರಿತು ಮಾಹಿತಿ ಪಡೆಯಲು ವಿಜಯನಗರ ಜಿಪಂ ಸಿಇಒ ಗರಿಮಾ ಪನ್ವಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.
ತಾಲೂಕಿನ ಎಲ್ಲ ಗ್ರಾಪಂಗಳಿಗೂ ಹಗಲಿನ ಹೊತ್ತಿನಲ್ಲಿ ಬೀದಿ ದೀಪಗಳು ಉರಿಯದಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಸಮಸ್ಯೆ ಮರುಕಳಿಸಿದರೆ ಸಂಬಂಧಪಟ್ಟ ಪಂಚಾಯಿತಿಗಳಿಗೆ ನೋಟಿಸ್ ಜಾರಿ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
<ವೈ.ಎಚ್.ಚಂದ್ರಶೇಖರ್
ತಾ.ಪಂ. ಇಒ, ಹರಪನಹಳ್ಳಿ
ಚಟ್ನಿಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಗಲಿನಲ್ಲಿಯೂ ಬೀದಿ ದೀಪಗಳು ಉರಿಯುತ್ತಿದ್ದು, ಅನಗತ್ಯವಾಗಿ ವಿದ್ಯುತ್ ವ್ಯರ್ಥವಾಗುತ್ತಿದೆ. ಈ ಸಮಸ್ಯೆಯನ್ನು ಹಲವು ಬಾರಿ ಪಂಚಾಯಿತಿ
ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ
ಯಾವುದೇ ಕ್ರಮಕೈಗೊಂಡಿಲ್ಲಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಬೇಸರದ ಸಂಗತಿ.
<ಬಂಡಿ ಶಶಿಕುಮಾರ್
ಮಾಜಿ ಗ್ರಾ.ಪಂ. ಸದಸ್ಯ, ನೆರೆಬೊಮ್ಮನಹಳ್ಳಿ






