ದೇಶದ ಅತಿ ಎತ್ತರದ ಕುಂಚಿಕಲ್ ಅಬ್ಬಿ ಫಾಲ್ಸ್ ಅಭಿವೃದ್ಧಿಗೆ ಹೋರಾಟ

ಶಿವಮೊಗ್ಗ: ಜಿಲ್ಲೆಯಲ್ಲಿ ಕಂಡುಬರುವ ಕುಂಚಿಕಲ್ ಅಬ್ಬಿ ಜಲಪಾತ ದೇಶದ ಅತಿ ಎತ್ತರದ ಹಾಗೂ ಏಶ್ಯದ ಎರಡನೇ ಅತಿ ಎತ್ತರದ ಜಲಪಾತವಾಗಿದೆ. ಅಭಿವೃದ್ಧಿ ಕಾಣದೆ ಇದು ಜನರಿಂದ ದೂರ ಉಳಿದಿದೆ. ಅದೆಷ್ಟೋ ಪ್ರವಾಸಿಗರ ಮನಸ್ಸಿನಲ್ಲಿ ಉಳಿಯ ಬೇಕಿದ್ದ ಈ ಜಲಪಾತ ಈಗ ಕಾಡಂಚಿನಲ್ಲಿ ಕಾಣದಂತೆ ಹರಿದು ಸಮುದ್ರ ಸೇರುತ್ತಿದೆ.
ಕುಂಚಿಕಲ್ ಜಲಪಾತದ ಮೊದಲ ಸರ್ವೇ 1897ರಲ್ಲಿ ನಡೆದಿತ್ತು.ಜೋಗ ಜಲಪಾತ ಒಂದೇ ಹಂತದಲ್ಲಿ ಇದ್ದರೆ, ಕುಂಚಿಕಲ್ ಜಲಪಾತ ವಿವಿಧ ಹಂತಗಳಲ್ಲಿ ಮತ್ತು ಮಲೆನಾಡಿನ ರಸ್ತೆಗಳಂತೆ ಅಂಕುಡೊಂಕಾಗಿ ಬೀಳುತ್ತದೆ. ಇದು ನಿರ್ಬಂಧಿತ ಪ್ರದೇಶದಲ್ಲಿರುವ ಕಾರಣ ಇಲ್ಲಿಗೆ ಯಾರೂ ಹೋಗುವ ಹಾಗಿಲ್ಲ. ಮಳೆಗಾಲದಲ್ಲಿ ಹೊಸಂಗಡಿಯಿಂದ ಈ ಜಲಪಾತದ ನೈಜ ಸ್ವರೂಪವನ್ನು ನೋಡಿ ಆನಂದಿಸಬಹುದು. ಹಾಗಾಗಿ ಈಗ ಜಲಪಾತದ ಅಭಿವೃದ್ಧಿಗಾಗಿ ಮಾಸ್ತಿಕಟ್ಟೆ - ಹುಲಿಕಲ್ ಕ್ರಾಂತಿ ಎಂಬ ಹೋರಾಟ ಆರಂಭವಾಗಿದೆ. ಅರಣ್ಯ ಇಲಾಖೆ ಹಾಗೂ ಕೆಪಿಸಿ ಇಲಾಖೆಯ ಒಳಗೆ ಬರುವ ಈ ಜಲಪಾತಕ್ಕೆ ಮುಕ್ತಿ ಕೊಡಬೇಕು ಎಂದು ಹೋರಾಟಗಾರರು ಒತ್ತಾಯ ಮಾಡುತ್ತಿದ್ದಾರೆ.
ಕುಂಚಿಕಲ್ ಇರುವುದು ಎಲ್ಲಿ?
ಕುಂಚಿಕಲ್ ಜಲಪಾತವು ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆ ಗ್ರಾಮದ ಸಮೀಪದಲ್ಲಿದೆ. ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ. ವಿಶೇಷವೆಂದರೆ ರಾಜ್ಯದಲ್ಲಿ ಅತಿಹೆಚ್ಚು ಮಳೆಬೀಳುವ ಪ್ರದೇಶ ಕೂಡ ಹೌದು. ವರಾಹಿ ನದಿ ಅತಿ ಎತ್ತರದ ಜಲಪಾತದ ಮೂಲವಾಗಿದೆ. ನೀರು ಸರಿಸುಮಾರು 1,493 ಅಡಿ ಎತ್ತರದಿಂದ ಕೆಳಗಿಳಿದು, ಮಾಣಿ ಅಣೆಕಟ್ಟಿನ ಜಲಾಶಯಕ್ಕೆ ಹರಿಯುತ್ತದೆ. ಜಲವಿದ್ಯುತ್ ಉತ್ಪಾದಿಸಲು ಬಳಸಲಾಗುವ ಮಾಣಿ ಅಣೆಕಟ್ಟಿನ ಸೃಷ್ಟಿಯಿಂದಾಗಿ ಜಲಪಾತದಲ್ಲಿ ನೀರಿನ ಹರಿವು ಬಹಳ ಕಡಿಮೆಯಾಯಿತು ಎಂದು ಹೇಳಲಾಗುತ್ತದೆ.
ಅದೇನೇ ಇರಲಿ, ದೇಶದ ಅತಿ ಎತ್ತರದ ಜಲಪಾತ ಎಂಬ ಹೆಗ್ಗಳಿಕೆ ಹೊಂದಿರುವ ಕುಂಚಿಕಲ್ ಅಬ್ಬಿ ಜಲಪಾತವು ಅಂತರ್‌ರಾಷ್ಟ್ರೀಯ ಮಟ್ಟದ ಅಭಿವೃದ್ಧಿ ದೊರೆತರೆ, ಪ್ರವಾಸೋದ್ಯಮ ಉತ್ತಮವಾಗಲಿದೆ. ಇದರಿಂದ ಸ್ಥಳೀಯರಿಗೂ ಆರ್ಥಿಕವಾಗಿ ಲಾಭವಾಗುತ್ತದೆ ಹಾಗೂ ಹಲವಾರು ಕುಟುಂಬಗಳು ಇದರಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ ಎಂದು ಹೋರಾಟ ವೇದಿಕೆ ಸದಸ್ಯರ ಅಭಿಪ್ರಾಯವಾಗಿದೆ.
ಮಾಸ್ತಿಕಟ್ಟೆ-ಹುಲಿಕಲ್ ಕ್ರಾಂತಿ ವೇದಿಕೆ ಸೃಷ್ಟಿ ಮಾಡಿಕೊಂಡು ಮಾಸ್ತಿಕಟ್ಟೆ ಅಭಿವೃದ್ಧಿ ಮಾಡಬೇಕು. ಅಲ್ಲದೇ ಸಮೀಪದಲ್ಲೇ ಇರುವ ಕುಂಚಿಕಲ್ ಅಬ್ಬಿ ಜಲಪಾತವನ್ನು ಅಭಿವೃದ್ಧಿ ಮಾಡಬೇಕು. ಪ್ರವಾಸೋದ್ಯಮ ಬೆಳವಣಿಗೆಯಾಗಬೇಕು ಎಂಬ ಉದ್ದೇಶದಿಂದ ಹೋರಾಟ ಪ್ರಾರಂಭಿಸಿದ್ದೇವೆ.
-ಇಸ್ಮಾಯಿಲ್,ಮಾಸ್ತಿಕಟ್ಟೆ ಗ್ರಾಪಂ ಸದಸ್ಯ
ಮಾಸ್ತಿಕಟ್ಟೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಕೈಜೋಡಿಸುತ್ತಿದ್ದಾರೆ. ನಗರ ಹೋಬಳಿಯಲ್ಲಿರುವ ಕುಂಚಿಕಲ್ ಅಬ್ಬಿ ಜಲಪಾತವು ಏಶ್ಯದಲ್ಲೇ ಅತಿ ಎತ್ತರದ ಎರಡನೇ ಜಲಪಾತವಾಗಿದೆ. ಜಲಪಾತದ ಅಭಿವೃದ್ಧಿ ಬಗ್ಗೆ ಸರಕಾರದ ಗಮನಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ. ದೇಶದ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹೀಗಾಗಿ ಕುಂಚಿಕಲ್ ಅಬ್ಬಿ ಜಲಪಾತ ಪ್ರದೇಶವನ್ನು ಪ್ರವಾಸಿ ತಾಣವಾಗಿ ಮಾಡಬೇಕು.
-ಪಾಪು,ಮಾಸ್ತಿಕಟ್ಟೆ-ಹುಲಿಕಲ್ ಕ್ರಾಂತಿ ಹೋರಾಟ ವೇದಿಕೆ ಸದಸ್ಯ
ಕುಂಚಿಕಲ್ ಅಬ್ಬಿ ಜಲಪಾತವನ್ನು ಪ್ರವಾಸಿ ತಾಣವಾಗಿ ಮಾಡಬೇಕು. ಇದರ ಸುತ್ತಮುತ್ತ ಹಿನ್ನೀರು ಪ್ರದೇಶವಿದೆ. ಚಕ್ರಾ, ಸಾವೆಹಕ್ಲು, ಮಾಣಿ ಡ್ಯಾಮ್ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಕುಂಚಿಕಲ್ ಅಬ್ಬಿ ಜಲಪಾತವನ್ನು ಪ್ರವಾಸಿ ತಾಣವಾಗಿ ಮಾಡಬೇಕು ಎಂಬ ಉದ್ದೇಶದಿಂದ ಮಾಸ್ತಿಕಟ್ಟೆ - ಹುಲಿಕಲ್ ಕ್ರಾಂತಿ ಎಂಬ ಹೋರಾಟ ಪ್ರಾರಂಭ ಮಾಡಿದ್ದೇವೆ.
-ಚೇತನ್,ಮಾಸ್ತಿಕಟ್ಟೆ-ಹುಲಿಕಲ್ ಕ್ರಾಂತಿ ಹೋರಾಟ ವೇದಿಕೆ ಸದಸ್ಯ







