ಯರಗೇರಾ ತಾಲೂಕು ರಚನೆಗಾಗಿ ಹೋರಾಟ : ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ

ರಾಯಚೂರು : ರಾಯಚೂರು ತಾಲೂಕಿನ ಯರಗೇರಾ ಹೋಬಳಿಯನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ನಿಜಾಮುದ್ದೀನ್ ನೇತೃತ್ವದಲ್ಲಿ ಹೋರಾಟ ತೀವ್ರಗೊಳಿಸಲಾಗಿದ್ದು, ಜಿಲ್ಲಾ ಕೇಂದ್ರದಲ್ಲಿ ಹೋರಾಟದ ಬಳಿಕ ಈಗ ರಾಜಧಾನಿಗೆ ಶಿಫ್ಟ್ ಮಾಡಲು ಮುಂದಾಗಿದ್ದಾರೆ.
ಯರಗೇರಾ ತಾಲೂಕು ರಚನೆಗೆ ಕಳೆದ 4 ವರ್ಷಗಳಿಂದ ಒಗ್ಗಟ್ಟಿನ ಹೋರಾಟ ಮಾಡಲಾಗುತ್ತಿತ್ತು ಆದರೂ ಅನೇಕ ಅಡಚಣೆಯಿಂದ ಗಟ್ಟಿಯಾದ ಧ್ವನಿಯಾಗಿ ರೂಪಗೊಂಡಿರಲಿಲ್ಲ. ಈಗ ಪಕ್ಷಾತೀತವಾಗಿ ಯರಗೇರಾ ಸುತ್ತಮುತ್ತಲಿನ ಗ್ರಾಮಸ್ಥರು ಹೋರಾಟಕ್ಕೆ ಬೆಂಬಲ ನೀಡಿದ್ದು ಸೋಮವಾರದಿಂದ (ಜು.21) ಬೆಂಗಳೂರಿಗೆ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ಮುಂದಾಗಿದ್ದಾರೆ.
ಈಚೆಗೆ ಸಚಿವ ಎನ್ ಎಸ್ ಬೋಸರಾಜು, ಸಂಸದ ಜಿ.ಕುಮಾರ ನಾಯಕ, ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರ ಮೂಲಕ ಸರಕಾರದ ಗಮನ ಸೆಳೆಯಲು ಮನವಿ ಮಾಡಿದ್ದಾರೆ.
ಯರಗೇರಾ ಹೋಬಳಿ ಆಂಧ್ರಪ್ರದೇಶದ ಮತ್ತು ತೆಲಂಗಾಣ ರಾಜ್ಯಗಳಿಗೆ ಗಡಿ ಹಂಚಿಕೆ ಮಾಡಿಕೊಂಡಿದ್ದು, ಹಾಲಿ ಇರುವ ರಾಯಚೂರು ತಾಲೂಕು ಕೇಂದ್ರವು ಜಿಲ್ಲಾ ಸ್ಥಾನದಲ್ಲಿ ಇರುವುದರಿಂದ ಉಪನೋಂದಣಿ ಅಧಿಕಾರಿಗಳ ಕಾರ್ಯಾಲಯ, ಶಿಕ್ಷಣಾಧಿಕಾರಿ ಕಾರ್ಯಾಲಯ ಸೇರಿದಂತೆ ಅನೇಕ ಕಚೇರಿಗಳು ಕಾರ್ಯ ನಿಮಿತ್ತ ತಿಂಗಳುಗಟ್ಟಲೆ ಜನರು ಅಲೆದಾಡುವ ಪರಿಸ್ಥಿತಿ ಇದೆ. ನಿರ್ದಿಷ್ಟ ವಿಸ್ತೀರ್ಣ, ಜನಸಂಖ್ಯೆ ಹಾಗೂ ಹಲವೂ ವೈಶಿಷ್ಟ್ಯ ಅರ್ಹತೆ ಹೊಂದಿರುವ ಯರಗೇರಾ ಗ್ರಾಮವನ್ನು ತಾಲೂಕು ಮಾಡಿ ಮೇಲ್ದರ್ಜೆಗೇರಿಸಿದರೆ ಈ ಭಾಗದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಸಹಕಾರವಾಗಲಿದೆ ಎನ್ನುವುದು ಇಲ್ಲಿನ ಜನರ ಒತ್ತಾಸೆಯಾಗಿದೆ.
ಹುಂಡೇಕಾರ್ ಸಮಿತಿ ರಚಿಸಿದಾಗ ಕೇವಲ ಮಸ್ಕಿ, ಸಿರವಾರ ತಾಲ್ಲೂಕಿಗೆ ಶಿಫಾರಸು ಮಾಡಿ ಯರಗೇರಾವನ್ನು ಕೈಬಿಡಲಾಗಿತ್ತು.ಇಲ್ಲಿನ ಜನರ ಅನೇಕ ವರ್ಷಗಳ ಬೇಡಿಕೆಗೆ ಸ್ಪಂದಿಸಿ ತಾಲೂಕು ರಚನೆ ಮಾಡಲಿ ಎಂದು ಯರಗೇರಾ ಹೋರಾಟ ಸಮಿತಿಯ ಮುಖಂಡರು ಮನವಿ ಮಾಡಿದ್ದಾರೆ.
‘ಯರಗೇರಾ ಹೋಬಳಿ ತಾಲೂಕು ರಚನೆಗೆ ನಾಲ್ಕು ವರ್ಷಗಳಿಂದ ಹೋರಾಟ ಮಾಡಿದ್ದು ಕೊರೊನಾ ಹಿನ್ನೆಲೆಯಲ್ಲಿ ಅಡಚಣೆಯಾಗಿತ್ತು, ಭೌಗೋಳಿಕವಾಗಿ, ಜನಸಂಖ್ಯೆ, ವಸತಿ ಮೂಲಸೌಕರ್ಯಗಳ ಹಿತ ದೃಷ್ಟಿಯಿಂದ ಪ್ರತ್ಯೇಕ ತಾಲೂಕು ರಚನೆಗೆ ಅರ್ಹತೆ ಹೊಂದಿದೆ. ಸರ್ಕಾರಕ್ಕೆ ಮನವರಿಕೆ ಮಾಡಲು ಫ್ರೀಡಂ ಪಾರ್ಕ್ ಅನಿರ್ಧಿಷ್ಠಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದೇವೆ. ತಾಲೂಕು ರಚನೆಯಾಗುವವರೆಗೆ ಹೋರಾಟ ಮುಂದುವರೆಯಲಿದೆ’.
-ನಿಜಾಮುದ್ದೀನ್, ಯರಗೇರಾ ತಾಲೂಕು ಹೋರಾಟ ಸಮಿತಿಯ ಸಂಚಾಲಕ.







