ಭಿಕ್ಷೆ ಬೇಡುತ್ತಿದ್ದ ವಿದ್ಯಾರ್ಥಿನಿಗೆ ಎಸೆಸೆಲ್ಸಿಯಲ್ಲಿ 529 ಅಂಕ

ಆಳಂದ : ರಾಜ್ಯದ ಪ್ರಸಕ್ತ ಸಾಲಿನ ಎಸೆಸೆಲ್ಸಿ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆ ಕಡೆಯ ಸ್ಥಾನ ಬಂದಿದ್ದರೂ, ಫಲಿತಾಂಶದಲ್ಲಿ ಉತ್ತಮ ಚೇತರಿಕೆ ಕಂಡಿದೆ. ಈ ಫಲಿತಾಂಶದ ನಡುವೆಯೇ ಓರ್ವ ವಿದ್ಯಾರ್ಥಿನಿಯ ಅಸಾಧಾರಣ ಸಾಧನೆಯು ಪ್ರೇರಣಾ ಶಕ್ತಿಯನ್ನು ಹೊಂದಿದೆ. ಹೊಟ್ಟೆಪಾಡಿಗಾಗಿ ಮನೆಮನೆ ಬೇಡುತ್ತಾ, ಜ್ಞಾನದ ಹಸಿವು ತೀರಿಸಿದ ತಾಲೂಕಿನ ಮಾದನ ಹಿಪ್ಪರಗಾ ಸರಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ರಾಜ್ಯದ ಗಮನ ಸೆಳೆಯುತ್ತಿದ್ದಾಳೆ.
ಆಳಂದ ತಾಲೂಕಿನ ಮಾದನ ಹಿಪ್ಪರಗಾ ಸರಕಾರಿ ಪಬ್ಲಿಕ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಸುಜಾತಾ ಭೀಮಶಾ ಗೊಲ್ಲರ್ ಅವರು ಒಟ್ಟು 625 ಅಂಕಗಳಲ್ಲಿ 529 ಅಂಕಗಳನ್ನು ಪಡೆದು ಶೇ.84.64 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಮೂಲತಃ ಅಲೆಮಾರಿ ಜನಾಂಗಕ್ಕೆ ಸೇರಿದ ಗೊಲ್ಲರ್ ಸಮುದಾಯದ ಸುಜಾತಾ ಅವರು ಅನಕ್ಷರಸ್ಥ, ಕಡು ಬಡತನದ ಕುಟುಂಬದಲ್ಲಿ ಜನಿಸಿದ್ದಾರೆ.
ತಂದೆ ಭೀಮಶಾ ಗೊಲ್ಲರ್ ಪ್ರತಿದಿನ ಬೆಳಗಿನಿಂದ ಸಂಜೆಯವರೆಗೆ ಹೊಟ್ಟೆಪಾಡಿಗಾಗಿ ಮನೆಮನೆಗೆ ಭಿಕ್ಷಾಟನೆ ಮಾಡುತ್ತಾ ಕುಟುಂಬದ ಹಸಿವನ್ನು ಇಂಗಿಸಿಕೊಳ್ಳುತ್ತಾರೆ. ಅಲೆಮಾರಿ ಗೊಲ್ಲರ್ ಸಮುದಾಯದ ಕಡು ಬಡತನದಲ್ಲಿ ಹುಟ್ಟಿ ಬೆಳೆದ ಸುಜಾತಾ, ಕುಟುಂಬದ ಆರ್ಥಿಕ ಸಂಕಷ್ಟಗಳ ನಡುವೆಯೂ ಶಿಕ್ಷಣದ ಹಂಬಲವನ್ನು ಬಿಡಲಿಲ್ಲ. ಹೊಟ್ಟೆಪಾಡಿಗಾಗಿ ಪ್ರತಿದಿನ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡುತ್ತಲೇ ತನ್ನ ಬದುಕನ್ನು ಸಾಗಿಸುತ್ತಿದ್ದರೂ, ಜ್ಞಾನದ ಹಸಿವು ಅವಳನ್ನು ಶಾಲೆಯತ್ತ ಸೆಳೆದಿತ್ತು. ದಿನನಿತ್ಯದ ಸಂಕಷ್ಟಗಳ ನಡುವೆಯೂ ಭಿಕ್ಷೆ ಮತ್ತು ಹಠದಿಂದ ಓದನ್ನು ಮುಂದುವರಿಸಿದ ಆಕೆಯ ಪರಿಶ್ರಮಕ್ಕೆ ಇದೀಗ ಸಾರ್ಥಕ ಫಲ ಸಿಕ್ಕಿದೆ.
‘ತಾನು ಏನಾದರೂ ಸಾಧಿಸಬೇಕು’ ಎಂಬ ದೃಢ ನಿರ್ಧಾರದೊಂದಿಗೆ, ಕುಟುಂಬದ ಬಡತನವನ್ನು ಮೆಟ್ಟಿ ನಿಂತು, ಎಲ್ಲರಂತೆ ಶಿಕ್ಷಣ ಪಡೆಯಬೇಕೆಂಬ ಛಲದಿಂದ ಸುಜಾತ ಅವರು ಈ ಸಾಧನೆ ಮಾಡಿದ್ದಾರೆ. ಬಸವಣ್ಣನ ವಚನ ‘ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ...’ ವಚನವು ಆಕೆಗೆ ಸ್ಪೂರ್ತಿ ಚಿಲುಮೆ.
ಇಂದಿನ ಸಮಾಜದಲ್ಲಿ ಕಡು ಬಡವರಿಗೆ ಶಿಕ್ಷಣವೇ ದೊಡ್ಡ ಸವಾಲಾಗಿರುವಾಗ, ಸುಜಾತಾ ಅವರ ಕಥೆ ಅಲೆಮಾರಿ ಜನಾಂಗದಲ್ಲಿ ಅರಳಿದ ಅಪರೂಪದ ಪ್ರತಿಭೆಯಾಗಿ ನಿಂತಿದೆ. ಇದು ಕೇವಲ ಒಬ್ಬ ವಿದ್ಯಾರ್ಥಿನಿಯ ವೈಯಕ್ತಿಕ ಸಾಧನೆಯಲ್ಲ. ಬಡತನದ ಕತ್ತಲಲ್ಲಿ ಶಿಕ್ಷಣದ ಬೆಳಕನ್ನು ಹೊತ್ತಿಸುವ ಶಕ್ತಿಯ ಸಂಕೇತವಾಗಿದೆ. ಈ ವಿಶೇಷ ಸಾಧನೆಗಾಗಿ ಮಾದನಹಿಪ್ಪರಗಾದಲ್ಲಿನ ಸ್ಥಳೀಯ ಶಿಕ್ಷಣಪ್ರೇಮಿ ಬಳಗದ ವತಿಯಿಂದ ಸುಜಾತಾ ಅವರನ್ನು ಸನ್ಮಾನಿಸಲಾಗಿದೆ.
ಆಕೆಯ ಶಾಲೆಯಲ್ಲಿ ಶೈಕ್ಷಣಿಕ ಪ್ರವಾಸಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯಿಂದ 500 ರೂ. ಸಂಗ್ರಹಿಸಲಾಗುತ್ತಿದ್ದ ಸಂದರ್ಭದಲ್ಲಿ, ಸುಜಾತಾಳಿಗೂ ಅದೇ ಮೊತ್ತವನ್ನು ಕೇಳಲಾಗಿತ್ತು. ಆಗ ಆಕೆಯ ನೋವಿನ ಮಾತುಗಳು ಅಲ್ಲಿದ್ದವರ ಮನಸ್ಸನ್ನು ಮಿಡಿಯುವಂತೆ ಮಾಡಿತ್ತು. ‘ಈಗ ತಾನೇ ಭಿಕ್ಷೆ ಬೇಡಿ ಊಟಕ್ಕೆ ರೊಟ್ಟಿ ತಂದಿದ್ದೇನೆ, 500ರೂ. ಎಲ್ಲಿಂದ ಕೊಡಲಿ...?’ ಎಂಬ ಆಕೆಯ ಉತ್ತರ ಎಲ್ಲರ ಕಣ್ಣೀರನ್ನು ತರಿಸಿತು. ಈ ಕ್ಷಣದಲ್ಲಿ ಮಾನವೀಯತೆ ಮೆರೆದ ಶಾಲೆಯ ಶಿಕ್ಷಕ ಸಮೂಹ, ಸುಜಾತಾಳ ಪರಿಸ್ಥಿತಿಯನ್ನು ಮನಗಂಡು, ಆಕೆಯ ಪ್ರವಾಸದ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಿದರು. ಅಲ್ಲದೆ, ಆಕೆಯ ಶಿಕ್ಷಣದತ್ತ ಇರುವ ಆಸಕ್ತಿಯನ್ನು ಗುರುತಿಸಿ, ಅಗತ್ಯವಿರುವ ಎಲ್ಲ ರೀತಿಯ ನೆರವು ಹಾಗೂ ಪ್ರೋತ್ಸಾಹವನ್ನು ನೀಡಿದರು. ಅದೇ ಪ್ರೋತ್ಸಾಹವು ಆಕೆಗೂ ಆಕೆಯ ಸಮುದಾಯದ ವಿದ್ಯಾರ್ಥಿಗಳಿಗೂ ಹೊಸ ಆಶಾಭಾವನೆಯನ್ನು ತಂದು ಕೊಟ್ಟಿದೆ.






