ಶಿಕ್ಷಣೋದ್ಯಮಕ್ಕೆ ಶಿಕ್ಷಣಾರ್ಥಿಗಳೇ ಸರಕುಗಳು

ಶ್ರೆಕ್ಷಣಿಕ ಪ್ರಗತಿಯಲ್ಲಿ ಬೌದ್ಧಿಕ ಔನ್ನತ್ಯಕ್ಕಿಂತಲೂ ಮಿಗಿಲಾಗಿ ಕಾಣುವುದು, ಔದ್ಯಮಿಕ ಅಭಿವೃದ್ಧಿಯ ಮಾದರಿಗಳು. ಸರಕಾರಗಳು ತಮ್ಮ ಸಾಂವಿಧಾನಿಕ ಜವಾಬ್ದಾರಿ ಮತ್ತು ಸಾಮಾಜಿಕ ನೈತಿಕತೆಯನ್ನು ಮರೆತು, ಶಿಕ್ಷಣವನ್ನು ಖಾಸಗೀಕರಣಗೊಳಿಸುವ-ಕಾರ್ಪೊರೇಟೀಕರಣ
ಗೊಳಿಸುವ ನೀತಿಗಳನ್ನು ಅಳವಡಿಸುತ್ತಿವೆ. ಇಲ್ಲಿ ಬಲಿಯಾಗುತ್ತಿರುವುದು ಸರಕಾರಿ ಶಾಲೆಗಳು ಮತ್ತು ಇದನ್ನೇ ಅವಲಂಬಿಸುವ ತಳಸಮುದಾಯದ, ಕೆಳಮಧ್ಯಮ ವರ್ಗದ, ಬಡ ಜನತೆ. ಈ Marketisation (ಉದ್ಯಮ ಅಥವಾ ಸೇವಾ ವಲಯಗಳನ್ನು ಮಾರುಕಟ್ಟೆ ಶಕ್ತಿಗಳಿಗೆ ಒಪ್ಪಿಸುವ ಪ್ರಕ್ರಿಯೆ) ಈಗ ಉನ್ನತ ವಿಶ್ವವಿದ್ಯಾನಿಲಯಗಳಿಂದ ಗ್ರಾಮೀಣ ಪ್ರಾಥಮಿಕ ಶಾಲೆಗಳವರೆಗೂ ವ್ಯಾಪಿಸಿದೆ.
ಕರ್ನಾಟಕದ So called ಸಮಾಜವಾದಿ-ಸಂವಿಧಾನ ಪ್ರಿಯ ಕಾಂಗ್ರೆಸ್ ಸರಕಾರ ಜಾರಿಗೊಳಿಸಿರುವ 40 ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮಾಗ್ನೆಟ್ ಶಾಲೆಗಳ ನೀತಿ ಇದರ ಒಂದು ನೇರ ನಿದರ್ಶನ. ಯಾವುದೇ ಉದ್ಯಮವಾದರೂ ಅಲ್ಲಿ ಪ್ರಧಾನವಾಗಿ ಲಾಭ ಗಳಿಕೆ, ಮಾರುಕಟ್ಟೆ ವಿಸ್ತರಣೆ ಮತ್ತು ತನ್ನ ವ್ಯಾಪ್ತಿಗೊಳಪಡುವ ವಸ್ತು-ಸೇವೆಗಳ ಸರಕೀಕರಣ ಸಾಮಾನ್ಯ ಲಕ್ಷಣಗಳಾಗುತ್ತವೆ. ಔದ್ಯಮಿಕ ನೆಲೆಯಲ್ಲಿ ಇದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಸಾಮಾಜಿಕ ಸಂವೇದನೆ, ಜನಪರ ಕಾಳಜಿ, ಅಭಿವೃದ್ಧಿಯ ಮಾನವೀಯ ಮಾರ್ಗ ಹಾಗೂ ವರ್ತಮಾನ-ಭವಿಷ್ಯದ ಪೀಳಿಗೆಯ ಸುಭದ್ರ ಬದುಕು, ಈ ಮೌಲ್ಯಗಳೇ ಅಡಿಪಾಯವಾಗಿರುವ ‘ಶಿಕ್ಷಣ’ ಒಂದು ಸರಕಾಗಿ, ‘ಶೈಕ್ಷಣಿಕ ವ್ಯವಸ್ಥೆ’ ಔದ್ಯಮೀಕರಣಕ್ಕೊಳಗಾದಾಗ, ಇದರ ಭಾಗಿದಾರರಾದ (Stakeholders) ಶಿಕ್ಷಣಾರ್ಥಿಗಳೂ ವಿನಿಮಯದ ಸರಕುಗಳಾಗಿಬಿಡುತ್ತಾರೆ.
ಶಿಕ್ಷಣಾರ್ಥಿಗಳ ಸರಕೀಕರಣ
ಈ ಸರಕೀಕರಣ ಮತ್ತು ಮಾರುಕಟ್ಟೆಯ ಒಂದು ವಾಣಿಜ್ಯ ಆಯಾಮವನ್ನು ರಾಜ್ಯ ಪಠ್ಯಕ್ರಮದ ಮತ್ತು ಸಿಬಿಎಸ್‌ಇ ಪಠ್ಯಕ್ರಮದ ದ್ವಿತೀಯ ಪಿಯು ಫಲಿತಾಂಶಗಳ ನಂತರದಲ್ಲಿ ಕಾಣಬಹುದು. ಮಕ್ಕಳು ಶಿಕ್ಷಣ ಪಡೆಯುವುದು ಜ್ಞಾನಾರ್ಜನೆಗೋ, ಉದ್ಯೋಗ ಪಡೆಯುವುದಕ್ಕೋ ಎಂಬ ಪ್ರಶ್ನೆಯನ್ನು ಬದಿಗಿಟ್ಟು ನೋಡಿದಾಗ, ಈ ಮಕ್ಕಳ ಉತ್ತೀರ್ಣ/ಅನುತ್ತೀರ್ಣ ವರ್ಗೀಕರಣ, ಈಗಾಗಲೇ ಬೇರೂರಿರುವ ಸಾಮಾಜಿಕ ವರ್ಗೀಕರಣವನ್ನು ಅಥವಾ ಪ್ರತ್ಯೇಕೀಕರಣವನ್ನು ಶೈಕ್ಷಣಿಕವಾಗಿ ಬಲಪಡಿಸುವಂತೆ ಕಾಣುತ್ತದೆ. ಒಂದು ವರ್ಗದ, ಸಾಮಾನ್ಯವಾಗಿ ಮೇಲ್ವರ್ಗ ಅಥವಾ ಮೇಲ್ ಮಧ್ಯಮ ವರ್ಗದ ಮಕ್ಕಳಿಗಷ್ಟೇ ನಿಲುಕುವ ಶಿಕ್ಷಣ ಸಂಸ್ಥೆಗಳು ಸೃಷ್ಟಿಸುವ ನಿರೂಪಣೆಗಳು (Narratives), ಶಿಕ್ಷಣ ಎನ್ನುವುದನ್ನು ಜ್ಞಾನ ಸಂಪಾದನೆಯ ಆವರಣಗಳಿಂದ, ಶ್ರೇಣೀಕರಣದ ಏಣಿಗಳಿರುವ ಸಂತೆಗೆ ರವಾನಿಸುತ್ತವೆ.
ಖಾಸಗಿ, ಕಾರ್ಪೊರೇಟ್ ಶಾಲೆಗಳು ತಮ್ಮ ದೃಷ್ಟಿಕೋನದಲ್ಲಿ ಅತ್ಯಂತ ಸಂಕುಚಿತವಾಗಿದ್ದರೂ ‘ಇಂಟರ್‌ನ್ಯಾಷನಲ್’ ಎಂಬ ಹೆಸರನ್ನು ಹೊತ್ತಿರುವುದು ಸಾಮಾನ್ಯ ಲಕ್ಷಣ. ಇಲ್ಲಿ ಮೌಲಿಕವಾಗಿ ಅಂತರ್‌ರಾಷ್ಟ್ರೀಯತೆಯ ಲವಲೇಶವೂ ಸಹ ಇರುವುದಿಲ್ಲ ಆದರೆ ಈ ಆಕರ್ಷಕ ಬೋರ್ಡುಗಳು ಸಿರಿವಂತರನ್ನು, ಮಧ್ಯಮವರ್ಗಗಳನ್ನು ಆಕರ್ಷಿಸುತ್ತವೆ. ಹತ್ತನೇ ತರಗತಿಯಿಂದ ಉತ್ತಮ ಅಂಕ ಗಳಿಸಿದ ಶಿಕ್ಷಣಾರ್ಥಿಗಳನ್ನು ಆಕರ್ಷಿಸಲು ಈ ಸಂಸ್ಥೆಗಳು ಸಕಲಕಲಾವಲ್ಲಭರನ್ನು ಸೃಷ್ಟಿಸುವ ಬೌದ್ಧಿಕ ಕೇಂದ್ರಗಳಂತೆ ಪತ್ರಿಕೆಗಳಲ್ಲಿ ಪೂರ್ಣಪುಟದ ಜಾಹೀರಾತುಗಳನ್ನು ನೀಡುತ್ತವೆ. ವಿದ್ಯುನ್ಮಾನ ವಾಹಿನಿಗಳು, ಮನೆಮನೆಗೆ ಹಂಚುವ ಕರಪತ್ರಗಳು ಈ ಮಾರುಕಟ್ಟೆ ಪ್ರಕ್ರಿಯೆಗೆ ಮತ್ತೊಂದು ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಡಿಜಿಟಲ್ ಯುಗದ ‘ಅಂಕ ಸಾಮ್ರಾಟರು’ ಉತ್ಪಾದನೆಯಾಗುವುದು ಈ ಶೈಕ್ಷಣಿಕ ಕಾರ್ಖಾನೆಗಳಲ್ಲಿ.
ಜ್ಞಾನ ಸಂಪತ್ತಿನ, ಬೌದ್ಧಿಕ ಉನ್ನತಿಯ ಮಿದುಳುಗಳು ಪಿಯು ಪ್ರವೇಶದ ಸಂದರ್ಭದಲ್ಲಿ ಕಚ್ಚಾವಸ್ತುಗಳಾದರೆ, ಎರಡು ವರ್ಷಗಳ ವ್ಯಾಸಂಗದ ನಂತರ ಉತ್ತೀರ್ಣವಾಗುವಾಗ, ಅತ್ಯುತ್ತಮ-ಉನ್ನತ ಶ್ರೇಣಿ ಮೊದಲಾದ ಗುಣವಿಶೇಷಣಗಳನ್ನು ಹೊತ್ತ ಉತ್ಪನ್ನಗಳಾಗಿ ಹೊರಬರುತ್ತವೆ. ಈ ಉತ್ಪನ್ನಗಳ ಚಹರೆಗಳನ್ನು ಪ್ರತಿಯೊಂದು ಕಾಲೇಜಿನ ಮುಂದೆ ಬೃಹತ್ ಜಾಹೀರಾತು ಫಲಕಗಳಲ್ಲಿ ಕಾಣಬಹುದು. ಮುದ್ರಣ ಮಾಧ್ಯಮದಲ್ಲಿ ಪ್ರಾದೇಶಿಕ-ರಾಜ್ಯ ಮಟ್ಟದ ಪತ್ರಿಕೆಗಳಿಗೆ ಈ ಜಾಹೀರಾತುಗಳು ಔದ್ಯಮಿಕ ವ್ಯವಹಾರದ ಲಾಭದಾಯಕ ಮಾರ್ಗಗಳಾಗಿ ಕಾಣುತ್ತವೆ. ಈ ಫಲಕಗಳಲ್ಲಿ ಕಾಣುವ ಚಹರೆಗಳು ಸಹಜವಾಗಿ ಪೋಷಕರನ್ನು ಸಂತೃಪ್ತಿಪಡಿಸುತ್ತದೆ. ತಮ್ಮ ಮಗ ಅಥವಾ ಮಗಳು ಸಾಧಕರ ಪಟ್ಟಿಯಲ್ಲಿದ್ದಾರೆ ಎಂಬ ಹೆಮ್ಮೆ ಇದ್ದೇ ಇರುತ್ತದೆ. ಇದೇನೂ ತಪ್ಪಲ್ಲ. ಏಕೆಂದರೆ ತಮ್ಮ ದುಡಿಮೆಯ ಹಣವನ್ನು ಮಕ್ಕಳ ಶಿಕ್ಷಣ-ಟ್ಯೂಷನ್‌ಗಳಲ್ಲಿ ಹೂಡಿರುತ್ತಾರೆ. ಮಕ್ಕಳ ಅಭ್ಯುದಯ ಪೋಷಕರನ್ನು ತೃಪ್ತಿಪಡಿಸುವುದು ಸ್ವಾಭಾವಿಕ.
ಸಾಂಸ್ಥಿಕ ಮಾರುಕಟ್ಟೆಯಲ್ಲಿ ಶಿಕ್ಷಣ
ಆದರೆ ಪೋಷಕರಿಗೆ ಕ್ಷಣಿಕ ಆನಂದ ನೀಡುವ ಈ ಮಕ್ಕಳ ಚಹರೆಗಳು ಶಿಕ್ಷಣೋದ್ಯಮದ ಸಂಸ್ಥೆಗಳ ದೃಷ್ಟಿಯಿಂದ ನೋಡಿದಾಗ ಮುಂದಿನ ಶೈಕ್ಷಣಿಕ ವರ್ಷದ ಹೊಸ ಕಚ್ಚಾವಸ್ತುಗಳನ್ನು ಬಾಚಿಕೊಳ್ಳುವ ಸರಕುಗಳಾಗಿಬಿಡುತ್ತವೆ. ಈ ಕೆಲವೇ ಮಕ್ಕಳ ಉತ್ತಮ ಅಂಕಗಳನ್ನೇ ‘ಶೈಕ್ಷಣಿಕ ಸಾಧನೆ’ ಎಂದು ಬಿಂಬಿಸುವ ಮೂಲಕ, ಈ ಸಾಧನೆಗೆ ಕಾರಣಗಳನ್ನು ಸಾಂಸ್ಥಿಕ ಪರಿಕರಗಳು, ಉಪಕರಣಗಳು, ಸೌಲಭ್ಯಗಳು ಮತ್ತು ಪರಿಸರದಲ್ಲಿ ಗುರುತಿಸಲಾಗುತ್ತದೆ. ‘‘ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರೆ ನಿಮ್ಮ ಮಕ್ಕಳೂ,,,,,,,,’’ಎಂಬ ಸಾಲುಗಳು ಅನೇಕ ಪೋಷಕರನ್ನು ಸಾಲದ ಸುಳಿಗೆ ಸಿಲುಕಿಸುವುದನ್ನೂ ಕಾಣಬಹುದು. ಇಲ್ಲಿ ಪೋಷಕರಿಗೆ ಮಕ್ಕಳ ‘ಭವಿಷ್ಯ’ ಮುಖ್ಯವಾಗುತ್ತದೆ. ಹಾಗಾಗಿ ಮುಗಿಬಿದ್ದು ಪ್ರವೇಶ ಗಿಟ್ಟಿಸುತ್ತಾರೆ.
ಆದರೆ ಶಿಕ್ಷಣೋದ್ಯಮಗಳಿಗೆ ಉತ್ತಮ ಫಲಿತಾಂಶ ಮತ್ತು ಹೆಚ್ಚಿನ ಸಂಖ್ಯೆಯ ‘ಅಂಕ ಸಾಮ್ರಾಟರ’ ಶೇಕಡಾವಾರು ಅಂಕಗಳು, ತಮ್ಮ ಮಾರುಕಟ್ಟೆಯನ್ನು ವಿಸ್ತರಿಸುವ ಸೇತುವೆಗಳಾಗುತ್ತವೆ. ಬಾಹ್ಯ ಸಮಾಜದಲ್ಲೂ ಸಹ ಜಾತಿವಾರು ಸಂಘಟನೆಗಳು, ಸಾಮಾಜಿಕ ಸಂಸ್ಥೆಗಳು ಈ ಅಂಕ ಸಾಮ್ರಾಟರನ್ನು ಸನ್ಮಾನಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಕಾಲೇಜುಗಳಲ್ಲೂ ಸಹ
ಈ ಉನ್ನತ ಅಂಕ ಗಳಿಸಿದವರನ್ನು ಸನ್ಮಾನಿಸುವುದು ಸಹಜ ಪ್ರಕ್ರಿಯೆಯೇ ಆಗಿದೆ. ಆರಂಭದಲ್ಲಿ ಉಲ್ಲೇಖಿಸಿದ ಕೆ.ಆರ್.ಸುಮತಿ ಅವರ ಸಾಲುಗಳನ್ನು ಈ ವಾತಾವರಣದ ನಡುವೆ ನಿಂತು ಮರು ಆಲೋಚನೆಗೊಳಪಡಿಸಬೇಕಿದೆ. ಉತ್ತಮ ಅಂಕಗಳಿಸಿದವರನ್ನು ‘ಪ್ರತಿಭಾವಂತರು’ ಎಂದು ಸಾಮಾನ್ಯೀಕರಿಸುವುದೇ ‘ಪ್ರತಿಭೆ’ ಎಂಬ ಔನ್ನತ್ಯವನ್ನು ಸಂಕುಚಿತಗೊಳಿಸಿದಂತಾಗುತ್ತದೆ.
ಹತ್ತನೇ ತರಗತಿಯಲ್ಲಿ ಉತ್ತಮ ಫಲಿತಾಂಶ ಪಡೆಯುವುದು ಶಾಲೆಗಳ ಗುಣಮಟ್ಟವನ್ನು ಅಳೆಯುವ ಮಾನದಂಡವಾಗಿರುವುದರಿಂದ, ಮೈಸೂರಿನಲ್ಲೇ ಕೆಲವು ಹೈಸ್ಕೂಲುಗಳಲ್ಲಿ 9ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸದ ಮಕ್ಕಳನ್ನು ಬಲವಂತದಿಂದ ಹೊರದೂಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಮಕ್ಕಳಿಗೆ ಭಿನ್ನ ಕಾರಣಗಳನ್ನು ನೀಡಿ, ಬೇರೆ ಶಾಲೆಗಳಿಗೆ ಹೋಗುವಂತೆ ಒತ್ತಾಯಿಸಲಾಗುತ್ತಿದೆ. ಹತ್ತನೇ ತರಗತಿಯಲ್ಲಿ ಕಡಿಮೆ ಅಂಕ ಗಳಿಸಿದವರಿಗೆ, ಅದೇ ಶಾಲೆಯಲ್ಲೇ ಪಿಯುಸಿ ಪ್ರವೇಶ ನಿರಾಕರಿಸಲಾಗುತ್ತದೆ ಅಥವಾ ಹೆಚ್ಚಿನ ಡೊನೇಷನ್ ಕೊಡುವಂತೆ ಒತ್ತಾಯಿಸಲಾಗುತ್ತದೆ. ಇಂತಹ ಪ್ರಕರಣಗಳು ಸಾರ್ವಜನಿಕವಾಗಿ ವರದಿಯಾಗುತ್ತಿಲ್ಲ ಏಕೆಂದರೆ ಬಾಧಿತ ವಿದ್ಯಾರ್ಥಿಗಳು, ಪೋಷಕರು ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಾರೆ. ಈ ವಿದ್ಯಮಾನ ಚಾಲ್ತಿಯಲ್ಲಿರುವುದು ಸ್ಥಳೀಯ-ರಾಜ್ಯಮಟ್ಟದ ಜನಪ್ರತಿನಿಧಿಗಳ ಅರಿವಿಗೆ ಬಾರದಿರುವುದಿಲ್ಲ. ಆದರೆ ನೆಲ ನೋಡಿ ನಡೆಯುವುದನ್ನೇ ಮರೆತಿರುವ ರಾಜಕಾರಣಿಗಳಿಗೆ ಇದೊಂದು ಗಂಭೀರ ಸಮಸ್ಯೆ ಎಂದು ಭಾಸವಾಗುವುದೇ ಇಲ್ಲ.
ಅಂಕ-ಶ್ರೇಣಿ ಮತ್ತು ಮಾನ್ಯತೆ
ಬೃಹತ್ ಜಾಹೀರಾತು ಫಲಕಗಳು, ಪೂರ್ಣಪುಟದ ಪತ್ರಿಕಾ ಜಾಹೀರಾತುಗಳು ಮತ್ತು ವಿದ್ಯುನ್ಮಾನ ವಾಹಿನಿಗಳ ಪ್ರಚಾರಗಳು ಉತ್ತಮ ಅಂಕಗಳಿಸಿದವರನ್ನು ಉತ್ತೇಜಿಸುವುದು ಸಹಜ. ಇದರಲ್ಲಿ ತಪ್ಪೇನೂ ಇಲ್ಲ. ಮಕ್ಕಳು ಕಷ್ಟಪಟ್ಟು ವ್ಯಾಸಂಗ ಮಾಡಿರುತ್ತಾರೆ, ಹಗಲಿರುಳೂ ಶ್ರಮ ವಹಿಸಿರುತ್ತಾರೆ, ತಮ್ಮ ಕೌಟುಂಬಿಕ ಆರ್ಥಿಕತೆಯನ್ನೂ ಸಹಿಸಿಕೊಂಡು ಪೋಷಕರನ್ನು ತೃಪ್ತಿಪಡಿಸುವ ಸಾಧನೆ ಮಾಡಿರುತ್ತಾರೆ. ಇಂತಹ ಮಕ್ಕಳನ್ನು ಅಭಿನಂದಿಸುವುದು ಒಂದು ಹಂತದವರೆಗೆ ಸ್ವಾಗತಾರ್ಹ. ಆದರೆ ಈ ‘ಅಂಕ ಸಾಮ್ರಾಟರನ್ನು , ಸುಮತಿ ಅವರು ಹೇಳಿದಂತೆ ‘ಹೊಗಳಿ ಹೊನ್ನ ಶೂಲಕ್ಕೇರಿಸುವ’ ಪ್ರಕ್ರಿಯೆಯಲ್ಲಿ ಅನುತ್ತೀರ್ಣರಾದ ಮತ್ತು ಕಡಿಮೆ ಅಂಕ ಗಳಿಸಿರುವ ಶಿಕ್ಷಣಾರ್ಥಿಗಳ ಅವಗಣನೆ ನೈತಿಕವಾಗಿ ಒಪ್ಪುವಂತಹುದಲ್ಲ. ಶಾಲೆ ಅಥವಾ ಕಾಲೇಜು ಎಷ್ಟೇ ಉತ್ತಮ ಗುಣಮಟ್ಟದ್ದಾದರೂ, ಶಿಕ್ಷಣಾರ್ಥಿಗಳ ಅಂಕಗಳಿಕೆ
ವೈಯಕ್ತಿಕ ಸಾಮಾಜಿಕ-ಆರ್ಥಿಕ ನೆಲೆ ಮತ್ತು ಬುದ್ಧಿಮತ್ತೆಯನ್ನು ಅವಲಂಬಿಸಿರುತ್ತದೆ.
ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಲು ಹಲವು ಕಾರಣಗಳಿರುತ್ತವೆ. ಹೀಗೆ ಫೇಲಾದವರನ್ನು ದಡ್ಡರೆಂದಾಗಲೀ, ಕಡಿಮೆ ಪ್ರತಿಭೆ ಎಂದಾಗಲೀ ಪರಿಗಣಿಸಲಾಗುವುದಿಲ್ಲ. ಶಿಕ್ಷಣೋದ್ಯಮಗಳು ಪಿಯು ಫಲಿತಾಂಶಗಳು ಹೊರಬಂದ ಕೂಡಲೇ ಏರ್ಪಡಿಸುವ ‘ಶೈಕ್ಷಣಿಕ ಸಂತೆಗಳು’ ಈ ಅಭಾಗ್ಯರಲ್ಲಿ ಕೀಳರಿಮೆಯನ್ನು ಸೃಷ್ಟಿಸುವಂತಿರಕೂಡದು. ‘ಸಾಧಕ ಪ್ರತಿಭೆಗಳ’ ಸಂಭ್ರಮಾಚರಣೆಗಳು ಈ ಆವರಣದಿಂದ ಹೊರಗುಳಿಯುವ ಮಕ್ಕಳಲ್ಲಿ ಜಿಗುಪ್ಸೆ ಉಂಟುಮಾಡಕೂಡದು. ಈ ಜಿಗುಪ್ಸೆಯೇ ಹಲವಾರು ಮಕ್ಕಳನ್ನು ಖಿನ್ನತೆಗೆ ದೂಡಿ, ಆತ್ಮಹತ್ಯೆಗೂ ಪ್ರೇರೇಪಿಸುತ್ತದೆ. ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅನುತ್ತೀರ್ಣರಾಗುವುದು ಒಂದು
ಹೆಜ್ಜೆಯ ಹಿನ್ನಡೆಯೇ ಹೊರತು, ಬದುಕಿನ ಅಂತ್ಯವಲ್ಲ ಎನ್ನುವುದನ್ನು ಇಂತಹ ಮಕ್ಕಳಿಗೆ ಮನದಟ್ಟು ಮಾಡಬೇಕಾಗುತ್ತದೆ.
ಜಾಗತೀಕರಣದ ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸಿರುವ ‘ಅಂಕಸಾಮ್ರಾಟರ’ ಸಂಸ್ಕೃತಿ ಸಾಮಾಜಿಕವಾಗಿ ಇಂತಹ ವ್ಯತ್ಯಯಗಳನ್ನೂ ಉಂಟುಮಾಡುತ್ತಿದೆ. ಫಲಿತಾಂಶ ಬಂದ ಕೂಡಲೇ ಯಾವ ಶಿಕ್ಷಣ ಸಂಸ್ಥೆಯೂ ಸಹ ಅನುತ್ತೀರ್ಣರಾದ ಮಕ್ಕಳಿಗೆ ಸಾಂತ್ವನ ಹೇಳುವ, ಅವರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುವ, ಮರು ಉತ್ತೇಜಿಸುವ ಜಾಹೀರಾತುಗಳನ್ನು ನೀಡುವುದಿಲ್ಲ. ಸಂಘಟನೆಗಳು, ಸಂಸ್ಥೆಗಳು ನಡೆಸುವ ‘ಪ್ರತಿಭಾ ಸನ್ಮಾನ’ ಕಾರ್ಯಕ್ರಮಗಳಲ್ಲಿ ಈ ಮಕ್ಕಳಿಗೆ ಪ್ರವೇಶಿಸುವುದೂ ಕಷ್ಟವಾಗುತ್ತದೆ. ಈ ಅನುತ್ತೀರ್ಣರಾದ ಮಕ್ಕಳಲ್ಲಿ ಇರಬಹುದಾದ ಪಠ್ಯೇತರ ಪ್ರತಿಭೆ ಮತ್ತು ಕೌಶಲವನ್ನು ಗುರುತಿಸಿ, ಅಂಕ ಸಾಮ್ರಾಟರ ಜೊತೆಯಲ್ಲಿ ಅಂತಹ ಕೆಲವು ವಿದ್ಯಾರ್ಥಿಗಳನ್ನೂ ವೇದಿಕೆಯ ಮೇಲೆ ಕೂರಿಸಿದರೆ ಎಷ್ಟು ಚೆಂದ
ಅಲ್ಲವೇ ?






