ಅ.12ರ ದಿಲ್ಲಿ ಸಭೆ ವಿಫಲವಾದರೆ ಹೆದ್ದಾರಿ ಬಂದ್ : ಕಬ್ಬು ಬೆಳೆಗಾರರ ನಿರ್ಧಾರ

ಧಾರವಾಡ : ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತ ಹಾಗೂ ರಮೇಶ ಭವನದ ಬಳಿ ಕಬ್ಬು ಬೆಳೆಗಾರರು ನಡೆಸಿದ ಬೃಹತ್ ಪ್ರತಿಭಟನೆ ರೈತರ ಹೋರಾಟಕ್ಕೆ ಹೊಸ ತಿರುವು ನೀಡಿದೆ. ರೈತರ ಆಕ್ರೋಶಕ್ಕೆ ಮಣಿದ ಜನಪ್ರತಿನಿಧಿಗಳು ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದ್ದರು. ದಿಲ್ಲಿಯಲ್ಲಿ ಸಭೆ ನಡೆಸಿ ರೈತರ ಬೇಡಿಕೆಗಳ ಕುರಿತು ಚರ್ಚಿಸುವುದಾಗಿಯೂ ತಿಳಿಸಿದ್ದರು. ಆದರೆ, ಪ್ರತಿಭಟನೆಯ ಬಳಿಕ ನಡೆದ ಬೆಳವಣಿಗೆಗಳು ರೈತರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದ್ದು, ಈಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗುವಂತೆ ಮಾಡಿವೆ.
ಅ.12ರಂದು ದಿಲ್ಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ರೈತರ ಬೇಡಿಕೆಗಳಿಗೆ ಸ್ಪಷ್ಟ ಪರಿಹಾರ ಸಿಗದಿದ್ದರೆ ಅ.13ರಂದು ಮಹಾರಾಷ್ಟ್ರದಿಂದ ಬೆಂಗಳೂರಿನವರೆಗೆ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಶುಕ್ರವಾರ ವಿವಿಧೆಡೆ ನಡೆದ ರೈತ ಸಂಘಟನೆಗಳ ಸಭೆಗಳಲ್ಲಿ ಈ ಕುರಿತು ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗಿದೆ.
ದಿಲ್ಲಿ ಸಭೆಯತ್ತ ರೈತರ ಚಿತ್ತ: ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಚರ್ಚಿಸಲು ಶಶಿಕಾಂತ ಗುರೂಜಿ ನೇತೃತ್ವದ 34 ಜನರ ತಂಡ ದಿಲ್ಲಿಯಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದೆ. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಚೂನಪ್ಪ ಪೂಜೇರಿ ರಾಜ್ಯದಲ್ಲೇ ಉಳಿದು ಹೋರಾಟದ ಮುಂದಿನ ಹಂತದ ನೇತೃತ್ವ ವಹಿಸಲಿದ್ದಾರೆ ಎನ್ನಲಾಗಿದೆ.
ದಿಲ್ಲಿ ಸಭೆಯಲ್ಲಿ ರೈತರ ಬೇಡಿಕೆ ಈಡೇರದಿದ್ದರೆ ಆಯಾ ಜಿಲ್ಲೆಗಳ ಕಬ್ಬು ಬೆಳೆಗಾರರು ತಮ್ಮ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದಿಂದ ಬೆಂಗಳೂರಿನವರೆಗೆ ಹೆದ್ದಾರಿ ಸಂಚಾರ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿರುವ ರೈತ ಸಂಘಟನೆಗಳು, ಈ ಬಾರಿ ಬೇಡಿಕೆಗಳ ಕುರಿತು ಸ್ಪಷ್ಟ ನಿರ್ಧಾರ ಹೊರಬೀಳಬೇಕೆಂದು ಪಟ್ಟು ಹಿಡಿದಿವೆ.
ವೈಯಕ್ತಿಕ ನಿಂದನೆಯಿಂದ ಹೆಚ್ಚಿದ ಅಸಮಾಧಾನ: ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆಯ ಬಳಿಕ ರೈತ ಹೋರಾಟದ ನೇತೃತ್ವ ವಹಿಸಿದ್ದ ಶಶಿಕಾಂತ ಗುರೂಜಿ ಹಾಗೂ ಚೂನಪ್ಪ ಪೂಜೇರಿ ಅವರ ವೈಯಕ್ತಿಕ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಹೇಳಿಕೆಗಳು ಹರಿದಾಡಿದ್ದು, ರೈತರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.
ಇದರ ಜತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕುಟುಂಬದವರ ಹೆಸರನ್ನು ಪ್ರತಿಭಟನೆಯ ಸಂದರ್ಭದಲ್ಲಿ ಎಳೆದು ತಂದು ಅವಹೇಳನ ಮಾಡಲಾಗಿದೆ ಎಂಬ ಆರೋಪವೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಶಿಕಾಂತ ಗುರೂಜಿ ಹಾಗೂ ಚೂನಪ್ಪ ಪೂಜೇರಿ ಕ್ಷಮೆ ಕೋರಿದ್ದರು. ಆದರೂ ವೈಯಕ್ತಿಕ ಟೀಕೆಗಳು ಮುಂದುವರಿದಿವೆ ಎಂಬುದು ರೈತರ ಆರೋಪವಾಗಿದೆ.
ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಹೋರಾಟದ ನಾಯಕರ ವೈಯಕ್ತಿಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಿರು ವುದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ, ಕಬ್ಬಿನ ಬೆಲೆ ವಿಚಾರದ ಜತೆಗೆ ಹೋರಾಟದ ನಾಯಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ನಿಂದನೆಯೂ ರೈತರ ಅಸಮಾಧಾನವನ್ನು ಹೆಚ್ಚಿಸಿದೆ.
ಎಸ್‌ಎಪಿ ವಿಚಾರ ಮುನ್ನೆಲೆಗೆ: ಪ್ರತಿಭಟನೆಯ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಕ್ಷಣ ಅಧಿಕೃತ ಸಭೆ ನಡೆಸಲು ಸಾಧ್ಯವಿಲ್ಲ. ರೈತರನ್ನು ದಿಲ್ಲಿಗೆ ಕರೆಸಿ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ವಿಚಾರವನ್ನು ತಪ್ಪಾಗಿ ಅರ್ಥೈಸಿ ಗೊಂದಲ ಸೃಷ್ಟಿಸಲಾಗುತ್ತಿದೆ ಹಾಗೂ ಕಬ್ಬು ಬೆಳೆಗಾರರಿಗೆ ಎಸ್‌ಎಪಿ (State Advised Price) ನಿಗದಿಪಡಿಸುವುದು ರಾಜ್ಯ ಸರಕಾರದ ಜವಾಬ್ದಾರಿ ಎಂದು ಹೇಳುವ ಮೂಲಕ ಕೇಂದ್ರ ಸಚಿವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬುದು ರೈತರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿ ಸಭೆಯಲ್ಲಿ ರೈತರ ಬೇಡಿಕೆಗಳ ಕುರಿತು ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಯರಿಕೊಪ್ಪದಲ್ಲಿ ಹೆದ್ದಾರಿ ತಡೆಗೆ ಸ್ಥಳ ಗುರುತು: ದಿಲ್ಲಿ ಸಭೆಯಲ್ಲಿ ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಅ.13ರಂದು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುವುದಾಗಿ ರೈತ ಸಂಘಟನೆಗಳು ಎಚ್ಚರಿಸಿವೆ. ದಿಲ್ಲಿ ಸಭೆಯಲ್ಲಿ ರೈತರಿಗೆ ಮುಜುಗರ ಉಂಟು ಮಾಡುವ ರೀತಿಯ ಬೆಳವಣಿಗೆಗಳು ನಡೆದರೂ ಹೋರಾಟ ಮುಂದುವರಿಸುವುದಾಗಿ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ಈ ನಡುವೆ, ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಯ ಕಬ್ಬು ಬೆಳೆಗಾರರು ಅ.13ರಂದು ಹೆದ್ದಾರಿ ತಡೆ ನಡೆಸಲು ಧಾರವಾಡ ಸಮೀಪದ ಯರಿಕೊಪ್ಪ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಳ ಗುರುತಿಸಿದ್ದಾರೆ. ಒಂದೆಡೆ ದಿಲ್ಲಿ ಸಭೆಗೆ ತೆರಳುವ ರೈತ ಮುಖಂಡರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲು ಸಿದ್ಧತೆ ನಡೆಸಿದ್ದರೆ, ಮತ್ತೊಂದೆಡೆ ರಾಜ್ಯದಲ್ಲಿರುವ ರೈತ ಸಂಘಟನೆಗಳು ಮುಂದಿನ ಹೋರಾಟಕ್ಕೆ ಸಜ್ಜಾಗಿವೆ. ಹೀಗಾಗಿ, ಅ.12ರಂದು ನಡೆಯಲಿರುವ ಸಭೆ ಕಬ್ಬು ಬೆಳೆಗಾರರ ಹೋರಾಟದ ಮುಂದಿನ ದಿಕ್ಕನ್ನು ನಿರ್ಧರಿಸುವ ಮಹತ್ವದ ಘಟ್ಟವಾಗಲಿದೆ.
ಮಹಾರಾಷ್ಟ್ರದಿಂದ ಬೆಂಗಳೂರಿನವರೆಗೆ ಹೆದ್ದಾರಿ ತಡೆ
ಶಶಿಕಾಂತ ಗುರೂಜಿ ಅವರ ತಂಡ ದಿಲ್ಲಿಯಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲಿದೆ. ಚೂನಪ್ಪ ಪೂಜೇರಿ ನೇತೃತ್ವದ ತಂಡ ರಾಜ್ಯದಲ್ಲೇ ಉಳಿಯಲಿದೆ. ದಿಲ್ಲಿ ಸಭೆಯಲ್ಲಿ ರೈತರ ಬೇಡಿಕೆಗಳು ಈಡೇರದಿದ್ದರೆ ಮಹಾರಾಷ್ಟ್ರದಿಂದ ಬೆಂಗಳೂರಿನವರೆಗೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ರೈತ ಸಂಘಟನೆ ಅಧ್ಯಕ್ಷ ಕುಮಾರ ಬೊಬಾಟೆ ತಿಳಿಸಿದ್ದಾರೆ.






