ಸರಕಾರದ ನಿಷ್ಕರುಣೆಯಿಂದಾಗಿ ದಿಕ್ಕೆಟ್ಟ ತಬ್ಬಲಿ ಅಲೆಮಾರಿಗಳು

ಸರ್ವೋಚ್ಚ ನ್ಯಾಯಾಲಯ ದೇವಿಂದರ್ ಸಿಂಗ್ ಪ್ರಕರಣದಲ್ಲಿ ನೀಡಿರುವ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಚಾಚೂ ತಪ್ಪದೆ ನ್ಯಾ. ನಾಗಮೋಹನ್ ದಾಸ್ ಆಯೋಗ ಪಾಲಿಸಿದೆ. ಅದಕ್ಕನುಗುಣವಾಗಿಯೇ ತನ್ನ ವರದಿಯಲ್ಲಿ ಪರಿಶಿಷ್ಟ ಜಾತಿಗಳ ಎಲ್ಲಾ ಜಾತಿಗಳಿಗೂ ನ್ಯಾಯ ದೊರಕಿಸಿಕೊಡಲು ಶತಪ್ರಯತ್ನ ಮಾಡಿರುವುದು ಕಂಡುಬಂದಿದೆ. ಆದರೆ ಸರಕಾರ ಕೆಲವು ಜಾತಿಗಳ ಗುಂಪುಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ವರದಿಯಲ್ಲಿರುವ ಪ್ರವರ್ಗಗಳನ್ನು ಸಣ್ಣತನದ ರಾಜಕೀಯ ಕಾರಣಕ್ಕೆ ಆದ್ಯತೆ ನೀಡಿ ಪ್ರವರ್ಗಗಳ ಸಂಖ್ಯೆಯನ್ನು ಕಡಿಮೆ ಮಾಡಿ ಬಿಟ್ಟಿದೆ. ಹೀಗಾಗಿ ಕೆಲವು ಸೂಕ್ಷ್ಮಾತಿ ಸೂಕ್ಷ್ಮ ಜಾತಿಗಳ ಅಸ್ಮಿತೆಯನ್ನೇ ಅಳಿಸಿ ಹಾಕಿದ ಅನ್ಯಾಯ ಕಣ್ಣಿಗೆ ರಾಚುತ್ತಿದೆ.
ಪರಿಶಿಷ್ಟ ಜಾತಿಗಳೊಳಗೆ ಒಳಮೀಸಲಾತಿ ಕಲ್ಪಿಸಿದ್ದೇವೆಂಬುದು ಸರಕಾರಕ್ಕೆ ಗರ್ವ ತರುವ ವಿಷಯ. 30-40 ವರ್ಷಗಳಿಂದ ಇತ್ಯರ್ಥವಾಗದ ಕಗ್ಗಂಟೊಂದನ್ನು ನವಿರಾಗಿ ಬಿಡಿಸಿದ್ದೇನೆಂಬುದೂ ಕೂಡ ಸರಕಾರಕ್ಕೆ ಹೇಳಿಕೊಳ್ಳಬಹುದಾದ ಗತ್ತಿನ ಒಂದು ದೃಷ್ಟಾಂತವೂ ಹೌದು.ಆದರೆ ಮೌಲ್ಯ! ಅದು ಉಳಿದಿಲ್ಲ; ಅದು ಸತ್ತು ಸಮಾಧಿಯಾಗಿದೆ!
ಮೂರು-ನಾಲ್ಕು ದಶಕಗಳ ಕಾಲ ರಾಜ್ಯ ಸರಕಾರಗಳು ಮತ್ತು ನ್ಯಾಯಾಲಯುಗಳ ನಡುವೆ ಇದ್ದ ಈ ಪ್ರಸಂಗ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯ ನಿರ್ಣಯಕ್ಕಾಗಿ ಬಾಕಿ ಇತ್ತು. ಉದ್ಭವಿಸಿದ್ದ ಎಲ್ಲ ಸಮಸ್ಯೆಗಳೂ ತಾರ್ಕಿಕ ಅಂತ್ಯ ಕಂಡು, ಕಡೆಗೂ ದೇಶದ ಸರ್ವೋಚ್ಚ ನ್ಯಾಯಾಲಯದ 7 ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠದಲ್ಲಿ ಒಳ ಮೀಸಲಾತಿ ಅಥವಾ ಉಪವರ್ಗೀಕರಣದ ಸಮಸ್ಯೆ ಬಗೆಹರಿದು ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ಉದ್ದೇಶಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡುವ ಅಗತ್ಯವೂ ಇಲ್ಲ; ಅಥವಾ ಯಾವುದೇ ಕಾನೂನು ಸಮಸ್ಯೆಗಳೂ ಇಲ್ಲ. ಒಳಮೀಸಲಾತಿ ಕಲ್ಪಿಸಲು ರಾಜ್ಯಗಳು ಅಧಿಕಾರ ಹೊಂದಿವೆ ಎಂಬ ಇತಿಹಾಸದಲ್ಲಿ ದಾಖಲಾಗುವ ತೀರ್ಪು ಹೊರಬಿದ್ದಿತು.
ತೀರ್ಪು ಹೊರಬರುವುದನ್ನೇ ಕಾತರದಿಂದ ಕಾಯುತ್ತಿದ್ದ ತೆಲಂಗಾಣ ರಾಜ್ಯವು ಒಳಮೀಸಲಾತಿಯನ್ನು ಕ್ಷಿಪ್ರಗತಿಯಲ್ಲಿ ಜಾರಿಗೊಳಿಸಿ ದೇಶದಲ್ಲಿಯೇ ಮೊದಲನೆಯದಾಯಿತು ಮತ್ತು ಪ್ರಶಂಸೆಗೂ ಪಾತ್ರವಾಯಿತು. ತೆಲಂಗಾಣ ಸರಕಾರ ಪರಿಶಿಷ್ಟ ಜಾತಿಗಳನ್ನು 3 ವಿಭಾಗಗಳಾಗಿ ವಿಂಗಡಿಸಿ ಪರಿಶಿಷ್ಟ ಜಾತಿಗಳಲ್ಲಿ ಶೇ. 15ರಷ್ಟಿರುವ ಪ್ರತಿಕೂಲ ಸ್ಥಿತಿಯ ಮತ್ತು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಉಪೇಕ್ಷಿಸಲ್ಪಟ್ಟಿರುವ 15 ಜಾತಿಗಳನ್ನು 1ನೇ ಪ್ರವರ್ಗವೆಂದು ಪರಿಗಣಿಸಿ ಅದಕ್ಕೆ ಶೇ. 1ರಷ್ಟು ಮೀಸಲಾತಿ ಕೋಟಾ ನೀಡಿತು ಮತ್ತು ಜನಸಂಖ್ಯೆಯಲ್ಲಿ ಶೇ. 62.74ರಷ್ಟಿರುವ ಮಾದಿಗ ಮತ್ತು ಇತರ 17 ಜಾತಿಗಳಿಗೆ ಶೇ. 9ರಷ್ಟು ಮೀಸಲಾತಿ ಕೋಟಾ ನೀಡಿ, ಅದನ್ನು ಪ್ರವರ್ಗ- 2 ಎನ್ನಲಾಯಿತು. ಹಾಗೆಯೇ ಗಮನಾರ್ಹ ಪ್ರಯೋಜನ ಪಡೆದಿರುವ ಜನಸಂಖ್ಯೆಯಲ್ಲಿ ಶೇ. 33.96ರಷ್ಟಿರುವ ಆರ್ಯಮಾಲಾ ಮತ್ತು 25 ಜಾತಿಗಳಿಗೆ ಶೇ. 5ರಷ್ಟು ಮೀಸಲಾತಿ ಕೋಟಾ ನೀಡಿ ಯಾವುದೇ ವಿವಾದ ಇಲ್ಲದಂತೆ ನೋಡಿಕೊಂಡಿದ್ದು ತೆಲಂಗಾಣದ ಹೆಗ್ಗಳಿಕೆ. ಪ್ರವರ್ಗ-1ರಲ್ಲಿರುವ ಅತ್ಯಂತ ಹಿಂದುಳಿದ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿರುವ 15 ಜಾತಿಗಳೆಂದರೆ - ಬೌರಿ, ಬುಡಗ ಜಂಗಮ, ಚಚಾಟಿ, ದಕ್ಕಲ್, ಜಗ್ಗಲಿ, ಪಂಬದ, ಮಾಂಗ್, ಮಾಂಗ್ ಗಾರುಡಿ, ಮನ್ನೇ, ಮಸ್ತಿ, ಮತಂಗಿ, ಮೆಹತಾರ್, ಮುಂಡಾಳ, ಸಂಬನ್ ಮತ್ತು ಸಪ್ರು.
ಮಾರ್ಚ್ 17, 2025ರಂದು ತೆಲಂಗಾಣ ವಿಧಾನಸಭೆಯಲ್ಲಿ ತೆಲಂಗಾಣ ಪರಿಶಿಷ್ಟ ಜಾತಿ (ಮೀಸಲಾತಿ ಸುಧಾರಣೆ) ಮಸೂದೆ, 2025 ಅನ್ನು ಅಂಗೀಕರಿಸಲಾಯಿತು. ವ್ಯಕ್ತಿಗಳ ನಡುವೆ ಮಾತ್ರವಲ್ಲದೆ ಗುಂಪುಗಳ ನಡುವಿನ ಸ್ಥಾನಮಾನ, ಸೌಲಭ್ಯಗಳು ಮತ್ತು ಅತ್ಯಂತ ಹಿಂದುಳಿದ ವರ್ಗವೆಂದು ರೂಪಿಸಲಾಗುವ ಪರಿಶಿಷ್ಟ ಜಾತಿಗಳು ಏಕೀಕೃತ ಮತ್ತು ಏಕರೂಪದ ಪ್ರಗತಿಯನ್ನು ಸಾಧಿಸುವುದನ್ನು ಖಚಿತಪಡಿಸಿಕೊಳ್ಳಲು ಮಸೂದೆಯು ಹೇಳುತ್ತದೆ. ಮುಂದೆ ಅದು ಕಾಯ್ದೆಯಾಗಿ ರೂಪುಗೊಂಡು ಪ್ರಸ್ತುತ ಜಾರಿಯಲ್ಲಿದೆ.
ಕರ್ನಾಟಕದ ನೆರೆಯ ತೆಲಂಗಾಣ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದ್ದು, ಮೇಲ್ಜಾತಿಗೆ ಸೇರಿದವರೊಬ್ಬರು ಮುಖ್ಯಮಂತ್ರಿ ಆಗಿರುವುದು ಖಂಡಿತ ಗಮನಿಸಬೇಕಾದ ಅಂಶ. ತೀವ್ರಗತಿಯಲ್ಲಿ ತೆಲಂಗಾಣ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಿರುವುದು ಕರ್ನಾಟಕ ಸರಕಾರಕ್ಕೆ ಒಂದು ದೊಡ್ಡ ಪಾಠವನ್ನೇ ಕಲಿಸಿದೆ. ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಗೆ ತರಲು ಪರಿಸ್ಥಿತಿ ಅಷ್ಟೇನೂ ಪೂರಕವಾಗಿರಲಿಲ್ಲ ಎಂಬುದೇನೋ ನಿಜ. ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸೆಣಸುತ್ತಿದ್ದ ಎರಡು ಬಲಿಷ್ಠ ಸಮುದಾಯಗಳ ನಡುವಿನ ಸಂದಿಗ್ಧ ಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದ ಮುಖ್ಯಮಂತ್ರಿಗಳು ದಿವ್ಯ ಮೌನಕ್ಕೆ ಶರಣಾಗಿದ್ದರು. ಒಳಮೀಸಲಾತಿ ಜಾರಿಗಾಗಿ ಕಾಲದಿಂದಲೂ ಹೋರಾಟ ನಡೆಸುತ್ತಿರುವವರ ಒತ್ತಡಕ್ಕೆ ಕೊನೆಗೂ ಮಣಿಯಲೇ ಬೇಕಾಯಿತು. ತತ್ಪರಿಣಾಮವಾಗಿ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರ ಏಕಸದಸ್ಯ ಆಯೋಗವನ್ನು ಸರಕಾರ ರಚಿಸಿತು.
ಆಯೋಗವು ತನ್ನ ಮಧ್ಯಂತರ ವರದಿ ಸಲ್ಲಿಸಿತು. ಪ್ರಾಯೋಗಿಕ ದತ್ತಾಂಶಗಳಿಗಾಗಿ ಪರಿಶಿಷ್ಟ ಸಮುದಾಯಗಳ ಸಮೀಕ್ಷೆ ನಡೆಸಬೇಕಾಗಿದೆ ಎಂದು ವರದಿ ಹೇಳಿತ್ತು. ಅದಕ್ಕನುಗುಣವಾಗಿ ಸರಕಾರ ಸಕಲ ಸೌಲಭ್ಯಗಳನ್ನು ಒದಗಿಸಿತು. ಮೇ 5, 2025ರಿಂದ ಆರಂಭಗೊಂಡ ಸಮೀಕ್ಷೆಯ ಕಾರ್ಯ ಅನೇಕ ಬಾರಿ ವಿಸ್ತರಣೆಗೊಳಪಟ್ಟು ಜುಲೈ 6ರಂದು ಕೊನೆಗೊಂಡಿತು. ಸಮೀಕ್ಷೆ ಕಾರ್ಯ ಅಷ್ಟೇನೂ ಆಶಾದಾಯಕವಾಗಿರಲಿಲ್ಲ ಎಂದು ತಜ್ಞರು ಹೇಳುವ ಮಾತು. ಆದರೆ ಶೇ. 92ರಷ್ಟು ಸಮೀಕ್ಷೆ ಪೂರ್ಣಗೊಂಡಿತ್ತು ಎಂಬುದು ಆಯೋಗ ಅಂತಿಮ ವರದಿ ಸಲ್ಲಿಸಿದಾಗಲೇ ತಿಳಿದುಬಂದದ್ದು. ಆಯೋಗ ಒಳ ಮೀಸಲಾತಿಗೆ ಬೇಕಾಗಿರುವ ದತ್ತಾಂಶಗಳು, ಅದೂ ಅಲ್ಲದೆ ದ್ವಿತೀಯ ಮೂಲದ ಮಾಹಿತಿಯನ್ನೂ ಸಂಗ್ರಹಿಸಿ ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶಿ ಸೂಚನೆಗಳನ್ನು ಅನುಸರಿಸಿ ಆಯೋಗ ಅಳವಡಿಸಿಕೊಂಡಿದ್ದ ಮಾನದಂಡಗಳೊಡನೆ ಅವುಗಳೆಲ್ಲವನ್ನೂ ತೌಲನಿಕ ಅಧ್ಯಯನಕ್ಕೊಳಪಡಿಸಿ ಒಳವರ್ಗೀಕರಣ ಕಾರ್ಯ ಪೂರೈಸಿತು. ಕ್ಲಪ್ತ ಕಾಲದಲ್ಲಿಯೇ ಆಯೋಗ ತನಗೆ ವಹಿಸಿದ ಹೊಣೆಗಾರಿಕೆಗೆ ಅಂತ್ಯ ಹಾಡಿ ಆಗಸ್ಟ್ 4ರಂದು ಸರಕಾರಕ್ಕೆ ಸಮಗ್ರ ವರದಿ ಸಲ್ಲಿಸಿತು.
ನ್ಯಾ.ನಾಗಮೋಹನ ದಾಸ್ ಆಯೋಗ ಸಲ್ಲಿಸಿರುವ ವರದಿಯ ವಿವರಗಳನ್ನು ನಾಡಿನ ಕೆಲವು ಪತ್ರಿಕೆಗಳು ದೊಡ್ಡ ಸುದ್ದಿ ಮಾಡಿದವು. ಆದ್ದರಿಂದ ದತ್ತಾಂಶ ಸೋರಿಕೆ ಎಂದು ಭಾವಿಸುವಂತಿಲ್ಲ. ಯಾಕೆಂದರೆ ದತ್ತಾಂಶಗಳ ಪಿಡಿಎಫ್ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಗೆ ವೈರಲ್ ಆದ ದತ್ತಾಂಶಗಳು ಅಧಿಕೃತವಾದುದಲ್ಲ ಎಂದು ಯಾರೂ ಅಲ್ಲಗಳೆದಿಲ್ಲ. ವೈರಲ್ ಆದ ದತ್ತಾಂಶವನ್ನೇ ಆಧರಿಸಿ ಅಭಿಪ್ರಾಯಗಳು ರೂಪುಗೊಳ್ಳುತ್ತಿವೆ.
ಆಯೋಗವು ಹಿಂದುಳಿದಿರುವಿಕೆಗೆ 6 ಮಾನದಂಡಗಳನ್ನು ಅಳವಡಿಸಿಕೊಂಡಿರುವುದು ವರದಿಯಲ್ಲಿದೆ. ಅವೆಂದರೆ- 1. ಶೈಕ್ಷಣಿಕ ಹಿಂದುಳಿದಿರುವಿಕೆ, 2. ಸರಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯ, 3.ರಾಜಕೀಯ ಪ್ರಾತಿನಿಧ್ಯ, 4. ಆರ್ಥಿಕ ಪರಿಸ್ಥಿತಿ, 5. ಸಾಮಾಜಿಕ ಹಿಂದುಳಿದಿರುವಿಕೆ, 6. ದೌರ್ಜನ್ಯ ಅಂದು-ಇಂದು.
ಆಯೋಗವು ಸಮಗ್ರ ಸಮೀಕ್ಷೆಯಲ್ಲಿ ಕಂಡುಬಂದ 101 ಪರಿಶಿಷ್ಟ ಜಾತಿಗಳಲ್ಲಿ ಹಂಚಿ ಹೋಗಿರುವ 1,07,01,982ರಷ್ಟು ಜನರನ್ನು ಮೇಲೆ ನಮೂದಿಸಿರುವ 6 ಮಾನದಂಡಗಳನ್ನು ಅನುಸರಿಸಿ, ಒಳಮೀಸಲಾತಿಗಾಗಿ 5 ಪ್ರವರ್ಗಗಳನ್ನಾಗಿ ಬೇರ್ಪಡಿಸಿ ಜೊತೆಗೆ ವಿವರಣೆಯನ್ನೂ ನೀಡಿದೆ. ಈ ಸಂದರ್ಭದಲ್ಲಿ, ಮಂಡಲ್ ಆಯೋಗದ ವರದಿಯಲ್ಲಿ ಉಲ್ಲೇಖಿಸಿರುವ ಅಸಮಾನರನ್ನು ಸಮಾನರ ಜೊತೆ ಸರಿಸಮ ಎಂದು ಸೇರಿಸಿದರೆ ಅಲ್ಲಿ ಅಸಮಾನತೆಯೇ ಮುಂದುವರಿಯುತ್ತದೆ ಎಂಬ ನುಡಿಗಟ್ಟುಗಳನ್ನು ಮತ್ತು ಸರ್ವೋಚ್ಚ ನ್ಯಾಯಾಲಯ ದೇವಿಂದರ್ ಸಿಂಗ್ ಪ್ರಕರಣದಲ್ಲಿ ಹೇಳಿರುವಂತೆ ಶೈಕ್ಷಣಿಕ, ಔದ್ಯೋಗಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯನ್ನೂ ಆಯೋಗ ಗಮನದಲ್ಲಿಟ್ಟುಕೊಂಡಿದೆ.
1. ಅತ್ಯಂತ ಹಿಂದುಳಿದ ಸಮುದಾಯಗಳು- ಸೂಕ್ಷ್ಮ, ಅತಿ ಸೂಕ್ಷ್ಮ ಮತ್ತು ಅದೇ ರೀತಿಯ ಸಾಮಾಜಿಕ ಆರ್ಥಿಕ ರಾಜಕೀಯ ಸ್ಥಿತಿಯನ್ನು ಹೊಂದಿರುವ 59 ಸಮುದಾಯಗಳು.
2. ಹೆಚ್ಚು ಹಿಂದುಳಿದ ಸಮುದಾಯಗಳು- ಮಾದಿಗ ಮತ್ತು ಅದೇ ರೀತಿಯ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿಯನ್ನು ಹೊಂದಿರುವ 18 ಸಮುದಾಯಗಳು.
3. ಹಿಂದುಳಿದ ಸಮುದಾಯಗಳು- ಹೊಲೆಯ ಮತ್ತು ಅದೇ ರೀತಿಯ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಿತಿಯನ್ನು ಹೊಂದಿರುವ 17 ಸಮುದಾಯಗಳು.
4. ಕಡಿಮೆ ಹಿಂದುಳಿದ ಸಮುದಾಯಗಳು- ಲಂಬಾಣಿ, ಭೋವಿ ಮತ್ತು ಕೊರಮ, ಕೊರಚ 4 ಸಮುದಾಯಗಳು.
5. ಮೂಲ ಜಾತಿಯ ಹೆಸರನ್ನು ತಿಳಿಯ ಪಡಿಸದಿರುವ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಎಂಬ 3 ಪ್ರದೇಶ ಸೂಚಿ ಅಥವಾ ಜನರಿಕ್ ಜಾತಿಗಳು.
ಆಯೋಗ ಸಾಕಷ್ಟು ಎಚ್ಚರಿಕೆಯಿಂದ ವರದಿ ಸಿದ್ಧಪಡಿಸಿದೆ ಎಂದು ಹೇಳಲೇನೂ ಅಡ್ಡಿ ಇಲ್ಲ. ಯಾವುದೇ ಆಯೋಗವಾಗಲಿ ಶೇ. ನೂರಕ್ಕೆ ನೂರರಷ್ಟು, ಖಚಿತವಾದ ವರದಿ ಕೊಡಲು ಸಾಧ್ಯವಿಲ್ಲ ಎಂಬುದು ಅನೇಕ ವರದಿಗಳ ಅಧ್ಯಯನದಿಂದ ಸಾಬೀತಾಗಿದೆ. ಎಲ್ಲಾ ಮಾರ್ಗದರ್ಶಕ ಸೂಚಿಗಳನ್ನು ಅನುಸರಿಸಿ ವರದಿ ಸಿದ್ಧಪಡಿಸಲಾಗಿದೆಯೇ ಎಂಬುದು ಪ್ರಾಮುಖ್ಯತೆ ಪಡೆದುಕೊಳ್ಳುತ್ತದಷ್ಟೇ. ಸುಮಾರು 10 ತಿಂಗಳಷ್ಟು ಅವಧಿಯನ್ನು ತೆಗೆದುಕೊಂಡ ಆಯೋಗ, ಆಗಸ್ಟ್ 4, 2025 ರಂದು ಸರಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಸರಕಾರ ವರದಿಯನ್ನು ಆಗಸ್ಟ್ 19ರಂದು ಸಚಿವ ಸಂಪುಟದ ಮುಂದೆ ಇಟ್ಟು, ಕೂಲಂಕಷ(?) ಅಧ್ಯಯನ ನಡೆಸಿ, ವರದಿಯಲ್ಲಿ ಹೇಳಿರುವ 5 ಪ್ರವರ್ಗಗಳ ಬದಲಾಗಿ, ಪ್ರವರ್ಗ- 1ರಲ್ಲಿ ಬರುವ ಅತ್ಯಂತ ಹಿಂದುಳಿದ ವರ್ಗಗಳ ಜಾತಿಗಳನ್ನು ಪ್ರವರ್ಗ- 4ರಲ್ಲಿ ಬರುವ ಲಂಬಾಣಿ, ಭೋವಿ, ಕೊರಮ ಮತ್ತು ಕೊರಚ ಗುಂಪಿಗೆ ಸೇರಿಸಿದ್ದಲ್ಲದೆ, ಪ್ರವರ್ಗ- 5ರಲ್ಲಿದ್ದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದಿದ್ದವುಗಳನ್ನು ಪ್ರವರ್ಗ 2 ಮತ್ತು 3ರಲ್ಲಿದ್ದ ಮಾದಿಗ ಮತ್ತು ಹೊಲೆಯ ಜಾತಿಗಳ ಗುಂಪಿಗೆ ಸಮನಾಗಿ ಸೇರಿಸಲಾಗಿದೆ. ಇಂತಹ ಘನ ಪ್ರಕ್ರಿಯೆ ಕೈಗೊಂಡು, ಆಯೋಗ ಕೊಟ್ಟ 5 ಪ್ರವರ್ಗಗಳನ್ನು 3 ಪ್ರವರ್ಗಗಳಿಗೆ ಕುಗ್ಗಿಸಿ, ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ. ಸಂಪುಟದ ತೀರ್ಮಾನ ತೆಗೆದುಕೊಳ್ಳುವಲ್ಲಿ ಒಂದು ದೊಡ್ಡ ಪ್ರಹಸನವೇ ನಡೆದು ಹೋಗಿದೆ ಎಂಬುದು ಬಲ್ಲವರು ಹೇಳುವ ಮಾತು. ಈ ಮೂರೂ ಪ್ರವರ್ಗಗಳಿಗೆ ಅಂದರೆ ಮಾದಿಗ, ಹೊಲೆಯ ಮತ್ತು ಭೋವಿಗಳಿಗೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವಿದೆ. ಆದರೆ ಆಯೋಗ ಗುರುತಿಸಿದ್ದ ಅತ್ಯಂತ ಹಿಂದುಳಿದ ಮೊದಲನೇ ಗುಂಪಿನ ಸೂಕ್ಷ್ಮ, ಅತಿ ಸೂಕ್ಷ್ಮ 59 ಜಾತಿಗಳಿಗೆ ಅನ್ವಯಿಸುವ ಹಾಗೆ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ಒತ್ತಟ್ಟಿಗಿರಲಿ, ವಿಧಾನ ಸಭೆ ಮತ್ತು ವಿಧಾನಪರಿಷತ್‌ನಲ್ಲಿಯೂ ಒಬ್ಬನೇ ಒಬ್ಬ ಸದಸ್ಯ ಕೂಡಾ ಇಲ್ಲ. ಅಷ್ಟೇ ಏಕೆ ಸ್ಥಳೀಯ ಸಂಸ್ಥೆಗಳಲ್ಲೂ ಕೂಡ ಆ ಜಾತಿಗಳ ಪ್ರಾತಿನಿಧ್ಯವಿಲ್ಲ. ಇದು ಅತ್ಯಂತ ದಾರುಣ ವಿಷಯವಲ್ಲವೇ?. ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಂದರ್ಭದಲ್ಲಿ, ‘ಅನಾಥೋ ದೈವ ರಕ್ಷಕ’ ಎಂಬಂತೆ ಮುಖ್ಯಮಂತ್ರಿಗಳೇ ಅವುಗಳ ಪಾಲಿಗೆ ರಕ್ಷಕನಾಗಿರಬೇಕಾಗಿತ್ತು. ಆದರೆ....?
ಸಚಿವ ಸಂಪುಟದ ಈ ತಾರುಮಾರು ನಿರ್ಣಯ ಅನುಸರಿಸಿ ಆಗಸ್ಟ್ 25ರಂದು ಸರಕಾರ ಆದೇಶ ಹೊರಡಿಸಿದೆ.(ಕಾರ್ಯಕಾರಿ ಆದೇಶವೇ ಸಾಕು. ಕಾಯ್ದೆ ತರುವ ಅವಶ್ಯಕತೆ ಇಲ್ಲ: ಸರ್ವೋಚ್ಚ ನ್ಯಾಯಾಲಯ) ಕ್ಲಪ್ತಕಾಲದಲ್ಲಿ ಸಂಬಂಧಿತ ವಿಧಿ-ವಿಧಾನಗಳೆಲ್ಲವೂ ಮುಗಿದು ಸರಕಾರ ನಿಟ್ಟುಸಿರು ಬಿಟ್ಟಿರಲಿಕ್ಕೂ ಸಾಕು!
ಸರ್ವೋಚ್ಚ ನ್ಯಾಯಾಲಯ ದೇವಿಂದರ್ ಸಿಂಗ್ ಪ್ರಕರಣದಲ್ಲಿ ನೀಡಿರುವ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಚಾಚೂ ತಪ್ಪದೆ ಆಯೋಗ ಪಾಲಿಸಿದೆ. ಅದಕ್ಕನುಗುಣವಾಗಿಯೇ ತನ್ನ ವರದಿಯಲ್ಲಿ ಪರಿಶಿಷ್ಟ ಜಾತಿಗಳ ಎಲ್ಲಾ ಜಾತಿಗಳಿಗೂ ನ್ಯಾಯ ದೊರಕಿಸಿಕೊಡಲು ಶತಪ್ರಯತ್ನ ಮಾಡಿರುವುದು ಕಂಡುಬಂದಿದೆ. ಆದರೆ ಸರಕಾರ ಕೆಲವು ಜಾತಿಗಳ ಗುಂಪುಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ವರದಿಯಲ್ಲಿರುವ ಪ್ರವರ್ಗಗಳನ್ನು ಸಣ್ಣತನದ ರಾಜಕೀಯ ಕಾರಣಕ್ಕೆ ಆದ್ಯತೆ ನೀಡಿ ಪ್ರವರ್ಗಗಳ ಸಂಖ್ಯೆಯನ್ನು ಕಡಿಮೆ ಮಾಡಿ ಬಿಟ್ಟಿದೆ. ಹೀಗಾಗಿ ಕೆಲವು ಸೂಕ್ಷ್ಮಾತಿ ಸೂಕ್ಷ್ಮ ಜಾತಿಗಳ ಅಸ್ಮಿತೆಯನ್ನೇ ಅಳಿಸಿ ಹಾಕಿದ ಅನ್ಯಾಯ ಕಣ್ಣಿಗೆ ರಾಚುತ್ತಿದೆ.
ಮತ್ತೊಂದು ವಿಷಯ ಗಮನಿಸಬೇಕಾಗಿದೆ, ಅದೆಂದರೆ- ಒಳಮೀಸಲಾತಿಗಾಗಿ ಕಾಲದಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದ ಮಾದಿಗ ಮತ್ತು ಉಪ ಜಾತಿಗಳು ಸಂಖ್ಯೆಯಲ್ಲಿ ಹೆಚ್ಚಿದ್ದರೂ ಮತ್ತು ಪ್ರಾತಿನಿಧ್ಯದ ಕೊರತೆ ಎದುರಿಸುತ್ತಿದ್ದರೂ ಮೀಸಲಾತಿ ಕೋಟಾ ನೀಡಿರುವುದು ಶೇ. 6ರಷ್ಟು ಮಾತ್ರ. ಈ ಸಮುದಾಯಗಳಿಗಿಂತ ಸಂಖ್ಯೆಯಲ್ಲಿ ಕಡಿಮೆ ಮತ್ತು ಪ್ರಾತಿನಿಧ್ಯ, ರಾಜಕೀಯ ಸ್ಥಾನಮಾನಗಳು ಹಾಗೂ ಇನ್ನಿತರ ಸವಲತ್ತುಗಳನ್ನು ಪಡೆಯುವಲ್ಲಿ ಮುಂಚೂಣಿಯಲ್ಲಿದ್ದ ಬಲಗೈ ಗುಂಪಿನವರಿಗೂ ಅಷ್ಟೇ ಪ್ರಮಾಣದ ಕೋಟಾ ನೀಡಿರುವುದರಿಂದ ಮುಂದೆಂದೂ ಈ ಎರಡೂ ಸಮುದಾಯಗಳು ಎಲ್ಲ ವಿಧದಲ್ಲೂ ಸಮಾನತೆ ಕಾಣುವುದು ಕಡು ಕಷ್ಟ ಮತ್ತು ಅಸಮಾನತೆ ಮುಂದುವರಿಯುವುದು ನಿಶ್ಚಿತ. ಸರಕಾರದ ಈ ಮಾಯಾಜಾಲದ ಆಟವನ್ನು ಭಾಜಪ ಹಾದಿ ಬದಿಯಲ್ಲಿ ಕುಳಿತು ಗುಳ್ಳೆನರಿಯ ರೀತಿಯಲ್ಲಿ ಎಡಗೈ ಸಮುದಾಯಗಳನ್ನು ತನ್ನೆಡೆ ರಾಜಕೀಯ ವೋಟ್‌ಬ್ಯಾಂಕ್ ಉದ್ದೇಶಕ್ಕೆ ಹೇಗೆ ಸೆಳೆಯಬಹುದು ಎಂದು ಹೊಂಚು ಹಾಕುತ್ತಿರುವುದು ಗುಟ್ಟೇನಲ್ಲ.
ಸೂಕ್ಷ್ಮ ಮತ್ತು ಅತಿ ಸೂಕ್ಷ್ಮಜಾತಿಗಳಿಗೆ ನ್ಯಾ. ನಾಗಮೋಹನ್ ದಾಸ್ ಆಯೋಗವೇ ಅಲ್ಲದೆ, 2004ರಲ್ಲಿ ರಚಿತಗೊಂಡಿದ್ದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಮತ್ತು ಭಾಜಪ ಸರಕಾರದಲ್ಲಿ ಸಚಿವ ಸಂಪುಟದ ಮಾಧುಸ್ವಾಮಿ ನೇತೃತ್ವದ ಉಪ ಸಮಿತಿ ಸೂಕ್ಷ್ಮಾತಿ ಸೂಕ್ಷ್ಮ ಜಾತಿಗಳಿಗೆ ಪ್ರತ್ಯೇಕ ಮೀಸಲಾತಿ ವ್ಯವಸ್ಥೆ ಮಾಡಿದ್ದವು. ಹಾಗೆಯೇ ತೆಲಂಗಾಣ ರಾಜ್ಯದಲ್ಲೂ ಕೂಡ ಅಂಥಾ ಜಾತಿಗಳಿಗೆ ಪರಮೋಚ್ಚ ನ್ಯಾಯ ಒದಗಿಸಿದೆ. ಇದು ಕರ್ನಾಟಕಕ್ಕೆ ಪಾಠವಾಗದಿರುವುದು ದುರ್ಗತಿಯೇ ಸರಿ. ದುರ್ದೆಶೆ ಎಂದರೆ ಕಾಂಗ್ರೆಸ್ ಹೈಕಮಾಂಡ್ ಕೂಡ ಕಣ್ಣು ಮುಚ್ಚಿ ಕುಳಿತಿರುವುದು.
ಅಲೆಮಾರಿ-ಅರೆ ಅಲೆಮಾರಿ ಸಮುದಾಯಗಳಿಗೆ ರಾಜ್ಯ ಎಸಗಿರುವ ಈ ವಿದ್ರೋಹಿ ನಡವಳಿಕೆಯನ್ನು ಅವು ತೀವ್ರವಾಗಿಯೇ ಪರಿಗಣಿಸಿವೆ. ರಾಜ್ಯದ ನಾನಾ ಕಡೆಗಳಿಂದ ನೂರಾರು ಮೈಲಿಗಳನ್ನು ಕ್ರಮಿಸಿ ಕುಲ ಕಸುಬು ಆಧಾರಿತ ವೇಷ-ಭೂಷಣಗಳೊಡನೆ ರಾಜಧಾನಿಗೆ ಧಾವಿಸಿ, ಅಹೋರಾತ್ರಿ ಹೋರಾಟ ಹಮ್ಮಿಕೊಂಡಿದ್ದವು. ಸ್ವಾತಂತ್ರ್ಯ ಉದ್ಯಾನದ ಬಳಿ ವಾರಗಟ್ಟಲೆ ವಿವಿಧ ರೀತಿಯ ಪೋಷಾಕುಗಳನ್ನು ಧರಿಸಿ ತಮ್ಮ ಕುಲಾಧಾರಿತ ಜಾನಪದದ ವಿವಿಧ ನೃತ್ಯಗಳಿಂದ ಸಾರ್ವಜನಿಕರ ಗಮನ ಸೆಳೆದದ್ದಷ್ಟೇ ಅಲ್ಲ, ಅವರ ಕಣ್ಣುಗಳನ್ನು ಆರ್ದ್ರಗೊಳಿಸಿದವು. ಸಣ್ಣ ಸಂಖ್ಯೆಯಲ್ಲಿರುವ ಈ ಜಾತಿಗಳ ಅಳಲು ಸರಕಾರಕ್ಕೆ ಕಾಣಿಸುವುದಿಲ್ಲ ಬಿಡಿ. ಆದರೂ, ಸಮುದಾಯದ ನಾಯಕರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಗಳು ಸಚಿವ ಸಂಪುಟ ಈಗಾಗಲೇ ತೀರ್ಮಾನ ತೆಗೆದುಕೊಂಡಿರುವುದರಿಂದ, ನಿಮ್ಮ ಬೇಡಿಕೆ ಈಡೇರಿಸಲು ಕಷ್ಟ ಎಂದು ಹೇಳಿ ನಿಮ್ಮ ಅಭಿವೃದ್ಧಿಗೆ ಪ್ಯಾಕೇಜ್ ರೂಪದಲ್ಲಿ ಹಣ ತೊಡಗಿಸಬಹುದು ಎಂದು ಹೇಳಿದ್ದಲ್ಲದೆ ಅನ್ಯಾಯವಾಗಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಿ ಎಂಬ ಉದಾಸೀನದ ಮಾತನ್ನೂ ಆಡಿದರೆಂದೂ ವರದಿಯಾಗಿದೆ( ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಸೂಕ್ತವಾದ ವ್ಯತಿರಿಕ್ತ ಅಂಶಗಳಿವೆ).
ಅನ್ಯಾಯಕ್ಕೊಳಗಾದ ಈ ಸಮುದಾಯಗಳ ನಾಯಕರು ಛಲ ಬಿಡದೆ ಅತೀವ ಪ್ರಯಾಸ ಪಟ್ಟು ದೂರದ ದಿಲ್ಲಿಗೂ ತೆರಳಿ ಅಲ್ಲಿ ಕಾಂಗ್ರೆಸ್ ಹೈಕಮಾಂಡ್‌ನ ಪ್ರಮುಖ ನಾಯಕರನ್ನೂ ಭೇಟಿಯಾಗಿ ಬಂದಿದ್ದಾರೆ. ಇವರ ನೋವು-ಒಳಗುದಿಯನ್ನು ಕೇಳಿಸಿ ಕೊಳ್ಳುವವರು ಯಾರು? ಇವರ ಹೀನಾಯ ಸ್ಥಿತಿ-ಗತಿಗಳನ್ನು ಕಾಣಲು ಸರಕಾರಕ್ಕೆ ಕಣ್ಣು-ಕರುಣೆ ಇರಬೇಕಲ್ಲವೇ? ಈ ಸಮಯದಲ್ಲಿ ಕುಮಾರವ್ಯಾಸ ಭಾರತದ ಅತ್ಯಂತ ಮಾರ್ಮಿಕವಾದ ನುಡಿಗಳು ನೆನಪಾಗುತ್ತಿವೆ - ‘ಅರಸು ರಾಕ್ಷಸ, ಮಂತ್ರಿ ಎಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ ಬಡವರ ಬಿನ್ನಪವ ನಿನ್ನಾರು ಕೇಳುವರು’.







