ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ : ಭಾಷಾ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ನಿರ್ಲಕ್ಷಿಸಿದ ಸರಕಾರ!

ಸಾಂದರ್ಭಿಕ ಚಿತ್ರ | PC : Gemini AI
“ಪ್ರತಿ ಕುಟುಂಬಕ್ಕೂ ಭದ್ರತೆ. ಪ್ರತಿಯೊಬ್ಬ ನಾಗರಿಕನಿಗೂ ಗೌರವ. ಪ್ರತಿಯೊಬ್ಬ ಯುವಕ-ಯುವತಿಯವರಿಗೂ ಅವಕಾಶ”- ಕರ್ನಾಟಕದ ಮುಖ್ಯಮಂತ್ರಿಯವರಾದ ಡಿ.ಕೆ.ಶಿವಕುಮಾರ್ ಅವರು 80ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಈ ಮಾತುಗಳಿದ್ದವು. ಈ ಮಾತು ರಾಜ್ಯದ ಯುವಜನರಿಗಾಗಿ ಸರಕಾರದ ಆಶಾವಾದಿ ಮತ್ತು ಸ್ಪಷ್ಟ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ತಮ್ಮ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ನೂರಾರು ಶಿಕ್ಷಕರೂ ಈ ಯುವಜನರ ಭಾಗವೇ ಆಗಿದ್ದಾರೆ. ಆದರೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಸರಕಾರ ಇತ್ತೀಚೆಗೆ ಕೈಗೊಂಡಿರುವ ನಿರ್ಧಾರದಿಂದ, ಭಾಷಾ ಅಲ್ಪಸಂಖ್ಯಾತರ ಶಾಲೆಗಳು ನಿರ್ಲಕ್ಷ್ಯಕ್ಕೊಳಗಾಗಿವೆ.
ಕರ್ನಾಟಕ ಸರಕಾರವು ಆಗಸ್ಟ್ ಹತ್ತರಂದು ರಾಜ್ಯಾದ್ಯಂತ 15,000 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ಬಹುಕಾಲದಿಂದ ನಿರೀಕ್ಷಿಸಲಾಗುತ್ತಿದ್ದ ಈ ಆದೇಶ ಸ್ವಾಗತಾರ್ಹವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ದೊಡ್ಡ ಪ್ರಮಾಣದ ಶಿಕ್ಷಕರ ಕೊರತೆಯನ್ನು ನೀಗಿಸುವ ನಿರೀಕ್ಷೆ ಮೂಡಿಸಿದೆ. ಆದರೆ ಈ ನೇಮಕಾತಿ ಮುಖ್ಯವಾಗಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಮಾತ್ರ ಸೀಮಿತವಾಗಿರುವುದು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
2022ರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (GPSTR) ಮಾದರಿಯಲ್ಲೇ, ಇತ್ತೀಚಿನ ಅಧಿಸೂಚನೆಯಲ್ಲಿ 8,500 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು (ಕನ್ನಡ ಮಾಧ್ಯಮ) ಸೇರಿದಂತೆ ವಿವಿಧ ವರ್ಗಗಳ ಹುದ್ದೆಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ 4,500 ಪ್ರೌಢಶಾಲಾ ಸಹಾಯಕ ಶಿಕ್ಷಕರ ಹುದ್ದೆಗಳು — 1,302 ಇಂಗ್ಲಿಷ್ ಮಾಧ್ಯಮ ಹಾಗೂ 3,198 ಕನ್ನಡ ಮಾಧ್ಯಮ —, 900 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು (ಕನ್ನಡ ಮಾಧ್ಯಮ), 500 ಕಂಪ್ಯೂಟರ್ ವಿಜ್ಞಾನ ಶಿಕ್ಷಕರ ಹುದ್ದೆಗಳು ಮತ್ತು 600 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಸೇರಿವೆ.
ಈ ಹುದ್ದೆಗಳಲ್ಲಿ 6,967 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಹಾಗೂ 8,033 ಹುದ್ದೆಗಳನ್ನು ರಾಜ್ಯದ ಇತರೆ ಭಾಗಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಉರ್ದು, ಮರಾಠಿ, ತಮಿಳು, ತೆಲುಗು, ಹಿಂದಿ ಮುಂತಾದ ಇತರ ಮಾಧ್ಯಮದ ಶಾಲೆಗಳಿಗೆ ಪ್ರತ್ಯೇಕ ನೇಮಕಾತಿ ಅಥವಾ ಹುದ್ದೆಗಳ ಹಂಚಿಕೆ ಮಾಡಲಾಗಿಲ್ಲ. ಈ ಶಾಲೆಗಳಲ್ಲಿಯೂ ಶಿಕ್ಷಕರ ಕೊರತೆ ತೀವ್ರವಾಗಿದ್ದು, ನೇಮಕಾತಿಗಾಗಿ ಹಲವು ವರ್ಷಗಳಿಂದ ಕಾಯುತ್ತಿರುವ ಅಭ್ಯರ್ಥಿಗಳ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ.
ಕರ್ನಾಟಕದಲ್ಲಿ ಕನ್ನಡ ಮಾಧ್ಯಮದ 41,735 ಮತ್ತು ಇಂಗ್ಲಿಷ್ ಮಾಧ್ಯಮದ 4,352 ಶಾಲೆಗಳ ನಂತರ, 3,947 ಉರ್ದು ಮಾಧ್ಯಮ ಶಾಲೆಗಳು ಇದ್ದು, ಅವುಗಳಲ್ಲಿ ಸುಮಾರು 2,73,573 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರ ಜೊತೆಗೆ 881 ಮರಾಠಿ ಮಾಧ್ಯಮ ಶಾಲೆಗಳು, 53 ತಮಿಳು ಮಾಧ್ಯಮ ಶಾಲೆಗಳು, 53 ತೆಲುಗು ಮಾಧ್ಯಮ ಶಾಲೆಗಳು ಹಾಗೂ 5 ಹಿಂದಿ ಮಾಧ್ಯಮ ಶಾಲೆಗಳು ಕೂಡ ಕಾರ್ಯನಿರ್ವಹಿಸುತ್ತಿವೆ.
ಈ ಶಾಲೆಗಳಲ್ಲಿಯೂ ಶಿಕ್ಷಕರ ಹುದ್ದೆಗಳು ಗಣನೀಯ ಪ್ರಮಾಣದಲ್ಲಿ ಖಾಲಿ ಇವೆ. ಉರ್ದು ಮಾಧ್ಯಮದಲ್ಲೇ ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ ಪ್ರೌಢಶಾಲಾ ಶಿಕ್ಷಕರ ಸುಮಾರು ಐದು ಸಾವಿರ ಹುದ್ದೆಗಳು ಖಾಲಿ ಇರುವುದಾಗಿ ತಿಳಿದುಬಂದಿದೆ. ಅನೇಕ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳು ಬಹುತೇಕ ಅತಿಥಿ ಶಿಕ್ಷಕರ ಮೇಲೆ ಅವಲಂಬಿತವಾಗಿವೆ. ಇಂತಹ ಸಂದರ್ಭದಲ್ಲಿ, ಬಹು ನಿರೀಕ್ಷಿತ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಈ ಶಾಲೆಗಳ ಸಮಸ್ಯೆಗಳಿಗೆ ಯಾವುದೇ ಸ್ಪಷ್ಟ ಉಲ್ಲೇಖವಿಲ್ಲದಿರುವುದು, ಅಲ್ಪಸಂಖ್ಯಾತರ ಶಾಲೆಗಳನ್ನೂ ಹಾಗೂ ಆ ಭಾಷೆಗಳಲ್ಲಿ ಅರ್ಹತೆ ಪಡೆದಿರುವ ಶಿಕ್ಷಕ ಅಭ್ಯರ್ಥಿಗಳನ್ನೂ ಅನಿಶ್ಚಿತತೆಯಲ್ಲಿಟ್ಟಿದೆ.
ಇಲ್ಲಿ ಪ್ರಶ್ನೆ ಉದ್ಭವಿಸುವುದು ಭಾಷಾ ಅಲ್ಪಸಂಖ್ಯಾತ ಮಾಧ್ಯಮದ ಅಭ್ಯರ್ಥಿಗಳಿಗೆ ಇತರರಂತೆ ಸರಕಾರಿ ಉದ್ಯೋಗದಲ್ಲಿ ಸಮಾನ ಅವಕಾಶ ದೊರೆಯಬೇಕಲ್ಲವೇ? ಎಂಬುದು.
ಈ ಸಂದರ್ಭದಲ್ಲಿ ಭಾರತದ ಸಂವಿಧಾನದ 21Aನೇ ವಿಧಿ ಉಲ್ಲೇಖನೀಯ. ಇದು ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ಖಾತರಿಪಡಿಸುತ್ತದೆ. ಇದೇ ರೀತಿಯಾಗಿ, 2009ರ ಶಿಕ್ಷಣದ ಹಕ್ಕು ಕಾಯ್ದೆ (RTE Act) ಯ 25 ಮತ್ತು 26ನೇ ವಿಧಿಗಳು ನಿಗದಿತ ವಿದ್ಯಾರ್ಥಿ-ಶಿಕ್ಷಕ ಅನುಪಾತವನ್ನು ಕಾಪಾಡುವುದು ಹಾಗೂ ಶಿಕ್ಷಕರ ಖಾಲಿ ಹುದ್ದೆಗಳನ್ನು ಸಮಯೋಚಿತವಾಗಿ ಭರ್ತಿ ಮಾಡುವ ಅಗತ್ಯವನ್ನು ಒತ್ತಿಹೇಳುತ್ತವೆ.
B.Ed ಅಥವಾ D.Ed ಪೂರ್ಣಗೊಳಿಸಿರುವ ಅಪಾರ ಸಂಖ್ಯೆಯ ಅಭ್ಯರ್ಥಿಗಳು ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿಗಾಗಿ ಕಾಯುತ್ತಿದ್ದಾರೆ. ಅನೇಕರು ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನೂ ಕೆಲವರು ನೇಮಕಾತಿಯ ನಿರೀಕ್ಷೆಯಲ್ಲಿ ನಿರುದ್ಯೋಗಿಗಳಾಗಿದ್ದಾರೆ. ವಯೋಮಿತಿ ಮೀರುವ ಮುನ್ನ ಸರಕಾರಿ ಉದ್ಯೋಗ ಪಡೆಯಬೇಕೆಂಬ ಅವರ ಕನಸು ಕೂಡ ಅಪಾಯದಲ್ಲಿದೆ.
ಒಂದು ಭಾಷೆಯ ಶಾಲೆಗಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಆ ಭಾಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದು. ಅದೇ ರೀತಿ, ಈ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ತಮ್ಮ ಮಾತೃಭಾಷೆಯಲ್ಲಿ ಇತರ ವಿದ್ಯಾರ್ಥಿಗಳಂತೆ ಗುಣಮಟ್ಟದ ಶಿಕ್ಷಣ ಪಡೆಯುವ ಸಮಾನ ಅವಕಾಶವೂ ಇರಬೇಕು.
ಇನ್ನೊಂದು ಪ್ರಮುಖ ಅಂಶವೆಂದರೆ, ಕಲಬುರಗಿ, ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಅಲ್ಪಸಂಖ್ಯಾತ ಮಾಧ್ಯಮದ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಹಲವು ಜಿಲ್ಲೆಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿವೆ. ಇದೇ ಪ್ರದೇಶಗಳು ಎಸ್ಎಸ್ಎಲ್ಸಿ ಫಲಿತಾಂಶಗಳಲ್ಲಿ ಹಿಂದುಳಿದ ಜಿಲ್ಲೆಗಳಾಗಿಯೂ ಗುರುತಿಸಲ್ಪಡುತ್ತವೆ.
ಈ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಾಗೂ ಮೂಲಸೌಕರ್ಯದ ಸಮಸ್ಯೆಗಳು ಈಗಾಗಲೇ ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಗಂಭೀರವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ನೇಮಕಾತಿಯಲ್ಲಿಯೂ ಅವುಗಳನ್ನು ಮತ್ತಷ್ಟು ಕಡೆಗಣಿಸಿದರೆ, ಅದು ಒಂದು ಚಕ್ರಾಕಾರದ ಸಮಸ್ಯೆಗೆ ಕಾರಣವಾಗಬಹುದು.
ಅಲ್ಪಸಂಖ್ಯಾತ ಭಾಷೆಯ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಕಡಿಮೆ ಸಂಪನ್ಮೂಲ ನೀಡುವುದು, ಶಿಕ್ಷಣದ ಗುಣಮಟ್ಟ ಕುಸಿಯುವುದು, ಪೋಷಕರು ಇತರ ಮಾಧ್ಯಮಗಳತ್ತ ಮುಖ ಮಾಡುವುದು, ವಿದ್ಯಾರ್ಥಿಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗುವುದು, ಆ ಶಾಲೆಗಳಿಗೆ ಇನ್ನಷ್ಟು ಕಡಿಮೆ ಸಂಪನ್ಮೂಲ ನೀಡುವುದು ಈ 'ದುಷ್ಟಚಕ್ರ' ಮುಂದುವರಿಯಬಹುದು.
ಈಗಾಗಲೇ ತಮ್ಮ ಮಕ್ಕಳನ್ನು ಉತ್ತಮ ಗುಣಮಟ್ಟದ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸುವ ಪ್ರವೃತ್ತಿ ಪೋಷಕರಲ್ಲಿ ಹೆಚ್ಚಾಗಿದೆ. U-DISE ಮಾಹಿತಿಯ ಪ್ರಕಾರ, 2012-13ರಿಂದ 2018-19ರ ಅವಧಿಯಲ್ಲಿ ಉರ್ದು ಮಾಧ್ಯಮದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.23.1, ಮರಾಠಿ ಮಾಧ್ಯಮದಲ್ಲಿ ಶೇ.24 ಮತ್ತು ಕನ್ನಡ ಮಾಧ್ಯಮದಲ್ಲಿ ಶೇ.20ರಷ್ಟು ಇಳಿಕೆ ಕಂಡುಬಂದಿದ್ದರೆ, ಇಂಗ್ಲಿಷ್ ಮಾಧ್ಯಮದಲ್ಲಿ ಸುಮಾರು ಶೇ.100ರಷ್ಟು ಏರಿಕೆ ಕಂಡುಬಂದಿದೆ. ಈ ಮಾಹಿತಿಯಲ್ಲಿ ಸರಕಾರಿ ಹೊರಗಿನ ಸಂಸ್ಥೆಗಳ ಸಂಖ್ಯೆಗಳೂ ಒಳಗೊಂಡಿದ್ದವು ಮತ್ತು ಮುಂದಿನ ಉದ್ಯೋಗಾವಕಾಶಗಳಂತಹ ಹಲವು ಅಂಶಗಳು ಪೋಷಕರ ಆಯ್ಕೆಯ ಮೇಲೆ ಪರಿಣಾಮ ಬೀರುತ್ತವೆ. ಆದರೂ, ಇಂಗ್ಲಿಷ್ ಮಾಧ್ಯಮದತ್ತ ಹೆಚ್ಚುತ್ತಿರುವ ಆದ್ಯತೆಯ ಪ್ರವೃತ್ತಿಯನ್ನು ನಿರ್ಲಕ್ಷಿಸಲಂತೂ ಸಾಧ್ಯವಿಲ್ಲ. ಹೀಗಿರುವಾಗ, ಸರಕಾರವು ಅಲ್ಪಸಂಖ್ಯಾತ ಮಾಧ್ಯಮದ ಶಾಲೆಗಳನ್ನು ಮತ್ತಷ್ಟು ನಿರ್ಲಕ್ಷಿಸುವುದು ನ್ಯಾಯಸಮ್ಮತವೇ?
ಗುಣಮಟ್ಟದ ಶಿಕ್ಷಣ ಮತ್ತು ಸಮಾನ ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು ಸರಕಾರವು ಎಲ್ಲಾ ಭಾಷೆಗಳ ಶಾಲೆಗಳ ಗುಣಮಟ್ಟವನ್ನು ಸಮಾನವಾಗಿ ಹೆಚ್ಚಿಸಬೇಕಲ್ಲವೇ? ಶಿಕ್ಷಕರ ನೇಮಕಾತಿ ಮತ್ತು ಮಾನವ ಸಂಪನ್ಮೂಲಗಳು ಶಿಕ್ಷಣದ ಗುಣಮಟ್ಟವನ್ನು ನಿರ್ಮಿಸುವ ಪ್ರಮುಖ ಆಧಾರಸ್ತಂಭಗಳಾಗಿವೆ. ಸಾಮಾನ್ಯವಾಗಿ ಶಿಕ್ಷಕರ ಅಗತ್ಯವನ್ನು ಶಾಲಾವಾರು ಅವಶ್ಯಕತೆ, ವಿದ್ಯಾರ್ಥಿ-ಶಿಕ್ಷಕ ಅನುಪಾತ ಹಾಗೂ ಖಾಲಿ ಹುದ್ದೆಗಳಂತಹ ಅಳೆಯಬಹುದಾದ ಮಾನದಂಡಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಆದರೆ ಈ ಬಾರಿ ಮಾಧ್ಯಮವಾರು ರೀತಿಯಲ್ಲಿ ಮಾಡಲಾಗಿರುವ ವರ್ಗೀಕರಣವು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮತ್ತು ಇದರ ಪರಿಣಾಮಗಳು ಅಲ್ಪಸಂಖ್ಯಾತ ಮಾಧ್ಯಮದ ಶಾಲೆಗಳು ಹಾಗೂ ಶಿಕ್ಷಕ ಅಭ್ಯರ್ಥಿಗಳ ಪಾಲಿಗೆ ಸಕಾರಾತ್ಮಕವಾಗಿ ಕಾಣುತ್ತಿಲ್ಲ. ಸರಕಾರದ ಈ ನಿರ್ಧಾರವು ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಉರ್ದು ಸೇರಿದಂತೆ ಸೂಕ್ತವಾಗಿ ಮಾನ್ಯತೆ ಪಡೆದ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಬೇಕು, ಭಾಷಾ ವೈವಿಧ್ಯತೆ ಹೊಂದಿರುವ ಕರ್ನಾಟಕದಲ್ಲಿ ವಿವಿಧ ಭಾಷಾ ಮಾಧ್ಯಮಗಳ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವುದು ಅಗತ್ಯ. ರಾಜ್ಯದ ವಿವಿಧ ಜಿಲ್ಲೆ ಹಾಗೂ ವಿಭಾಗಗಳಲ್ಲಿ ಲಭ್ಯವಿರುವ ಹೈಸ್ಕೂಲ್ ಗಣಿತ ಶಿಕ್ಷಕರ ಖಾಲಿ ಹುದ್ದೆಗಳನ್ನೂ ನೇಮಕಾತಿ ಅಧಿಸೂಚನೆಯಲ್ಲಿ ಸೇರಿಸಬೇಕು. ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ದೊರೆಯುವಂತೆ ಇಲಾಖೆಯು ಎಲ್ಲಾ ವಿಷಯವಾರು ಖಾಲಿ ಹುದ್ದೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಪ್ರಕಟಿಸಬೇಕು.
ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಈಗಾಗಲೇ ಸಲ್ಲಿಸಿರುವ ಆಕ್ಷೇಪಣೆಗಳು ಮತ್ತು ಮನವಿಗಳನ್ನು ಸರಕಾರ ಹಾಗೂ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ ಅದನ್ನು ಪರಿಶೀಲಿಸಿಲ್ಲ ಎಂಬ ಆರೋಪವೂ ಇಲಾಖೆಯ ಮೇಲಿದೆ. ಹಾಗಾಗಿ, ಇದನ್ನು ಕೂಡ ಪರಿಗಣಿಸಬೇಕು, ಅಗತ್ಯವಿರುವ ತಿದ್ದುಪಡಿಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕು.
2026ರ ನೇಮಕಾತಿಗೆ ಒಂದು ಬಾರಿಯ ವಿಶೇಷವಾಗಿ ಹೆಚ್ಚುವರಿ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಬೇಕು ಎಂಬ ಆಗ್ರಹ ಕೂಡ ಅಭ್ಯರ್ಥಿಗಳ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ. ಕೋವಿಡ್ 19 ಹಾಗೂ ಕಳೆದ ಕೆಲವು ವರ್ಷಗಳಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಉಂಟಾದ ವಿಳಂಬದಿಂದಾಗಿ ವಯೋಮಿತಿ ದಾಟಿರುವ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ವರ್ಷವಾದರೂ ಈ ವಿಶೇಷ ಸಡಿಲಿಕೆ ನೀಡಬೇಕು ಎಂಬುದು ಅಭ್ಯರ್ಥಿಗಳ ಬೇಡಿಕೆ.
ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಅಧಿಸೂಚನೆ ಹಾಗೂ ಅಗತ್ಯವಿದ್ದಲ್ಲಿ ಪೂರಕ ಅಧಿಸೂಚನೆಗಳನ್ನು ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಸರಕಾರ ಹೊರಡಿಸಬೇಕು. ಸರಕಾರ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು. ಉರ್ದು ಮಾಧ್ಯಮ ಹುದ್ದೆಗಳ ಸೇರ್ಪಡೆ, ಗಣಿತ ಶಿಕ್ಷಕರ ಖಾಲಿ ಹುದ್ದೆಗಳ ಪ್ರಕಟಣೆ, ಪರೀಕ್ಷೆಯ ಭಾಷಾ ಆಯ್ಕೆ, ಐದು ವರ್ಷಗಳ ವಯೋಮಿತಿ ಸಡಿಲಿಕೆ ಸೇರಿದಂತೆ ಎಲ್ಲ ಬಾಕಿ ಬೇಡಿಕೆಗಳನ್ನು ಸರಕಾರ ತುರ್ತಾಗಿ ಪರಿಗಣಿಸಿ, ರಾಜ್ಯದ ಸಾವಿರಾರು ಶಿಕ್ಷಕ ಅಭ್ಯರ್ಥಿಗಳಿಗೆ ನ್ಯಾಯಯುತ ಅವಕಾಶ ಕಲ್ಪಿಸಬೇಕಿದೆ.
ಈ ನಿರ್ಧಾರವನ್ನು ಸರಕಾರ ಮರುಪರಿಶೀಲಿಸುತ್ತದೆಯೇ? ಅಲ್ಪಸಂಖ್ಯಾತ ಮಾಧ್ಯಮದ ಶಾಲೆಗಳ ಶಿಕ್ಷಕರ ಕೊರತೆಯನ್ನು ನಿವಾರಿಸಲು ಪ್ರತ್ಯೇಕ ನೇಮಕಾತಿ ಕೈಗೊಳ್ಳುತ್ತದೆಯೇ? ಅಥವಾ ಈ ಸಮಸ್ಯೆಯೂ ಇತರ ಅನೇಕ ಬೇಡಿಕೆಗಳಂತೆ ಕಡತಗಳಲ್ಲೇ ಉಳಿಯುತ್ತದೆಯೇ? ಇದಕ್ಕೆ ಉತ್ತರವನ್ನು ರಾಜ್ಯ ಸರಕಾರವೇ ನೀಡಬೇಕಿದೆ.






