ತೆಲಂಗಾಣ ಜಾತಿಗಣತಿ ಬಹಿರಂಗ: ಕರ್ನಾಟಕಕ್ಕಿರುವ ಕಷ್ಟವಾದರೂ ಏನು?

ಇತ್ತೀಚಿನ ಕೆಲವು ವರ್ಷಗಳಿಂದ, ಜಾತಿ-ಜನಗಣತಿ ಕಾರ್ಯ ಮಾಡಬೇಕೆಂಬುದು ರಾಜ್ಯಮಟ್ಟದಲ್ಲಷ್ಟೇ ಅಲ್ಲ; ರಾಷ್ಟ್ರಮಟ್ಟದಲ್ಲೂ ಅದು ಕಾರ್ಯರೂಪಕ್ಕೆ ಬರಬೇಕು ಎಂಬುದೂ ಬಹು ಜನರ ಅಭಿಪ್ರಾಯ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಗಣತಿಗಾಗಿಯೇ ಒಂದು ಕಾಯ್ದೆಯನ್ನು ರೂಪಿಸಲಾಯಿತು. ಅದು ಭಾರತದ ಜನಗಣತಿ ಕಾಯ್ದೆ, 1948. ವಸಾಹತುಶಾಹಿ ಕಾಲಘಟ್ಟದಲ್ಲಿ ಜಾತಿಯನ್ನೂ ಒಳಗೊಂಡಂತೆ 1872ರಿಂದ ಜಾತಿ ಜನಗಣತಿಯನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಆದರೆ, ಕೆಲವು ಸ್ಥಾಪಿತ ಹಿತಾಸಕ್ತಿಗಳ ಪ್ರಚೋದನೆಗೆ ಒಳಗಾಗಿ, ಕಾಯ್ದೆಯಲ್ಲಿ ‘ಜಾತಿ’ಯನ್ನು ಕೈ ಬಿಡಲಾಯಿತು. ಅದು ಇಂದಿಗೂ ನಿಗೂಢವಾಗಿಯೇ ಇದೆ. ಜನಗಣತಿ ಪ್ರತೀ 10 ವರ್ಷಕ್ಕೊಮ್ಮೆ ನಡೆದುಕೊಂಡು ಬರುತ್ತಿದೆ. 2001ರಿಂದ, ಜಾತಿಯನ್ನು ಒಳಗೊಂಡ ಜಾತಿ-ಜನಗಣತಿಯನ್ನು, ನಮ್ಮ ಭಾರತೀಯ ಸಾಮಾಜಿಕ ವ್ಯವಸ್ಥೆಗೆ ಅಗತ್ಯ ಬೇಕಾಗಿರುವುದರಿಂದ ಮಾಡಲೇ ಬೇಕೆಂಬ ಇಚ್ಛೆ ಕೆಲವು ಪ್ರಜ್ಞಾವಂತ ನಾಗರಿಕರಲ್ಲಿ ಹುಟ್ಟಿಕೊಂಡಿತು. ರಾಷ್ಟ್ರಮಟ್ಟದಲ್ಲಿ ಅದು ಇಂದಿಗೂ ಕೈಗೂಡಲಿಲ್ಲ ಎಂಬುದು ಬೇರೆ ಮಾತು.
ಆದರೆ ಈ ಕಾರ್ಯವನ್ನು ಮೊದಲು ಕೈಗೊಂಡದ್ದು ಮಾತ್ರ 1982ರಲ್ಲಿಯೇ ತಮಿಳುನಾಡಿನಲ್ಲಿ ಅಂಬಾಶಂಕರ್ ಆಯೋಗ. ಸಮಗ್ರ ವರದಿಯನ್ನೇ ಆಧರಿಸಿ, ಇಂದು ತಮಿಳುನಾಡು ಸರಕಾರ, ಮೀಸಲಾತಿ ಕೋಟಾವನ್ನು ಶೇ. 69ಕ್ಕೆ ಏರಿಸಿರುವುದು ಈ ದಿಸೆಯಲ್ಲಿ ಯೋಚಿಸುವವರೆಲ್ಲರಿಗೂ ಗೊತ್ತು. ಅದಾದ ನಂತರವೇ ಕರ್ನಾಟಕದಲ್ಲಿ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಗ್ರಹದ ನಿಮಿತ್ತ ಜಾತಿ-ಜನಗಣತಿಯು ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2015’ ಎಂಬ ಶೀರ್ಷಿಕೆಯಡಿ, ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯಿತಷ್ಟೇ. ಆದರೆ ಸಮೀಕ್ಷೆಯ ಅಂಕಿ ಅಂಶಗಳ ಬಹಿರಂಗಕ್ಕೆ ಮಾತ್ರ ಬಾಲಗ್ರಹ ಹಿಡಿದಿದೆ. ವಿಷಯವನ್ನು ಮುಂದೆ ಚರ್ಚಿಸೋಣ. ಮೂರನೆಯದಾಗಿ, ಬಿಹಾರ ಸರಕಾರ ಆ ಕಾರ್ಯ ಪೂರೈಸಿತು. ಸದ್ಯ ಅದು ನ್ಯಾಯಾಲಯದ ಮುಂದೆ ವಿಚಾರಣೆಗೆ ಇದೆ.
ರಾಜ್ಯಗಳ ಮಟ್ಟಿಗೆ ಹೇಳುವುದಾದರೆ ನಾಲ್ಕನೆಯದಾಗಿ, ತೆಲಂಗಾಣ ರಾಜ್ಯ, ಯಶಸ್ವಿಯಾಗಿ ಆ ಕಾರ್ಯ ನೆರವೇರಿಸಿದೆ. ಕೇವಲ ಮೂರು ನಾಲ್ಕು ದಿನದಲ್ಲೇ ಅಂಕಿ ಅಂಶಗಳನ್ನು ಬಹಿರಂಗಗೊಳಿಸಿದೆ ಕೂಡ. ನವೆಂಬರ್ 30, 2023ರಲ್ಲಿ ವಿಧಾನಸಭೆಗೆ ಚುನಾವಣೆ ನಡೆದು, ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿತು. ಡಿಸೆಂಬರ್ 7ರಂದು ಪಕ್ಷದ ಅಧ್ಯಕ್ಷರಾಗಿದ್ದ ರೇವಂತ್ ರೆಡ್ಡಿಯವರೇ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರು. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿಯೇ ಜಾತಿ ಜನಗಣತಿ ಮಾಡುವುದಾಗಿ ಘೋಷಿಸಿತ್ತು. ಆ ಘೋಷಣೆ ಈಗ ರಾಷ್ಟ್ರಮಟ್ಟದಲ್ಲಿ ಪಕ್ಷದ ಸಿದ್ಧಾಂತವಾಗಿ ಪರಿಗಣಿಸಿದೆ. ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ಹೋದಲ್ಲಿ ಬಂದಲ್ಲಿ ರಾಷ್ಟ್ರಮಟ್ಟದಲ್ಲಿ ಜಾತಿ-ಜನಗಣತಿಯನ್ನು ಮಾಡಿಯೇ ತೀರುತ್ತೇವೆ ಎಂಬ ಮಾತನ್ನು ಹೇಳಿಕೊಂಡೇ ಬರುತ್ತಿದ್ದಾರೆ.
ತೆಲಂಗಾಣ ರಾಜ್ಯವು, 2024ರ ಅಕ್ಟೋಬರ್ ತಿಂಗಳಲ್ಲಿ ಅದನ್ನು ‘‘ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಮತ್ತು ಜಾತಿ ಸಮೀಕ್ಷೆ’’ ಎಂದು ಕರೆದಿದೆ ಹಾಗೂ ಸಮೀಕ್ಷೆಯನ್ನು ಕೇವಲ ಮೂರು ತಿಂಗಳ ಅವಧಿಯಲ್ಲಿ ಮುಗಿಸಿದೆ ಎಂದರೆ, ಅದರ ಜರೂರತ್ತನ್ನು ಪ್ರಶಂಸಿಸಲೇಬೇಕು. ರಾಜ್ಯ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಸಮೀಕ್ಷೆ ಕಾರ್ಯವನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಮುಖ ಆಶ್ವಾಸನೆ ಎಂದು ಪರಿಗಣಿಸಿತ್ತು. ಪ್ರಣಾಳಿಕೆಯಲ್ಲಿ, ಅಂಚಿನಲ್ಲಿರುವ ಸಮುದಾಯಗಳಿಗೆ ಜನಸಂಖ್ಯೆಗನುಗುಣವಾಗಿ, ಮೀಸಲಾತಿ ಕೋಟಾ ವನ್ನು ಏರಿಸಲಾಗುವುದು ಎಂದು ಹೇಳಲಾಗಿತ್ತು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿಯೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಈಗಿರುವ ಶೇ. 23ರಿಂದ 42ಕ್ಕೆ ಏರಿಸುವುದಾಗಿ ಹೇಳಿತ್ತು ಕೂಡಾ.
ವರದಿ ಸ್ವೀಕರಿಸಿದ ಮೂರು ನಾಲ್ಕು ದಿನಗಳಲ್ಲಿಯೇ, ತೆಲಂಗಾಣ ಸಚಿವ ಉತ್ತಮ್ ಕುಮಾರ್ ರೆಡ್ಡಿ ಅವರು ಸಮೀಕ್ಷೆಯ ಅಂಕಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ರಾಜ್ಯದಲ್ಲಿ ಹಿಂದೂಗಳು, ಅಲ್ಪಸಂಖ್ಯಾತರು, ಕ್ರೈಸ್ತರಾಗಿ ಪರಿವರ್ತಿತರಾದ ಪರಿಶಿಷ್ಟ ಜಾತಿಯವರ ಸಮೀಕ್ಷೆ ನಡೆಸಲಾಗಿದೆ ಎಂದು ಹೇಳಿ, ವಿವರ ನೀಡಿದ್ದಾರೆ.
162 ಜಾತಿ ಸಮುದಾಯಗಳನ್ನು ತೆಲಂಗಾಣ ರಾಜ್ಯದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು 5(ಎ,ಬಿ,ಸಿ,ಡಿ ಮತ್ತು ಇ) ಗುಂಪುಗಳಾಗಿ ವಿಂಗಡಿಸಿದೆ. ಪರಿಶಿಷ್ಟ ಜಾತಿ -61,84,319 (ಶೇ. 17.43), ಪರಿಶಿಷ್ಟ ಪಂಗಡ- 37,05,929(ಶೇ. 10.45), ಹಿಂದುಳಿದ ವರ್ಗ (ಮುಸ್ಲಿಮರನ್ನು ಹೊರತುಪಡಿಸಿ) 1,64,09,179(ಶೇ. 46.25), ಮುಸ್ಲಿಮ್ ಹಿಂದುಳಿದ ವರ್ಗ- 35,76,588 (ಶೇ.10.08), ಮುಸ್ಲಿಮರ ಮುಕ್ತ ಪ್ರವರ್ಗ- 8,80,424(ಶೇ. 2.48), ಮುಕ್ತ ಪ್ರವರ್ಗ (ಮುಸ್ಲಿಮರನ್ನು ಹೊರತುಪಡಿಸಿ)- ಶೇ. 13.31, ಒಟ್ಟು ಮುಸ್ಲಿಮರು-(ಶೇ. 12.56) ಮತ್ತು ಒಟ್ಟು ಮುಕ್ತವಾಗಿರುವ ಪ್ರವರ್ಗ ಅಥವಾ ಜಾತಿಗಳು (ಶೇ. 15.79). ಮುಕ್ತ ಪ್ರವರ್ಗ ಎಂದರೆ ಮೀಸಲಾತಿಗೆ ಒಳಪಡದ ಜಾತಿಗಳು. ಅವು ರೆಡ್ಡಿ, ಕಾಪು, ಕಮ್ಮ, ವೇಲಮ, ಬ್ರಾಹ್ಮಣ, ವೈಶ್ಯ ಮುಂತಾದವು.
ಈ ವಿಷಯದಲ್ಲಿ ರಾಜ್ಯಗಳ ಸ್ಥಿತಿಗತಿಗಳು ಏನೇ ಇರಲಿ, ತೆಲಂಗಾಣ ಸರಕಾರಕ್ಕೆ ಹೃದಯ ತುಂಬಿದ ಅಭಿನಂದನೆಗಳನ್ನು ಸಲ್ಲಿಸಲೇಬೇಕು. ಕ್ಲಪ್ತ ಕಾಲದಲ್ಲಿ, ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶವನ್ನು ಜಾರಿಗೆ ತರುವುದು ಅಷ್ಟು ಸುಲಭದ ಮಾತಲ್ಲ. ಖಂಡಿತ ತೆಲಂಗಾಣ ಸರಕಾರ ನುಡಿದಂತೆ ನಡೆದ ಸರಕಾರ ಎಂದು ಹೇಳಲು ಯಾವ ಅಡ್ಡಿಯೂ ಇಲ್ಲ.
ಕರ್ನಾಟಕ ಸರಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ, ಜಾತಿ ಜನಗಣತಿಯ ಕಾರ್ಯ ಕೈಗೊಂಡು ಹತ್ತು ವರ್ಷಗಳು ತುಂಬುತ್ತಿವೆ. ಆದರೆ ಅದಕ್ಕೆ ಇನ್ನೂ ಮೋಕ್ಷ ಸಿಕ್ಕಿಲ್ಲ. ಮೋಕ್ಷ ಸಿಗದಿರಲು ಕೇವಲ ಒಬ್ಬ ವ್ಯಕ್ತಿಯನ್ನು ಗುರಿ ಮಾಡುವುದು ನನ್ನ ದೃಷ್ಟಿಯಲ್ಲಿ ಸರಿಯಲ್ಲ. ಅದು ಇಡೀ ಸರಕಾರದ ಹೊಣೆ ಎಂದು ನಾನು ಗ್ರಹಿಸುತ್ತೇನೆ. ಇದರಲ್ಲಿ ಮೊದಲನೆಯದಾಗಿ ಎದ್ದು ಕಾಣುವ ಲೋಪವೆಂದರೆ, 2015 ಎಪ್ರಿಲ್-ಮೇ ತಿಂಗಳಲ್ಲಿ ಸಮೀಕ್ಷೆ ಕಾರ್ಯ ಕಾರ್ಯ ಕೈಗೂಡಿದ ನಂತರ, 2018ರಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆ ಆಗುವವರೆಗೂ ವಿಳಂಬಿಸಿದ್ದು ಕ್ಷಮಾರ್ಹವಲ್ಲ. ಎರಡನೆಯದಾಗಿ, ಚುನಾವಣೆ ನಡೆದು ಎರಡು ಪಕ್ಷಗಳ ಸಮ್ಮಿಶ್ರ ಸರಕಾರ ಆಡಳಿತ ಸೂತ್ರ ಹಿಡಿಯಿತು. ಕಾಂಗ್ರೆಸ್ ಬಹು ಸಂಖ್ಯೆಯಲ್ಲಿ ಶಾಸಕರನ್ನು ಹೊಂದಿದ್ದರೂ ಅಲ್ಪಸಂಖ್ಯೆಯ ಶಾಸಕರನ್ನು ಹೊಂದಿದ್ದ ಜನತಾ ದಳಕ್ಕೆ ಅಧಿಕಾರ ಬಿಟ್ಟುಕೊಟ್ಟು, ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಜಾಣ ಮೌನ ವಹಿಸಿದ್ದು ಮಾತ್ರ ದೌರ್ಭಾಗ್ಯ. ಇದನ್ನು ಕರ್ನಾಟಕದ ಜನತೆಗೆ ಯೋಚಿಸಲು ಬಿಡೋಣ.
ಬಹುತೇಕ ಎಲ್ಲಾ ವೈಜ್ಞಾನಿಕ ಅಂಶಗಳನ್ನು ಒಳಗೊಂಡು, ಪರಮ ಎಚ್ಚರಿಕೆಯನ್ನೂ ವಹಿಸಿ ಕೈಗೊಂಡ ಸಮೀಕ್ಷಾ ಕಾರ್ಯಕ್ಕೆ ನೀಚ ಗ್ರಹವೊಂದು ವಕ್ಕರಿಸಿ ಲಕ್ಷಾಂತರ ಜನರ ಶ್ರಮ ಮತ್ತು 160 ಕೋಟಿಯಷ್ಟು ಹಣವನ್ನು ವ್ಯಯ ಮಾಡಿದ್ದು ಮಾತ್ರ ರಾಜ್ಯ ಬೊಕ್ಕಸಕ್ಕೆ ದೊಡ್ಡ ಹೊರೆ. ರಾಜಕಾರಣಿಗಳೇಕೆ ಈ ಕುರಿತು ಚಿಂತಿಸುತ್ತಿಲ್ಲವೆಂಬುದೇ ಯಾವ ಪ್ರಶ್ನೆಗೂ ನಿಲುಕದ ನಿಗೂಢ ನಿಲುವು.
ಕರ್ನಾಟಕದಲ್ಲಿ, ಬಲಿಷ್ಠ ಎರಡು ಕೋಮುಗಳಾದ ಲಿಂಗಾಯತ ಮತ್ತು ಒಕ್ಕಲಿಗರೂ ಕೂಡ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿ ಮೀಸಲಾತಿ ಕೋಟಾ ಪಡೆಯುತ್ತಿರುವುದು, ಸೂರ್ಯನಷ್ಟೇ ಸತ್ಯ. ಇಷ್ಟಾದರೂ ಕೂಡ, ಸಮೀಕ್ಷೆ ಬಹಿರಂಗಗೊಳ್ಳಲು ಏಕೆ ವಿರೋಧಿಸುತ್ತಿದ್ದಾರೆ? ಅವರ ಪ್ರಕಾರ ಅವೈಜ್ಞಾನಿಕ ಸಮೀಕ್ಷೆ ಎಂಬುದು. ಅವೈಜ್ಞಾನಿಕ ಎಂಬುದಕ್ಕೆ ಪರಿಭಾಷೆಯೆಲ್ಲಿದೆ? ಅವರಲ್ಲಿ ಕೆಲವರು ಹೇಳುವಂತೆ ಸಮಗ್ರವಾಗಿ ಸಮೀಕ್ಷೆ ಆಗದಿರುವುದು. ಯಾವುದೋ ಕಾರಣದಿಂದ ಯಾವುದೋ ಮನೆಗೆ ಸಮೀಕ್ಷೆಗೆ ಹೋಗದಿರುವುದು ಅವರ ಪ್ರಕಾರ ಅದು ಅವೈಜ್ಞಾನಿಕ. ಅದು ಕೇವಲ ಲ್ಯಾಪ್ಸ್ ಅಷ್ಟೇ. ಇದಕ್ಕೆ ಹೊಣೆ ಕೆಲವು ಹೊಣೆಗೇಡಿ ಅಧಿಕಾರಿಗಳು.
ಪ್ರಸಕ್ತ ತೆಲಂಗಾಣ ಸಮೀಕ್ಷೆಗೂ ಕರ್ನಾಟದ ಸಮೀಕ್ಷೆಗೂ ತೌಲನಿಕವಾಗಿ ವಿಮರ್ಶೆ ಮಾಡಿದಾಗ ಕಂಡು ಬರುವ ಅಂಶವೆಂದರೆ-ತೆಲಂಗಾಣ ಸಮೀಕ್ಷೆ ಮಾಡಿರುವ ಒಟ್ಟು ಜನಸಂಖ್ಯೆ 3 ಕೋಟಿ 54ಲಕ್ಷ. ಸಮೀಕ್ಷೆ ಮಾಡದೆ ಉಳಿದು ಹೋದ ಜನಸಂಖ್ಯೆ 16 ಲಕ್ಷ. ಹೀಗೆ, ಪ್ರಸಕ್ತ ತೆಲಂಗಾಣದ ಜನಸಂಖ್ಯೆ 3 ಕೋಟಿ 70 ಲಕ್ಷ. ಕರ್ನಾಟಕದಲ್ಲಿ, ಸಮೀಕ್ಷೆ ನಡೆಸಿದಾಗ ಸುಮಾರು 6 ಕೋಟಿ ಜನಸಂಖ್ಯೆ ಕವರ್ ಆಗಿದೆ. 2011ರಲ್ಲಿ ರಾಷ್ಟ್ರೀಯ ಜನಗಣತಿಯಲ್ಲಿ ಕರ್ನಾಟಕದ ಜನಸಂಖ್ಯೆ 6 ಕೋಟಿ 10 ಲಕ್ಷ. ಕರ್ನಾಟಕ ಮತ್ತು ರಾಷ್ಟ್ರ ಕೈಗೊಂಡ ಜನಗಣತಿಗೂ ಮಧ್ಯೆ ನಾಲ್ಕು ವರ್ಷಗಳ ಅಂತರವಿದೆ. ರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿ ಹೇಳುವುದಾದರೆ, ಕರ್ನಾಟಕದಲ್ಲಿ 2015 ಮೇ ತಿಂಗಳಿನಲ್ಲಿ ಯೋಜಿತ ಜನಸಂಖ್ಯೆ 6 ಕೋಟಿ 25 ಲಕ್ಷ ಇರಬಹುದು. ಹೀಗಾಗಿ 25 ಲಕ್ಷ ಜನಸಂಖ್ಯೆಯು ಕೈ ಬಿಟ್ಟು ಹೋಗಿದೆ ಎಂಬುದು ಗ್ರಹಿತ. ಅಂದಾಜು ಶೇ. 4ರಿಂದ 5ರಷ್ಟು ಜನಸಂಖ್ಯೆಯು ಸಮೀಕ್ಷೆಗೆ ಒಳಪಡದೆ ಕೈ ಬಿಟ್ಟು ಹೋಗಿದೆ. ಅದಕ್ಕೆ ಪರಿಹಾರವೆಂದರೆ ಒಂದು ಸರಳ ಗಣಿತ ಸೂತ್ರದ ಪ್ರಕಾರ, ಸಮೀಕ್ಷೆ ಮಾಡಿರುವ ಎಲ್ಲಾ ಜಾತಿಗಳಿಗೂ ಶೇ. ನಾಲ್ಕರಿಂದ ಐದರಷ್ಟು ಜನಸಂಖ್ಯೆಯನ್ನು ಸೇರಿಸುತ್ತಾ ಹೋದರೆ ಅಂದಿಗೆ ಇರಬೇಕಾಗಿದ್ದ 6 ಕೋಟಿ 25 ಲಕ್ಷ ಜನಸಂಖ್ಯೆಯ ಲೆಕ್ಕ ಸಿಗುತ್ತದೆ. ಹೀಗಾಗಿ ಯಾವ ಜಾತಿಗೂ ಅನ್ಯಾಯವಾಗುವ ಸಂಭವವೇ ಇಲ್ಲ.
ಹಾಗೂ ಹೀಗೂ, ಸಮೀಕ್ಷಾ ವರದಿಯನ್ನು ಸರಕಾರ ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸ್ವೀಕರಿಸಿ ಖಜಾನೆಯಲ್ಲಿಟ್ಟಿದೆ. ಸ್ವತಃ ಮುಖ್ಯಮಂತ್ರಿಗಳೇ ವರದಿಯನ್ನು ಸ್ವೀಕರಿಸಿದ್ದಾರೆ. ಆದರೆ ಒಂದು ವರ್ಷವಾದರೂ ಅಂಕಿ ಅಂಶಗಳನ್ನು ಬಹಿರಂಗಗೊಳಿಸುವುದಕ್ಕೆ ಇರುವ ಕಾರಣವನ್ನು ಮಾತ್ರ ನೇರವಾಗಿ ಮುಖ್ಯಮಂತ್ರಿಗಳೇ ಆಗಲಿ ಸರಕಾರವೇ ಆಗಲಿ ಹೇಳುತ್ತಿಲ್ಲ. ಅದಕ್ಕೆ ಕಾರಣವೂ ಇಲ್ಲ. ಎಲ್ಲವೂ ಇಂದ್ರಜಾಲ! ವಿರೋಧವೇಕೆ ಎಂಬ ಬಗ್ಗೆ ಆ ಸಮುದಾಯಗಳನ್ನು ಕೇಳುವ ಹಕ್ಕು ಸರಕಾರಕ್ಕೆ ಇದೆ. ವಿರೋಧಿಗಳ ಅಭಿಪ್ರಾಯವನ್ನು ತಿಳಿದುಕೊಂಡು ಸಮಜಾಯಿಸಿ ಕೊಡುವುದು ಕೂಡ ಸರಕಾರದ ಕರ್ತವ್ಯ. ಆದರೂ ಅದನ್ನು ಕೂಡ ಸರಕಾರ ಇದುವರೆಗೆ ಅಧಿಕೃತವಾಗಿ ಮಾಡಿಯೇ ಇಲ್ಲ. ಮುಖ್ಯಮಂತ್ರಿಗಳು ಮಾತ್ರ ಹೋದಲ್ಲಿ ಬಂದಲ್ಲಿ, ಅವಕಾಶ ಸಿಕ್ಕಾಗ ಈ ವಾರ ಸಚಿವ ಸಂಪುಟದ ಮುಂದೆ ತರುತ್ತೇವೆ ಎಂದು ಹೇಳಿಕೊಂಡೇ ಬರುತ್ತಿದ್ದಾರೆ. ಆದರೆ ಅದು ಕೂಡ ಮುಂದೆ ಮುಂದೆ ಹೋಗುತ್ತಾ ಇದೆ. ಇದು ಒಂದು ರೀತಿ ಕುದುರೆಯ ಮುಂದೆ ಸೊಪ್ಪು ಕಟ್ಟಿದ ಹಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತವಿದೆ. ರಾಷ್ಟ್ರಮಟ್ಟದಲ್ಲಿ ಜಾತಿ ಜನಗಣತಿಯನ್ನು ಮಾಡುವುದು ಕಾಂಗ್ರೆಸ್ ಪಕ್ಷದ ನೀತಿಯೇ ಆಗಿರುವುದರಿಂದ, ಸರಕಾರ ಯಾರಿಗೂ ಅಂಜಬೇಕಾದ ಅವಶ್ಯಕತೆ ಇಲ್ಲ. ತೆಲಂಗಾಣದಲ್ಲಿ ಕೂಡ ಬಲಾಢ್ಯಜಾತಿಗಳಾದ ರೆಡ್ಡಿ, ಕಾಪು, ವೇಲಮ, ಕಮ್ಮ ಮುಂತಾದ ಜಾತಿಗಳು ಇದ್ದರೂ ಕೂಡ ಜಾತಿ ಜನಗಣತಿ ಅಂಕಿ ಅಂಶಗಳನ್ನು ಬಯಲು ಮಾಡಿರುವ ಧೈರ್ಯವನ್ನು ಮೆಚ್ಚಲೇಬೇಕು.
ಆ ಧೈರ್ಯ, ಮನೋಬಲ ಕರ್ನಾಟಕ ಸರಕಾರಕ್ಕೆ ಏಕಿಲ್ಲ? ಇರುವ ಸಂಕಷ್ಟಗಳೆಲ್ಲವನ್ನು ನಿವಾರಿಸಿಕೊಂಡು ಅಂಕಿ ಅಂಶಗಳನ್ನು ಬಹಿರಂಗಗೊಳಿಸಿ, ತಳ ಸಮುದಾಯಗಳು ಯಾವ ಕ್ಷೇತ್ರದಲ್ಲಿ ಹಿಂದುಳಿದಿವೆ ಎಂಬುದನ್ನು ಸರಕಾರ ಅರಿತುಕೊಂಡು, ಅವುಗಳ ಪ್ರಗತಿಗೆ ನೆರವಾಗಬೇಕಷ್ಟೇ. ಶಾಸಕಾಂಗದಲ್ಲಿ ರಾಜಕೀಯ ಬಲದ ಸಂಖ್ಯೆ ಕುಗ್ಗಿ ಹೋಗುತ್ತದೆ ಎಂಬ ಒಂದೇ ಕಾರಣದಿಂದ ವಿರೋಧಿಸುವುದಾದರೆ ಸಾಮಾಜಿಕ ನ್ಯಾಯ ತತ್ವದ ‘ಸರ್ವರಿಗೂ ಸಮಪಾಲು, ಸಮ ಬಾಳು’ ಎಂಬುದು ವಾಸ್ತವಕ್ಕೆ ಬರದೆ ಕನಸಿನ ಗಂಟಾಗುತ್ತದೆ. ಸಂವಿಧಾನದ ಸದಾಶಯಗಳು ಮಣ್ಣು ಪಾಲಾಗುತ್ತವೆ. ಆಯ್ಕೆ ಸರಕಾರಕ್ಕೆ ಬಿಟ್ಟಿದ್ದು.