ಕಗ್ಗೋಡದಲ್ಲಿ ಘಮಘಮಿಸುತ್ತಿರುವ ಥಾಯ್ಲೆಂಡ್ ಮಾವು

ವಿಜಯಪುರ: ಎತ್ತಣ ಕಗ್ಗೋಡ, ಎತ್ತಣ ಥಾಯ್ಲೆಂಡ್, ಆದರೆ ರೈತ ಮನಸ್ಸು ಮಾಡಿದರೆ ಏನೆಲ್ಲ ಮಾಡಲು ಸಾಧ್ಯ ಎನ್ನುವುದಕ್ಕೆ ಪ್ರಗತಿಪರ ರೈತ ನವೀನ್ ಮಂಗಾನವರ ಸಾಕ್ಷಿ.
ವಿನೂತನ ಪ್ರಯೋಗವನ್ನು ಯಶಸ್ವಿಯಾಗಿ ಮಾಡಿರುವ ನವೀನ್ ಅವರು ಕಗ್ಗೋಡದ ಶಿವಣಗಿಯಲ್ಲಿ ಥಾಯ್ಲೆಂಡ್‌ನ ಮಾವಿನ ಹಣ್ಣನ್ನು ಬೆಳೆಸಿದ್ದಾರೆ. ಸ್ವತಃ ಥಾಯ್ಲೆಂಡ್‌ನ ರೈತರೇ ತಮ್ಮ ನೆಲದಲ್ಲಿ ಬೆಳೆಯುವ ಮಾವು ಭಾರತದಲ್ಲಿ ಬೆಳೆಯುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಭಾರತಕ್ಕೆ ಭೇಟಿ ನೀಡಲು ಮುಂದಾಗಿದ್ದಾರೆ.
ನವೀನ್ ಶಿವಣಗಿ ಗ್ರಾಮದಲ್ಲಿ 7 ಎಕರೆ ಪ್ರದೇಶದಲ್ಲಿ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಥಾಯ್ಲೆಂಡ್ ಮೂಲದ ಮಾವು ಬೆಳೆದಿದ್ದಾರೆ. ವರ್ಷಪೂರ್ತಿ ಹಣ್ಣು ಬಿಡುವುದೇ ಈ ಮಾವಿನ ತಳಿಯ ವಿಶೇಷ. ಹಣ್ಣಿನ ರಾಜ ಮಾವಿನ ರುಚಿ ಆಸ್ವಾದಿಸಲು ಬೇಸಿಗೆ ಎದುರು ನೋಡಬೇಕಾಗುತ್ತಿತ್ತು. ಬೇಸಿಗೆ ಬಂದರೆ ಬಿಸಿಲಿನ ತಾಪವಿದ್ದರೂ ಮಾವಿನ ಹಣ್ಣು ಬರುತ್ತದೆ ಎಂಬ ಸಮಾಧಾನ ಎಲ್ಲರಲ್ಲೂ ಕಾಣುತ್ತಿತ್ತು. ಆದರೆ ಥಾಯ್ಲೆಂಡ್ ತಳಿ ವರ್ಷಪೂರ್ತಿ ಬರುವುದರಿಂದ ಎಲ್ಲ ಸಮಯಕ್ಕೂ ಮಾವಿನ ಸ್ವಾದ ಆಸ್ವಾದಿಸುವ ಅವಕಾಶವೂ ಲಭ್ಯವಾಗುವುದರಲ್ಲಿ ಎರಡು ಮಾತಿಲ್ಲ.
ಸತತ 6 ಬಾರಿ ಥಾಯ್ಲೆಂಡ್‌ಗೆ ಭೇಟಿ: ರೈತ ನವೀನ್ 2011ರ ಡಿಸೆಂಬರ್‌ನಲ್ಲಿ ಥಾಯ್ಲೆಂಡ್ ಪ್ರವಾಸಕ್ಕೆ ಹೋಗಿ ಚಳಿಗಾಲದಲ್ಲಿ ವೈವಿಧ್ಯಮಯ ಗಾತ್ರ, ಬಣ್ಣ, ಸ್ವಾದಗಳ ಮಾವಿನ ಹಣ್ಣುಗಳನ್ನು ಕಂಡು ಅಚ್ಚರಿಗೊಂಡು, ಈ ಹಣ್ಣಿನ ಬಗ್ಗೆ ಕುತೂಹಲ ಬೆಳೆಸಿಕೊಂಡರು. ಸತತ 6 ವರ್ಷಗಳ ಕಾಲ ಬೇರೆ ಬೇರೆ ಋತುಮಾನದಲ್ಲಿ ಥಾಯ್ಲೆಂಡ್‌ಗೆ ಭೇಟಿ ನೀಡಿ, ವರ್ಷಪೂರ್ತಿ ಇಳುವರಿ ಕೊಡುವ ಮಾವಿನ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಅಂತಿಮವಾಗಿ 2021ರಲ್ಲಿ ವರ್ಷಪೂರ್ತಿ ಇಳುವರಿ ಕೊಡುವ ಥಾಯ್ಲೆಂಡ್ ಮೂಲದ ವಿವಿಧ 20 ತಳಿಯ 5,500 ಮಾವಿನ ಸಸಿಗಳನ್ನು ವಿಜಯಪುರದ ಶಿವಣಗಿ ತೋಟಕ್ಕೆ ತಂದು ನಾಟಿ ಮಾಡಿದರು. ಒಂದೂವರೆ ವರ್ಷದಲ್ಲಿ ಇಳುವರಿ ಆರಂಭಗೊಂಡರೂ ಸಂತೃಪ್ತನಾಗದ ಪ್ರಯೋಗಶೀಲ ಯುವ ರೈತ, ಪ್ರತಿ ತಳಿಯ ಬಣ್ಣ, ಗಾತ್ರ, ಸ್ವಾದಗಳ ಅವಲೋಕನದಲ್ಲಿ ತೊಡಗಿದರು.
ಇದಕ್ಕಾಗಿ 5 ವರ್ಷ ಕಾಲ ಪ್ರತಿ ಗಿಡದ ಹಣ್ಣಿನ ಸ್ವಾದ ಪರೀಕ್ಷಿಸಿದ ಸಾವಯವ ಪ್ರಗತಿಪರ ರೈತ ನವೀನ್, ಗರಿಷ್ಠ ಗುಣಮಟ್ಟ ಹಾಗೂ ಗ್ರಾಹಕರ ಆಕರ್ಷಣೆಯ ತಳಿಯನ್ನು ಉಳಿಸಿಕೊಂಡು ಬಂದಿದ್ದಾಗಿ ಹಾಗೂ ಸ್ವಾದ ರಹಿತ ಗಿಡಗಳನ್ನು ಕಿತ್ತು ಹಾಕಿ ಗುಣಮಟ್ಟದ ಉತ್ಕೃಷ್ಟತೆಗೆ ಆದ್ಯತೆ ನೀಡಿದ್ದಾರೆ.
‘ವರ್ಷಪೂರ್ತಿ ಇಳುವರಿ ಕೊಡುವ ಥಾಯ್ಲೆಂಡ್ ಮೂಲದ 3 ಸಾವಿರ ಮಾವಿನ ಸಸಿಗಳನ್ನು (ಪ್ರತಿ ಗಿಡಕ್ಕೆ 3,350) 2021ರಲ್ಲಿ ತಂದು ತೋಟದಲ್ಲಿ ನಾಟಿ ಮಾಡಿದೆ. ಹೊಸ ಮಣ್ಣು ಮತ್ತು ಹವಾಮಾನ ಸ್ಥಿತಿಗೆ ಹೊಂದಿಕೊಳ್ಳಲಾಗದೇ ಸಾಕಷ್ಟು ಸಸಿಗಳು ಒಣಗಿದವು. ಆದರೆ, ಧೈರ್ಯ ಕಳೆದುಕೊಳ್ಳಲಿಲ್ಲ. ರಾಸಾಯನಿಕ ಗೊಬ್ಬರದ ಬದಲು ಹಸುವಿನ ಸೆಗಣಿ ಮತ್ತು ಎರೆಹುಳು ಗೊಬ್ಬರವನ್ನು ಹಾಕಿದೆ. ಬದುಕುಳಿದ ಸಸಿಗಳನ್ನು ತಾಳ್ಮೆ ಮತ್ತು ಕಾಳಜಿಯಿಂದ ಪೋಷಿಸಿದೆ. ಈಗ ಒಂದೂವರೆ ವರ್ಷದಲ್ಲಿ ಇಳುವರಿ ಆರಂಭಗೊಂಡಿತು. 4-5 ಅಡಿ ಎತ್ತರದ ಪ್ರತಿ ಮರ ಕನಿಷ್ಠ ಎರಡು ಡಝನ್ ಹಣ್ಣು ನೀಡುತ್ತವೆ. ಅವು ಪಕ್ವ ಆದಂತೆ ಇಳುವರಿ ಪ್ರತಿ ಮರಕ್ಕೆ 6-7 ಡಝನ್ ಹಣ್ಣು ಹೆಚ್ಚಾಗುತ್ತದೆ. ಪ್ರತಿದಿನ 25 ಡಝನ್ ಮಾವಿನ ಹಣ್ಣುಗಳನ್ನು ಕೊಯ್ಯಲಾಗುವುದು. ಥಾಯ್ಲೆಂಡ್ ಮಾವಿನ ಹಣ್ಣಿಗೆ ವರ್ಷವಿಡೀ ಡಜನ್‌ಗೆ 1,200 ದರ ನಿಗದಿಪಡಿಸಿದ್ದೇನೆ’ ಎನ್ನುತ್ತಾರೆ ಮಾವು ಬೆಳೆಗಾರ ನವೀನ್.
ಥಾಯ್ಲೆಂಡ್ ಮಾವಿನ ಜೊತೆಗೆ ವಿಯಾಟ್ನಾಂ ಹಲಸು (100ಗಿಡ) ಜಪಾನಿನ ಮಿಯಾ ಜಾಕಿ ಮಾವು (40) ಗೇರು ಹಣ್ಣಿನ ಗಿಡಗಳು(5) ಹಿಮಾಚಲ ಪ್ರದೇಶದ ಎಚ್‌ಆರ್‌ಎಂಎನ್ 99 ತಳಿಯ ಮಾವು(15) ನೇರಳೆ (100) ಸಂತ್ರ (25) ಥಾಯ್ಲೆಂಡ್ ಚಿಕ್ಕು (25) ಆ್ಯಪಲ್ ಪೇರು (10) ಸಹಿತ ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸುವ ಪ್ರಯತ್ನ ನಡೆಸಿದ್ದಾರೆ.
ನೇರ ಮಾರುಕಟ್ಟೆ: ವರ್ಷಪೂರ್ತಿ ಫಲ ನೀಡುವ ಥಾಯ್ಲೆಂಡ್ ಮಾವಿನ ಮಾರಾಟಕ್ಕೆ ಮಧ್ಯವರ್ತಿ ಬದಲಾಗಿ ತಾವೇ ನೇರ ಮಾರುಕಟ್ಟೆ ಕಂಡುಕೊಂಡಿದ್ದಾರೆ. ಬೆಂಗಳೂರು, ಹೈದರಾಬಾದ್‌ನಲ್ಲೂ ವಿಶಿಷ್ಟ ಸ್ವಾದದ ಮಾವಿನ ಹಣ್ಣಿಗೆ ಗ್ರಾಹಕರನ್ನು ಸೃಷ್ಟಿಸಿ
ಕೊಂಡಿದ್ದಾರೆ.
ಪ್ರತಿದಿನ 25 ಡಝನ್ ಮಾವಿನ ಹಣ್ಣುಗಳನ್ನು ಕೊಯ್ದು ಮಾರುತ್ತಿದ್ದೇನೆ. ಮರದಲ್ಲೇ ನೈಸರ್ಗಿಕವಾಗಿ ಹಣ್ಣಾಗಲು ಬಿಡುತ್ತಿದ್ದು, ರುಚಿ, ಸುವಾಸನೆ ಹೆಚ್ಚಿದೆ. ಸಗಟು ಮಾರುಕಟ್ಟೆಗೆ ಬದಲಾಗಿ ಗ್ರಾಹಕರಿಗೆ ನೇರವಾಗಿ ಮಾರುತ್ತೇನೆ. ಮಾವಿನ ಗಿಡಗಳಿಗೆ ಎರೆಹುಳು ಗೊಬ್ಬರ, ತಾಪಮಾನ ತಡೆಯಲು ಪಾಚಿ ಮುಚ್ಚಿಗೆ, ಚಳಿ ತಡೆಯಲು ಪಾರಿವಾಳದ ಹಿಕ್ಕೆ, ಸಾವಯವ ಬೆಲ್ಲ, ಕಡಲೆ ಹಿಟ್ಟನ್ನು ಗೋಮೂತ್ರದಲ್ಲಿ ಬೆರೆಸಿ ಹಾಕುತ್ತಿದ್ದೇನೆ.
-ನವೀನ್, ಥಾಯ್ಲೆಂಡ್ ಮಾವು ಬೆಳೆದ ರೈತ
ಹತ್ತಾರು ಎಕರೆ ಜಮೀನು, ನೀರು ಇದ್ದರೂ ಯುವ ರೈತರು ಹಲವು ಕಾರಣಗಳಿಂದ ಸೋಲು ಎದುರಿಸಲಾಗದೆ ನಗರೀಕರಣದತ್ತ ವಲಸೆ ಹೊರಟಿದ್ದಾರೆ. ಆದರೆ ಬಿ.ಎ. ಪದವಿ ಪಡೆದಿರುವ ಯುವ ರೈತ ನವೀನ್ ವಿಷಮುಕ್ತ ತೋಟಗಾರಿಕೆಯಲ್ಲಿ ತೊಡಗಿದ್ದಾರೆ. ಕೃಷಿಯಿಂದ ವಿಮುಖರಾಗಿರುವ ರೈತರ ಮಧ್ಯೆ ಸಾಹಸಿ, ಯುವ ಕೃಷಿಕ ನವೀನ್ ವಿಭಿನ್ನವಾಗಿ ಸಾಧನೆ ಮಾಡಿದ್ದಾರೆ.
-ಶಿವಾನಂದ ಪಾಟೀಲ, ಸಚಿವ







