ಪುಷ್ಪಗಳಿಂದ ನಳನಳಿಸುತ್ತಿರುವ ತಾವರೆಕೆರೆ
ಪ್ರವಾಸಿಗರ ಸೆಲ್ಫಿ ಕೇಂದ್ರವಾಗಿ ಮಾರ್ಪಾಡು

ಕುಶಾಲನಗರ: ಕುಶಾಲನಗರದ ತಾವರೆಕೆರೆಯು ನೀಲಿ ವರ್ಣದ ನಯನ ಮನೋಹರವಾದ ಪುಷ್ಪಗಳಿಂದ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ.
ಕುಶಾಲನಗರದ ತಾವರೆಕೆರೆ ಬಹಳಷ್ಟು ಇತಿಹಾಸವನ್ನು ಹೊಂದಿದೆ. ಭೂ ಮಾಫಿಯಾದಿಂದ ತನ್ನ ವಿಸ್ತೀರ್ಣವನ್ನು ಕಳೆದುಕೊಂಡು ಬಂದಿದೆ. ಕೊಳಚೆ ತ್ಯಾಜ್ಯ ನೀರು ಶೇಖರಣಾ ಘಟಕದಂತಾಗಿರುವ ಕೆರೆಯಲ್ಲಿ ನಳನಳಿಸುವ ನೀಲಿ ವರ್ಣದ ಪುಷ್ಪಗಳು ಅರಳಿ ತನ್ನ ಸೌಂದರ್ಯ ಹೆಚ್ಚಿಸಿಕೊಂಡು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
ಅಪಾಯಕ್ಕೆ ಆಹ್ವಾನ: ತಾವರೆಕೆರೆ ಆಕರ್ಷಣೀಯ ಪುಷ್ಪಗಳಿಂದ ನೆರೆದು ತನ್ನತ್ತ ಜನರನ್ನು ಆಕರ್ಷಿಸುತ್ತಿದೆ. ಇದರಿಂದಾಗಿ ಸಾರ್ವಜನಿಕರು, ಪ್ರವಾಸಿಗರು ರಸ್ತೆಯ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ತಾವರೆಕೆರೆ ಅಂದವನ್ನು ವೀಕ್ಷಿಸಲು ಮುಂದಾಗುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಫೋಟೊ, ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆೆ. ತಾವರೆಕೆರೆ ಬಳಿ ತಿರುವಿನ ರಸ್ತೆಯಿರುವ ಕಾರಣದಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ. ತಾವರೆಕೆರೆ ಬಳಿ ಓರ್ವ ಸಂಚಾರ ಪೊಲೀಸ್ ಸಿಬ್ಬಂದಿ ಗಸ್ತು ಕಾಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿರುವುದರಿಂದ ಓರ್ವರಿಂದ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಫೋಟೊ ತೆಗೆಯುವ ಭರದಿಂದ ಸಾರ್ವಜನಿಕರು ರಸ್ತೆ ಬದಿಯಿರುವ ರಕ್ಷಣಾಬೇಲಿ ದಾಟಿ ಹೋಗುತ್ತಿದ್ದಾರೆ. ಕೆಲವರು ಕೆರೆಯ ಬಳಿ ಹೋಗಿ ಫೋಟೊ ತೆಗೆಯುವುದು, ಹೂವನ್ನು ಕೀಳುವುದೂ ಮಾಡುತ್ತಿದ್ದಾರೆ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ?. ಆದ್ದರಿಂದ ಪುರಸಭೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಜನರು ಒತ್ತಾಯಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್: ಕುಶಾಲನಗರದ ತಾವರೆಕೆರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್‌ಸ್ಟಾಗ್ರಾಂ, ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ತಾವರೆಕೆರೆಯ ಕಣ್ಮನ ಸೆಳೆಯುವ ಫೋಟೊ, ವೀಡಿಯೊಗಳು ಕಾಣಬಹುದಾಗಿದೆ. ಇದರಿಂದ ವಿವಿಧೆಡೆಯಿಂದ ಪ್ರವಾಸಿಗರು ಆಗಮಿಸಿ ತಾವರೆಕೆರೆ ಫೋಟೊ ವೀಡಿಯೊ ತೆಗೆಯುತ್ತಿದ್ದಾರೆ.
ಒಟ್ಟಿನಲ್ಲಿ ಸುಂದರವಾದ ತಾವರೆಕೆರೆಗೆ ಕೊಳಚೆ ನೀರು ಹರಿಯುವುದನ್ನು ನಿಲ್ಲಿಸಿ ಕೆರೆಯನ್ನು ಸಂರಕ್ಷಿಸುವ ಕೆಲಸ ಕುಶಾಲನಗರ ಪುರಸಭೆಯಿಂದ ಆಗಬೇಕಾಗಿದೆ. ನಂತರ ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸುವ ಕೆಲಸಕ್ಕೆ ಸಂಬಂಧಿಸಿದವರು ಮುಂದಾಗಬೇಕಾಗಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಪ್ರವಾಸಿ ತಾಣವನ್ನಾಗಿಸಿ
ತಾವರೆಕೆರೆಯನ್ನು ಪ್ರವಾಸಿ ತಾಣವನ್ನಾಗಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಕೆಲವು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ತಾವರೆಕೆರೆ ಕೊಳಚೆ ನೀರನ್ನು ಸಂಗ್ರಹಿಸುವ ಘಟಕವಾಗಿಯೇ ಉಳಿದಿದೆ. ಸಂಬಂಧಿಸಿದ ಪುರಸಭೆ ಹಾಗೂ ಇಲಾಖೆ ಈ ಬಗ್ಗೆ ಚರ್ಚಿಸಿ, ತಾವರೆಕೆರೆಯನ್ನು ಪ್ರವಾಸಿತಾಣವನ್ನಾಗಿಸುವ ಮೂಲಕ ಐತಿಹಾಸಿಕ ಕೆರೆಯನ್ನು ಸಂರಕ್ಷಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ತಾವರೆಕೆರೆಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಈ ವಿಚಾರವಾಗಿ ಪುರಸಭೆ ಎಚ್ಚೆತ್ತುಕೊಂಡು ಕೆರೆ ಒತ್ತುವರಿಯನ್ನು ತೆರವುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅದೇ ರೀತಿ ಕುಶಾಲನಗರ ಸುತ್ತಮುತ್ತಲಿನ ಕೆರೆಯ ಜಾಗಗಳು ಅಧಿಕಾರಶಾಹಿಗಳ, ಭೂಮಾಫಿಯದವರ ಪಾಲಾಗಿವೆ. ಅವುಗಳನ್ನೂ ತೆರವುಗೊಳಿಸಬೇಕು.
-ಎಸ್.ಆದಂ, ಕಾಂಗ್ರೆಸ್ ಯುವ ಮುಖಂಡ







